News 360°: ಮುರಿದುಬಿತ್ತಾ I.N.D.I.A ಮೈತ್ರಿ? ಪ್ರತಿಪಕ್ಷಗಳ ಒಗ್ಗಟ್ಟು ಕಾಂಗ್ರೆಸ್​ಗೆ ಅಸಾಧ್ಯ ಯಾಕೆ?

By Suvarna NewsFirst Published Dec 7, 2023, 8:35 PM IST
Highlights

2024ರ ಲೋಕಸಭಾ ಚುನಾವಣೆವರೆಗೆ I.N.D.I.A ಮೈತ್ರಿ ಉಳಿಯುತ್ತೋ ಇಲ್ಲವೋ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪಂಚ ರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ  ಮಿತ್ರಪಕ್ಷಗಳೇ ತಿರುಗಿಬಿದ್ದಿವೆ. ಈ ಬಗ್ಗೆ ಒಂದು ಡಿಟೇಲ್ಡ್ ಸ್ಟೋರಿ

2024ರ ಲೋಕಸಭಾ ಚುನಾವಣೆವರೆಗೆ I.N.D.I.A ಮೈತ್ರಿ ಉಳಿಯುತ್ತೋ ಇಲ್ಲವೋ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಪಂಚ ರಾಜ್ಯಗಳ ಫಲಿತಾಂಶದ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ  ಮಿತ್ರಪಕ್ಷಗಳೇ ತಿರುಗಿಬಿದ್ದಿವೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆದ ಸಭೆಗೆ ಮಿತ್ರಪಕ್ಷಗಳ ಪ್ರಮುಖ ನಾಯಕರೇ ಗೈರಾಗಿದ್ದಾರೆ. ಕೇವಲ ಪ್ರತಿನಿಧಿಗಳನ್ನು ಸಭೆಗೆ ಕಳುಹಿಸಿ ಕಾಂಗ್ರೆಸ್ ಮಿತ್ರರು ಕೈತೊಳೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕರೇ ತುಂಬಿದ್ದ ಸಭೆಗೆ ಮಿತ್ರ ಪಕ್ಷಗಳ ನಾಯಕರೇ ತಲೆಹಾಕಿಲ್ಲ. ಖರ್ಗೆ, ರಾಹುಲ್, ವೇಣುಗೋಪಾಲ್, ಅಧಿರ್ ರಂಜನ್, ಜೈರಾಮ್ ರಮೇಶ್, ಪ್ರಮೋದ್ ತಿವಾರಿ ಭಾಗಿಯಾಗಿದ್ದ ಸಭೆಗೆ ಮೈತ್ರಿಕೂಟದ ನಾಯಕರ ಅನುಪಸ್ಥಿತಿ ಎದ್ದುಕಾಣುತಿತ್ತು.  ಸಭೆಗೆ ಎಎಪಿ, ಜೆಡಿಯು, ಎಸ್​ಪಿ, ಎನ್​ಸಿಪಿ, ಡಿಎಂಕೆ, ಟಿಎಂಸಿ, ಶಿವಸೇನೆ ನಾಯಕರು ಪಕ್ಷದ ಕಡೆಯಿಂದ ಪ್ರತಿನಿಧಿಗಳನ್ನು ಕಳುಹಿಸಿ ಸುಮ್ಮನಾಗಿದ್ದಾರೆ. 

Latest Videos

ಪಂಚರಾಜ್ಯ ಫಲಿತಾಂಶ..I.N.D.I.A ಮೈತ್ರಿ ಮೇಲೆ ಏನು ಪರಿಣಾಮ ?

