ಅಸಮಾಧಾನ ಎಲ್ಲ ಈಗ ಮುಗಿದ ಕತೆ: ಸೋಮಣ್ಣ

By Kannadaprabha NewsFirst Published Apr 13, 2023, 9:52 AM IST
Highlights

ಸಿದ್ದು ಸೋಲಿಸಿದರೆ ದೊಡ್ಡ ಹುದ್ದೆ ನೀಡುವ ಆಶ್ವಾಸನೆ ಸಿಕ್ಕಿಲ್ಲ, ಗೋವಿಂದರಾಜನಗರ ಟಿಕೆಟ್‌ ಪಡೆದವರೇ ನನ್ನ ಉತ್ತರಾಧಿಕಾರಿ: ವಿ. ಸೋಮಣ್ಣ

ವಿಜಯ್‌ ಮಲಗಿಹಾಳ

ಬೆಂಗಳೂರು(ಏ.13):  ಸುಮಾರು ಒಂದು ತಿಂಗಳ ಹಿಂದೆ ದಿಢೀರನೆ ಅಸಮಾಧಾನ ಹೊರಹಾಕಿದ್ದ ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ಇದೀಗ ಬಿಜೆಪಿ ವರಿಷ್ಠರ ನೀಲಿಗಣ್ಣಿನ ಹುಡುಗನಂತೆ ಕಾಣಿಸುತ್ತಿದ್ದಾರೆ. ಅವರ ಅಸಮಾಧಾನವೀಗ ಸಮಾಧಾನವಾಗಿ ಪರಿವರ್ತನೆಯಾಗಿದೆ. ಪಕ್ಷದ ವರಿಷ್ಠರ ಅಭಯವನ್ನು ನೆಚ್ಚಿಕೊಂಡು ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. 

Latest Videos

ಸೋಮಣ್ಣ ಬೇಡಿಕೆಯನ್ನು ಪರಿಗಣಿಸಿ ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ನೀಡಲಾಗಿದೆ. ಜತೆಗೆ ಪ್ರತಿಪಕ್ಷ ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕಟ್ಟಿಹಾಕಲು ಹಳೆ ಮೈಸೂರು ಭಾಗದ ಸೋಮಣ್ಣ ಅವರೇ ಸಮರ್ಥರು ಎಂಬ ಕಾರಣಕ್ಕಾಗಿ ಟಾಸ್‌್ಕ ರೂಪದಲ್ಲಿ ವರುಣ ಕ್ಷೇತ್ರದ ಟಿಕೆಟ್‌ ಕೂಡ ನೀಡಲಾಗಿದೆ. ಅಂದರೆ, ಈ ಬಾರಿ ಸೋಮಣ್ಣ ಎರಡು ಕ್ಷೇತ್ರಗಳಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಈ ಟಾಸ್ಕ್‌ ಎದುರಿಸಲು ಸಜ್ಜಾಗಿರುವ ಸೋಮಣ್ಣ ‘ಕನ್ನಡಪ್ರಭ’ದೊಂದಿಗೆ ‘ಮುಖಾಮುಖಿ’ಯಾದಾಗ...

ಸೋಮಣ್ಣ ಸೇರಿ ಯಾರೇ ನನ್ನ ವಿರುದ್ಧ ಸ್ಪರ್ಧಿಸಿದರೂ ಸ್ವಾಗತ: ಸಿದ್ದರಾಮಯ್ಯ

ವಿಜಯನಗರದ ವೀರಪುತ್ರ ಎಂಬ ಬಿರುದಾಂಕಿತರಾದ ನೀವು ಈಗ ಮೈಸೂರಿನ ಮಹಾರಾಜರಾಗಲು ಹೊರಟಿದ್ದೀರಲ್ಲ?

