ಇನ್ನೂ ನಿಲ್ಲದ ಸಿಎಂ, ಡಿಸಿಎಂ ಹುದ್ದೆ ಚರ್ಚೆ: ಕಾಂಗ್ರೆಸ್‌ನಲ್ಲಿ ಕೋಲಾಹಲ..!

Published : Jul 03, 2024, 10:59 AM ISTUpdated : Jul 03, 2024, 11:55 AM IST
ಇನ್ನೂ ನಿಲ್ಲದ ಸಿಎಂ, ಡಿಸಿಎಂ ಹುದ್ದೆ ಚರ್ಚೆ: ಕಾಂಗ್ರೆಸ್‌ನಲ್ಲಿ ಕೋಲಾಹಲ..!

ಸಾರಾಂಶ

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ, ಯೋಗ್ಯತೆ ಇದ್ದು, ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುತ್ತದೆ ಎಂದು ದೃಢವಾಗಿ ಹೇಳಿದ ಮದ್ದೂರು ಶಾಸಕ ಕೆ.ಎಂ.ಉದಯ್ 

ಮದ್ದೂರು/ಮೈಸೂರು/(ಜು.03):  ಡಿಕೆಶಿ ಅವರಿಗೆ ಸಿಎಂ ಪಟ್ಟ ಬಿಟ್ಟುಕೊಡುವಂತೆ ಸ್ವಾಮೀಜಿ ಬಹಿರಂಗ ಹೇಳಿಕೆ ನಂತರ ಆರಂಭವಾಗಿರುವ ಪರ, ವಿರೋಧ ಚರ್ಚೆಗಳು ನಾಲೈದು ದಿನವಾದ್ರೂ ನಿಂತಿಲ್ಲ. ಮಂಗಳವಾರವೂ ಡಿಕೆಶಿ, ಸಿದ್ದರಾಮಯ್ಯ ಪರ ಶಾಸಕರು, ಸಚಿವರು ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿಗೆ ಸಿಎಂ ಆಗುವ ಅರ್ಹತೆ, ಯೋಗ್ಯತೆ ಇದೆ: ಶಾಸಕ ಉದಯ್

ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಕಟ್ಟುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತಂದಿದ್ದಾರೆ. ಅವರಿಗೆ ಮುಖ್ಯ ಮಂತ್ರಿಯಾಗುವ ಎಲ್ಲಾ ಅರ್ಹತೆ, ಯೋಗ್ಯತೆ ಇದ್ದು, ಮುಂದಿನ ದಿನಗಳಲ್ಲಿ ಅವರಿಗೆ ಅವಕಾಶ ಸಿಗುತ್ತದೆ ಎಂದು ಮದ್ದೂರು ಶಾಸಕ ಕೆ.ಎಂ.ಉದಯ್ ದೃಢವಾಗಿ ಹೇಳಿದರು.

ಚನ್ನಪಟ್ಟಣ ಉಪಚುನಾವಣೆ: ಯಾರೇ ಅಭ್ಯರ್ಥಿ ಇದ್ರೂ ನನ್ನ ಮುಖ ನೋಡಿ ಓಟು ಹಾಕಿ: ಡಿಕೆ ಶಿವಕುಮಾರ

ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್ ವಿವೇಚನೆಗೆ ಬಿಡಲಾಗಿದೆ ಹೊರತು ಯಾರೋ ಶಾಸಕರು ಚಟಕ್ಕೆ ಮಾತನಾಡಿದರೆ ಅದಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬದಲಾವಣೆ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲಿ ಚರ್ಚೆಯಾಗಬೇಕೇ ವಿನಃ ಶಾಸಕರ ಇತಿಮಿತಿಯಲ್ಲಿ ಚರ್ಚೆಯಾಗುವ ವಿಷಯವಲ್ಲ. ಈ ವಿಚಾರದಲ್ಲಿ ನಾನು ಅಥವಾ ರಸ್ತೆಯಲ್ಲಿ ಓಡಾಡುವ ಜನರು ಆಡುವ ಆಟ ಕಾಂಗ್ರೆಸ್ ಪಕ್ಷದಲ್ಲಿ ನಡೆಯುವುದಿಲ್ಲ ಎಂದರು.

