* ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಿ.ಎಸ್. ಭಟ್ಟ ಉಪಳೇಶ್ವರ ನೇಮಕ
* ಕಳೆದ 16 ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಿ.ಎನ್. ಗಾಂವ್ಕರ್
* ಭಟ್ಟರನ್ನು ಸಂಪರ್ಕಿಸಲು ಕಳೆದ ಎರಡು ದಿನಗಳಿಂದ ನಡೆಸಿದ ಪ್ರಯತ್ನ ವಿಫಲ
ಯಲ್ಲಾಪುರ(ಫೆ.03): ತಾಲೂಕು ಕಾಂಗ್ರೆಸ್(Congress) ಅಧ್ಯಕ್ಷರ ಬದಲಾವಣೆಗೆ ತೀವ್ರ ಅಸಮಾಧಾನ ಮತ್ತು ಗೊಂದಲಕ್ಕೆ ಕಾರಣವಾಗಿದೆ. ಯಲ್ಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಿ.ಎಸ್. ಭಟ್ಟ ಉಪಳೇಶ್ವರ(VS Bhat Upaleshwara) ಅವರನ್ನು ಸೋಮವಾರ (ಜ.31) ನೇಮಕ ಮಾಡಲಾಗಿದೆ. ಆದರೆ ಹೊಸ ನೇಮಕದ ವಿಚಾರವನ್ನು, ಕಳೆದ 16 ವರ್ಷಗಳಿಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಡಿ.ಎನ್. ಗಾಂವ್ಕರ್(DN Gaonkar) ಅವರ ಗಮನಕ್ಕೆ ತಂದಿರಲಿಲ್ಲ ಎನ್ನಲಾಗಿದೆ. ಅವರನ್ನು ವಿಶ್ವಾಸಕ್ಕೂ ತೆಗೆದುಕೊಳ್ಳದೇ ನೇಮಕ ಮಾಡಲಾಗಿದ್ದು, ಇದರಿಂದ ತೀವ್ರ ಬೇಸರಗೊಂಡು ಗಾಂವ್ಕರ್ ನಿನ್ನೆಯೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ವಿ.ಎಸ್. ಭಟ್ಟ ಉಪಳೇಶ್ವರ ಅವರ ನೇಮಕದ ಆದೇಶ ಸೋಮವಾರ ಬಂದಿದ್ದರೂ ಸಹ ಆದೇಶ ಪತ್ರದಲ್ಲಿ ಅಕ್ಟೋಬರ್ ತಿಂಗಳ ದಿನಾಂಕ ಇರುವುದು ಗೊಂದಲಕ್ಕೆ ಕಾರಣವಾಗಿದೆ. ಮಂಗಳವಾರ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಸಭೆ ಸೇರಿ, ಭಟ್ಟರ ನೇಮಕದ ಕುರಿತು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಹಾಗೂ 16 ವರ್ಷಗಳಿಂದ ನಿಷ್ಠರಾಗಿ ಕಾರ್ಯ ನಿರ್ವಹಿಸಿ, ಈ ಹಿಂದೆ ಶಿವರಾಮ ಹೆಬ್ಬಾರ್(Shivaram Hebbar) ಪಕ್ಷ ತ್ಯಜಿಸಿದ ಬಳಿಕವೂ ಕಾರ್ಯಕರ್ತರನ್ನು ಹಿಡಿದಿಟ್ಟುಕೊಂಡು ಪಕ್ಷ ಸಂಘಟಿಸಿದ್ದ ಅವರನ್ನು ನಿರ್ಲಕ್ಷಿಸಿದ ಬಗ್ಗೆ ಆಕ್ರೋಶಿತರಾಗಿದ್ದಾರೆ.
