ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಸದೃಢವಾಗಿ ಬೆಳೆಯಲು ಬಿಜೆಪಿಯೊಂದಿಗೆ ಜೆಡಿಎಸ್ ಜತೆಗೂಡುವುದು ಅನಿವಾರ್ಯವಾಗಿತ್ತು. ಈ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ರಾಮನಗರ ಜಿಲ್ಲೆಯ ಜನರು ನನ್ನನ್ನು ಕ್ಷಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಚನ್ನಪಟ್ಟಣ (ಏ.03): ರಾಜ್ಯದ ಅಭಿವೃದ್ಧಿ ಹಾಗೂ ಪಕ್ಷ ಸದೃಢವಾಗಿ ಬೆಳೆಯಲು ಬಿಜೆಪಿಯೊಂದಿಗೆ ಜೆಡಿಎಸ್ ಜತೆಗೂಡುವುದು ಅನಿವಾರ್ಯವಾಗಿತ್ತು. ಈ ಮೈತ್ರಿ ಮಾಡಿಕೊಂಡಿದ್ದಕ್ಕಾಗಿ ರಾಮನಗರ ಜಿಲ್ಲೆಯ ಜನರು ನನ್ನನ್ನು ಕ್ಷಮಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ನಗರದ ಗಾಂಧಿ ಭವನ ವೃತ್ತದಲ್ಲಿ ಬಿಜೆಪಿ - ಜೆಡಿಎಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ - ಜೆಡಿಎಸ್ ದೇಹದ ಎರಡು ಕಣ್ಣುಗಳಿದ್ದಂತೆ. ಜೆಡಿಎಸ್ ಪಕ್ಷ ರಾಜ್ಯದಲ್ಲಿ ಮತ್ತೆ ಸದೃಢವಾಗಿ ಬೆಳೆಯಲು ಬಿಜೆಪಿಯೊಂದಿಗೆ ಜತೆಗೂಡುವುದು ಅನಿವಾರ್ಯವಾಗಿದೆ.
ಅಲ್ಲದೆ, ಎರಡು ಪಕ್ಷಗಳು ಒಗ್ಗೂಡಿ ಕೆಲಸ ಮಾಡುವುದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯ ಎಂಬ ಕಾರಣಕ್ಕಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ ಎಂದರು. ವೈಯಕ್ತಿಕ ಸ್ವಾರ್ಥಕ್ಕಾಗಿ ಬಿಜೆಪಿ - ಜೆಡಿಎಸ್ ಮೈತ್ರಿ ಸಾಧಿಸಿಲ್ಲ. ಈ ಮೈತ್ರಿ ಮೂಲಕ ರಾಮನಗರ ಜಿಲ್ಲೆ ಮಾತ್ರವಲ್ಲದೆ ನಾಡಿನಲ್ಲಿ ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಸಾಕಾರಗೊಳ್ಳಲಿವೆ. ಅಲ್ಲದೆ, ಹಲವಾರು ಸಮಸ್ಯೆಗಳಿಗೂ ಪರಿಹಾರ ಸಿಗಲಿದೆ ಎಂದು ಹೇಳಿದರು. ಬಿಜೆಪಿ ಜತೆ ಹೋಗಿ ಜೆಡಿಎಸ್ ಸತ್ತು ಹೋಗಿದೆ ಅಂತ ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಜೆಡಿಎಸ್ ಸತ್ತಿದಿಯೋ ಬದುಕಿದಿಯೋ ಎಂಬುದಕ್ಕೆ ಇಲ್ಲಿ ಸೇರಿರುವ ಜನರೇ ಸಂದೇಶ ರವಾನಿಸಿದ್ದಾರೆ.
