ಲೋಕಸಭಾ ಚುನಾವಣೆ 2024: ಕಾಶ್ಮೀರ ಚುನಾವಣೆಗೆ ಅಭಿವೃದ್ಧಿ ಕೆಲಸ, 370ನೇ ವಿಧಿಯೇ ಮಂತ್ರ..!

By Kannadaprabha NewsFirst Published Apr 17, 2024, 9:34 AM IST
Highlights

ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರ, ರಾಜ್ಯದಲ್ಲಿ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಕೈಗೊಂಡಿರುವ ಕಾರಣ ಈ ಚುನಾವಣೆ ವಿಭಿನ್ನ ಕಾರಣಕ್ಕೆ ಗಮನ ಸೆಳೆದಿದೆ.

ನವದೆಹಲಿ(ಏ.17):  ಭಾರತದ ಕಿರೀಟದಂತಿರುವ ಜಮ್ಮು ಕಾಶ್ಮೀರದಲ್ಲಿ ಲೋಕಸಭಾ ಚುನಾವಣೆ ಈ ಬಾರಿ ವಿಶೇಷ ಕಾರಣಕ್ಕೆ ಗಮನ ಸೆಳೆದಿದೆ. ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ರದ್ದಾದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ಜೊತೆಗೆ ಈ ಮೊದಲು ಲಡಾಖ್‌ ಕೂಡಾ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿತ್ತು. ಆದರೆ ಇದೀಗ ಲಡಾಖ್‌ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶವಾಗಿ ಗುರುತಿಸಿಕೊಂಡಿದೆ.ಅಲ್ಲದೆ ಕಳೆದ 5 ವರ್ಷಗಳಲ್ಲಿ ಕೇಂದ್ರ ಸರ್ಕಾರ, ರಾಜ್ಯದಲ್ಲಿ ಹಿಂದೆಂದೂ ಕಂಡುಕೇಳರಿಯದ ರೀತಿಯಲ್ಲಿ ಅಭಿವೃದ್ಧಿ ಕೈಗೊಂಡಿರುವ ಕಾರಣ ಈ ಚುನಾವಣೆ ವಿಭಿನ್ನ ಕಾರಣಕ್ಕೆ ಗಮನ ಸೆಳೆದಿದೆ.

ಕಣ ಹೇಗಿದೆ?:

ಈ ಹಿಂದೆ 6 ಕ್ಷೇತ್ರ ಹೊಂದಿದ್ದ ರಾಜ್ಯ ಇದೀಗ ಲಡಾಖ್‌ ಬೇರ್ಪಟ್ಟಿರುವ ಕಾರಣ 5 ಕ್ಷೇತ್ರಗಳಿಗೆ ಸೀಮಿತಗೊಂಡಿದೆ. ಬಿಜೆಪಿ ಜಮ್ಮು ಭಾಗದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರೆ, ಪಿಡಿಪಿ ಎಲ್ಲ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿದೆ. ನ್ಯಾಷನಲ್‌ ಕಾನ್ಫರೆನ್ಸ್‌ ಕಾಶ್ಮೀರದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದರೆ ಕಾಂಗ್ರೆಸ್‌ಗೆ ಜಮ್ಮು ಭಾಗದ ಎರಡು ಕ್ಷೇತ್ರ ಬಿಟ್ಟುಕೊಟ್ಟಿದೆ. ಈ ನಡುವೆ ಮಾಜಿ ಕಾಂಗ್ರೆಸ್‌ ನಾಯಕ ಗುಲಾಂ ನಬಿ ಆಜಾದ್‌ ತಮ್ಮದೇ ಸ್ವತಂತ್ರ ಪಕ್ಷ ಸ್ಥಾಪಿಸಿ ಅನಂತನಾಗ್‌ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ.

LOK SABHA ELECTIONS 2024: ಮೊದಲ ಹಂತದ ಚುನಾವಣೆ: ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಹೇಗಿದೆ ಬಿಜೆಪಿ ವಾತಾವರಣ?