ಇದೆಲ್ಲ ಪ್ರಕೃತಿ ನಿಯಮ. ನಾವ್ಯಾರೂ ದೊಡ್ಡವರಲ್ಲ. ಚಿಕ್ಕವರಲ್ಲ. ಎಲ್ಲವನ್ನೂ ದೇವರು ಆಡಿಸುತ್ತಾನೆ ಅಷ್ಟೇ. ನಾನು ನಿರೀಕ್ಷೆ ಮಾಡಿರಲಿಲ್ಲ. ಪಕ್ಷ ನನ್ನ ಮೇಲೆ ಇಷ್ಟೊಂದು ನಂಬಿಕೆ ಇಟ್ಟು ದೊಡ್ಡ ಜವಾಬ್ದಾರಿ ಕೊಡುತ್ತದೆ ಎಂದು ಭಾವಿಸಿರಲಿಲ್ಲ. ನನ್ನ ಕಾಯಕವನ್ನು ಪಕ್ಷ ಗುರುತಿಸಿದೆ. ಇದಕ್ಕೆ ಭಗವಂತನ ದಯೆ ಇದೆ. ಆತನ ಪ್ರೇರಣೆಯಿಂದ ಎಲ್ಲವೂ ಆಗುತ್ತಿದೆ. ನನ್ನದೇನೂ ಇಲ್ಲ.

ನಿಮ್ಮ ರಾಜಕೀಯ ಜನ್ಮ ಭೂಮಿಯನ್ನು ಬಿಟ್ಟು ಕರ್ಮ ಭೂಮಿ ಹುಡುಕಿಕೊಂಡು ಚಾಮರಾಜನಗರ ಮತ್ತು ವರುಣ ಕ್ಷೇತ್ರಗಳಿಂದ ಕಣಕ್ಕಿಳಿಯುತ್ತಿದ್ದೀರಾ?

ಹೌದು. ರಾಜ್ಯದ ಜನತೆಗೆ ಬಡತನ ಇರಬಹುದು. ಆದರೆ, ಹೃದಯ ಶ್ರೀಮಂತಿಕೆ ಇದೆ. ಸ್ವಾಭಿಮಾನವಿದೆ. ಚಾಮರಾಜನಗರ ಮತ್ತು ವರುಣ ಭಾಗದ ಜನರಿಗೆ ನನ್ನ ಬಗ್ಗೆ ಗೊತ್ತಿದೆ. ನನ್ನ ಜೀವನದಲ್ಲಿ ಬೆಂಗಳೂರಿನ ಬಿನ್ನಿಪೇಟೆ, ವಿಜಯನಗರ, ಗೋವಿಂದರಾಜನಗರ ಕ್ಷೇತ್ರಗಳನ್ನು ಯಾವತ್ತೂ ಮರೆಯುವುದಿಲ್ಲ. ಈ ಕ್ಷೇತ್ರಗಳು ನನ್ನ ಜನ್ಮಭೂಮಿ. ಈಗ ಕರ್ಮಭೂಮಿಗೆ ಹೋಗುತ್ತಿದ್ದೇನೆ. ಆ ಕರ್ಮ ಭೂಮಿಯಲ್ಲಿ ಆಶೀರ್ವಾದ ಮಾಡುವ ಲಕ್ಷಾಂತರ ಜನ ಇದ್ದಾರೆ. ಅವರ ಆಶೀರ್ವಾದ ಸ್ವೀಕರಿಸುತ್ತೇನೆ. ಅವರ ಭಾವನೆಗೆ ಸ್ಪಂದಿಸುತ್ತೇನೆ. ನಾನು ಅನೇಕ ವಿಚಾರಗಳಲ್ಲಿ ಸಂಸ್ಕಾರದಿಂದ ಬದುಕಿದ್ದೇನೆ. ಒಳ್ಳೆಯತನದಲ್ಲಿ ನಡೆದಿದ್ದೇನೆ. ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೆಲ ಸಂದರ್ಭಗಳಲ್ಲಿ ಕೂಗಾಡಿ ಬೈಯುತ್ತೇನೆ. ಆದರೆ, ಇನ್ನೊಬ್ಬರ ಬಗ್ಗೆ ದ್ವೇಷ, ಅಸೂಯೆ ಮಾಡಿಲ್ಲ.

ಬೆಂಗಳೂರು ಬಿಟ್ಟು ದೂರದ ಚಾಮರಾಜನಗರ ವಿಧಾನಸಭಾ ಕ್ಷೇತ್ರವನ್ನೇ ನೀವು ಆಯ್ಕೆ ಮಾಡಿಕೊಂಡಿದ್ದು ಯಾಕೆ?

