
ಬೆಂಗಳೂರು (ಜು.13): ‘ಭಾರತ್ ಜೋಡೋ’ ಯಾತ್ರೆಯಿಂದ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಅವರಿಗೆ ಸಿಕ್ಕ ಜನಬೆಂಬಲವನ್ನು ಸಹಿಸದೇ ಕೇಂದ್ರ ಸರ್ಕಾರ ಕುತಂತ್ರದಿಂದ ಲೋಕಸಭಾ ಸದಸ್ಯತ್ವ ಸ್ಥಾನದಿಂದ ಅನರ್ಹಗೊಳಿಸಿದೆ. ಆದರೆ ನಾವೆಲ್ಲಾ ಅವರ ಜೊತೆಗಿದ್ದು 2024 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯೋಣ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕರೆ ನೀಡಿದರು.
ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸ್ಥಾನದಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಪಕ್ಷದಿಂದ ಬುಧವಾರ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಬೃಹತ್ ಮೌನ ಪ್ರತಿಭಟನೆಯಲ್ಲಿ ಪಾಲ್ಗೊಂಡ ಬಳಿಕ ಅವರು ಮಾತನಾಡಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕುತಂತ್ರ ಮಾಡಿ ರಾಹುಲ್ ಗಾಂಧಿ ಅವರನ್ನು ಸಂಸತ್ ಸ್ಥಾನದಿಂದ ಅನರ್ಹಗೊಳಿಸಿದೆ. ಕಳೆದ ಒಂಬತ್ತೂವರೆ ವರ್ಷದಿಂದ ನೆಹರೂ ಕುಟುಂಬದ ವಿರುದ್ಧ ಆರ್‌ಎಸ್‌ಎಸ್ ಮತ್ತು ಬಿಜೆಪಿ ಅಪಪ್ರಚಾರ ಮಾಡುತ್ತಾ ಗದಾಪ್ರಹಾರ ನಡೆಸಿವೆ. ಆದರೆ ನಾವೆಲ್ಲಾ ರಾಹುಲ್ ಜೊತೆಗಿದ್ದೇವೆ.
Flower Show 2023: ಆ.4ರಿಂದ 15ರವರೆಗೆ ಲಾಲ್ಬಾಗ್ನಲ್ಲಿ ಫಲಪುಷ್ಪ ಪ್ರದರ್ಶನ
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಪರಾಭವಗೊಳಿಸುವ ಮೂಲಕ ಅಧಿಕಾರದಿಂದ ದೂರ ಇಡೋಣ ಎಂದು ಮನವಿ ಮಾಡಿದರು. ಬಿಜೆಪಿಯವರು ಮನಸೋಇಚ್ಛೆ ಟೀಕೆ ಮಾಡಿದರೂ ಶಿಕ್ಷೆಯಾಗುವುದಿಲ್ಲ. ಆದರೆ ಕೋಲಾರದಲ್ಲಿ ಮಾಡಿದ್ದ ಭಾಷಣ ಮುಂದಿಟ್ಟುಕೊಂಡು ಲೋಕಸಭಾ ಸ್ಥಾನದಿಂದ ರಾಹುಲ್ ವಜಾಗೊಳಿಸಲಾಗಿದೆ. 2024ರ ಚುನಾವಣೆಯಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳಲು ಕಷ್ಟವಾಗಲಿದೆ ಎಂದು ಬಿಜೆಪಿಯವರು, ನಮ್ಮ ನಾಯಕರ ರಾಜಕೀಯ ಜೀವನ ಮುಗಿಸಲು ಷಡ್ಯಂತ್ರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸ್ವಂತಕ್ಕೆ ಹೋರಾಟ ನಡೆಸಿಲ್ಲ: ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮಾತನಾಡಿ, ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬಲು ನಾವು ಹೋರಾಟ ನಡೆಸುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಅಥವಾ ಸ್ವಂತ ಲಾಭಕ್ಕಾಗಿ ರಾಹುಲ್ ಹೋರಾಟ ನಡೆಸುತ್ತಿಲ್ಲ. ದೇಶದ ಜನರಿಗಾಗಿ ಹೋರಾಟ ನಡೆಸುತ್ತಿದ್ದಾರೆ. ರಾಹುಲ್ ಜನಪ್ರಿಯತೆ ಸಹಿಸದೆ ಬಿಜೆಪಿ, ಆರ್‌ಎಸ್‌ಎಸ್ ಅಪಪ್ರಚಾರ ನಡೆಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನೀರವ್ ಮೋದಿ, ಮೇಹುಲ ಚೋಕ್ಸಿ ಮತ್ತಿತರರು ದೇಶದ 13 ಬ್ಯಾಂಕ್‌ನಲ್ಲಿ 13 ಸಾವಿರ ಕೋಟಿ ರುಪಾಯಿಗೂ ಅಧಿಕ ಸಾಲ ಪಡೆದು ದೇಶ ಬಿಟ್ಟು ಹೋಗಿದ್ದಾರೆ. ಇವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಪ್ತರಾಗಿದ್ದು, ವಿದೇಶ ಪ್ರವಾಸಕ್ಕೂ ಕರೆದೊಯ್ದಿದ್ದರು. ಜನಸಾಮಾನ್ಯರ ಹಣ ದೋಚಿ ಪರಾರಿಯಾಗಿದ್ದನ್ನು ರಾಹುಲ್ ಗಾಂಧಿ ಕೇಳಬಾರದಿತ್ತಾ ಎಂದು ಪ್ರಶ್ನಿಸಿದರು.
ವಿಜಯ್ ಮಲ್ಯ 9 ಸಾವಿರ ಕೋಟಿ ರು., ಗುಜರಾತ್‌ನ ಸಂದೇಶ್ 16 ಸಾವಿರ ಕೋಟಿ, ಜತಿನ್ ಮೆಹ್ತಾ 11 ಸಾವಿರ ಕೋಟಿ ಲೂಟಿ ಮಾಡಿಕೊಂಡು ಹೋಗಿದ್ದಾರೆ. ಇವರಿಂದ ದೇಶದ ಬ್ಯಾಂಕ್‌ಗಳಿಗೆ 2.52 ಲಕ್ಷ ಕೋಟಿ ರು. ನಷ್ಟವಾಗಿದೆ. ಮೋದಿ ಸರ್ಕಾರ ಬೃಹತ್ ಉದ್ಯಮಿಗಳ 10 ಲಕ್ಷ ಕೋಟಿ ರು. ಸಾಲ ಮನ್ನಾ ಮಾಡಿದೆ. ಬ್ಯಾಂಕ್‌ಗಳು ಕಳೆದುಕೊಂಡಿರುವ ಹಣ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್ ಕಟೀಲ್ ಅಥವಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರದ್ದಲ್ಲ ಎಂದು ತರಾಟೆ ತೆಗೆದುಕೊಂಡರು.
ಬಿಬಿಎಂಪಿ ಸಿಬ್ಬಂದಿಯ ವರ್ಗಕ್ಕೂ ಮುನ್ನ ನನಗೆ ತಿಳಿಸಿ: ಡಿಕೆಶಿ
ಅರ್ಧಕ್ಕೆ ಮೊಟಕು: ರಾಹುಲ್ ಗಾಂಧಿಯವರಿಗೆ ನೈತಿಕ ಬೆಂಬಲ ವ್ಯಕ್ತಪಡಿಸಿ ದೇಶಾದ್ಯಂತ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೂ ಮೌನ ಪ್ರತಿಭಟನೆ ನಡೆಸಲು ಎಐಸಿಸಿ ಸೂಚಿಸಿತ್ತು. ಅದರಂತೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಪ್ರತಿಭಟನೆ ಬೆಳಿಗ್ಗೆ 10 ಗಂಟೆಗೆ ಆರಂಭವಾಯಿತಾದರೂ ಮಧ್ಯಾಹ್ನ 1.53ಕ್ಕೆ ಭಾಷಣ ಮುಗಿಸಿ ನಾಯಕರು ತೆರಳುತ್ತಿದ್ದಂತೆ ಕಾರ್ಯಕರ್ತರೂ ಜಾಗ ಖಾಲಿ ಮಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.