ಕೊಪ್ಪಳ ಬಿಜೆಪಿ: ಟಿಕೆಟ್‌ಗಾಗಿ ಶುರುವಾಗಿದೆ ಶೀತಲ ಸಮರ

By Kannadaprabha News  |  First Published Oct 12, 2022, 10:50 AM IST
  • ಕೊಪ್ಪಳ ಬಿಜೆಪಿಯಲ್ಲಿ ಕೊತ ಕೊತ
  • ಟಿಕೆಟ್‌ಗಾಗಿ ಈಗಾಗಲೇ ಶುರುವಾಗಿದೆ ಶೀತಲ ಸಮರ
  • ಐದು ವಿಧಾನಸಭಾ ಕ್ಷೇತ್ರಗಲ್ಲಿಯೂ ಗುಸು ಗುಸು

ಸೋಮರಡ್ಡಿ ಅಳವಂಡಿ

ಕೊಪ್ಪಳ (ಅ.12):

Tap to resize

Latest Videos

undefined

ಜಿಲ್ಲೆಯಲ್ಲಿ ಬಿಜೆಪಿಯು ಕೊತ ಕೊತ ಕುದಿಯುತ್ತಿದೆ. ಟಿಕೆಟ್‌ಗಾಗಿ ಇರುವ ಜಿದ್ದಾಜಿದ್ದಿ ಪಕ್ಷದಲ್ಲಿ ಶೀತಲ ಸಮರಕ್ಕೆ ದಾರಿಯಾಗಿದೆ. ಐದೂ ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಿಲ್ಲೊಂದು ರೀತಿ ತೆರೆಮರೆಯಲ್ಲಿ ಟಿಕೆಟ್‌ ಕಸರತ್ತು ಒಗ್ಗಟ್ಟಿಗೆ ಬಿಕ್ಕಟ್ಟು ತಂದಿಟ್ಟಿರುವುದು ಗುಟ್ಟಾಗಿ ಉಳಿದಿಲ್ಲ.

ಕೋಡಿ ಬಿತ್ತು ಯಶ್‌ ಅಭಿವೃದ್ಧಿ ಪಡಿಸಿದ್ದ ತಲ್ಲೂರು ಕೆರೆ: ರೈತರ ಮುಖದಲ್ಲಿ ಮಂದಹಾಸ

ಇದು ಒಂದು ಕಡೆಯಾದರ ಮತ್ತೊಂದು ಕಡೆ ಮೂಲ ಬಿಜೆಪಿಗರನ್ನು ಕಡೆಗಣಿಸಲಾಗುತ್ತದೆ ಎನ್ನುವ ಕೂಗು ಇದೆ. ಬಿಜೆಪಿ ಸಂಘಟನೆ ಇಲ್ಲದಿರುವಾಗ ಪಕ್ಷ ಸಂಘಟನೆಗಾಗಿ ಮಾಡಿದ ಹೋರಾಟ, ಏಟು ತಿಂದಿರುವ ಪ್ರಕರಣ ಸೇರಿದಂತೆ ನಿರಂತರ ಪಕ್ಷಕ್ಕಾಗಿ ದುಡಿದವರು ಪ್ರತ್ಯೇಕ ಸಭೆ ನಡೆಸಿ ಪಕ್ಷದ ಹೈಕಮಾಂಡ್‌ಗೆ ಮಾಹಿತಿ ರವಾನಿಸಿ ನಾಲ್ಕಾರು ತಿಂಗಳುಗಳೇ ಕಳೆದಿವೆ. ಆದರೂ ಪಕ್ಷ ಈ ಕುರಿತು ಪ್ರತಿಕ್ರಿಯೆ ನೀಡಿಲ್ಲ. ಸರ್ಕಾರದ ನಾಮನಿರ್ದೇಶನ ಮಾಡುವ ವೇಳೆ ಮೂಲ ಬಿಜೆಪಿಗರಿಗೆ ಕನಿಷ್ಠ ಅರ್ಧದಷ್ಟುಸ್ಥಾನಗಳನ್ನು ಮೀಸಲಿರಿಸಬೇಕು ಎನ್ನುವ ಬೇಡಿಕೆ ಇಟ್ಟಿದ್ದಾರೆ.