PMGSY: ಹಣ ಪೋಲಾಗುವುದನ್ನು ತಪ್ಪಿಸಿದ ಪ್ರಧಾನಿ ಮೋದಿ: ಅನಂತಕುಮಾರ ಹೆಗಡೆ
ಈ ಕುರಿತು ಕನ್ನಡಪ್ರಭದ ಜೊತೆ ಮಾತನಾಡಿದ ಗಾಂವ್ಕರ್, ನಾನು 16 ವರ್ಷಗಳಿಂದ ಅಧ್ಯಕ್ಷನಾಗಿ ಪ್ರಾಮಾಣಿಕವಾಗಿ ಪಕ್ಷದ ಕಾರ್ಯ ನಿರ್ವಹಿಸಿದ್ದೇನೆ. ನಮ್ಮ ನಾಯಕರಾದ ಆರ್.ವಿ. ದೇಶಪಾಂಡೆ, ಉಸ್ತುವಾರಿ ಪ್ರಶಾಂತ ದೇಶಪಾಂಡೆ, ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಮಾರ್ಗದರ್ಶನದಲ್ಲಿ ಪಕ್ಷ ಸಂಘಟಿಸಿದ್ದೇನೆ. ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಮುನ್ನ ನನ್ನ ಗಮನಕ್ಕೆ ತಂದಿದ್ದರೆ ಸಂತೋಷದಿಂದ ರಾಜೀನಾಮೆ ನೀಡಿ, ಬೇರೆಯವರಿಗೆ ಅವಕಾಶ ನೀಡುತ್ತಿದ್ದೆ. ಆದರೆ ನನಗರಿವಿಲ್ಲದಂತೆ 3-4 ತಿಂಗಳ ಮೊದಲೇ ಅಧ್ಯಕ್ಷರನ್ನು ನೇಮಿಸಿ ಮುಚ್ಚಿಟ್ಟಿರುವ ಕುರಿತು ನನಗೆ ಬೇಸರವಾಗಿದೆ ಎಂದಿದ್ದಾರೆ.
ಮಾಜಿ ಸಚಿವ ಹಾಗೂ ಜಿಲ್ಲೆಯ ಹಿರಿಯ ನಾಯಕ ದೇಶಪಾಂಡೆಯವರು ಗಾಂವ್ಕರ್‌ರೊಂದಿಗೆ ದೂರವಾಣಿ ಮೂಲಕ ಮಾತನಾಡಿ, ನೂತನ ಅಧ್ಯಕ್ಷರ ಆದೇಶ ಪ್ರತಿಯ ದಿನಾಂಕದಲ್ಲಿ ಅಚಾನಕ್ ತಪ್ಪಾಗಿರಬಹುದು. ನೀವು ಬೇಸರಿಸದೇ ಪಕ್ಷದ ಬೆಳವಣಿಗೆಗೆ ಸಹಕಾರ ನೀಡಬೇಕೆಂದು ಸಮಾಧಾನಪಡಿಸಿದ್ದಾರೆ. ಪ್ರಶಾಂತ ದೇಶಪಾಂಡೆ ಸಹ ಹಲವಾರು ಬಾರಿ ದೂರವಾಣಿ ಕರೆ ಮಾಡಿದ್ದರೂ ಗಾಂವ್ಕರ್ ಅದನ್ನು ಸ್ವೀಕರಿಸಲಿಲ್ಲ ಎಂದು ತಿಳಿದು ಬದಿದೆ.
ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ವಿ.ಎಸ್. ಭಟ್ಟರನ್ನು ಸಂಪರ್ಕಿಸಲು ಕಳೆದ ಎರಡು ದಿನಗಳಿಂದ ನಡೆಸಿದ ಪ್ರಯತ್ನ ವಿಫಲವಾಗಿದೆ. ಪಕ್ಷದ ಹಿರಿಯ ನಾಯಕರು, ಕಾರ್ಯಕರ್ತರು ಈ ಎಲ್ಲ ಬೆಳವಣಿಗೆಯ ಬಗ್ಗೆ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಯಾವುದೇ ಪ್ರತಿಕ್ರಿಯೆ ನೀಡದಂತೆ ವರಿಷ್ಠರು ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಮನನೊಂದು ರಾಜೀನಾಮೆ(Resign) ನೀಡಿದ್ದೇನೆ. ಇಷ್ಟೆಲ್ಲ ವರ್ಷ ಅಧಿಕಾರ ಬಯಸಿದ ವ್ಯಕ್ತಿಯಲ್ಲ. ಅಧ್ಯಕ್ಷ ಸ್ಥಾನ ಬಿಡಲು ಸದಾ ಸಿದ್ಧನಿದ್ದೆ. ಗೌರವದಿಂದ ನಾಯಕರು ಹೇಳಬಹುದಿತ್ತು. ಆದರೆ ನನಗೆ ಈ ಮೂಲಕ ಇರುಸು-ಮುರುಸು ಉಂಟುಮಾಡಿರುವುದು ಸಮಂಜಸವಲ್ಲ ಅಂತ ಮಾಜಿ ಅಧ್ಯಕ್ಷ ಡಿ.ಎನ್. ಗಾಂವ್ಕರ್ ತಿಳಿಸಿದ್ದಾರೆ.