ಪಂಚರಾಜ್ಯ ಚುನಾವಣೆಯಲ್ಲಿ ಮಿತ್ರಪಕ್ಷಗಳನ್ನು  ದೂರವಿಟ್ಟಿದ್ದಕ್ಕೆ ಅಸಮಾಧಾನ ಹೊಗೆಯಾಡುತ್ತಿದೆ.  ಹಾಗಾಗಿ ಇದು ಕಾಂಗ್ರೆಸ್ ಸೋಲು, I.N.D.I.A ಮೈತ್ರಿಕೂಟದ ಸೋಲಲ್ಲ ಎಂದು ಮಿತ್ರಪಕ್ಷಗಳ ವಾದವಾಗಿದೆ.  I.N.D.I.A ಮೈತ್ರಿಕೂಟಕ್ಕೆ ಕಾಂಗ್ರೆಸ್ ನಾಯಕತ್ವ ಬೇಕಿಲ್ಲ ಎಂಬ ಪ್ರಬಲವಾದ ಆಗ್ರಹವೂ ಕೇಳಿಬಂದಿದೆ. ಮೋದಿ ಎದುರಿಸಲು ನಿತೀಶ್ ಕುಮಾರ್ ನಾಯಕತ್ವ ವಹಿಸಲಿ ಎಂದು ಜೆಡಿಯು ಹೇಳಿದರೆ, I.N.D.I.A ಮೈತ್ರಿಕೂಟಕ್ಕೆ ಟಿಎಂಸಿ ನಾಯಕತ್ವ ಬೇಕು ಎನ್ನುತ್ತಿದೆ ಟಿಎಂಸಿ! ಕಾಂಗ್ರೆಸ್ ಹೊರತಾದ ಪ್ರಧಾನಿ ಅಭ್ಯರ್ಥಿ ಬೇಕು ಎಂದು ಉದ್ಧವ್ ಠಾಕ್ರೆಯ ಶಿವಸೇನೆ ಬಣದ ವಾದವಾಗಿದೆ. 

ತೆಲಂಗಾಣ ಸಿಎಂ ಪದಗ್ರಹಣದಲ್ಲಿ ಬಯಲಾಯ್ತಾ I.N.D.I.A ಬಂಡಾಯ?

ಇನ್ನೊಂದು ಕಡೆ ತೆಲಂಗಾಣ ಸಿಎಂ ಆಗಿ ರೇವಂತ್‌ ರೆಡ್ಡಿ ಅದ್ದೂರಿ ಸಮಾರಂಭ ಆಯೋಜಿಸಿ ಪ್ರಮಾಣವಚನ ಸ್ವೀಕರಿಸಿದ್ದಾರೆ.  ಪದಗ್ರಹಣಕ್ಕೆ ಆಹ್ವಾನವಿದ್ದರೂ ಮಿತ್ರರು ಗೈರಾಗಿದ್ದು I.N.D.I.A ಮೈತ್ರಿಕೂಟದಲ್ಲಿನ ಬಂಡಾಯದ ಬಗ್ಗೆ ಸುಳಿವು ನೀಡಿದೆ. ಪಂಚರಾಜ್ಯ ಸೋಲಿನಿಂದ ಕಾಂಗ್ರೆಸ್ ವಿರುದ್ಧ ಮುನಿಸಿಕೊಂಡಿರುವ ಮಿತ್ರಪಕ್ಷದ ನಾಯಕರು ತೆಲಂಗಾಣ ಸಿಎಂ ಪದಗ್ರಹಣಕ್ಕೆ ಹಾಜರಾಗದೇ ಅಸಮಾಧಾನ ಹೊರಹಾಕಿದ್ದಾರೆ. ಇಂಡಿಯಾ ಕೂಟದ ನಾಯಕರಿಗೆ  ರೇವಂತ್ ರೆಡ್ಡಿ ಆಹ್ವಾನ ನೀಡಿದ್ದರೂ ಯಾವೊಬ್ಬ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿಲ್ಲ.ಮಮತಾ, ನಿತೀಶ್, ಲಾಲು, ಅಖಿಲೇಶ್, ಉದ್ಧವ್ ಠಾಕ್ರೆ, ಶರದ್ ಪವಾರ್  ಗೈರಾಗಿದ್ದರು.

ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನಿಂದ ಇಂಡಿಯಾ ಕೂಟದಲ್ಲಿ ಒಡಕು

ಪ್ರತಿಪಕ್ಷಗಳ ಒಗ್ಗಟ್ಟು ಕಾಂಗ್ರೆಸ್​ಗೆ ಅಸಾಧ್ಯ ಯಾಕೆ?

