ಕರ್ನಾಟಕದ ವಿಕಾಸಕ್ಕೆ ಡಬಲ್ ಇಂಜಿನ್ ಸರ್ಕಾರ ಇದೆ ಎಂದು ಹೇಳಿಕೆ ಕೊಟ್ಟಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸವಾಲು ಹಾಕಿದ್ದಾರೆ.
ಕಲಬುರಗಿ,(ಜ.18): ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವ ಡಬ್ಬಲ್ ಇಂಜಿನ್ ಸರ್ಕಾರ ಮಹದಾಯಿ ಯೋಜನೆಯನ್ನು ಜಾರಿಗೊಳಿಸಲಿ. ಕೃಷ್ಣಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸವಾಲು ಹಾಕಿದ್ದಾರೆ.
ನಿನ್ನೆ (ಭಾನುವಾರ) ಬೆಳಗಾವಿಯ ಜನಸೇವಕ್ ಸಮಾವೇಶದಲ್ಲಿ ಅಮಿತ್ ಶಾ, ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಡಬ್ಬಲ್ ಇಂಜಿನ್ ಸರ್ಕಾರ ಇದೆ. ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು.
ಕಾಂಗ್ರೆಸ್ ಮುಕ್ತ ಕರ್ನಾಟಕಕ್ಕೆ ಕಟೀಲ್ ಪಣ...
ಈ ಬಗ್ಗೆ ಇಂದು (ಸೋಮವಾರ) ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಕೆಶಿ, ಈ ಡಬ್ಬಲ್ ಇಂಜಿನ್ ಸರ್ಕಾರ ಜನರ ಆಶೋತ್ತರಗಳನ್ನು ಈಡೇರಿಸಲಿ. ಮಹದಾಯಿ ವಿಚಾರ ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದೆ. ನ್ಯಾಯಾದೀಕರಣದ ಅಂತಿಮ ತೀರ್ಪನ್ನು ಅನುಷ್ಠಾನಗೊಳಿಸುವ ಮೂಲಕ ತನ್ನ ಬದ್ಧತೆಯನ್ನು ಸಾಬೀತುಪಡಿಸಲಿ ಎಂದು ಟಾಂಗ್ ಕೊಟ್ಟರು.
ನಂಜುಂಡಪ್ಪ ವರದಿ ಅನುಸಾರ ಅತಿ ಹೆಚ್ಚು ಹಿಂದುಳಿದ ಪ್ರದೇಶಗಳನ್ನು ಹೊಂದಿರುವ ಕಲ್ಯಾಣ ಕರ್ನಾಟಕಕ್ಕೆ ಅನುದಾನ ಹಂಚಿಕೆಯಲ್ಲಿ ಭಾರೀ ತಾರತಮ್ಯವಾಗಿದೆ. ಈ ಭಾಗದಲ್ಲಿ ಕಾಂಗ್ರೆಸ್‍ನಿಂದ ಹೆಚ್ಚಿನ ಶಾಸಕರು ಆಯ್ಕೆಯಾಗಿದ್ದಾರೆ ಎಂಬ ಕಾರಣಕ್ಕಾಗಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಮೊದಲು ಹೆಚ್ಚಿನ ಅನುದಾನ ಬಿಡುಗಡೆ ಮಾಡಲಿ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಪ್ರಕಟಿಸುವ ಮೂಲಕ ಡಬ್ಬಲ್ ಇಂಜಿನ್ ಸರ್ಕಾರ ರಾಜ್ಯದ ಜನರಿಗೆ ಅನುಕೂಕ ಮಾಡಿಕೊಡಲಿ. ರಾಜಕಾರಣ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದರು.