ನನ್ನ ಬಗ್ಗೆ ಪದೇ ಪದೇ ಹಗುರ ಮಾತನಾಡಿದರೆ ಪರಿಣಾಮ ನೆಟ್ಟಗಿರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಮ್ಮ ರಾಜಕೀಯ ಎದುರಾಳಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡಗೆ ಗುಟುರು ಹಾಕಿದ್ದಾರೆ.
ದಾವಣಗೆರೆ (ನ.05): ನನ್ನ ಬಗ್ಗೆ ಪದೇ ಪದೇ ಹಗುರ ಮಾತನಾಡಿದರೆ ಪರಿಣಾಮ ನೆಟ್ಟಗಿರದು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಮ್ಮ ರಾಜಕೀಯ ಎದುರಾಳಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡಗೆ ಗುಟುರು ಹಾಕಿದ್ದಾರೆ. ಹೊನ್ನಾಳಿ ಕ್ಷೇತ್ರದ ವಿವಿಧೆಡೆ ಬೆಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ ರೇಣುಕಾಚಾರ್ಯ ಕಾಂಗ್ರೆಸ್ ಸೇರಲು ತನ್ನ ವಿರೋಧವಿದೆ ಎಂದ ಶಾಂತನಗೌಡರ ಮನೆ ಬಾಗಿಲಿಗೆ ನಾನೇನು ಅರ್ಜಿ ಹಾಕಿಕೊಂಡು, ಹೋಗಿದ್ದೀನಾ ಎಂದು ಪ್ರಶ್ನಿಸಿದರು. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರುತ್ತೇನೆಂದು ಎಲ್ಲಿಯೂ ಹೇಳಿಲ್ಲ.
ಬಿಜೆಪಿಯಲ್ಲಿ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಕಾಂಗ್ರೆಸ್ ಸೇರಲು ನಾನು ಅರ್ಜಿ ಹಾಕಿಲ್ಲ. ಯಾರ ಮನೆ ಬಾಗಿಲನ್ನೂ ತುಳಿದಿಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ, ಸಚಿವರಾದ ಎಸ್ಸೆಸ್ ಮಲ್ಲಿಕಾರ್ಜುನ, ಕೃಷ್ಣ ಭೈರೇಗೌಡ, ಚಲುವರಾಯಸ್ವಾಮಿ, ಇತರರನ್ನು ಭೇಟಿಯಾಗಿದ್ದು ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಹೊರತು ಬೇರೆ ಯಾವುದಕ್ಕೂ ಅಲ್ಲ ಎಂದು ಹೇಳಿದರು.
2.5 ವರ್ಷ ಡಿ.ಕೆ.ಶಿವಕುಮಾರ್ ಸಿಎಂ: ಇಬ್ಬರು ಶಾಸಕರ ಭವಿಷ್ಯ
ಶಾಸಕರಿಗೇಕೆ ಕೋಪ ?: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ನಾನೆಂದಿಗೂ ರಾಜಕಾರಣ ಮಾಡಿಲ್ಲ. ಹಿಂದೆ ಶಾಂತನಗೌಡರು 2 ಬಾರಿ ಶಾಸಕರಾಗಿದ್ದಾಗಲೂ ಸಂಪೂರ್ಣ ಸಹಕಾರ ನೀಡಿದ್ದೇನೆ. ಕ್ಷೇತ್ರದಲ್ಲಿ ಬರ ಆವರಿಸಿದ್ದರಿಂದ ಅನುದಾನ ಬಿಡುಗಡೆ ಮಾಡಲು ಸಿಎಂ, ಡಿಸಿಎಂ, ಸಚಿವರಿಗೆ ಮನವಿ ಮಾಡಿದರೆ ಶಾಸಕ ಶಾಂತನಗೌಡರಿಗೆ ಏಕೆ ಸಿಟ್ಟು ಎಂದು ಪ್ರಶ್ನಿಸಿದರು.
ಸುಮ್ಮನಿದ್ದೇನೆಂದರೆ ನನ್ನ ದೌರ್ಬಲ್ಯವಲ್ಲ: ಶಾಸಕ ಶಾಂತನಗೌಡ ಶಾಸಕರಾಗಿ 6 ತಿಂಗಳಾದರೂ ಕ್ಷೇತ್ರದಲ್ಲಿ ಎಷ್ಟು ಸಲ ಬರ ಅಧ್ಯಯನ ಮಾಡಿದ್ದೀರಿ? ಬರ ಅಧ್ಯಯನ ನಡೆಸಿದ್ದರೆ ಅಭಿವೃದ್ಧಿ ಮತ್ತು ಬರಗಾಲದಲ್ಲಿ ರಾಜಕೀಯ ಮಾಡಬಾರದೆಂಬ ಕಾರಣಕ್ಕೆ ನಾನು ಸುಮ್ಮನಿದ್ದೇನೆಂದರೆ ಅದು ನನ್ನ ದೌರ್ಬಲ್ಯವಲ್ಲ. ನಿಮಗಿಂತ ಹತ್ತು ಪಟ್ಟು ಹೆಚ್ಚು ಮಾತನಾಡಲು ನನಗೂ ಬರುತ್ತದೆ ಎಂದು ಎಚ್ಚರಿಸಿದರು.
ಸರ್ಕಾರ ಬರಗಾಲ ಸಮರ್ಥವಾಗಿ ಎದುರಿಸಲಿದೆ: ಸಚಿವ ಮಧು ಬಂಗಾರಪ್ಪ
ಮೈಮೇಲೆ ಎಚ್ಚರ ಇಟ್ಟು ಮಾತನಾಡಲಿ: ನಾನು ಸದಾ ಜನಪರ ಇರುವವನು. ನನ್ನ ಬಗ್ಗೆ ಹಗುರ ಮಾತನಾಡಿದರೆ, ಸಹಿಸಿಕೊಂಡು ಸುಮ್ಮನಿರುವವನೂ ನಾನಲ್ಲ. ನನಗೆ ಅಧಿಕಾರ ಇರಲಿ, ಇಲ್ಲದಿರಲಿ ಹೋರಾಟ ಮಾಡಿಕೊಂಡೇ ಬಂದವನು. ನನ್ನ ಹೋರಾಟ, ಜನಪರ ಕೆಲಸಕ್ಕೆ ಯಾರ ಅಪ್ಪಣೆಯೂ ಬೇಕಿಲ್ಲ. ಇನ್ನು ಮುಂದೆ ನನ್ನ ಬಗ್ಗೆ ಮಾತನಾಡುವಾಗ ಶಾಂತನಗೌಡ ಮೈಮೇಲೆ ಎಚ್ಚರ ಇಟ್ಟುಕೊಂಡು ಮಾತನಾಡಲಿ.