ಬಿಜೆಪಿಗೆ ರಾಜ್ಯದಲ್ಲಿ ಹಾಲಿ ಮೂರು ಸಂಸದರಿದ್ದಾರೆ (ಲಡಾಖ್‌ ಸೇರಿ). ಅವರೆಲ್ಲರೂ ಜಮ್ಮು ಭಾಗದಿಂದ ಗೆಲುವು ಸಾಧಿಸಿದವರೇ ಆಗಿರುವ ಹಿನ್ನೆಲೆಯಲ್ಲಿ ಬಿಜೆಪಿ ತನ್ನ ಹಾಲಿ ಇಬ್ಬರು ಎಂಪಿಗಳಿಗೆ ಮತ್ತೊಮ್ಮೆ ಟಿಕೆಟ್‌ ಪ್ರಕಟಿಸಿದೆ. ಆದರೆ ಕಾಶ್ಮೀರ ಭಾಗದ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸುವಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದು, ಮೂಲಗಳ ಪ್ರಕಾರ ಬಿಜೆಪಿ ಕಾಶ್ಮೀರದಲ್ಲಿ ಸ್ಪರ್ಧೆ ಮಾಡದೆ ತನ್ನ ಮಿತ್ರಪಕ್ಷಗಳಿಗೆ ಬಿಟ್ಟುಕೊಡಲಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಜಮ್ಮು ಭಾಗದಲ್ಲಿ ಕಾಂಗ್ರೆಸ್‌ ಹಾಗೂ ಪಿಡಿಪಿಯೊಂದಿಗೆ ಮಾತ್ರ ಸ್ಪರ್ಧಿಸಲಿದ್ದು, ನ್ಯಾಷನಲ್‌ ಕಾನ್ಫರೆನ್ಸ್‌ ಜೊತೆಗೆ ಕಣಕ್ಕಿಳಿಯುವ ಸಾಧ್ಯತೆ ಕ್ಷೀಣವಾಗಿದೆ.

ಇಂಡಿಯಾ ಕೂಟದ ಸ್ಥಿತಿಗತಿ:

ಮೊದಲಿಗೆ ಇಂಡಿಯಾ ಮೈತ್ರಿಕೂಟದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ, ಓಮರ್‌ ಅಬ್ದುಲ್ಲಾ ನೇತೃತ್ವದ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳು ಇದ್ದವು. ಆದರೆ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷವು ಕಾಶ್ಮೀರ ಭಾಗದ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವುದಾಗಿ ಪ್ರಕಟಿಸಿ ಅಭ್ಯರ್ಥಿಗಳನ್ನು ಘೋಷಿಸಿತು. ಆಗ ಕೆಂಡಾಮಂಡಲರಾದ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ತಾವು ಎಲ್ಲ 5 ಕ್ಷೇತ್ರಗಳಲ್ಲಿ ಸ್ವತಂತ್ರ ಸ್ಪರ್ಧೆ ಮಾಡುವುದಾಗಿ ಘೋಷಿಸಿದರು. ಈ ಹಿನ್ನೆಲೆಯಲ್ಲಿ ನ್ಯಾಷನಲ್‌ ಕಾನ್ಫರೆನ್ಸ್‌ ಮತ್ತು ಪಿಡಿಪಿ ತಾಂತ್ರಿಕವಾಗಿ ಮೈತ್ರಿ ಮಾಡಿಕೊಂಡಿದ್ದರೂ ಕಾಶ್ಮೀರದ ಮೂರು ಕ್ಷೇತ್ರಗಳಲ್ಲಿ ಪ್ರತ್ಯೇಕ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಇನ್ನು ಜಮ್ಮು ಭಾಗದ ಎರಡು ಕ್ಷೇತ್ರಗಳನ್ನು ನ್ಯಾಷನಲ್‌ ಕಾನ್ಫರೆನ್ಸ್‌ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ.

ಗುಲಾಂ ನಬಿ ಸ್ವತಂತ್ರ ಸ್ಪರ್ಧೆ:

ಕಾಂಗ್ರೆಸ್‌ ತೆಗೆದುಕೊಳ್ಳುತ್ತಿರುವ ನಿರ್ಧಾರಗಳಿಗೆ ಬೇಸತ್ತು ಪಕ್ಷ ತೊರೆದಿರುವ ಹಿರಿಯ ನಾಯಕ ಹಾಗೂ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗುಲಾಂ ನಬಿ ಆಜಾದ್‌ ತಮ್ಮದೇ ಸ್ವಂತ ಪಕ್ಷ ರಚಿಸಿಕೊಂಡಿದ್ದು, ಅನಂತನಾಗ್‌ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿದ್ದಾರೆ.

