ಲೋಕಸಭಾ ಚುನಾವಣೆ 2024: ಮಂಡ್ಯ ಅಭ್ಯರ್ಥಿ ಆಯ್ಕೆಗೆ ಜಿಲ್ಲಾ ಪ್ರವಾಸ, ದೇವೇಗೌಡ

By Kannadaprabha News  |  First Published Feb 14, 2024, 6:00 AM IST

ಪಕ್ಷ ಸಂಘಟನೆ ದೃಷ್ಟಿಯಿಂದ ಮುಂದಿನ ವಾರದಿಂದ ಮಂಡ್ಯ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಆಗ ಎಲ್ಲಾ ಕಾರ್ಯಕರ್ತರು, ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಆಮೇಲೆ ಅಭ್ಯರ್ಥಿ ಬಗ್ಗೆ ನಮ್ಮ ಪಕ್ಷದ ನಾಯಕರೆಲ್ಲ ಸೇರಿ ಒಂದು ಅಭಿಪ್ರಾಯಕ್ಕೆ ಬರುತ್ತೇವೆ: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ 


ಬೆಂಗಳೂರು/ಮಂಡ್ಯ(ಫೆ.14): ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಸಂಬಂಧ ಮುಂದಿನ ವಾರ ಕ್ಷೇತ್ರದ ವ್ಯಾಪ್ತಿಯ ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ಸ್ಥಳೀಯ ಮುಖಂಡರ ಅಭಿಪ್ರಾಯ ಸಂಗ್ರಹಿಸಲಾಗುವುದು ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ತಿಳಿಸಿದ್ದಾರೆ. ಮಂಗಳವಾರ ತಮ್ಮ ನಿವಾಸದಲ್ಲಿ ಮಂಡ್ಯ ಜಿಲ್ಲೆಯ ನಾಯಕರು ಹಾಗೂ ಇತರ ಹಿರಿಯ ನಾಯಕರ ಜತೆ ಸಮಾಲೋಚನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಪಕ್ಷ ಸಂಘಟನೆ ದೃಷ್ಟಿಯಿಂದ ಮುಂದಿನ ವಾರದಿಂದ ಮಂಡ್ಯ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಳ್ಳುತ್ತೇವೆ. ಆಗ ಎಲ್ಲಾ ಕಾರ್ಯಕರ್ತರು, ಮುಖಂಡರು, ಸಂಘ ಸಂಸ್ಥೆಗಳ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡುತ್ತೇವೆ. ಆಮೇಲೆ ಅಭ್ಯರ್ಥಿ ಬಗ್ಗೆ ನಮ್ಮ ಪಕ್ಷದ ನಾಯಕರೆಲ್ಲ ಸೇರಿ ಒಂದು ಅಭಿಪ್ರಾಯಕ್ಕೆ ಬರುತ್ತೇವೆ. ನಾವು ಎನ್‌ಡಿಎ ಮೈತ್ರಿಕೂಟದಲ್ಲಿ ಇರುವುದರಿಂದ ನಮ್ಮ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ನಡ್ಡಾ ಹಾಗೂ ರಾಜ್ಯ ಬಿಜೆಪಿ ನಾಯಕರಿಗೆ ತಿಳಿಸುತ್ತೇವೆ. ಆಮೇಲೆ ಕುಮಾರಸ್ವಾಮಿ ಅವರು ಅವರೆಲ್ಲರ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ ಎಂದರು.

Tap to resize

Latest Videos

ಬಿಜೆಪಿ-ಜೆಡಿಎಸ್ ಮೈತ್ರಿ ವಿರುದ್ಧ ಸಿಡಿದೆದ್ದ ಕೆಸಿ ನಾರಾಯಣಗೌಡ ಶೀಘ್ರದಲ್ಲೇ ಕಾಂಗ್ರೆಸ್‌ಗೆ?

ಮಂಡ್ಯ ಲೋಕಸಭೆ ಚುನಾವಣೆ ಹಾಗೂ ಅಲ್ಲಿನ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪಕ್ಷ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ. ಎರಡು ಚುನಾವಣೆಗಳಿಗೆ ಮಂಡ್ಯದಲ್ಲಿ ಯಾರು ಅಭ್ಯರ್ಥಿ ಆಗಬೇಕು ಎಂದು ನಾನು ಚರ್ಚೆ ಮಾಡಿದ್ದೇನೆ. ಎಲ್ಲಾ ನಾಯಕರ ಅಭಿಪ್ರಾಯ ಆಲಿಸಿದ್ದೇನೆ. ಈ ಬಗ್ಗೆ ಕುಮಾರಸ್ವಾಮಿ ಅವರು ಕೋರ್ ಕಮಿಟಿ ಹಾಗೂ ಪಕ್ಷದ ಎಲ್ಲಾ ನಾಯಕರ ಜತೆ ಸಮಾಲೋಚನೆ ನಡೆಸಿ ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.

ಕ್ಷೇತ್ರ ಹಂಚಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇಲ್ಲಿ ಜೆಡಿಎಸ್ ಮತ್ತು ಬಿಜೆಪಿ ಎನ್ನುವುದಲ್ಲ. ಎನ್‌ಡಿಎ ಅಷ್ಟೇ ಮುಖ್ಯ. ಅಂತಿಮವಾಗಿ ಮೋದಿ ಅವರು, ಅಮಿತ್ ಶಾ, ನಡ್ಡಾ ಮತ್ತು ಕುಮಾರಸ್ವಾಮಿ, ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರು ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಈಗಾಗಲೇ ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ಅವರು ಎಲ್ಲಾ ಮಾಹಿತಿ ನೀಡಿದ್ದಾರೆ. ಬಹುಶಃ ಇನ್ನೊಂದು ವಾರದಲ್ಲಿ ತೀರ್ಮಾನ ಮಾಡುತ್ತಾರೆ ಎಂದು ಗೌಡರು ತಿಳಿಸಿದರು.

