ಕಳೆದ ಮೂರ್ನಾಲ್ಕು ತಿಂಗಳಿಂದ ನಿರಂತರವಾಗಿ ಸಿದ್ದರಾಮಯ್ಯ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಮಾಹಿತಿ ಬಹಿರಂಗವಾಗುತ್ತಿದೆ. ಅದನ್ನು ಸಾರ್ವಜನಿಕಗೊಳಿಸಿದವರು ಯಾರು? ಆ ವಿಚಾರ ಮುಖ್ಯಮಂತ್ರಿಗೆ ಏಕೆ ಗೊತ್ತಾಗಲಿಲ್ಲ? ಗೊತ್ತಿದ್ದರೂ ಸುಮ್ಮನಿದ್ದರೇ ಎಂದು ಪ್ರಶ್ನಿಸಿದ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್
ಬೆಂಗಳೂರು(ಸೆ.10): ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಅನೇಕರು ಟವೆಲ್ ಹಾಕಿದರೆ, ಡಿ.ಕೆ.ಶಿವಕುಮಾರ್ ಅವರು ನಾನೇ ಮುಂದಿನ ಮುಖ್ಯಮಂತ್ರಿ ಎಂದು ಸ್ಟಿಕ್ಕರ್ ಅಂಟಿಸಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಳೆದ ಮೂರ್ನಾಲ್ಕು ತಿಂಗಳಿಂದ ನಿರಂತರವಾಗಿ ಸಿದ್ದರಾಮಯ್ಯ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಟಿಐ ಮಾಹಿತಿ ಬಹಿರಂಗವಾಗುತ್ತಿದೆ. ಅದನ್ನು ಸಾರ್ವಜನಿಕಗೊಳಿಸಿದವರು ಯಾರು? ಆ ವಿಚಾರ ಮುಖ್ಯಮಂತ್ರಿಗೆ ಏಕೆ ಗೊತ್ತಾಗಲಿಲ್ಲ? ಗೊತ್ತಿದ್ದರೂ ಸುಮ್ಮನಿದ್ದರೇ ಎಂದು ಪ್ರಶ್ನಿಸಿದರು.
ಬಯಲುಸೀಮೆಯನ್ನು ಬಂಗಾರದ ಸೀಮೆ ಮಾಡುವ ಶುಭ ಘಳಿಗೆ: ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿ ಬದಲಾವಣೆ ನಿಶ್ಚಿತ. ನಾವು ಕೋರ್ಟ್ ಆದೇಶಕ್ಕೆ ಕಾಯುತ್ತಿದ್ದೇವೆ. ಆದರೆ, ಅವರ ಪಕ್ಷದವರೇ ಟವೆಲ್ ಹಾಕಿ ಕಾಯುತ್ತಿದ್ದಾರೆ. ಹಿರಿಯನಾಗಿದ್ದೇನೆ ಎಂದು ಎಂ.ಬಿ. ಪಾಟೀಲ್ ಹೇಳುತ್ತಾರೆ. ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಲಾಗುತ್ತಿದೆ. ಎಲ್ಲರಿಗಿಂತ ಸೀನಿಯರ್ ನಾನು ಎಂದು ದೇಶಪಾಂಡೆ ಹೇಳಿದ್ದಾರೆ. ಅಧ್ಯಕ್ಷನಾಗಿದ್ದರೂ ಎರಡು ಬಾರಿ ಹುದ್ದೆ ಮಿಸ್ ಆಗಿದೆ. ಅನ್ಯಾಯ ಸರಿಪಡಿಸಿ ಎಂದು ಪರಮೇಶ್ವರ್ ಹೇಳುತ್ತಿದ್ದಾರೆ. ಹೀಗೆ ಪಟ್ಟಿ ದೊಡ್ಡದಾಗುತ್ತಲೇ ಇದೆ ಎಂದು ಹೇಳಿದರು.
ಮುಖ್ಯಮಂತ್ರಿಯವರನ್ನು ಹಿಂದೆ ಹಾಕಿ ದಿಲ್ಲಿಗೆ ಹೋಗಿ ಪ್ರಧಾನಮಂತ್ರಿ ಮೋದಿಯವರನ್ನು ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ್ದಾರೆ. ದೀಪಾವಳಿ ವೇಳೆಗೆ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ. ಕುರ್ಚಿಗೆ ಬಾಂಬ್ ಇಟ್ಟಿದ್ದಾರೋ, ರಾಕೆಟ್ ಕಟ್ಟಿದ್ದಾರೋ ಗೊತ್ತಿಲ್ಲ. ಒಟ್ಟಿನಲ್ಲಿ ಬಲವಾಗಿ ಹಾರಿಸುತ್ತಾರೆ ಎಂದು ತಿಳಿಸಿದರು.
ಮುಖ್ಯಮಂತ್ರಿಗೆ ಬಂಡೆಯಾಗಿ ನಿಲ್ಲುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ, ಸಂಗೊಳ್ಳಿ ರಾಯಣ್ಣ ಪ್ರತಿಮೆ ಉದ್ಘಾಟನೆ ವೇಳೆ ‘ಬೆನ್ನ ಹಿಂದೆ ಇದ್ದವರೇ ಸಂಗೊಳ್ಳಿ ರಾಯಣ್ಣನನ್ನು ಹಿಡಿದುಕೊಟ್ಟಿದ್ದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿಕೆ ನೀಡಿದ್ದರು ಎಂದು ಅಶೋಕ್ ನೆನಪಿಸಿದರು.