ಮಗುವನ್ನ ಚಿವುಟಿ, ತೊಟ್ಟಿಲನ್ನೂ ತೂಗ್ತಿದ್ದಾರಾ ಡಿಸಿಎಂ ಡಿಕೆಶಿ, ಗುತ್ತಿಗೆದಾರರಿಗೆ ದುಡ್ಡೇ ಕೊಡದೆ ಡೆಡ್‌ಲೈನ್‌ ಹಾಕಿದ ಸರ್ಕಾರ!

By Santosh Naik  |  First Published Sep 2, 2024, 12:35 PM IST

ಬಿಬಿಎಂಪಿ ಗುತ್ತಿಗೆದಾರರು ಬಾಕಿ ಬಿಲ್ ಪಾವತಿಯಾಗುವವರೆಗೂ ಯಾವುದೇ ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ 15 ದಿನಗಳ ಒಳಗೆ ಬೆಂಗಳೂರಿನ ಎಲ್ಲಾ ರಸ್ತೆ ಗುಂಡಿಗಳನ್ನು ಮುಚ್ಚಬೇಕು ಎಂದು ಡೆಡ್‌ಲೈನ್‌ ನೀಡಿದ್ದಾರೆ.


ಬೆಂಗಳೂರು (ಆ.2): ಒಂದು ಕಡೆ ಮಗುವನ್ನೂ ಚಿವುಟಿ, ಇನ್ನೊಂದೆಡೆ ತೊಟ್ಟಿಲನ್ನೂ ತೂಗೋ ಕೆಲಸ ಡಿಸಿಎ ಡಿಕೆ ಶಿವಕುಮಾರ್‌ ಮಾಡ್ತಿದ್ದಾರೆ. ಸೋಮವಾರ ಮಾತನಾಡಿದ್ದ ಡಿಸಿಎಂ ಡಿಕೆ ಶಿವಕುಮಾರ್, ಮುಂದಿನ 15 ದಿನಗಳ ಒಳಗಾಗಿ ಬೆಂಗಳೂರಿನ ಎಲ್ಲಾ ರಸ್ತೆಗುಂಡಿಗಳನ್ನು ಮುಚ್ಚಬೇಕು ಎಂದು ಡೆಡ್‌ಲೈನ್‌ ಕೊಟ್ಟಿದ್ದಾರೆ. ಇನ್ನೊಂದೆಡೆ ಬಿಬಿಎಂಪಿ ಗುತ್ತಿಗೆದಾರರು ತಮಗೆ ಬರಬೇಕಾದ ಬಾಕಿ ಹಣ ಬರುವವರೆಗೂ ಯಾವುದೇ ಕೆಲಸ ಕಾರ್ಯ ಮಾಡೋದಿಲ್ಲ ಎಂದು ಹೇಳಿದ್ದಾರೆ. ಸರ್ಕಾರ-ಗುತ್ತಿಗೆದಾರರ ಗಲಾಟೆಯಲ್ಲಿ ಬೆಂಗಳೂರಿನ ಜನ ಮಾತ್ರ ಗುಂಡಿಗಳಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ಬಿಬಿಎಂಪಿಯಿಂದ 25% ಬಿಲ್ ಬಾಕಿ ಇರುವ ವಿಚಾರಕ್ಕೆ, ಕೇಂದ್ರ ಕಚೇರಿಯಲ್ಲಿ ಇಂದು ಗುತ್ತಿಗೆದಾರರು ಮೌನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ಎಲ್ಲಾ ಕಾಮಗಾರಿಗಳನ್ನ ಗುತ್ತಿಗೆದಾರರು ಬಂದ್‌ ಮಾಡಿದ್ದಾರೆ. ಬಾಕಿ ಬಿಲ್ ಪಾವತಿಯಾಗೋವರೆಗೆ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ. ಪಾಲಿಕೆಯ ಕಾಮಗಾರಿಗಳಿಗೆ ಶೇ 25 ರಷ್ಟು ಬಿಲ್ ಅನ್ನು ಪಾಲಿಕೆ ಬಾಕಿ ಉಳಿಸಿಕೊಂಡಿದೆ. ಬಾಕಿ ಬಿಲ್ ಪಾವತಿಗೆ ಈಗಾಗಲೇ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಡಿಸಿಎಂಗೆ ಮನವಿ ಮಾಡಿದ್ರೂ ಇನ್ನೂ ಬಾಕಿ ಹಣ ಸಿಕ್ಕಿಲ್ಲ. ಆ ಕಾರಣದಿಂದ ಬಿಬಿಎಂಪಿ ಗುತ್ತಿಗೆದಾರರು ಪ್ರತಿಭಟನೆಗೆ ಇಳಿದಿದ್ದಾರೆ. ಬಾಕಿ ಬಿಲ್ ಬರೋ ತನಕ ಪ್ರತಿಭಟನೆ ನಡೆಸುತ್ತೇವೆ. ನಾವು ಬಿಬಿಎಂಪಿಗೆ ಕೆಲಸ ಮಾಡಿದ್ದೇವೆ. ಸರ್ಕಾರದ ಬಳಿ ಕೇಳುವ ಅಗತ್ಯತೆ ಇಲ್ಲ. ಬಿಬಿಎಂಪಿಯಲ್ಲೇ ಹೋರಾಟ ಮಾಡ್ತೀವೆ ಅಂತಾ ಪಟ್ಟು ಹಿಡಿದಿದ್ದಾರೆ. ಬಾಕಿ ಬರೋ ತನಕ ಉಪವಾಸ ಸತ್ಯಾಗ್ರಹದ ಎಚ್ಚರಿಕೆಯನ್ನೂ ನೀಡಿದ್ದಾರೆ.

