ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ: ಡಿಕೆ ಸಿಡಿಮಿಡಿ! ಪತ್ರಕರ್ತರಿಗೆ ಡಿಸಿಎಂ ಕೈಮುಗಿದಿದ್ದು ಏಕೆ?

Published : Dec 01, 2025, 10:29 AM IST
Reporters Diary

ಸಾರಾಂಶ

ಡಿ.ಕೆ.ಶಿವಕುಮಾರ್‌ ಅಂದರೇನೇ ಡೇರ್‌ ಆ್ಯಂಡ್‌ ಡ್ಯಾಶಿಂಗ್‌ ರಾಜಕಾರಣಿ. ಅದು ವಿರೋಧ ಪಕ್ಷಗಳ ದಾಳಿಯೇ ಆಗಿರಬಹುದು, ರಾಜಕೀಯ ತಂತ್ರಗಳೇ ಆಗಿರಬಹುದು. ಎಲ್ಲವನ್ನೂ ತಮ್ಮದೇ ಶೈಲಿಯಲ್ಲಿ ನಿಭಾಯಿಸುತ್ತಾರೆ. ತಾಳ್ಮೆ, ಸಹನೆ ಮಹತ್ವ ಗೊತ್ತಾಗಿದೆ.

ಒಂದು ಹಂತದವರೆಗೆ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಕೊನೆಗೆ ಮಾಧ್ಯಮ ಪ್ರತಿನಿಧಿಗಳ ಕಡೆಗೆ ಕೈ ಮುಗಿದು ಕುಳಿತು ಬಿಟ್ಟರು. ಕೊನೆಗೆ ನಗುತ್ತಾ ‘ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ ನಾನು. ನನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಸ್ವಲ್ಪ ಬಿಟ್ಟರೆ ನಾನು ರೆಸ್ಟ್‌ ಮಾಡುತ್ತೇನೆ’ ಎಂದರು.

ಡಿ.ಕೆ.ಶಿವಕುಮಾರ್‌ ಅಂದರೇನೇ ಡೇರ್‌ ಆ್ಯಂಡ್‌ ಡ್ಯಾಶಿಂಗ್‌ ರಾಜಕಾರಣಿ. ಅದು ವಿರೋಧ ಪಕ್ಷಗಳ ದಾಳಿಯೇ ಆಗಿರಬಹುದು, ರಾಜಕೀಯ ತಂತ್ರಗಳೇ ಆಗಿರಬಹುದು. ಎಲ್ಲವನ್ನೂ ತಮ್ಮದೇ ಶೈಲಿಯಲ್ಲಿ ನಿಭಾಯಿಸುತ್ತಾರೆ. ತಾಳ್ಮೆ, ಸಹನೆ ಮಹತ್ವ ಗೊತ್ತಾಗಿದೆ. ಎಷ್ಟೇ ಟೀಕಿಸಲಿ, ಆರೋಪಿಸಲಿ ತಣ್ಣಗೆ ಉತ್ತರಿಸುವ ಅವರ ಶೈಲಿ ಎದುರಾಳಿಯನ್ನು ಸುಮ್ಮನಿರುವಂತೆ ಮಾಡುತ್ತದೆ. ಮಾಧ್ಯಮದವರು ಕೇಳುವ ಪ್ರಶ್ನೆಗಳಿಗೆ ಕೂಲ್‌ ಆಗಿಯೇ ಉತ್ತರಿಸುವ ಡಿ.ಕೆ.ಶಿವಕುಮಾರ್‌ ಅವರು ಮಾತ್ರ ಇತ್ತೀಚೆಗೆ ಪತ್ರಕರ್ತರ ಪ್ರಶ್ನೆಗಳ ಬಾಣಗಳಿಗೆ ಸುಸ್ತಾಗಿ ಕೈ ಮುಗಿದು ಕುಳಿತುಕೊಳ್ಳುವ ಪ್ರಸಂಗ ನಡೆಯಿತು. ನಡೆದಿದ್ದು ಇಷ್ಟೆ.