Fake Death Certificate: 5 ಕೋಟಿ ವಿಮೆ ನುಂಗಲು ನಕಲಿ ಮರಣ ಪ್ರಮಾಣ ಪತ್ರ ಸೃಷ್ಟಿ..!
ಪಕ್ಷವನ್ನು ಬಲಿಷ್ಠಗೊಳಿಸಲು ಕೈ ಜೋಡಿಸಿ
ಹಳಿಯಾಳ: ಸಾಮಾಜಿಕ ಜಾಲತಾಣ ಸೇರಿದಂತೆ ಮೊಬೈಲ್ ಬಳಕೆಗಾಗಿ ಪ್ರಧಾನಿ ರಾಜೀವಗಾಂಧೀ ನೇತೃತ್ವದ ಕೇಂದ್ರದ ಕಾಂಗ್ರೆಸ್ ಸರ್ಕಾರವು ದೂರದೃಷ್ಟಿಯನ್ನು ಇಟ್ಟುಕೊಂಡು ಶ್ರಮಿಸಿದ ಪರಿಣಾಮ ಇಂದು ದೇಶದ ಪ್ರತಿಯೊಬ್ಬರು ಮೊಬೈಲ್ ಹೊಂದುವಂತೆ ಆಗಿದ್ದು, ಇಂದಿನ ಯುವ ಜನಾಂಗ ಇದನ್ನು ತಿಳಿಯುವುದರ ಜೊತೆಗೆ ಕಾಂಗ್ರೆಸ್ ಪಕ್ಷಕ್ಕೆ ಡಿಜಿಟಲ್ ಸದಸ್ಯತ್ವ ಪಡೆದು ಪಕ್ಷವನ್ನು ಇನ್ನಷ್ಟುಬಲಿಷ್ಠಗೊಳಿಸಲು ಮುಂದೆ ಬರಬೇಕಾಗಿದೆ ಎಂದು ಮಾಜಿ ಸಚಿವ, ಶಾಸಕ ಆರ್.ವಿ. ದೇಶಪಾಂಡೆ(RV Deshpane) ಹೇಳಿದರು.
ಸೋಮವಾರ ಸಂಜೆ ಪಟ್ಟಣದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಆಯೋಜನೆ ಮಾಡಿದ್ದ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ರಾಜ್ಯದಲ್ಲಿ ಪ್ರಥಮ ಬಾರಿಗೆ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯನ್ನು ಆರಂಭಿಸುವುದರ ಮೂಲಕ ಇಡೀ ದೇಶಕ್ಕೆ ಮಾದರಿಯಾಗುವುದರ ಜೊತೆಗೆ ರಾಜೀವಗಾಂಧಿ ಅವರ ಅವಧಿಯಲ್ಲಿ ಮಾಹಿತಿ ಮತ್ತು ಸಂವಹನಕ್ಕೆ ಸಂಬಂಧಿಸಿದ ವಿಶೇಷ ಉಪಗ್ರಹವನ್ನು ಉಡಾವಣೆ ಮಾಡುವುದರ ಮೂಲಕ ಇಂದಿನ ಮಾಹಿತಿ ಯುಗಕ್ಕೆ ಅಡಿಪಾಯ ಹಾಕಿದ್ದನ್ನು ಸ್ಮರಿಸಬೇಕಾಗಿದೆ ಎಂದರು.