ಶಾಲೆಯಲ್ಲಿ ಯೋಗ ಕಡ್ಡಾಯಕ್ಕೆ ಸಚಿವರ ಜೊತೆ ಚರ್ಚೆ: ಸಚಿವ ದಿನೇಶ್‌ ಗುಂಡೂರಾವ್‌

Kannadaprabha News   | Kannada Prabha
Published : Jun 22, 2025, 06:32 AM IST
Karnataka Minister Dinesh Gundu Rao (Photo/ANI)

ಸಾರಾಂಶ

ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಯೋಗ ತರಬೇತಿ ನೀಡುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು.

ಬೆಂಗಳೂರು (ಜೂ.22): ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಯೋಗ ತರಬೇತಿ ನೀಡುವ ಬಗ್ಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಭರವಸೆ ನೀಡಿದರು. ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿ, ಪ್ರಾಥಮಿಕ ಮತ್ತು ಫ್ರೌಢಶಾಲೆಗಳಲ್ಲಿ ಯೋಗ ಶಿಕ್ಷಣ ಕಡ್ಡಾಯ ಮಾಡಬೇಕು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ಉತ್ತಮ ಸಲಹೆ ನೀಡಿದ್ದಾರೆ. ಮಕ್ಕಳ ಹಿತದೃಷ್ಟಿಯಿಂದಲೂ ಇದು ಒಳ್ಳೆಯ ಕಾರ್ಯಕ್ರಮ. ಶಾಲೆಗಳಲ್ಲಿ ಈಗಾಗಲೇ ಇರುವ ದೈಹಿಕ ಶಿಕ್ಷಕರಿಗೆ ಯೋಗದ ಬಗ್ಗೆ ತರಬೇತಿ ನೀಡಬೇಕು.

ಬಳಿಕ ಈ ಶಿಕ್ಷಕರು ಮಕ್ಕಳಿಗೆ ಕಲಿಸಬೇಕಿದೆ. ಈ ಬಗ್ಗೆ ಶಿಕ್ಷಣ ಸಚಿವರ ಜೊತೆ ಚರ್ಚೆ ನಡೆಸುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಮಾತನಾಡಿದ ಬಸವರಾಜ ಹೊರಟ್ಟಿ ಅವರು, ಯೋಗದಿಂದ ಬಹಳಷ್ಟು ಉಪಯೋಗವಿದೆ. ಪ್ರಾಥಮಿಕ ಮತ್ತು ಫ್ರೌಢ ಶಾಲೆಗಳಲ್ಲಿ ಕಡ್ಡಾಯವಾಗಿ ಯೋಗ ಕಲಿಸಿಕೊಡಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆಯಲಾಗುವುದು. ರಾಜ್ಯದಲ್ಲಿ ದೈಹಿಕ ಶಿಕ್ಷಕರು ಸೇರಿ 29 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದ್ದು ಭರ್ತಿ ಮಾಡುವ ಸಂಬಂಧ ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.