5 ಕ್ಷೇತ್ರಗಳಲ್ಲಿ ಟಿಕೆಟ್‌ ಫೈಟ್‌:

ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿಯೂ ಬಿಜೆಪಿ ಟಿಕೆಟ್‌ಗಾಗಿ ಶೀತಲ ಸಮರ ಇರುವುದು ಗುಟ್ಟಾಗಿ ಉಳಿದಿಲ್ಲ. ಅನೇಕ ಕ್ಷೇತ್ರಗಳಲ್ಲಿ ಬಹಿರಂಗವಾಗಿ ನಡೆಯುತ್ತಿದ್ದರೇ ಕೆಲವು ಕ್ಷೇತ್ರಗಳಲ್ಲಿ ಗುಟ್ಟಾಗಿ ಫೈಟ್‌ ಇದೆ.

ಕೊಪ್ಪಳ ವಿಧಾನಸಭಾ ಕ್ಷೇತ್ರ:

ಈ ಬಾರಿ ಬಿಜೆಪಿ ಟಿಕೆಟ್‌ ಯಾರಿಗೆ ಎನ್ನುವುದೇ ಬಹುದೊಡ್ಡ ಚರ್ಚೆಯಾಗುತ್ತಿರುವ ವಿಷಯ. ಪಕ್ಷ ಈ ಕುರಿತು ಯಾವುದೇ ಮುನ್ಸೂಚನೆ ನೀಡಿಲ್ಲವಾದರೂ ಟಿಕೆಟ್‌ಗಾಗಿ ಪ್ರಯತ್ನವಂತೂ ನಡೆದಿದೆ. ಹಾಲಿ ಸಂಸದ ಸಂಗಣ್ಣ ಕರಡಿ ಅವರೇ ಹೈಕಮಾಂಡ್‌ ಅವಕಾಶ ನೀಡಿದರೆ ಸ್ಪರ್ಧೆ ಮಾಡುವುದಾಗಿ ಹೇಳುತ್ತಿದ್ದವರು ಈಗ ನಾನು ಬಲವಾದ ಆಕಾಂಕ್ಷಿ ಎಂದು ಹೇಳುತ್ತಿದ್ದಾರೆ. ಕ್ಷೇತ್ರದ ಮತದಾರರು ನನ್ನನ್ನು ಸ್ಪರ್ಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಹೀಗಾಗಿ ಪಕ್ಷ ಅವಕಾಶ ನೀಡಿದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವುದಾಗಿ ತಿಳಿಸಿದ್ದಾರೆ.

ಕಳೆದ ಬಾರಿ ಪರಾಭವಗೊಂಡಿರುವ ಅಮರೇಶ ಕರಡಿ ಅವರ ಹೆಸರನ್ನು ಅಲ್ಲಗಳೆಯುವಂತಿಲ್ಲ. ಅವರ ತಂದೆಯವರಿಗೆ ಸಿಗುವುದಾದರೆ ದೊರಕಲಿ. ಇಲ್ಲದಿದ್ದರೆ ನನಗೂ ಮತ್ತೊಂದು ಅವಕಾಶ ನೀಡಿ ಎನ್ನುತ್ತಿದ್ದಾರೆ. ಕಳೆದ ಬಾರಿ ಟಿಕೆಟ್‌ ಘೋಷಣೆಯಾಗಿದ್ದ ಸಿ.ವಿ. ಚಂದ್ರಶೇಖರ ಅವರಿಗೆ ಕೊನೆ ಗಳಿಗೆಯಲ್ಲಿ ಬಿ ಫಾಮ್‌ರ್‍ ನೀಡುವ ವೇಳೆ ಕೈತಪ್ಪಿತು. ಇದಾದ ಮೇಲೆ ಪಕ್ಷ ಸಂಘಟನಯಲ್ಲಿ ತೊಡಗಿರುವ ಅವರು, ನಾನಂತೂ ಬಲವಾದ ಆಕಾಂಕ್ಷಿ ಇದ್ದು, ಟಿಕೆಟ್‌ ಸಿಕ್ಕೆ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎನ್ನುತ್ತಿದ್ದಾರೆ.

ಹೊಸ ಮುಖಕ್ಕೆ ಟಿಕೆಟ್‌ ಸಿಗುತ್ತದೆ ಎನ್ನುವ ಲೆಕ್ಕಾಚಾರದಲ್ಲಿ ಕೆ. ಬಸವರಾಜ, ಚಂದ್ರು ಹಲಿಗೇರಿ, ಮಹಾಂತೇಶ ಪಾಟೀಲ್‌ ಮೈನಳ್ಳಿ, ಶಂಭುಲಿಂಗನಗೌಡ ಹಲಿಗೇರಿ ಸೇರಿದಂತೆ ಅನೇಕ ಹೆಸರುಗಳು ತೇಲಾಡುತ್ತಿವೆ.

ಕುಷ್ಟಗಿ ವಿಧಾನಸಭಾ ಕ್ಷೇತ್ರ:

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌ ಅವರಿಗೆ ಟಿಕೆಟ್‌ ಪಕ್ಕಾ ಎನ್ನಲಾಗುತ್ತಿದೆಯಾದರೂ ತೆರೆಮರೆಯಲ್ಲಿ ನಾನಾ ಹೆಸರುಗಳು ಓಡಾಡುತ್ತಿವೆ. ಅದರಲ್ಲೂ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಶರಣು ತಳ್ಳಿಕೇರಿ ಅವರ ಹೆಸರು ಬಲವಾಗಿ ಚರ್ಚೆಯಾಗುತ್ತಿದೆ. ಅಲ್ಲದೇ ಹಲವರ ಹೆಸರುಗಳು ತೆರೆಮರೆಯಲ್ಲಿ ಚರ್ಚೆಯಾಗುತ್ತಿವೆ.

ಯಲಬುರ್ಗಾ ವಿಧಾನಸಭಾ ಕ್ಷೇತ್ರ:

ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ ಅವರು ಮರಳಿ ಸ್ಪರ್ಧೆ ಮಾಡುವುದು ಪಕ್ಕಾ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೂ ಇಲ್ಲಿಯೂ ನಾನಾ ಲೆಕ್ಕಾಚಾರ ನಡೆಯುತ್ತಿವೆ. ಹಾಲಪ್ಪ ಆಚಾರ ಅವರಿಗೆ ಲೋಕಸಭಾ ಅಖಾಡಕ್ಕೆ ಇಳಿಸಲು ಪಕ್ಷ ಮುಂದಾಗುತ್ತಿದೆ. ಹೀಗಾಗಿ ಇಲ್ಲಿ ಪರ್ಯಾಯ ಹೆಸರು ಕೇಳಿ ಬರುತ್ತಿದೆ ಎನ್ನಲಾಗುತ್ತಿದೆ. ಇದರಲ್ಲಿ ಬಹು ಚರ್ಚಿತವಾಗುತ್ತಿರುವ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀನ್‌ ಗುಳಗಣ್ಣವರ್‌ ಹೆಸರು. ಈ ಕುರಿತು ನವೀನ್‌ ಗುಳಗಣ್ಣವರ ಎಲ್ಲಿಯೂ ಹೇಳಿಕೊಂಡಿಲ್ಲ. ಇವರ ಹೆಸರು ಬಲವಾಗಿ ಚರ್ಚೆಯಾಗುತ್ತಿದೆ. ಹಾಲಪ್ಪ ಆಚಾರ ಅವರು ರಾಷ್ಟ್ರ ರಾಜಕಾರಣಕ್ಕೆ ಮನಸ್ಸು ಮಾಡಿದರೆ ಅವರ ಅಳಿಯ ಬಸವರಾಜ ಗೌರಾ ಅವರ ಹೆಸರು ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಹಾಲಪ್ಪ ಆಚಾರ ಅವರಾಗಲಿ ಅಥವಾ ಬಸವರಾಜ ಗೌರಾ ಅವರಾಗಲಿ ಎಲ್ಲಿಯೂ ಹೇಳಿಕೊಂಡಿಲ್ಲ. ಬಿಜೆಪಿ ವಲಯದಲ್ಲಿಯೇ ಚರ್ಚೆಯಾಗುತ್ತಿದೆ.