ಇನ್ನೂ ನಿಲ್ಲದ ಸಿಎಂ ಬದಲಾವಣೆ ಚರ್ಚ

ಡಿ.ಕೆ.ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಬೇಕೆಂದು ಸ್ವಾಮೀಜಿಗಳು ಬಹಿರಂಗವಾಗಿ ಹೇಳಿದ ನಂತರ ಆರಂಭವಾಗಿರುವ ಪರ, ವಿರೋಧ ಚರ್ಚೆಗಳು ನಾಲ್ಕೈದು ದಿನವಾದರೂ ನಿಂತಿಲ್ಲ. ಮಂಗಳವಾರವೂ ಡಿಕೆಶಿ, ಸಿದ್ದರಾಮಯ್ಯ ಪರವಾಗಿ ಶಾಸಕರು, ಸಚಿವರು, ಮಾಜಿ ಶಾಸಕರು ವಾಗ್ದಾಳಿ ನಡೆಸಿದ್ದಾರೆ.

ಡಿಸಿಎಂ ಬೇಕಾದವರು ವರಿಷ್ಠರನ್ನು ಕೇಳಲಿ-ಕೃಷ್ಣ

ಮೈಸೂರು: ಉಪಮುಖ್ಯಮಂತ್ರಿ ಹುದ್ದೆ ವಿಚಾರವಾಗಿ ಪರೋಕ್ಷವಾಗಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ವಿರುದ್ಧ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಸಮಾಧಾನ ಹೊರಹಾಕಿದರು. ಯಾರಿಗಾದರೂ ಯಾವುದಾದರೂ ಸ್ಥಾನಮಾನ ಬೇಕಿದ್ದರೆ ಅದನ್ನು ವರಿಷ್ಠರ ಬಳಿ ಕೇಳಬೇಕು. ಮಾಧ್ಯಮದವರ ಮುಂದೆ ಆಸೆ ಹೇಳಿಕೊಂಡರೆ ಏನು ಪ್ರಯೋಜನ ಹೇಳಿ? ಎಂದು ಕಂದಾಯ ಸಚಿವ ಕೃಷ್ಣೇಬೈರೇಗೌಡ ಕಿಡಿಕಾರಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸ್ಥಾನಮಾನದ ವಿಚಾರವನ್ನು ವರಿಷ್ಠರ ಬಳಿ ಮಾತ್ರ ಚರ್ಚಿಸಬೇಕು. ಮಾಧ್ಯಮದ ಬಳಿ ಜನರ ಸಮಸ್ಯೆ ಕುರಿತು ಚರ್ಚಿಸಿದರೆ ಅದರಿಂದ ಸರ್ಕಾರ, ಜನ ಇಬ್ಬರಿಗೂ ಒಳಿತು. ಆ ವಿಚಾರ ಬಿಟ್ಟು ವೈಯಕ್ತಿಕ ವಿಚಾರ ಚರ್ಚಿಸಿದರೆ ಸರ್ಕಾರಕ್ಕೇ ನಷ್ಟ ಎಂದು ಹೇಳಿದರು.

ಡಿ.ಕೆ.ಶಿವಕುಮಾರ್‌ಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಿ ಎಂಬ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಕೃಷ್ಣ ಬೈರೇಗೌಡ ಅವರು, ಸ್ವಾಮೀಜಿಗಳು ಯಾವ ವಿಚಾರ ಎಲ್ಲಿ ಮಾತಾಡಬೇಕು ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಲಿ. ಸರ್ಕಾರಿ ಸಮಾರಂಭಕ್ಕೆ ಬಂದು ರಾಜಕೀಯ ವಿಚಾರ ಮಾತಾಡಿದರೆ ಹೇಗೆ? ಎಂದು ತಿರುಗೇಟು ನೀಡಿದರು.

