ಚುನಾವಣೆ ಸೋಲಿನಿಂದಾಗಿ ಮಿಸ್‌ ಫೈರ್‌ ಆಗಿ ರೆಡ್ಡಿ ಜೊತೆ ಭಿನ್ನಾಭಿಪ್ರಾಯ: ಶ್ರೀರಾಮುಲು

Published : Feb 04, 2025, 04:58 PM IST
ಚುನಾವಣೆ ಸೋಲಿನಿಂದಾಗಿ ಮಿಸ್‌ ಫೈರ್‌ ಆಗಿ ರೆಡ್ಡಿ ಜೊತೆ ಭಿನ್ನಾಭಿಪ್ರಾಯ: ಶ್ರೀರಾಮುಲು

ಸಾರಾಂಶ

ಸಂಡೂರು ಚುನಾವಣೆ ಸೋತ ವಿಚಾರದಲ್ಲಿ ನೋವಿತ್ತು. ಎಲ್ಲೋ ಒಂದು ಕಡೆ ಮಿಸ್ ಫೈರ್ ಆಗಿ ಭಿನ್ನಾಭಿಪ್ರಾಯ ವ್ಯಕ್ತವಾಗಿವೆ. ಆದರೆ ಪಕ್ಷದ ವಿಚಾರ ಬಂದಾಗ ಎಲ್ಲಿಯೂ ಮನಸ್ತಾಪಗಳಿಲ್ಲ. ಎಲ್ಲರೂ ಒಗ್ಗೂಡಿಕೊಂಡೇ ಕೆಲಸ ಮಾಡುತ್ತೇವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. 

ಕಂಪ್ಲಿ (ಫೆ.04): ಸಂಡೂರು ಚುನಾವಣೆ ಸೋತ ವಿಚಾರದಲ್ಲಿ ನೋವಿತ್ತು. ಎಲ್ಲೋ ಒಂದು ಕಡೆ ಮಿಸ್ ಫೈರ್ ಆಗಿ ಭಿನ್ನಾಭಿಪ್ರಾಯ ವ್ಯಕ್ತವಾಗಿವೆ. ಆದರೆ ಪಕ್ಷದ ವಿಚಾರ ಬಂದಾಗ ಎಲ್ಲಿಯೂ ಮನಸ್ತಾಪಗಳಿಲ್ಲ. ಎಲ್ಲರೂ ಒಗ್ಗೂಡಿಕೊಂಡೇ ಕೆಲಸ ಮಾಡುತ್ತೇವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು. ಶಾಸಕ ಜನಾರ್ದನ್ ರೆಡ್ಡಿ ವಿಚಾರದಲ್ಲಿ ಮನಸ್ತಾಪದ ಕುರಿತು ಪಟ್ಟಣದಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಬಿಜೆಪಿ ನನಗೆ ಎಲ್ಲ ಅವಕಾಶಗಳನ್ನು ನೀಡಿದೆ. ಪಕ್ಷ ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನಾನೆಂದಿಗೂ ತೆರೆದ ಪುಸ್ತಕ. ನನ್ನಲ್ಲಿ ಯಾವುದೇ ಮುಚ್ಚುಮರೆ ಇಲ್ಲ. ಈ ರಾಮುಲು ಬಗ್ಗೆ ರಾಜ್ಯದ ಜನತೆಗೆ ಗೊತ್ತಿದೆ ಎಂದರು. ಇನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಪೂರ್ಣಾವಧಿವರೆಗೂ ಕಾರ್ಯ ನಿರ್ವಹಿಸುತ್ತಾರಾ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಆಂತರಿಕ ವಿಚಾರದ ಬಗ್ಗೆ ನಾನು ಮಾತಾಡಲ್ಲ.

ಬದಲಿಗೆ ಇಂದು ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷ ಮಾಡುತ್ತಿರುವ ಅನ್ಯಾಯದ ಬಗ್ಗೆ ಮನವರಿಕೆ ಮಾಡಿಸುವ ಮೂಲಕ ಪಕ್ಷ ಸಂಘಟಿಸುತ್ತೇನೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಕಾರ್ಯ ನಿರ್ವಹಿಸುತ್ತಿದ್ದರೂ ಭಿನ್ನಾಭಿಪ್ರಾಯಗಳಿವೆ. ಈ ಕುರಿತು ರಾಷ್ಟ್ರೀಯ ನಾಯಕರು ಕೂರಿಸಿ ಮಾತನಾಡುವ ಕೆಲಸ ಮಾಡಬೇಕು. ವಿಜಯಪುರ ಭಾಗದ ಜನ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು, ಬೆಳಗಾವಿ ಭಾಗದ ಜನ ರಮೇಶ್ ಜಾರಕಿಹೊಳಿ ಅವರನ್ನು, ಉತ್ತರ ಕನ್ನಡ ಭಾಗದ ಜನ ಅನಂತಕುಮಾರ್ ಅವರನ್ನು, ಹೈದರಾಬಾದ್ ಕರ್ನಾಟಕ ಭಾಗದ ಜನ ಶ್ರೀರಾಮುಲು ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂದು ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಏನೇ ಆಗಲಿ ನಮ್ಮ ಪಕ್ಷದ ರಾಷ್ಟ್ರೀಯ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧರಾಗಿದ್ದೇವೆ ಎಂದರು.