ಸಂವಿಧಾನ ದಿನದ ಅಂಗವಾಗಿ ಕೆಪಿಸಿಸಿಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅದೇ ಸಂದರ್ಭದಲ್ಲಿ ನಾಯಕತ್ವ ಬದಲಾವಣೆ ಕುರಿತು ಸಾಕಷ್ಟು ಬೆಳವಣಿಗೆಗಳೂ ನಡೆಯುತ್ತಿದ್ದವು. ಇದರ ಬಗ್ಗೆ ಪ್ರತಿಕ್ರಿಯೆ ಪಡೆಯಲು ದೃಶ್ಯ ಮಾಧ್ಯಮ ಪ್ರತಿನಿಧಿಗಳು ಡಿ.ಕೆ.ಶಿವಕುಮಾರ್‌ ಅವರಿಗೆ ಮುಗಿಬಿದ್ದರು. ಏಕಕಾಲದಲ್ಲಿ ಹಿಂದಿ, ಕನ್ನಡ, ಇಂಗ್ಲಿಷ್‌ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳತೊಡಗಿದರು. ಒಂದು ಹಂತದವರೆಗೆ ತಾಳ್ಮೆಯಿಂದಲೇ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಕೊನೆಗೆ ಮಾಧ್ಯಮ ಪ್ರತಿನಿಧಿಗಳ ಕಡೆಗೆ ಕೈ ಮುಗಿದು ಕುಳಿತು ಬಿಟ್ಟರು. ಕೊನೆಗೆ ನಗುತ್ತಾ ‘ನಿಮ್ಮ ಮೇಲೆಲ್ಲ ಕೇಸ್‌ ಹಾಕ್ತೀನಿ ನಾನು. ನನ್ನ ಮೇಲೆ ದೌರ್ಜನ್ಯ ಮಾಡುತ್ತಿದ್ದೀರಿ. ಸ್ವಲ್ಪ ಬಿಟ್ಟರೆ ನಾನು ರೆಸ್ಟ್‌ ಮಾಡುತ್ತೇನೆ’ ಎಂದರು. ಅದಕ್ಕೆ ಮಾಧ್ಯಮ ಪ್ರತಿನಿಧಿಗಳು ನಗುತ್ತಾ, ತಮ್ಮ ಪ್ರಶ್ನೆಗಳ ಸುರಿಮಳೆ ನಿಲ್ಲಿಸಿ ಡಿ.ಕೆ.ಶಿವಕುಮಾರ್‌ ಅವರನ್ನು ಅವರ ಪಾಡಿಗೆ ಬಿಟ್ಟರು.

ಹಿಂದೆ ನಿಂತವರಿಗೆ ಕುರ್ಚಿ ವ್ಯಾಲ್ಯೂ ಗೊತ್ತಿಲ್ಲ…
ಸಾಮಾನ್ಯ ಬಸ್, ರೈಲ್ವೆ ಅಥವಾ ಎಲ್ಲೇ ಆಗಲಿ ನಿಂತುಕೊಂಡವರಿಗೆ ಮಾತ್ರ ಆಸನದ ಮಹತ್ವ ಗೊತ್ತಿರುತ್ತದೆ, ಉದ್ಯೋಗಿಯೊಬ್ಬ ಒಳ್ಳೆಯ ಹುದ್ದೆಯ ಖುರ್ಚಿ ಮಹತ್ವ ಬಲ್ಲ. ರಾಜಕಾರಣಿಗಳಿಗೂ ಖುರ್ಚಿ ಮಹತ್ವ, ಅದರ ಬೆಲೆ, ಖುರ್ಚಿಯಲ್ಲಿ ಕುಳಿತುಕೊಳ್ಳಲು ಎಷ್ಟು ಕಷ್ಟಪಡಬೇಕಿದೆ ಎಂಬುದು ಗೊತ್ತು. ಆದರೆ ರಾಜಕಾರಣಿಗಳ ಹಿಂದೆ ನಿಂತವರಿಗೆ ಮಾತ್ರ ಖುರ್ಚಿ ವ್ಯಾಲ್ಯೂ ಗೊತ್ತೇ ಇರುವುದಿಲ್ಲವಂತೆ! ಹೀಗಂತ ಹೇಳಿದ್ದು ಬೇರ್‍ಯಾರೂ ಅಲ್ಲ, ಖುದ್ದು ನಮ್ಮ ಡಿಸಿಎಂ ಡಿ.ಕೆ.ಶಿವಕುಮಾರ್‌ ಸಾಹೇಬ್ರು! ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿ.ಕೆ.ಶಿವಕುಮಾರ್‌ ಮಾತನಾಡುವಾಗ ತಮ್ಮ ಹಿಂದೆ ನಿಂತಿದ್ದ ಹತ್ತಾರು ಜನರನ್ನು ನೋಡುತ್ತಿದ್ದಂತೆ ‘ಇಲ್ಲಿ (ವೇದಿಕೆ ಕುರ್ಚಿಗಳ ಹಿಂದೆ) ನಿಂತಿರುವವರಿಗೆ ಈ ಚೇರ್ ಬೆಲೆ ಗೊತ್ತಿಲ್ಲ.