ನಾನು ಹಿಂದೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಬಂದಾಗಲೇ ಚಾಮರಾಜನಗರ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಬೇಡಿಕೆ ಇಟ್ಟಿದ್ದೆ. ಆದರೆ, ಆ ಸಮಯದಲ್ಲಿ ಅದು ಕೈಗೂಡಿರಲಿಲ್ಲ. ಇತ್ತೀಚೆಗೆ ನಮ್ಮ ಮನೆಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಬಂದ ವೇಳೆಯೂ ಮತ್ತೊಮ್ಮೆ ಈ ವಿಚಾರ ಮುಂದಿಟ್ಟಿದ್ದೆ. ಈಗ ಈಡೇರಿದೆ.

ನೀವು ಚಾಮರಾಜನಗರ ಕೇಳಿದರೆ ಅದರ ಜತೆಗೆ ವರುಣ ಕ್ಷೇತ್ರದ ಟಿಕೆಟ್‌ ನೀಡುವ ಮೂಲಕ ವರಿಷ್ಠರು ಡಬಲ್‌ ಧಮಾಕ ಕೊಟ್ಟಿದ್ದಾರಲ್ಲ?

ಇದನ್ನು ನಾನು ನಿರೀಕ್ಷೆ ಮಾಡಿರಲಿಲ್ಲ. ಚಾಮರಾಜನಗರ ಕ್ಷೇತ್ರದ ಬಗ್ಗೆ ಮಾತ್ರ ನಿರೀಕ್ಷೆ ಇತ್ತು. ಪಕ್ಷದ ನಂಬಿಕೆಗೆ ಅಪಚಾರವಾಗದಂತೆ ನಡೆದುಕೊಳ್ಳುತ್ತೇನೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್‌ ಶಾ, ಜೆ.ಪಿ.ನಡ್ಡಾ, ಬಿ.ಎಲ್‌.ಸಂತೋಷ್‌, ಪ್ರಹ್ಲಾದ್‌ ಜೋಶಿ, ಬಸವರಾಜ ಬೊಮ್ಮಾಯಿ ಅವರು ಒಬ್ಬ ಸೋಮಣ್ಣನ ಮೇಲೆ ನಂಬಿಕೆ ಇರಿಸಿ ಎರಡೂ ಕಡೆ ಅವಕಾಶ ಕಲ್ಪಿಸಿದ್ದಾರೆ.

ಕಳೆದ ಬಾರಿ ಬಾದಾಮಿಯಲ್ಲಿ ಸಿದ್ದರಾಮಯ್ಯ ಅವರನ್ನು ಎದುರಿಸಲು ಶ್ರೀರಾಮುಲು ಅವರನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ವರುಣದಲ್ಲಿ ನಿಮಗೆ ‘ಟಾಸ್‌್ಕ’ ನೀಡಿದ್ದು ಯಾಕೆ?

ಅದರ ಬಗ್ಗೆ ನನಗೇನೂ ಗೊತ್ತಿಲ್ಲ. ವರಿಷ್ಠರನ್ನೇ ಕೇಳಬೇಕು. ಕಾರಣ ಏನನ್ನೂ ಹೇಳಿಲ್ಲ. ಆ ಕ್ಷೇತ್ರದಿಂದಲೂ ಸ್ಪರ್ಧಿಸಬೇಕು ಎಂಬ ಸೂಚನೆ ಕೊಟ್ಟರು ಅಷ್ಟೆ. ಕೆಲದಿನಗಳ ಹಿಂದೆ ಕೇಳಿದಾಗ ಬೇಡ ಎಂದಿದ್ದೆ. ಆದರೆ, ಮಂಗಳವಾರ ವರಿಷ್ಠರಿಂದ ಸೂಚನೆ ಬಂದಿದ್ದರಿಂದ ತಲೆ ಬಾಗಬೇಕಾಯಿತು.

ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಕೆಲವು ಹಳಬರನ್ನು ಕೈಬಿಡುವ ಮೂಲಕ ಹೊಸಬರಿಗೆ ಅವಕಾಶ ನೀಡಲಾಗಿದೆಯಲ್ಲ?

ನನ್ನ ಅನುಭವದಲ್ಲಿ ತುಂಬಾ ಬುದ್ಧಿವಂತಿಕೆಯಿಂದ ಅಳೆದೂ ತೂಗಿ ಪಟ್ಟಿಸಿದ್ಧಪಡಿಸಲಾಗಿದೆ. ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶವಿದೆ ಎಂಬುದನ್ನು ತೋರಿಸಲಾಗಿದೆ. ಅರ್ಹತೆಯಿರುವವರಿಗೆ ಅವಕಾಶವಿದೆ ಎಂಬುದಕ್ಕೆ ಈ ಅಭ್ಯರ್ಥಿಗಳ ಪಟ್ಟಿಒಂದು ದಿಕ್ಸೂಚಿ. ಒಂದಂತೂ ಸತ್ಯ, ಮೇಲಕ್ಕೆ ಹೋದವರು ಕೆಳಗೆ ಬರಲೇಬೇಕು. ಹಾಗೆಯೇ ಕೆಳಗಿದ್ದವರು ಮೇಲೆ ಹತ್ತಲೇಬೇಕು.

ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಕಡ್ಡಾಯ ನಿವೃತ್ತಿ ಹೊಂದುವಂತೆ ವರಿಷ್ಠರು ಸೂಚನೆ ನೀಡಿದ್ದಾರಲ್ಲ?

 ಅದೊಂದು ನೋವಿನ ಸಂಗತಿ. ಅದು ಬಗೆಹರಿಯುವ ವಿಶ್ವಾಸವಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವರುಣ ಕ್ಷೇತ್ರದಲ್ಲಿ ಕಟ್ಟಿಹಾಕುವಲ್ಲಿ ನೀವು ಯಶಸ್ವಿಯಾಗುವ ನಂಬಿಕೆ ಇದೆಯೇ?

ಎಲ್ಲವನ್ನೂ ತಾಯಿ ಚಾಮುಂಡೇಶ್ವರಿ ಮೇಲೆ ಬಿಟ್ಟಿದ್ದೇನೆ. ನನ್ನದೇನೂ ಇಲ್ಲ. ನಾನೊಬ್ಬ ಸಾಮಾನ್ಯ ಮನುಷ್ಯ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾಗಿದ್ದವರು. ದಗಲ್ಬಾಜಿ ಇಲ್ಲದೆ ಶಾಂತಿಯುತವಾಗಿ ಚುನಾವಣೆ ಆಗಬೇಕು ಅಷ್ಟೆ. ಭಗವಂತ ಏನು ದಯಪಾಲಿಸುತ್ತಾನೆಯೋ ಅದನ್ನು ಸ್ವೀಕರಿಸುತ್ತೇನೆ. ಇಲ್ಲಿ ಯಾರು ದೊಡ್ಡವರು, ಯಾರು ಚಿಕ್ಕವರು ಅಂತ ಇಲ್ಲ.

ಚಾಮರಾಜನಗರ ಮತ್ತು ವರುಣ ಎರಡೂ ಕ್ಷೇತ್ರಗಳನ್ನು ಏಕಕಾಲದಲ್ಲಿ ಹೇಗೆ ನಿಭಾಯಿಸುತ್ತೀರಿ?

ದೊಡ್ಡ ಪಕ್ಷವಿದೆ. ಲಕ್ಷಾಂತರ ಕಾರ್ಯಕರ್ತರಿದ್ದಾರೆ. ಬೇರು ಮಟ್ಟದಲ್ಲಿ ಪಕ್ಷದ ಸಂಘಟನೆ ಗಟ್ಟಿಯಾಗಿದೆ. ನಾನು ನಿಮಿತ್ತ ಮಾತ್ರ. ನಾಮಕಾವಾಸ್ತೆ. ನಾವು ಕೈಮುಗಿದುಕೊಂಡು ಹೋಗುತ್ತೇವೆ. ಬಾಕಿ ಎಲ್ಲವನ್ನೂ ಸ್ಥಳೀಯ ಕಾರ್ಯಕರ್ತರು ಮಾಡುತ್ತಾರೆ. ಡಬಲ್‌ ಇಂಜಿನ್‌ ಸರ್ಕಾರದ ಸಾಧನೆಗಳು, ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಸೇರಿದಂತೆ ಹಲವು ಯೋಜನೆಗಳನ್ನು ಮುಂದಿರಿಸಿ ಚುನಾವಣೆಗೆ ಹೋಗುತ್ತೇನೆ.