ಕಾರಣ-1: ರಾಹುಲ್ ಗಾಂಧಿ ನಾಯಕತ್ವವನ್ನ ಮಿತ್ರಪಕ್ಷಗಳ ನಾಯಕರು ಒಪ್ಪುತ್ತಿಲ್ಲ
ಕಾರಣ-2: ಮೈತ್ರಿಪಕ್ಷಗಳ ಬಹುತೇಕ ನಾಯಕರಿಗೆ ಪ್ರಧಾನಿಯಾಗೋ ಮಹತ್ವಾಕಾಂಕ್ಷೆ
ಕಾರಣ-3: ಹಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು v/s ಕಾಂಗ್ರೆಸ್​ ಮಧ್ಯೆ ಫೈಟ್
ಕಾರಣ-4: ಕಾಂಗ್ರೆಸ್ ವಿರುದ್ಧ ಹೋರಾಡಿ ಅಸ್ತಿತ್ವ ಉಳಿಸಿಕೊಂಡಿವೆ ಹಲವು ಪಕ್ಷಗಳು
ಕಾರಣ-5: ಕಾಂಗ್ರೆಸ್​ ಜತೆ ಮೈತ್ರಿ ಮಾಡಿಕೊಂಡರೆ ಎಸ್​ಪಿ, ಆರ್​ಜೆಡಿ, ಟಿಎಂಸಿಗೆ ಲಾಭವಾಗಲ್ಲ

I.N.D.I.A ಮೈತ್ರಿಕೂಟ ಸಭೆಗಳ ಹಿನ್ನೋಟ:

I.N.D.I.A ಮೈತ್ರಿಕೂಟದ ಮೊದಲ ಸಭೆ 23ನೇ ಜೂನ್‌ರಂದು  ಪಾಟ್ನಾದಲ್ಲಿ ನಡೆದಿತ್ತು. ಸಭೆಯಲ್ಲಿ 16 ಪಕ್ಷಗಳು ಭಾಗಿಯಾಗಿದ್ದು, ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟಕ್ಕೆ ಸಹಮತ ನೀಡಿದ್ದವು.

2ನೇ ಸಭೆ ಜುಲೈ 17,18ರಂದು ಬೆಂಗಳೂರಿನಲ್ಲಿ ನಡೆದಿತ್ತು. ಈ ಸಭೆಯಲ್ಲಿ 26 ಪಕ್ಷಗಳು ಭಾಗಿಯಾಗಿದ್ದು,  ಮೈತ್ರಿಕೂಟಕ್ಕೆ I.N.D.I.A ಹೆಸರು ಘೋಷಣೆ ಮಾಡಲಾಗಿತ್ತು

3ನೇ ಸಭೆ ಆಗಸ್ಟ್ 31 ಹಾಗೂ ಸೆ.1ರಂದು  ಮುಂಬೈಯಲ್ಲಿ ನಡೆದಿದ್ದು 28 ಪಕ್ಷಗಳು ಭಾಗಿಯಾಗಿದ್ದವು. ಈ ಸಭೆಯಲ್ಲಿ 14 ನಾಯಕರ ಸಮನ್ವಯ ಸಮಿತಿ ರಚನೆ ಮಾಡಲಾಗಿತ್ತು.

ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ವಿಜಯಯಾತ್ರೆ

ಕಳೆದ ಪಂಚರಾಜ್ಯ ಚುನಾವಣೆಯಲ್ಲಿ ಉತ್ತರ ಭಾರತದ 3 ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದೆ. ರಾಜಸ್ಥಾನ ಹಾಗೂ ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಕೈಯಿಂದ ಅಧಿಕಾರವನ್ನು ವಶಪಡಿಸಿಕೊಂಡಿದೆ. ಮಧ್ಯಪ್ರದೇಶದಲ್ಲಿ ಕಳೆದ ಬಾರಿಗಿಂತ 54 ಹೆಚ್ಚು ಸೀಟುಗಳನ್ನು ಪಡೆದುಕೊಂಡಿರುವ ಬಿಜೆಪಿ ಒಟ್ಟು 163 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಆ ಮೂಲಕ ಮಧ್ಯಪ್ರದೇಶ ತನ್ನ ಭದ್ರಕೋಟೆ ಎಂದು ಸಾಬೀತುಪಡಿಸಿದೆ. ಅದೇ ಕಾಂಗ್ರೆಸ್‌ ಕಳೆದ ಬಾರಿಗಿಂತ 48 ಸೀಟುಗಳನ್ನು ಕಳೆದುಕೊಂಡು 66ಕ್ಕೆ ಕುಸಿದಿದೆ. 