 

ಕೊಪ್ಪಳ: ಭಾರೀ ಮಳೆ, ಹಳ್ಳದಲ್ಲಿ ಕೊಚ್ಚಿ ಹೋದ ನಾಲ್ವರು ಮಹಿಳೆಯರು..!

ಗಂಗಾವತಿ ಕ್ಷೇತ್ರ:

ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ಪರಣ್ಣ ಮುನವಳ್ಳಿ ಅವರೆ ಮರುಸ್ಪರ್ಧೆ ಮಾಡುವುದು ಪಕ್ಕಾ ಎನ್ನಲಾಗುತ್ತಿದೆ. ಪಕ್ಷದಲ್ಲಿ ನಡೆಯುತ್ತಿರುವ ಚರ್ಚೆಯ ಪ್ರಕಾರ ಈ ಬಾರಿ ಪರಣ್ಣ ಮುನವಳ್ಳಿ ಅವರ ಬದಲಿಗೆ ಬೇರೆಯವರನ್ನು ಅಖಾಡಕ್ಕೆ ಇಳಿಸುತ್ತಾರೆ ಎನ್ನುವ ವದಂತಿ ಜೋರಾಗಿದೆ.

ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಎಂದರೆ ಸಂತೋಷ ಕೆಲೋಜಿ, ಎಚ್‌. ಗಿರೇಗೌಡ, ವಿರುಪಾಕ್ಷಪ್ಪ ಸಿಂಗನಾಳ ಹಾಗೂ ಎಚ್‌.ಆರ್‌. ಚನ್ನಕೇಶವ ಅವರ ಹೆಸರು. ಈ ಬಗ್ಗೆ ಸ್ಪಷ್ಟತೆ ಇಲ್ಲವಾದರೂ ಹಾಲಿ ಶಾಸಕರೆ ಇರುವುದರಿಂದ ಏನಾಗುತ್ತದೆ ಎಂದು ಕಾದು ನೋಡಬೇಕು.

ಕನಕಗಿರಿ ವಿಧಾನಸಭಾ ಕ್ಷೇತ್ರ:

ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚೆಯಾಗುತ್ತಿರುವ ಕ್ಷೇತ್ರ ಎಂದರೆ ಕನಕಗಿರಿ ವಿಧಾನಸಭಾ ಕ್ಷೇತ್ರ. ಹಾಲಿ ಶಾಸಕ ಬಸವರಾಜ ದಢೇಸೂಗೂರು ಅವರು ಪದೇ ಪದೇ ವಿವಾದಕ್ಕೆ ತುತ್ತಾಗುತ್ತಿರುವುದನ್ನೆ ಬಂಡವಾಳ ಮಾಡಿಕೊಂಡಿರುವ ಆಕಾಂಕ್ಷಿಗಳು ಈಗಾಗಲೇ ತಮ್ಮ ಪ್ರಯತ್ನ ನಡೆಸಿದ್ದಾರೆ.

ಗಾಯತ್ರಿ ತಿಮ್ಮಾರಡ್ಡಿ, ಈಶಪ್ಪ ಹಿರೇಮನಿ, ಪುಷ್ಪಾಂಜಲಿ ಗುನ್ನಾಳ ಸೇರಿದಂತೆ ಅನೇಕ ಹೆಸರುಗಳು ಮೇಲ್ನೋಟಕ್ಕೆ ಕೇಳಿಬರುತ್ತಿವೆ. ಅಲ್ಲದೆ ಅನೇಕ ಹೆಸರುಗಳು ಕೇಳಿ ಬರುತ್ತಿವೆಯಾದರೂ ಪಕ್ಷ ಇಲ್ಲಿ ಬೇರೆಯದೆ ರೀತಿಯಲ್ಲಿ ಚಿಂತನೆ ನಡೆಸಿದೆ ಎನ್ನಲಾಗುತ್ತಿದೆ.

click me!