ಉಪಮುಖ್ಯಮಂತ್ರಿ ಸ್ಥಾನದ ಅವಶ್ಯಕತೆ ಇದೆಯೋ, ಇಲ್ಲವೋ ಗೊತ್ತಿಲ್ಲ. ಸ್ಥಾನದ ಆಕಾಂಕ್ಷೆ ಇರುವವರು ಸರಿಯಾದ ವ್ಯಕ್ತಿಗಳ ಬಳಿ ಹೋಗಿ ವಿಚಾರ ಹೇಳಲಿ. ನಮ್ಮ ನಾಯಕರು ಎಚ್ಚರಿಕೆ ಕೊಟ್ಟ ಮೇಲೂ ಕೆಲವರು ಈ ವಿಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ನಮ್ಮ ವರಿಷ್ಠರಿಗೆ ತಾಳ್ಮೆ ಹೆಚ್ಚು. ಆದರೆ ಅವರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ಸ್ವಾಮೀಜಿಗೆ ತಿರುಗೇಟು: 

ಸ್ವಾಮೀಜಿ ತಮ್ಮ ಮಠದಲ್ಲಿ ಆ ವಿಚಾರ ಮಾತಾಡಲಿ. ಭಕ್ತರ ಮುಂದೆ ಅದನ್ನು ಹೇಳಿಕೊಳ್ಳಲಿ. ಯಾರಿಗೆ, ಯಾವ ವಿಚಾರ ಎಲ್ಲಿ ಮಾತಾಡಬೇಕು ಎಂದು ಹೇಳುವ ಸ್ಥಿತಿ ಬಂದಿದ್ದೇ ಬೇಸರದ ವಿಚಾರ. ಸ್ವಾಮೀಜಿ ಹೇಳಿಕೆಗಳು, ಅದರ ಪ್ರತಿ ಹೇಳಿಕೆಗಳು ನನ್ನಲ್ಲಿ ಅನೇಕ ಜಿಜ್ಞಾಸೆ ಮೂಡಿಸಿವೆ ಎಂದು ತಿಳಿಸಿದರು.

ಸಿಎಂ ಬದಲಾವಣೆ, ಡಿಸಿಎಂ ನೇಮಕ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು

ಸಿಎಂ ಸಿದ್ದು ಅಧಿಕಾರ ಪೂರೈಸಬೇಕು: ಮಾತೆ ಬಸವಾಂಜಲಿ

ಮೈಸೂರು: ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಬಿಂಬಿಸಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಹುದೊಡ್ಡ ಕೊಡುಗೆ. ಅಂಥವರು ಅಧಿಕಾರ ಪೂರೈಸಬೇಕು ಎಂದು ಬಸವ ತತ್ತ್ವ ಪ್ರಚಾರಕಿ ಮಾತೆ ಬಸವಾಂಜಲಿದೇವಿ ಹೇಳಿದರು. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಪಠ್ಯದ ಮೂಲಕ ಬಸವಣ್ಣನವರ ನೈಜ ಇತಿಹಾಸ ಮಕ್ಕಳಿಗೆ ತಲುಪಿಸಲಾಗಿದೆ. ಈ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದು, ಅವರು ಐದು ವರ್ಷ ಅಧಿಕಾರ ನಡೆಸಬೇಕು ಎಂದು ಅಭಿಪ್ರಾಯಪಟ್ಟರು.

ಲಿಂಗಾಯತ, ವೀರಶೈವ ಎಂಬ ಗೊಂದಲದ ವಾತಾವರಣದಲ್ಲಿ ಬಸವ ತತ್ವದ ನೈಜತೆ ಪ್ರತಿಪಾದಿಸಲಾಗಿದೆ. ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಬಿಂಬಿಸಿರುವುದು ಸಿದ್ದರಾಮಯ್ಯ ಅವರ ಬಹುದೊಡ್ಡ ಕೊಡುಗೆ. ಸಮಾಜಕ್ಕೆ ಸತ್ಯ ತಿಳಿಸುವ ಹೆಜ್ಜೆಯಿದು ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌
ದಲಿತ ಸಮುದಾಯಕ್ಕೆ ಸಿಎಂ ಹುದ್ದೆ ಕೊಡಿ ಎಂದು ಸಮಯ ಬಂದಾಗ ಕೇಳುವೆ: ಸಚಿವ ಮಹದೇವಪ್ಪ