ಕುರ್ಚಿ ವ್ಯಾಲ್ಯೂ ಎಷ್ಟು ಎಂದು ಗೊತ್ತಿಲ್ಲ. ಚೇರ್ ಸಿಕ್ಕಿದ್ರೆ ಎಲ್ಲೊ ಒಂದು ಕಡೆ ಕುಳಿತುಕೊಳ್ಳುವುದು ಬಿಟ್ಟು ಸುಮ್ಮನೇ ನಿಂತವ್ರೆ ಇವ್ರು. ನೋಡಿ ಅಲ್ಲಿ ಖಾಲಿ ಚೇರ್ ಇವೆ. ಸಚಿವರು, ಶಾಸಕರು, ಮಂತ್ರಿ ಆದವರು ಕೂಡಾ ಕೆಳಗೆ ಕುಳಿತಿದ್ದಾರೆ. ಆದರೆ ಇವ್ರು ಮಾತ್ರ ನಿಂತವ್ರೇ.. ನಿಮಗೆ ಯಾವ ಚೇರೂ ಸಿಗಲ್ಲ. ಹಿಂದೆ ಇರೋರು ಹಿಂದೆನೇ ಇರ್ತಾರೆ’ ಎಂದು ಹೇಳುತ್ತಿದ್ದಂತೆ ಎಲ್ಲರಲ್ಲೂ ನಗು ಕಾಣಿಸಿಕೊಂಡಿತು. ವೇದಿಕೆ ಮುಂದೆ ಕುಳಿತಿದ್ದ ಹಿರಿಯರೊಬ್ಬರು ಮಾತ್ರ ಶಿವಕುಮಾರ್‌ ಅವರಿಗೆ ಖುರ್ಚಿ ವ್ಯಾಲ್ಯೂ ಎಷ್ಟಿದೆ ಎಂದು ಗೊತ್ತಿದೆ. ಖುರ್ಚಿ ಪಡೆಯುವುದು, ಅದರ ಮೇಲೆ ಕುಳಿತುಕೊಳ್ಳುವುದು, ನಮ್ಮ, ನಿಮ್ಮಂತವರಿಗೆ ಕಷ್ಟ, ಕಷ್ಟ ಎಂದು ಪಕ್ಕದಲ್ಲಿದ್ದವರಿಗೆ ಹೇಳಿದ್ದು ಮಾತ್ರ ನಿಜ.

ನಿಮ್ಮ ಬಗ್ಗೆ ಪೇಪರ್ರಲ್ಲಿ ಓದಿದ್ದೇನೆ ಸರ್, ನಿಮ್ಮ ಹೆಸರ ಏನ್ರಿ?!

