ಕರ್ನಾಟಕ ಪ್ರದೇಶ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಬಿಜೆಪಿ ನಾಯಕರುಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.
ಬೆಂಗಳೂರು, (ಅ.8): ನನ್ನ ಹೆಸರು ಹೇಳಿದರೇ ಬಿಜೆಪಿಯಲ್ಲಿ ಅಧಿಕಾರಗಳು ಸಿಗುತ್ತವೆ. ಆ ಮಾರುಕಟ್ಟೆ ಉದ್ದೇಶಕ್ಕಾಗಿ ಕೆಲವರು ನನ್ನ ಹೆಸರು ಬಳಸಿಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಬಿಜೆಪಿ ಭ್ರಷ್ಟಾಚಾರದ ವಿರುದ್ಧ ರಚಿಸಲಾದ ಹಾಡುಗಳು, ಪೋಸ್ಟರ್‌ಗಳನ್ನ ಬಿಡುಗಡೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಭ್ರಷ್ಟ ಎಂಬ ಬಗ್ಗೆ ಬಿಜೆಪಿಯವರ ಬಳಿ ದಾಖಲೆಗಳಿದ್ದರೆ ಜನರ ಮುಂದಿಡಲಿ ಎಂದು ಸವಾಲು ಹಾಕಿದರು.
ಮುನಿರತ್ನ ಅನಗತ್ಯ ಕೇಸು ಹಾಕಿಸಿ ಕಿರುಕುಳ: ಡಿಕೆಶಿ ಕಿಡಿ
ಸಚಿವ ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಈಗ ದೆಹಲಿಗೆ ಹೋಗುತ್ತಿದ್ದಾರೆ. ಅವರು ನನ್ನನ್ನು ಭ್ರಷ್ಟ ತತ್ವಜ್ಞಾನಿಯಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ನಾನು ಭ್ರಷ್ಟನೋ, ತತ್ವಜ್ಞಾನಿಯೋ ಎಂಬುದು ಬೇರೆ ಮಾತು. ಬಿಜೆಪಿ ನಾಯಕರು ನನ್ನ ಮೇಲೆ ಮಾಡುವ ಆರೋಪಗಳಿಗೆ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಗುಡುಗಿದರು,
ನಾನು ಭ್ರಷ್ಟ ಎಂದು ಯಾವ ತನಿಖೆ ನಡೆದಿದೆ, ಯಾವ ಆಯೋಗ ನನ್ನ ವಿರುದ್ಧ ವರದಿ ನೀಡಿದೆ, ಎಷ್ಟು ದೂರುಗಳು ದಾಖಲಾಗಿವೆ ಎಂಬುದನನ್ನು ಬಹಿರಂಗ ಪಡಿಸಲಿ ಎಂದು ತಿರುಗೇಟು ನೀಡಿದರು.