ಸಿದ್ದರಾಮಯ್ಯ ವಿರುದ್ಧ ವಿ.ಸೋಮಣ್ಣ, ಡಿ.ಕೆ.ಶಿವಕುಮಾರ್‌ ವಿರುದ್ಧ ಆರ್‌.ಅಶೋಕ್‌ ಅವರನ್ನು ಕಣಕ್ಕಿಳಿಸುವ ಮೂಲಕ ಪ್ರತಿಪಕ್ಷದ ನಾಯಕರನ್ನು ಕಟ್ಟಿಹಾಕುವ ತಂತ್ರಗಾರಿಕೆ ಯಶಸ್ವಿಯಾಗುತ್ತಾ?

ಯಾರು ಯಾರನ್ನೂ ಕಟ್ಟಿಹಾಕಲು ಸಾಧ್ಯವಿಲ್ಲ. ಅವರ ಕೆಲಸ ಅವರು ಮಾಡುತ್ತಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ.

ನಿಮ್ಮನ್ನು ಚಾಮರಾಜನಗರ ಕ್ಷೇತ್ರದಲ್ಲಿ ಕಟ್ಟಿಹಾಕುವ ಉದ್ದೇಶದಿಂದ ಕಾಂಗ್ರೆಸ್‌ ಕೂಡ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ತಂತ್ರ ರೂಪಿಸಲು ಮುಂದಾಗಿದೆಯಂತೆ?

ಅವರಿಗೆ ಒಳ್ಳೆಯದಾಗಲಿ.

ನೀವು ಮತ್ತು ಸಿದ್ದರಾಮಯ್ಯ ಹೆಚ್ಚೂ ಕಡಮೆ ಸಮವಯಸ್ಕರು. ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋತಲ್ಲಿ ನಿಮ್ಮ ವರ್ಚಸ್ಸಿಗೆ ಧಕ್ಕೆ ಉಂಟಾಗುವುದಿಲ್ಲವೇ?

ಚುನಾವಣೆಯಲ್ಲಿ ಸೋಲು ಗೆಲುವು ಜನರ ತೀರ್ಮಾನದ ಮೇಲೆ ನಿಂತಿದೆ. ರಾಜಶೇಖರಮೂರ್ತಿ, ಗುರುಪಾದಸ್ವಾಮಿ, ಬೆಂಕಿ ಮಹಾದೇವ್‌, ಗುರುಸ್ವಾಮಿ, ಪುಟ್ಟಸ್ವಾಮಿ, ಎಂ.ಸಿ.ಬಸಪ್ಪ, ದೇವರಾಜ ಅರಸು, ಅಜೀಜ್‌ ಸೇಠ್‌ ಅವರಂಥ ಮಹಾನ್‌ ನಾಯಕರು ಮೈಸೂರು ಪ್ರತಿನಿಧಿಸಿದ್ದಾರೆ. ಅವರ ಮುಂದೆ ನಾವೆಲ್ಲ ಏನೂ ಅಲ್ಲ. ನನಗೆ 11 ಚುನಾವಣೆಗಳನ್ನು ಎದುರಿಸಿದ ಅನುಭವ ಇದೆ. ಈ ಹಿಂದೆ ಚಿಂಚೋಳಿಯಲ್ಲಿ ಪಕ್ಷ ಗೆಲ್ಲುವುದೇ ಇಲ್ಲ ಎಂದಿದ್ದರು. ದೇವದುರ್ಗದಲ್ಲಿ ಚುನಾವಣಾ ಮಾಡಲಾಗುತ್ತದೆಯೇ ಎಂದು ಇದೇ ಸಿದ್ದರಾಮಯ್ಯ ಲೇವಡಿ ಮಾಡಿದ್ದರು. ಆದರೆ, ಎಲ್ಲ ಕಡೆಯೂ ಸಾಧಿಸಿ ತೋರಿಸಿದ್ದೇನೆ. ಈ ಬಾರಿ ಸಹ ಗೆಲ್ಲುವ ವಿಶ್ವಾಸ ಇದೆ.