ಮೋದಿಯವರ ನಾನೂರು ಸಂಸದರಲ್ಲಿ ನಾನೂ ಒಬ್ಬ: ಡಾ.ಸಿ.ಎನ್.ಮಂಜುನಾಥ್
ರಾಮನಗರವನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡುವ ಮೂಲಕ ಮಾದರಿ ಜಿಲ್ಲೆಯನ್ನಾಗಿ ಮಾಡುವ ಸವಾಲನ್ನು ನಾವು ಸ್ವೀಕಾರ ಮಾಡಿದ್ದೇವೆ ಎಂದು ತಿಳಿಸಿದರು. ಈ ಚುನಾವಣೆ ಧರ್ಮಯುದ್ಧ ಇದ್ದಂತೆ. ಅದರಲ್ಲೂ ವಿಶೇಷವಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ನಡೆಯುತ್ತಿರುವ ರಾಜಕಾರಣಕ್ಕೆ ಉತ್ತರ ನೀಡುವ ಉದ್ದೇಶದಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಬಿಜೆಪಿ ಅಭ್ಯರ್ಥಿ ತಮ್ಮ ಆಯ್ಕೆಯೆಂದು ಸಲಹೆ ನೀಡಿದ್ದರು. ಅದರಂತೆ ಬಿಜೆಪಿ ಅಭ್ಯರ್ಥಿಯನ್ನಾಗಿ ಡಾ.ಸಿ.ಎನ್ .ಮಂಜುನಾಥ್ ಹೆಸರನ್ನು ಅವರೇ ಘೋಷಣೆ ಮಾಡಿದ್ದಾರೆ. ಅದರ ಅವಶ್ಯಕತೆ ನಮಗಿದೆ ಅಂತಲೂ ಹೇಳಿದ್ದರು ಎಂದು ತಿಳಿಸಿದರು.
ದೇಶಕ್ಕೆ ಮೋದಿಯವರ ಅನಿವಾರ್ಯ , ಅವಶ್ಯಕತೆ ಇದೆ. ದೇಶದಲ್ಲಿ 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಕರ್ನಾಕಟದ 28ಕ್ಕೆ 28ರಲ್ಲಿ ಮೈತ್ರಿ ಅಭ್ಯರ್ಥಿ ಗೆಲ್ಲುವ ಮೂಲಕ ಐತಿಹಾಸಿಕ ಫಲಿತಾಂಶ ನೀಡಬೇಕಿದೆ. ಇದಕ್ಕಾಗಿ ಅಮಿತ್ ಶಾ ಕರ್ನಾಟಕದ ಪ್ರಚಾರವನ್ನು ಗಂಡುಮೆಟ್ಟಿನ ನಾಡಾದ ಚನ್ನಪಟ್ಟಣದಿಂದ ಚಾಲನೆ ನೀಡಿದ್ದಾರೆ ಎಂದು ಹೇಳಿದರು.
ದಲಿತರು, ಹಿಂದುಳಿದವರಿಗೆ ಕಾಂಗ್ರೆಸ್‌ನಿಂದ ಅನ್ಯಾಯ: ಡಾ.ಕೆ.ಸುಧಾಕರ್
ಕಳೆದ ಎರಡು ಚುನಾವಣೆಗಳಲ್ಲಿ ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿ ನಿಮ್ಮ ಪ್ರತಿನಿಧಿಯಾಗಿ ಕೆಲಸ ಮಾಡಲು ಜವಾಬ್ದಾರಿ ನೀಡಿದ್ದೀರಿ. ನನ್ನ ದೇಹ ರಾಜ್ಯದ 28 ಕ್ಷೇತ್ರಗಳಲ್ಲಿ ಪ್ರವಾಸ ಮಾಡಬೇಕಿದೆ. ನನ್ನ ಹೃದಯ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ರಾಮನಗರ ಜಿಲ್ಲೆಯಲ್ಲಿಯೇ ಇರಲಿದೆ. ನನಗೆ ರಾಜಕೀಯವಾಗಿ ಜನ್ಮ ನೀಡಿದವರು ರಾಮನಗರ ಜಿಲ್ಲೆಯ ಜನರು. ನನ್ನ ಹೃದಯ ಸದಾ ಇಲ್ಲೆ ಇರಲಿದೆ. ರಾಮನಗರ ಜಿಲ್ಲೆ ಬಿಟ್ಟು ಹೋಗಲ್ಲ. ಇದು ನನ್ನ ಪೂರ್ವಜನ್ಮದ ಪುಣ್ಯ. ಹಾಸನ ಜಿಲ್ಲೆಯಲ್ಲಿ ಜನ್ಮ ತಾಳಿದರು. ರಾಮನಗರ ಜಿಲ್ಲೆ ಜನರು ರಾಜಕೀಯ ಜನ್ಮ ನೀಡಿದ್ದನ್ನು ಕೊನೆಯ ಉಸಿರು ಇರುವವರೆಗೂ ಮರೆಯಲ್ಲ.
-ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ.