
ಮೈಸೂರು (ಜು.21): ಸಿಎಂಗೆ ಹೇಳಿಯೇ ನಿನ್ನೆ ದೆಹಲಿಗೆ ಹೋಗಿದ್ದೆ. ನಾನು ನನ್ನ ಖಾಸಗಿ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ. ಯಾವ ರಾಜಕೀಯಕ್ಕೂ ಹೋಗಿರಲಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. ದೆಹಲಿಯಲ್ಲಿ ವಕೀಲರ ಜೊತೆ ಸಮಯ ನಿಗದಿಯಾಗಿತ್ತು. ಅದಕ್ಕಾಗಿ ಹೋಗಿ ಬಂದೆ. ಅದನ್ನು ಮುಗಿಸಿ ರಾತ್ರಿಯೇ ವಾಪಸ್ ಬಂದಿದ್ದೇನೆ ಎಂದರು. ಶಿವಕುಮಾರ್ ಅವರಿಗೆ ಅಪಮಾನ ಮಾಡಲಾಗಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರಿಗೆ ಯಾವಾಗಲೂ ನನ್ನ ಮೇಲೆ ಪ್ರೀತಿ ಜಾಸ್ತಿ. ನಾನು ಹೆಚ್ಚು ಬಲಿಷ್ಠವಾಗಿರುವುದಕ್ಕೆ ನನ್ನ ಮೇಲೆ ಪ್ರೀತಿ ಜಾಸ್ತಿ ಎಂದು ಲೇವಡಿ ಮಾಡಿದರು.
ಐದು ಪಾಲಿಕೆಗಳ ರಚನೆ ಖಚಿತ: ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ಐದು ಪಾಲಿಕೆಗಳನ್ನು ರಚನೆ ಮಾಡಿ ಶೀಘ್ರದಲ್ಲಿ ಚುನಾವಣೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಬೆಂಗಳೂರಿನ ಉತ್ತಮ ಆಡಳಿತಕ್ಕಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚಿಸಲಾಗಿದೆ. ಅದರ ಅಡಿಯಲ್ಲಿ ಐದು ಪಾಲಿಕೆಗಳನ್ನು ಮಾಡಲಾಗುವುದು. ಅದಕ್ಕಾಗಿ ಈಗಾಗಲೇ ಶಾಸಕ ರಿಜ್ವಾನ್ ಅರ್ಷದ್ ನೇತೃತ್ವದ ಸಮಿತಿ ರಚಿಸಲಾಗಿದೆ. ಕೆಲವರು ಸಾರ್ವಜನಿಕವಾಗಿ ವಿರೋಧ ಮಾಡುತ್ತಿದ್ದಾರೆ. ಆದರೆ, ಆಡಳಿತ ದೃಷ್ಟಿಯಿಂದ ಐದು ಪಾಲಿಕೆ ರಚಿಸಲೇಬೇಕಾಗಿದೆ. ಪಾಲಿಕೆಗಳನ್ನು ರಚಿಸಿ ಶೀಘ್ರದಲ್ಲಿ ಚುನಾವಣೆ ನಡೆಸಲಾಗುವುದು ಎಂದರು.
ಐದು ಪಾಲಿಕೆಗಳು ರಚನೆಯಾದರೆ ನಮ್ಮ ಕಾರ್ಯಕರ್ತರಿಗೆ ಹೆಚ್ಚಿನ ಸ್ಥಾನಮಾನ ನೀಡಲು ನಿರ್ಧರಿಸಲಾಗಿದೆ. ಅದಕ್ಕೆ ಅಡಿಪಾಯ ತಯಾರು ಮಾಡಬೇಕಿದೆ. ಏಕೆಂದರೆ ಡಿ.ಕೆ. ಶಿವಕುಮಾರ್ ಒಬ್ಬನೇ ಸರ್ಕಾರ ತರಲು ಆಗುವುದಿಲ್ಲ. ಕಾರ್ಯಕರ್ತರೇ ಪಕ್ಷ ಮತ್ತು ಸರ್ಕಾರದ ಜೀವಾಳ. ನಾವು ವಿಧಾನಸೌಧದಲ್ಲಿ ತೆಗೆದುಕೊಳ್ಳುವ ತೀರ್ಮಾನ ಮಾಡಬಹುದು. ಆದರೆ, ನಮ್ಮ ಕಾರ್ಯಕರ್ತರು ಸರ್ಕಾರದ ರಾಯಭಾರಿಗಳು. ನಮ್ಮ ಭವಿಷ್ಯ, ಬೆಂಗಳೂರಿನ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ ಎಂದು ಹೇಳಿದರು.
ಬಿಜೆಪಿ ಅಭಿವೃದ್ಧಿಗೆ ವಿರುದ್ಧವಾಗಿರುವ ಪಕ್ಷ: ಟನಲ್ ರಸ್ತೆ ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಟ್ಟಿದೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ದೆಹಲಿ, ಮುಂಬೈ ಹಾಗೂ ದೇಶದ ಇತರ ಭಾಗಗಳಲ್ಲೂ ಟನರ್ ರಸ್ತೆ ಮಾಡಲಾಗುತ್ತಿದೆ. ಅಲ್ಲೆಲ್ಲ ಯಾವ ಕಾರಣಕ್ಕೆ ಟನಲ್ ರಸ್ತೆ ಮಾಡಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲಿ. ಇಲ್ಲಿ ಮಾತ್ರ ಏತಕ್ಕಾಗಿ ವಿರೋಧ ಮಾಡಲಾಗುತ್ತಿದೆ. ತೇಜಸ್ವಿ ಸೂರ್ಯ ಆರೋಪಕ್ಕೆ ಉತ್ತರ ನೀಡುವುದಿಲ್ಲ. ನಾವು ಏನೇ ಮಾಡಿದರೂ ಟೀಕೆ ಮಾಡುತ್ತಾರೆ. ಬಿಜೆಪಿ ಯಾವತ್ತಿಗೂ ಅಭಿವೃದ್ಧಿ ವಿರುದ್ಧವಾಗಿರುವ ಪಕ್ಷ. ಬೆಂಗಳೂರಿಗೆ ಅವರ ಕೊಡುಗೆ ಶೂನ್ಯ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.