ನೀವು ವರುಣ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದಲ್ಲಿ ನಿಮಗೆ ಮುಂದೆ ಏನಾದರೂ ಮಹತ್ವದ ಸ್ಥಾನಮಾನದ ನೀಡುವ ಆಶ್ವಾಸನೆ ಸಿಕ್ಕಿದೆಯೇ?

ಏನೇನೂ ಇಲ್ಲ. ಚುನಾವಣೆಯಲ್ಲಿ ಗೆಲುವು-ಸೋಲು ಇದ್ದದ್ದೇ.

ನಿಮ್ಮ ಪರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಎರಡೂ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಬರುತ್ತಾರೆಯೇ?

ನಾನು ಈಗಷ್ಟೇ ಅವರನ್ನು ಭೇಟಿ ಮಾಡಿ ಪ್ರಚಾರಕ್ಕೆ ಬರುವಂತೆ ಆಹ್ವಾನಿಸಿದ್ದೇನೆ. ಬರುವುದಾಗಿ ಅವರೂ ಭರವಸೆ ನೀಡಿದ್ದಾರೆ.

ಇದು ತಮ್ಮ ಕೊನೆಯ ಚುನಾವಣೆ ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ. ನೀವೂ ಇದನ್ನು ಕೊನೆಯ ಚುನಾವಣೆ ಎಂದುಕೊಂಡಿದ್ದೀರಾ?

ಇಲ್ಲ. ನಾನು ಹಾಗೆ ಅಂದುಕೊಂಡಿಲ್ಲ.

ಗೋವಿಂದರಾಜನಗರ ಕ್ಷೇತ್ರದಲ್ಲಿ ಕಣ್ಣಿಗೆ ರಾಚುವಷ್ಟುಅಭಿವೃದ್ಧಿ ಕೆಲಸ ಮಾಡಿದ್ದೀರಿ. ಈಗ ಈ ಕ್ಷೇತ್ರ ತೊರೆದು ಬೇರೆ ಕ್ಷೇತ್ರಕ್ಕೆ ವಲಸೆ ಹೋಗುವುದು ಅಷ್ಟುಸುಲಭವೇ?

ಅದು ಈಗ ಮುಗಿದ ಅಧ್ಯಾಯ.

ಸುಮಾರು ಒಂದು ತಿಂಗಳ ಹಿಂದೆ ನೀವು ಪಕ್ಷದ ಕೆಲವೊಂದು ಬೆಳವಣಿಗೆ ಬಗ್ಗೆ ಅಸಮಾಧಾನಗೊಂಡಿದ್ದಿರಿ. ಈಗ ಅದೆಲ್ಲವೂ ಬಗೆಹರಿದಿದೆಯೇ?
ಈಗ ಚುನಾವಣೆ ಬಂದಿದೆ. ಅದು ಮುಗಿಯಲಿ. ಬಾಕಿ ಎಲ್ಲವೂ ಮುಗಿದ ಅಧ್ಯಾಯ.

ನಿಮ್ಮ ಪುತ್ರ ಅರುಣ್‌ ಅವರಿಗೆ ಈ ಚುನಾವಣೆಯಲ್ಲಿ ಟಿಕೆಟ್‌ ಸಿಗಬಹುದೇ?

ಆ ಬಗ್ಗೆ ಪಕ್ಷ ತೀರ್ಮಾನ ಮಾಡುತ್ತದೆ. ಪಕ್ಷ ಎಲ್ಲವನ್ನೂ ನೋಡುತ್ತದೆ. ನಾನು ಏನು ಹೇಳಬೇಕೋ ಎಲ್ಲವನ್ನೂ ಹೇಳಿದ್ದೇನೆ. ಅರುಣ್‌ ಭವಿಷ್ಯದ ಬಗ್ಗೆ ನಾನೇನೂ ಮಾಡಲು ಸಾಧ್ಯವಿಲ್ಲ. ಭಗವಂತ ಅವನ ಭವಿಷ್ಯ ಯಾವ ರೀತಿ ಬರೆದಿದ್ದಾನೋ ಹಾಗೆ ಆಗಲಿದೆ. ಒಬ್ಬ ಸೋಮಣ್ಣ ಹೊಟ್ಟೆಪಾಡಿಗೆ ಬಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಸೋಮಣ್ಣ ಅವನ ಮಗನಿಗೆ ಒಳ್ಳೆಯ ಕೆಲಸ ಕಲಿಸಿದ್ದರೆ ಅವನೂ ಬೆಳೆಯುತ್ತಾನೆ. ಇದರಲ್ಲಿ ನನ್ನ ಪಾತ್ರ ಏನಿಲ್ಲ. ನನಗೆ ಮಗನ ಮೇಲೆ ವ್ಯಾಮೋಹವೂ ಇಲ್ಲ.