ಗುತ್ತಿಗೆದಾರರ ಅಧ್ಯಕ್ಷ ನಂದಕುಮಾರ್ ಮಾತನಾಡಿದ್ದು, ಇವತ್ತಿಂದ ಯಾವುದೇ ಕೆಲಸ ಮಾಡಲ್ಲ ಎಲ್ಲಾ ಬಂದ್ ಮಾಡಿದ್ದೇವೆ. ಗುಂಡಿ ಮುಚ್ಚಲ್ಲ ಪ್ರತಿಭಟನೆ ಮಾಡುತ್ತೇವೆ. ಬಾಕಿ ಬಿಲ್ ಬಿಡುಗಡೆ ಮಾಡುವವರೆಗೂ ಗುಂಡಿ ಮುಚ್ಚಲ್ಲ ಯಾವುದೇ ಕೆಲಸ ಮಾಡಲ್ಲ' ಎಂದು ಹೇಳಿದ್ದಾರೆ

ಇನ್ನೊಂದೆಡೆ ಡಿಕೆಶಿ ಡೆಡ್‌ಲೈನ್‌: ಬಿಬಿಎಂಪಿ ಗುತ್ತಿಗೆದಾರರು ಪ್ರತಿಭಟನೆ ನಡೆಸುತ್ತಿದ್ದರೆ, ಡಿಸಿಎಂ ಡಿಕೆಶಿ ಡೆಡ್‌ಲೈನ್‌ ನೀಡಿದ್ದಾರೆ. ಬಿಬಿಎಂಪಿ ಕಮೀಷನರ್‌ಗೆ 15ದಿನದೊಳಗೆ ಎಲ್ಲಾ ರಸ್ತೆಗುಂಡಿ ಮುಚ್ಚಲು ಡಿಸಿಎಂ ಸೂಚನೆ ನೀಡಿದ್ದಾರೆ. ರಸ್ತೆ ಗುಂಡಿ ಗಮನ ಆ್ಯಪ್ ನಲ್ಲಿ ದಾಖಲಾದ ಎಲ್ಲಾ ಗುಂಡಿಯನ್ನ ತ್ವರಿತವಾಗಿ ಮುಚ್ಚಬೇಕು. ರಸ್ತೆಗುಂಡಿಯಿಂದಾಗಿ ಸರ್ಕಾರಕ್ಕೆ ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿ ಬರುತ್ತಿದೆ. ಬಿಬಿಎಂಪಿ ಈ‌ ಬಗ್ಗೆ ಕ್ರಮವಹಿಸಿ ತ್ವರಿತವಾಗಿ ಗುಂಡಿ ಮುಚ್ಚುವ ಕೆಲಸ ಮಾಡಬೇಕು. ಹದಿನೈದು ದಿನದ ಬಳಿಕ ನಗರ ಪ್ರದಕ್ಷಿಣೆ ಮೂಲಕ ಖುದ್ದಾಗಿ ಗುಂಡಿಮುಚ್ಚುವ ಕಾರ್ಯದ ಪ್ರಗತಿ ಪರೀಶೀಲನೆ ಮಾಡಲು ಡಿಸಿಎಂ ನಿರ್ಧಾರ ಮಾಡಿದ್ದಾರೆ. 