ರಾಜಸ್ಥಾನದಲ್ಲೂ ಬಿಜೆಪಿಯು ಕಳೆದ ಬಾರಿಗಿಂತ 42 ಹೆಚ್ಚುವರಿ ಸೀಟುಗಳನ್ನು ಗೆಲ್ಲುವ ಮೂಲಕ 115 ಬಲಾಬಲವನ್ನು ಹೊಂದಿದೆ. ಕಳೆದ ಬಾರಿಗಿಂತ  31 ಸೀಟುಗಳನ್ನು ಕಳೆದುಕೊಳ್ಳುವ ಮೂಲಕ ಕಾಂಗ್ರೆಸ್‌ 69ಕ್ಕೆ ತೃಪ್ತಿಪಟ್ಟುಕೊಳ್ಳುವಂತಾಗಿದೆ.  

ಛತ್ತೀಸ್‌ಗಢದಲ್ಲೂ  ಬಿಜೆಪಿಯು ವಿಜಯಯಾತ್ರೆಯನ್ನು ಮುಂದುವರಿಸಿದ್ದು ಕಳೆದಬಾರಿಗಿಂತ 39 ಹೆಚ್ಚು ಸೀಟು ಪಡೆದು ಅಧಿಕಾರ ಗಿಟ್ಟಿಸಿಕೊಂಡಿದೆ. ಒಟ್ಟು 54 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.   ಕಾಂಗ್ರೆಸ್‌ ಕಳೆದಬಾರಿಗಿಂತ 32  ಸೀಟುಗಳನ್ನು ಕಮ್ಮಿಪಡೆದು, 35ಕ್ಕೆ ಕುಸಿದಿದೆ.
  
 
ಪಂಚರಾಜ್ಯ ಲೋಕಸಭೆ 2019ರ ಬಲಾಬಲ ಹೇಗಿದೆ?
ಪಂಚರಾಜ್ಯ ಲೋಕಸಭೆ 2019ರ ಬಲಾಬಲ ನೋಡಿದರೆ, ಒಟ್ಟು  83 ಸ್ಥಾನಗಳಿವೆ.  ಅವುಗಳಲ್ಲಿ ಬಿಜೆಪಿಯು 66 ಸ್ಥಾನ ಪಡೆದಿದ್ದರೆ,  ಕಾಂಗ್ರೆಸ್    06, ಬಿಆರ್​ಎಸ್ 09 ಹಾಗೂ ಇತರರು 02 ಸ್ಥಾನ ಪಡೆದಿದ್ದಾರೆ. 


ಲೋಕಸಭಾ ಚುನಾವಣೆ-2024ರ ಸಮೀಕ್ಷೆ ಏನ್ ಹೇಳ್ತಿದೆ?

ರಾಜ್ಯ ಬಿಜೆಪಿ ಕಾಂಗ್ರೆಸ್‌
ರಾಜಸ್ಥಾನ 25 00
ಮಧ್ಯಪ್ರದೇಶ 28 01
ಛತ್ತೀಸ್‌ಗಢ 09  01
ತೆಲಂಗಾಣ 04 03

ಲೋಕಸಭಾ ಕದನದಲ್ಲಿ 186 ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರಾ ನೇರ ಫೈಟ್ ಇದೆ. 
      

ಪಕ್ಷಗಳು 2019 2014
ಬಿಜೆಪಿ 171 162
ಕಾಂಗ್ರೆಸ್ 15 24

 

click me!