ಸಚಿವ ಜಮೀರ್ ಬದುಕಿದ್ದಾನೋ, ಸತ್ತಿದ್ದಾನೋ ಗೊತ್ತಿಲ್ಲ: 7-8 ಬಾಣಂತಿಯರ ಸಾವಾದರೂ ಈವರೆಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿಲ್ಲ. ಅವನು ಸತ್ತಿದ್ದಾನೋ ಬದುಕಿದ್ದಾನೋ ಗೊತ್ತಿಲ್ಲ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಏಕವಚನದಲ್ಲಿ ಗದಾಪ್ರಹಾರ ನಡೆಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ನೂತನ ಬಿಜೆಪಿ ಮಂಡಲಗಳ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಳ್ಳಾರಿ ಜಿಲ್ಲಾಸ್ಪತ್ರೆಗೆ ಹೆರಿಗೆಗೆಂದು ಬಾಣಂತಿಯರು ತೆರಳಿದರೆ ಜೀವಂತವಾಗಿ ವಾಪಸ್ ಬರುತ್ತಾರೆ ಎನ್ನುವ ನಂಬಿಕೆ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿಯಿಂದ ಹಿಡಿದು ಎಲ್ಲ ವಿಷಯವು ಕೊಲ್ಯಾಪ್ಸ್ ಆಗಿದೆ. ಇಡೀ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ಈಗ ನಡೆಯುತ್ತಿರುವ ಕಾಮಗಾರಿಗಳೆಲ್ಲ ಅಂದಿನ ಬಿಜೆಪಿ ಸರ್ಕಾರ ಬಿಡುಗಡೆಗೊಳಿಸಿದ್ದ ಅನುದಾನದಲ್ಲಿ ನಡೆಯುತ್ತಿವೆ. 

ಅಕ್ರಮ ಆಸ್ತಿ ಕೇಸ್‌: ಜನಾರ್ದನ ರೆಡ್ಡಿಗೆ ಈಗ ಗೌರ್ನರ್‌ ಪ್ರಾಸಿಕ್ಯೂಷನ್‌ ಸಂಕಷ್ಟ

ನಮ್ಮ ಸರ್ಕಾರದ ಅವಧಿಯಲ್ಲಿ ಸಾವಿರಾರು ಕೋಟಿ ಅನುದಾನ ಬಿಡುಗಡೆಗೊಳಿಸಿದ್ದೇವೆ. ರೈತರು ಬೆಳೆದ ಬೆಳೆಗಳಿಗೆ ಈಗಿನ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿಲ್ಲ. ಸರಿಯಾದ ಸಮಯದಲ್ಲಿ ಖರೀದಿ ಕೇಂದ್ರ ತೆರೆಯದೇ ರೈತರೆಲ್ಲ ತಮ್ಮ ಬೆಳೆಗಳನ್ನು ಮಾರಿದ ಬಳಿಕ ತೆರೆಯುತ್ತಿದ್ದಾರೆ. ಕಾಂಗ್ರೆಸ್ ಗೆ ರೈತರ ಬಗ್ಗೆ ಕಾಳಜಿ ಇಲ್ಲ. ಇದು ರೈತ ವಿರೋಧಿ ಸರ್ಕಾರ ಎಂದು ವಾಗ್ದಾಳಿ ನಡೆಸಿದರು. ಇನ್ನು ಶಾಸಕ ಗಣೇಶ್ ಕಂಪ್ಲಿ ಪುರಸಭೆ ಬಿಜೆಪಿ ಸದಸ್ಯರನ್ನು ವಾಮಮಾರ್ಗದ ಮೂಲಕ ತಮ್ಮ ಅಭ್ಯರ್ಥಿಯನ್ನು ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಧಮ್ ಇದ್ದರೆ ಜನರ ಮಧ್ಯೆ ಗೆದ್ದು ತೋರಿಸಬೇಕು. ಕಾಂಗ್ರೆಸ್ ನ್ನು ತೊಲಗಿಸಬೇಕೆಂದರೆ ತಾವೆಲ್ಲರೂ ಒಂದಾಗಿ ಪಕ್ಷ ಸಂಘಟನೆಯಲ್ಲಿ ತಲ್ಲೀನರಾಗಬೇಕು ಎಂದರು. ಮಾಜಿ ಶಾಸಕ ಟಿ.ಎಚ್. ಸುರೇಶಬಾಬು ಮಾತನಾಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಕುಂಠಿತವಾಗಿದೆ. ರಾಮುಲು ಜಿಲ್ಲಾ ಉಸ್ತುವಾರಿ ಸಚಿವರಿದ್ದಾಗ ಕಂಪ್ಲಿ ಉತ್ಸವ ಮಾಡಿದ್ದರು. ಕಂಪ್ಲಿ ಉತ್ಸವವನ್ನೇ ಮಾಡಲು ಮುಂದಾಗದ ಶಾಸಕ ಗಣೇಶ ಇನ್ನು ಕುರುಗೋಡು ಉತ್ಸವ ಮಾಡುತ್ತೇನೆ ಅನ್ನುವುದು ಎಲ್ಲಿಯ ಮಾತು? ಕಾಂಗ್ರೆಸ್ ನವರು ಗ್ಯಾರಂಟಿ ತಂದು ಮೋಸ ಮಾಡಿ ಜನರಿಂದ ವೋಟ್ ಪಡೆದಿದ್ದಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೈತರ ಬೆಳೆಗಳಿಗೆ ಮಾರುಕಟ್ಟೆ ಕಲ್ಪಿಸಲು 'ಅಂತಾರಾಷ್ಟ್ರೀಯ ಸ್ಯಾಂಡ್‌ವಿಚ್ ಸ್ನಾತಕೋತ್ತರ ಕೋರ್ಸ್': ಸಿಎಂ ಸಿದ್ದರಾಮಯ್ಯ
ಸಿದ್ಧರಾಮಯ್ಯ ಮಾತು ಎತ್ತಿದ್ರೆ ಸಾಬ್ರು ಸಾಬ್ರು ಅಂತ ಜಪ ಮಾಡ್ತಾರೆ: ಶಾಸಕ ಯತ್ನಾಳ್ ವ್ಯಂಗ್ಯ!