ಮಹದೇಶ್ವರನ ಆಶೀರ್ವಾದದಿಂದ ಚಾಮರಾಜನಗರ ಮಾದರಿ ಜಿಲ್ಲೆಯಾಗಿಸುವಾಸೆ: ಸಚಿವ ಸೋಮಣ್ಣ

ಗೋವಿಂದರಾಜನಗರ ಕ್ಷೇತ್ರದಿಂದ ನಿಮ್ಮ ಉತ್ತರಾಧಿಕಾರಿ ಯಾರು?

ಪಕ್ಷ ಯಾರಿಗೆ ಟಿಕೆಟ್‌ ನೀಡುತ್ತದೆಯೋ ಆತನೇ ಉತ್ತರಾಧಿಕಾರಿ. ನಾನು ಯಾರ ಹೆಸರನ್ನೂ ಸೂಚಿಸಿಲ್ಲ. ಯಾರಿಗೆ ಟಿಕೆಟ್‌ ನೀಡಿದರೂ ನಾನು ಪಕ್ಷದ ಪರ ಪ್ರಚಾರ ಮಾಡುತ್ತೇನೆ.

ನೀವು ಬೆಂಗಳೂರು ತೊರೆದಲ್ಲಿ ವಿಜಯನಗರದ ಶಾಸಕ ಕೃಷ್ಣಪ್ಪ ಕುಟುಂಬದೊಂದಿಗಿನ ನಿಮ್ಮ ರಾಜಕೀಯ ಜಿದ್ದಾಜಿದ್ದಿಯ ಮುಂದಿನ ಕತೆಯೇನು?

ಹಣ ಇದ್ದರೆ ಪುಣ್ಯದ ಕೆಲಸವನ್ನೂ ಮಾಡಬಹುದು ಪಾಪದ ಕೆಲಸವನ್ನೂ ಮಾಡಬಹುದು ಎಂಬುದಕ್ಕೆ ಗೋವಿಂದರಾಜನಗರ ಮತ್ತು ವಿಜಯನಗರ ಕ್ಷೇತ್ರ ಉದಾಹರಣೆ. ಈ ಜನರಿಗೆ ಬುದ್ಧಿ ಬರುವುದರೊಳಗೆ ನಾನು ಇರುತ್ತೇನೋ ಇಲ್ಲವೋ ಗೊತ್ತಿಲ್ಲ. ಜನ ಎಚ್ಚೆತ್ತುಕೊಳ್ಳಬೇಕು. ಪಾಪಿಗಳು ಯಾವತ್ತಿದ್ದರೂ ಪಾಪಿಗಳೇ. ಇಂತಹ ನೀಚರು ರಾಜಕೀಯಕ್ಕೆ ನಿಲ್ಲಬಾರದು. ಕಾಂಗ್ರೆಸ್‌ನವರು ಫಂಡ್‌ ಪಡೆಯಲು ಇವರನ್ನು ಪಕ್ಷದಲ್ಲಿ ಇರಿಸಿಕೊಂಡಿದ್ದಾರೋ ಅಥವಾ ಏನಕ್ಕೆ ಇರಿಸಿಕೊಂಡಿದ್ದಾರೆ ಎಂಬುದು ಗೊತ್ತಿಲ್ಲ. ಈ ಪಾಪಿಗಳಿಗೆ ಟಿಕೆಟ್‌ ಕೊಟ್ಟಿರುವುದಕ್ಕೆ ಕಾಂಗ್ರೆಸ್‌ಗೆ ಈ ಸಂದಿಗ್ಧತೆ ಬಂದಿದೆ. ಎಲ್ಲವನ್ನೂ ಭಗವಂತನ ಮೇಲೆ ಹಾಕುತ್ತೇನೆ.

click me!