Tap to resize

Latest Videos

ಇನ್ನು ಗುತ್ತಿಗೆದಾರರ ಬ್ಲಾಕ್ ಮೇಲ್ ತಂತ್ರಕ್ಕೆ ನಾನು ಹೆದರುವುದಿಲ್ಲ. ಗುತ್ತಿಗೆದಾರರಿಗೆ ಯಾವ ರೀತಿ ಸಹಾಯ ಮಾಡಬೇಕೋ ಆ ರೀತಿ ಮಾಡಿದ್ದೇನೆ. ಕೋರ್ಟ್ ಲ್ಲೂ ವಿಚಾರಣೆ ನಡೆಯುತ್ತಿದೆ. ಶೇಕಡಾ 75 ರಷ್ಟು ಹಣ ಬಿಡುಗಡೆ ಮಾಡಿಸಿದ್ದೇನೆ. ಪ್ರತಿಭಟನೆ ಮಾಡ್ತೇವೆ ಅಂದ್ರೆ ನನ್ನ ಆಕ್ಷೇಪ ಇಲ್ಲ. ಬೇರೆಯವರು ಬಂದು ಗುಂಡಿ ಮುಚ್ಚುತ್ತಾರೆ. ಪ್ರತಿಭಟನೆಯ ನಿರತ ಗುತ್ತಿಗೆದಾರರಿಗೆ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆ ಬಗ್ಗೆ ಮಾತನಾಡಿರುವ ಬಿಬಿಎಂಪಿ ಕಮೀಷನರ್‌ ತುಷಾರ್‌ ಗಿರಿನಾಥ್‌, 'ಈ ಹಿಂದೆ SIT ತನಿಖೆ ಇತ್ತು, ಆ ವೇಳೆ ಕೆಲ ಬದಲಾವಣೆಯಾಗಿತ್ತು. ಸದ್ಯ ನಾಗಮೋಹನ್ ದಾಸ್ ವರದಿ ಬಳಿಕ ನಿಯಮ ಇದೆ. ಸರ್ಕಾರ 25% ಕೊಡಬೇಕು ಅಂತಾ ಸೂಚಿಸಿತ್ತು. ಅದಕ್ಕಾಗಿ 25% ಬಿಲ್ ಬಾಕಿ ಉಳಿಸಿಕೊಂಡಿದ್ದೇವೆ. ಸದ್ಯ ಎಲ್ಲಾ ವಿಚಾರವನ್ನ ಸರ್ಕಾರಕ್ಕೆ ತಿಳಿಸಿದ್ದೇವೆ . ಸರ್ಕಾರ ಏನು ನಿರ್ಧಾರ ಮಾಡುತ್ತೆ ನೋಡಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನಲ್ಲಿ ನಿಷೇಧಿತ ಪಿಓಪಿ ಗಣೇಶ ಮೂರ್ತಿ ಭರ್ಜರಿ ಮಾರಾಟ, ಕ್ರಿಮಿನಲ್‌ ಕೇಸ್ ಎಚ್ಚರಿಕೆ ಲೆಕ್ಕಕ್ಕೇ ಇಲ್ಲ!

ಇಂದಿನಿಂದ ಕಾಮಗಾರಿ ಸ್ಥಗಿತ ವಿಚಾರವಾಗಿ ಮಾತನಾಡಿದ ಅವರು, 'ಕಾಮಗಾರಿ ನಿಲ್ಲಿಸಿದರೆ ಏನು ವ್ಯತ್ಯಾಸ ಆಗಲ್ಲ. ನಿನ್ನೆ ಏನಿತ್ತು,ಯಥಾಸ್ಥಿತಿ ಇರುತ್ತೆ. 80% ಗುತ್ತಿಗೆದಾರರಿಂದ ಅಷ್ಟೇನೂ ಕೆಲಸ ಆಗ್ತಿಲ್ಲ. ಸದ್ಯ ಇರೋ ಸಂಪನ್ಮೂಲ ಬಳಸಿಕೊಂಡು ಕೆಲಸ ಮಾಡ್ತಿದ್ದೇವೆ. ಅವರು ಇ-ವ್ಯವಸ್ಥೆ ಬೇಡ ಅಂತಾ ಹೇಳ್ತಿದ್ದಾರೆ. ಆದರೆ, ಸರ್ಕಾರದ ನಿಯಮ ಏನಿದೆ ಹಾಗೇ ಕೆಲಸ ಮಾಡುತ್ತೇವೆ.. ಈಗ ಡಿಮ್ಯಾಂಡ್ ಏನಿದೆ ಅದನ್ನ ಸರ್ಕಾರಕ್ಕೆ ತಿಳಿಸಿದ್ದೇವೆ. ಸರ್ಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಕೊಟ್ಟಿದ್ದೇವೆ. ಷರತ್ತುಬದ್ಧವಾಗಿ ಏನ್ ಮಾಡ್ಬೇಕು ಸರ್ಕಾರ ತೀರ್ಮಾನ ಮಾಡಲಿದೆ ಎಂದಿದ್ದಾರೆ.

ಮೊಬೈಲ್ ಟವರ್‌ಗೆ ಶುಲ್ಕ ಹೇರಲು ಬಿಬಿಎಂಪಿ ಸಜ್ಜು: 350 ರಿಂದ 500 ಕೋಟಿ ಆದಾಯ ನಿರೀಕ್ಷೆ

1600 ಕೋಟಿ ರೂಪಾಯಿ ಬಾಕಿ: ಪಾಲಿಕೆ ವ್ಯಾಪ್ತಿಯ ಕಾಮಗಾರಿಗಳ ಶೇ.25% ಬಿಲ್ ಬಾಕಿ ಉಳಿದಿದೆ. ಬರೀ 75% ಬಿಲ್ ಪಾವತಿಸಿ ಪಾಲಿಕೆ ಸೈಲೆಂಟ್‌ ಆಗಿದೆ. ಒಂದು ಅಂದಾಜಿನ ಪ್ರಕಾರ 1600 ಕೋಟಿ ರೂಪಾಯಿಯನ್ನು ಬಿಬಿಎಂಪಿ ಬಾಕಿ ಉಳಿಸಿಕೊಂಡಿದೆ ಈ ಬಗ್ಗೆ ಗುತ್ತಿಗೆದಾರರು ಡಿಕೆಶಿಗೂ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.

click me!