ಸಭೆಯಲ್ಲಿ ಮಂಡ್ಯ ಜಿಲ್ಲೆಯ ಮುಖಂಡರು ದೇವೇಗೌಡರು, ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಮೂವರಲ್ಲಿ ಒಬ್ಬರು ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು. ಈ ಒಂದು ಸಾಲಿನ ನಿರ್ಣಯಕ್ಕೆ ನಾವೆಲ್ಲರೂ ಬದ್ಧ ಎಂದು ಭರವಸೆ ನೀಡಿದರು ಎನ್ನಲಾಗಿದೆ.

ಸಭೆಯಲ್ಲಿ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು, ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಮಾಜಿ ಶಾಸಕರಾದ ರವೀಂದ್ರ ಶ್ರೀಕಂಠಯ್ಯ, ಕೆ.ಸುರೇಶ್‌ಗೌಡ, ಡಾ.ಕೆ.ಅನ್ನದಾನಿ, ವಿಧಾನಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಮನ್‌ಮುಲ್ ಮಾಜಿ ಅಧ್ಯಕ್ಷ ಬಿ.ಆರ್.ರಾಮಚಂದ್ರ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್ ಇತರರಿದ್ದರು.

ಎಚ್‌ಡಿಕೆ ಸ್ಪರ್ಧೆ ಬಗ್ಗೆ ಅಳೆದೂ ತೂಗಿ ನಿರ್ಧಾರ?

ಮಂಡ್ಯ ಕ್ಷೇತ್ರದಿಂದ ಎಚ್.ಡಿ.ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ವಿಚಾರವನ್ನು ಅಳೆದು-ತೂಗಿ ನೋಡುತ್ತಿರುವ ಜೆಡಿಎಸ್ ವರಿಷ್ಠ ದೇವೇಗೌಡರು ಎಲ್ಲರ ಅಭಿಪ್ರಾಯ ಪಡೆದೇ ಮುಂದುವರಿಯಲು ನಿರ್ಧರಿಸಿದ್ದಾರೆ.
ಎಲ್ಲೂ ಅಪಸ್ವರಗಳು ಎದುರಾಗದಂತೆ, ಹಿಂದಿನ ಚುನಾವಣೆ ವೇಳೆ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರದಲ್ಲಾದಂತೆ ಜನರಲ್ಲಿರುವ ಅಭಿಪ್ರಾಯಕ್ಕೆ ವಿರುದ್ಧವಾಗಿ ನಿರ್ಧಾರ ಕೈಗೊಳ್ಳದೆ, ಎಲ್ಲವನ್ನೂ ಪರಾಮರ್ಶಿಸಿ ನೋಡುತ್ತಿದ್ದಾರೆ. ಮಂಡ್ಯ ನೆಲದಲ್ಲಿ ಪುತ್ರನ ಸ್ಪರ್ಧೆಗೆ ಜನಾಭಿಪ್ರಾಯ ಹೇಗಿದೆ ಎನ್ನುವುದನ್ನು ಅರಿಯಲು ಗೌಡರೇ ಆಗಮಿಸುತ್ತಿರುವುದು ಇದೀಗ ಜಿಲ್ಲಾ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ನಡ್ಡಾ, ಸಂತೋಷ್ ಭೇಟಿಯಾಗಿ ಮಂಡ್ಯ ಟಿಕೆಟ್‌ಗೆ ಸಂಸದೆ ಸುಮಲತಾ ಮನವಿ

ಸಭೆಯಲ್ಲಿ ದೇವೇಗೌಡರು, ನನಗೆ ವಯಸ್ಸಾಗಿದೆ. ಚುನಾವಣೆಗೆ ನಿಲ್ಲುವಷ್ಟು ಶಕ್ತಿ ನನ್ನಲ್ಲಿಲ್ಲ. ಹಾಗಾಗಿ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಲ್ಲೇ ಇದ್ದ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕೂಡ ನಾನೂ ಮಂಡ್ಯ ಕ್ಷೇತ್ರದಿಂದ ಸ್ಪರ್ಧೆ ಆಕಾಂಕ್ಷಿ ಅಲ್ಲ ಎಂದು ನೇರವಾಗಿ ಹೇಳಿದರು. ಹೀಗಾಗಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಬೇಕು ಎಂಬ ಬೇಡಿಕೆಯನ್ನು ಜಿಲ್ಲಾ ಮುಖಂಡರು ಒಕ್ಕೊರಲಿನಿಂದ ಗೌಡರ ಮುಂದಿಟ್ಟರು ಎಂದು ತಿಳಿದು ಬಂದಿದೆ.

ಚುನಾವಣೆಗೆ ನಾನು ನಿಲ್ಲುವುದಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ. ನಿಖಿಲ್ ಕೂಡ ನಾನು ನಿಲ್ಲೋದಿಲ್ಲ, ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದಿದ್ದಾನೆ. ಕುಮಾರಸ್ವಾಮಿ ಅವರು ಪಕ್ಷದ ಶಾಸಕಾಂಗ ಪಕ್ಷದ ನಾಯಕರು. ಇಲ್ಲಿ ಅವರು ಸದನದ ಒಳಗೆ, ಹೊರಗೆ ಹೋರಾಟ ನಡೆಸಬೇಕಿದೆ. ಹೀಗಾಗಿ ಅವರು ಲೋಕಸಭೆಗೆ ಹೋಗುವೆ ಎಂದು ಹೇಳಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

click me!