ದಿನಾ ಬೆಳಗಾದರೆ ಸಾಕು ಪೇಪರ್, ಟಿವಿಗಳಲ್ಲಿ ಪ್ರಧಾನಿ ಮೋದಿ, ಕೇಂದ್ರ ಸರ್ಕಾರದ ವಿರುದ್ಧ ಗುಡುಗುವ ನಮ್ಮ ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಹೆಸರು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ... ಆದರೆ ಹುಡುಗನೊಬ್ಬ ವೇದಿಕೆ ಕಾರ್ಯಕ್ರಮವೊಂದರಲ್ಲಿ ಅವರಿಂದಲೇ ಹೆಸರು ಕೇಳಿಕೊಂಡು ಮಾತನಾಡಿದ ಪ್ರಸಂಗ ನಡೆದಿದ್ದು ಬಾಗಲಕೋಟೆ ಜಿಲ್ಲೆ ಮುಧೋಳ ಕಾರ್ಯಕ್ರಮದಲ್ಲಿ. ಮುಧೋಳ‌ ನಗರದ ಕುಮಕಾಲೆ ಖಾಸಗಿ ಪಿಯುಸಿ ಕಾಲೇಜಿನಿಂದ ರಾಜ್ಯಮಟ್ಟದ ಸೈಕ್ಲಿಂಗ್ ಕ್ರೀಡಾಕೂಟ ಆಯೋಜಿಸಲಾಗಿತ್ತು. ಕ್ರೀಡಾಕೂಟವನ್ನು ಸಚಿವ ಸಂತೋಷ್ ಲಾಡ್ ಉದ್ಘಾಟನೆ ಮಾಡಿದ್ದರು. ಕಾರ್ಯಕ್ರಮದಲ್ಲಿ ಸೈಕ್ಲಿಂಗ್ ಪಟುವೊಬ್ಬ ಮೈಕ್‌ ಹಿಡಿದು ಭಾಷಣ ಮಾಡುತ್ತಾ ನಾವೆಲ್ಲ ರಾಜ್ಯಮಟ್ಟದಿಂದ ರಾಷ್ಟ್ರಮಟ್ಟಕ್ಕೆ ಆಯ್ಕೆ ಆಗೇವಿ ರೀ ಅನ್ಕೋತ್ತಾ..

ಹಂಗ ತನ್ನ ಪಕ್ಕಕ್ಕೆ ನಿಂತಿದ್ದ ಸಚಿವರಿಗೆ ಸರ್ ನಿಮ್ಮ ಹೆಸರ ಏನರೀ ಅಂತ ಕೇಳಿದ್ದಾನೆ.. ಈ ವೇಳೆ ಅಲ್ಲಿದ್ದವರಿಗೆಲ್ಲ ಒಂದು ಕ್ಷಣ ನಗು. ಈ ಹುಡುಗ ಅಷ್ಟಕ ಸುಮ್ಮನಿರಲಾರದ ಯದಕ ನಗಾತೀರಿ ನಾನೇನ್‌ ಜೋಕ್ ಮಾಡೇನಿ.. ಅಂದಾಗ ಮತ್ತೊಮ್ಮೆ ಸಭಿಕರಿಗೆ ನಗು. ಮಾತು ಮುಂದುವರಿಸಿದ ಕ್ರೀಡಾಪಟು, ಸರ್ ನಾನು ನಿಮ್ಮ ಬಗ್ಗೆ ಟಿವಿ, ಪೇಪರ್‌ನಲ್ಲಿ ಓದಿದ್ದೇನೆ. ನೀವು ಎಲ್ಲ ಬಡ ಮಕ್ಕಳಿಗೆ ಪ್ರೋತ್ಸಾಹ ಮಾಡುತ್ತೀರಿ, ಹಂಗ ನಮಗೂ ಪ್ರೋತ್ಸಾಹ ಮಾಡಬೇಕರಿ ಅಂತ ಮನವಿ ಮಾಡಿದ್ದಾನೆ. ಹುಡುಗನ ಮಾತಿನಿಂದ ಪಕ್ಕದಲ್ಲೇ ನಿಂತಿದ್ದ ಸಚಿವರು ನಗು ನಗುತ್ತಲೇ, ಆತನ ಹೆಗಲ ಮೇಲೆ ಕೈ ಹಾಕಿ ನನ್ನ ಹೆಸರು ಸಂತೋಷ್‌ ಲಾಡ್‌ ಎಂದು ಹೇಳಿದಾಗ ಎಲ್ಲರೂ ಚಪ್ಪಾಳೆ ತಟ್ಟಿದರು.

-ಗಿರೀಶ್‌ ಗರಗ
-ಮಂಜುನಾಥ್‌ ನಾಗಲೀಕರ್‌
-ಸಂಜೀವ ಅಂಗಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ಆನೆ ಕಾರಿಡಾರ್ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡಬೇಕು: ಮಾಜಿ ಸಂಸದ ಪ್ರತಾಪ್ ಸಿಂಹ