147 ತಾಲೂಕು ಆಸ್ಪತ್ರೇಲಿ ಪ್ಲಾಸ್ಮಾ ರಕ್ತ ಸಂಗ್ರಹ: ರಾಜ್ಯದಲ್ಲಿ ರೋಗಿಗಳಿಗೆ ತುರ್ತು ಪರಿಸ್ಥಿತಿಯಲ್ಲಿ ನೆರವಾಗಲು ರಕ್ತದಾನ ಜಾಗೃತಿ ಹಾಗೂ ರಕ್ತ ಸಂಗ್ರಹಣೆಗೆ ವಿಶೇಷ ಒತ್ತು ನೀಡಿದ್ದು, ಪರಿಣಾಮ ರಕ್ತ ಸಂಗ್ರಹಣೆ ಗುರಿಗಿಂತ ಶೇ.24ರಷ್ಟು ಹೆಚ್ಚು ಪ್ರಗತಿ ಸಾಧಿಸಲಾಗಿದೆ. ಸೇವೆಯ ಗುಣಮಟ್ಟ ಮತ್ತಷ್ಟು ಹೆಚ್ಚಿಸಲು ದೇಶದಲ್ಲೇ ಪ್ರಥಮ ಬಾರಿಗೆ ರಾಜ್ಯದ 4 ಸರ್ಕಾರಿ ರಕ್ತ ಕೇಂದ್ರಗಳನ್ನು ಪ್ರಾದೇಶಿಕ ಉತ್ಕೃಷ್ಟ ರಕ್ತ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಅಲ್ಲದೆ, 147 ಸರ್ಕಾರಿ ತಾಲೂಕು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ ವ್ಯವಸ್ಥೆ ಜಾರಿಗೆ ತರುತ್ತಿದ್ದು, ಅಗತ್ಯ ಉಪಕರಣಗಳ ಖರೀದಿಗೆ ಟೆಂಡರ್‌ ಕರೆಯಲಾಗಿದೆ. ರಕ್ತ ಸಂಗ್ರಹಣೆ ಹಾಗೂ ಸಾಗಣೆಗೆ 4 ಹೊಸ ಸಂಚಾರಿ ರಕ್ತ ಕೇಂದ್ರಗಳ ಸೇವೆಗೆ ಚಾಲನೆ ನೀಡಲಾಗುತ್ತಿದೆ ಎಂದು ಹೇಳಿದರು. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.1ರಷ್ಟು ಜನರಿಗೆ ರಕ್ತದ ಅವಶ್ಯಕತೆ ಇದೆ. ಅದಕ್ಕೆ ಅನುಗುಣವಾಗಿ 2024-25ರಲ್ಲಿ 8.15 ಲಕ್ಷ ರಕ್ತದ ಯುನಿಟ್ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿತ್ತು. ಆದರೆ 10.11 ಲಕ್ಷ ರಕ್ತದ ಯುನಿಟ್‌ ಸಂಗ್ರಹಿಸುವ ಮೂಲಕ ಶೇ.24% ಹೆಚ್ಚು ಪ್ರಗತಿ ಸಾಧಿಸಲಾಗಿದೆ. 1 ಯುನಿಟ್ ರಕ್ತವು 4 ಜೀವಗಳನ್ನು ಉಳಿಸಬಹುದು. ಹೀಗಾಗಿ ನಮ್ಮ ಯುವಕ ಯುವತಿಯರು ರಕ್ತದಾನಕ್ಕೆ ಮುಂದಾಗಬೇಕು ಎಂದು ಸಚಿವರು ಕರೆ ನೀಡಿದರು.

ಗರ್ಭಿಣಿಯರು ಹಾಗೂ ತಾಯಂದಿರ ಸಾವು ತಡೆಯುವಲ್ಲಿ ರಕ್ತದ ಪಾತ್ರ ಪ್ರಮುಖವಾಗಿದೆ. ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹಣೆ ವ್ಯವಸ್ಥೆ ಇರಲಿಲ್ಲ. ಇದೀಗ 147 ತಾಲೂಕು ಆಸ್ಪತ್ರೆಗಳಲ್ಲಿ ಪ್ಲಾಸ್ಮಾ ರಕ್ತ ಸಂಗ್ರಹ ವ್ಯವಸ್ಥೆ ಜಾರಿಗೆ ತರಲಾಗುತ್ತಿದ್ದು, ಅಗತ್ಯ ಉಪಕರಣಗಳ ಖರೀದಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಹೊಸದಾಗಿ 11 ಸರ್ಕಾರಿ ರಕ್ತ ಕೇಂದ್ರಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಲ್ಲದೆ ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಅತಿ ಹೆಚ್ಚು ರಕ್ತ ಸಂಗ್ರಹಿಸುವ 4 ಸರ್ಕಾರಿ ರಕ್ತ ಕೇಂದ್ರಗಳನ್ನು ರೀಜನಲ್ ಸೆಂಟರ್ ಆಫ್ ಎಕ್ಸಲೆನ್ಸ್ (ಪ್ರಾದೇಶಿಕ ಉತ್ಕೃಷ್ಟ ಕೇಂದ್ರ) ರಕ್ತ ಕೇಂದ್ರಗಳಾಗಿ ಮೇಲ್ದರ್ಜೇಗೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!
ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!