ಸ್ಪರ್ಧೆ ಹೇಗೆ?

ಕಣಿವೆ ರಾಜ್ಯದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಉಗ್ರರ ಉಪಟಳ ನಿಂತು ಅಭಿವೃದ್ಧಿಯ ಪರ್ವ ಪ್ರಾರಂಭವಾಗಿದೆ. ಇದಕ್ಕೆ ಉದಾಹರಣೆ ಎಂಬಂತೆ ಮೊದಲ ಹಂತದ ಹಿರಿಯ ನಾಗರಿಕರ ಗೃಹ ಮತದಾನದಲ್ಲಿ ನೊಂದಾಯಿಸಿಕೊಂಡವರ ಪೈಕಿ ಶೇ.92ರಷ್ಟು ಮಂದಿ ಮತ ಹಾಕಿರುವುದು ಅಲ್ಲಿನ ಮತದಾರರ ಉತ್ಸುಕತೆಯನ್ನು ತೋರಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತದಾನದ ಪ್ರಮಾಣ ಹೆಚ್ಚುವ ಸಾಧ್ಯತೆ ದಟ್ಟವಾಗಿದ್ದು, ಯಾರಿಗೆ ವರವಾಗಿ ಪರಿಣಮಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ. ಅಲ್ಲದೆ ರಾಜ್ಯದಲ್ಲಿ ಪ್ರತಿಯೊಂದು ಕ್ಷೇತ್ರದ ಮತದಾನವೂ ಪ್ರತ್ಯೇಕ ದಿನವನ್ನು ನಿಗದಿಪಡಿಸಲಾಗಿದ್ದು, ಪಕ್ಷಗಳಿಗೆ ಪ್ರಚಾರ ಕಾರ್ಯ ಕೈಗೊಳ್ಳಲು ಹೆಚ್ಚು ಅನುಕೂಲ ಮಾಡಿಕೊಟ್ಟಿರುವುದೂ ಮತದಾನ ಹೆಚ್ಚಾಗಲು ಪರೋಕ್ಷವಾಗಿ ಸಹಕಾರಿಯಾಗಬಹುದು.

ಲೋಕಸಭಾ ಚುನಾವಣೆ 2024: ಸಂವಿಧಾನ ವಿರೋಧಿಗಳಿಗೆ ಈ ಬಾರಿ ಪಾಠ, ಮೋದಿ

ರಾಜ್ಯ: ಜಮ್ಮು ಕಾಶ್ಮೀರ

ಕ್ಷೇತ್ರಗಳು: 5
ಹಂತಗಳು: 5

ಪ್ರಮುಖ ಕ್ಷೇತ್ರಗಳು:

ಜಮ್ಮು, ಶ್ರೀನಗರ, ಅನಂತನಾಗ್‌, ಉಧಾಂಪುರ, ಬಾರಾಮುಲ್ಲ

ಪ್ರಮುಖ ಅಭ್ಯರ್ಥಿಗಳು:

ಓಮರ್‌ ಅಬ್ದುಲ್ಲ (ಎನ್‌ಸಿ), ಮೆಹಬೂಬಾ ಮುಫ್ತಿ (ಪಿಡಿಪಿ), ಜಿತೇಂದ್ರ ಸಿಂಗ್‌ (ಬಿಜೆಪಿ), ಗುಲಾಂ ನಬಿ ಆಜಾದ್‌ (ಡಿಪಿಎಪಿ), ರಮಣ್‌ ಭಲ್ಲಾ (ಕಾಂಗ್ರೆಸ್‌)

2019ರ ಫಲಿತಾಂಶ: ಪಕ್ಷ ಕ್ಷೇತ್ರ ಶೇಕಡಾ

ಬಿಜೆಪಿ 3 46.99
ಕಾಂಗ್ರೆಸ್‌ 0 28.38
ಎನ್‌ಸಿ 3 7.87

click me!