ದೇವನಹಳ್ಳಿ-ವಿಜಯಪುರ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ: ಸಚಿವ ಮುನಿಯಪ್ಪ

By Kannadaprabha NewsFirst Published Jun 2, 2023, 8:43 PM IST
Highlights

ದೇವನಹಳ್ಳಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಅಗತ್ಯವಿರುವ ಯೋಜನೆಯನ್ನು ರೂಪಿಸಲಾಗುತ್ತಿದ್ದು, ದೇವನಹಳ್ಳಿ ಮತ್ತು ವಿಜಯಪುರ ಎರಡೂ ಪಟ್ಟಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. 

ವಿಜಯಪುರ (ಜೂ.02): ದೇವನಹಳ್ಳಿ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಅಗತ್ಯವಿರುವ ಯೋಜನೆಯನ್ನು ರೂಪಿಸಲಾಗುತ್ತಿದ್ದು, ದೇವನಹಳ್ಳಿ ಮತ್ತು ವಿಜಯಪುರ ಎರಡೂ ಪಟ್ಟಣಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ. ಅಭಿವೃದ್ಧಿಗೆ ಎಲ್ಲರ ಸಹಕಾರವೂ ಅಗತ್ಯ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಅವರು ಹೇಳಿದರು.

ಪಟ್ಟಣದ ಕಾಂಗ್ರೆಸ್‌ ಮುಖಂಡರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಭೇಟಿಯಾಗಿ ವಿಜಯಪುರ ಪಟ್ಟಣ ಅಭಿವೃದ್ಧಿಯಲ್ಲಿ ಸಾಕಷ್ಟುಹಿಂದುಳಿದಿದ್ದು ಅಭಿವೃದ್ಧಿಯತ್ತ ಕೊಂಡೊಯ್ಯಲು ವಿಶೇಷ ಅನುದಾನ ಬಿಡುಗಡೆ ಮಾಡಿಸಬೇಕೆಂದು ಸಲ್ಲಿಸಿದ ಮನವಿ ಸ್ವೀಕರಿಸಿ ಮಾತನಾಡಿದ ಸಚಿವರು, ರಾಜ್ಯ ರಾಜಕಾರಣಕ್ಕೆ ಮರಳಿದ ನನಗೆ ಮೊದಲ ಬಾರಿಗೆ ಶಾಸಕ, ಸಚಿವ ಸ್ಥಾನ ದೊರೆಯಲು ದೇವನಹಳ್ಳಿ ಜನರೇ ಕಾರಣ. ದೇವನಹಳ್ಳಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ನನ್ನ ಮೊದಲ ಆದ್ಯತೆ. ಅದರಲ್ಲಿ ಯಾರಿಗೂ ಸಂಶಯ ಬೇಡ. ಖಂಡಿತ ನಿಮ್ಮೆಲ್ಲರ ಸಹಕಾರದೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದು ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸವಾಲುಗಳಿವೆ: ಸಚಿವ ಮಧು ಬಂಗಾರಪ್ಪ

ಹಂತಹಂತವಾಗಿ ಕ್ಷೇತ್ರಾದ್ಯಂತ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನೆರವೇರಿಸುವುದು ನನ್ನ ಧ್ಯೇಯ. ಯಾವುದೇ ಪಕ್ಷಬೇಧವಿಲ್ಲದೆ, ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿಗೆ ಮುಂದಾಗೋಣ. ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿ ಮಾಡಲಾಗುವುದು. ಸರ್ಕಾರ ಪ್ರಣಾಳಿಕೆಯಲ್ಲಿ ನೀರಿರುವ ಎಲ್ಲಾ ಭರವಸೆಗಳನ್ನು ಈಡೇರಿಸುವುದೇ ಕಾಂಗ್ರೆಸ್‌ ಸರ್ಕಾರದ ಧ್ಯೇಯ ಎಂದು ಹೇಳಿದರು.

ಪುರಸಭೆ ಸದಸ್ಯ ಎಂ.ಸತೀಶ್‌ಕುಮಾರ್‌ ಮಾತನಾಡಿ, ಪಟ್ಟಣದಲ್ಲಿ ರಸ್ತೆಗಳು ತುಂಬಾ ಹದಗೆಟ್ಟು ಗುಂಡಿಗಳು ಬಿದ್ದಿವೆ. ಮಳೆಗಾಲ ಆರಂಭವಾಗಿದ್ದು, ವಾಹನ ಮತ್ತು ಜನಸಂಚಾರಕ್ಕೆ ತುಂಬಾ ಕಷ್ಟಕರವಾಗಿದೆ. ಅಲ್ಲದೆ, ಅತ್ಯಗತ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ವೈಜ್ಞಾನಿಕವಾಗಿ ಕಸವಿಲೇವಾರಿ ಘಟಕ ಸ್ಥಾಪನೆ ಮಾಡಲು ಜಾಗ ಗುರುತಿಸಲಾಗಿದೆ. ಯಂತ್ರೋಪಕರಣಗಳು ಅಳವಡಿಕೆ ಮಾಡಬೇಕಾಗಿದೆ. ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ನಿವೇಶನ ರಹಿತರಿಗೆ ನಿವೇಶನಗಳ ಹಂಚಿಕೆ ಮಾಡುವುದು ಸೇರಿದಂತೆ ದೇವನಹಳ್ಳಿಗಿಂತಲೂ ಹೆಚ್ಚು ತೆರಿಗೆಯನ್ನು ಸರ್ಕಾರಕ್ಕೆ ಪಾವತಿ ಮಾಡುತ್ತಿರುವ ವಿಜಯಪುರ ಪಟ್ಟಣಕ್ಕೆ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿಸಬೇಕು ಎಂದು ಮನವಿ ಮಾಡಿದರು.

ಪಕ್ಷಭೇದವಿಲ್ಲದೆ ಆದ್ಯತೆ ಮೇರೆಗೆ ಕೆಲಸ ಮಾಡಿ: ಶಾಸಕ ಧೀರಜ್‌ ಮುನಿರಾಜ್‌

ಪುರಸಭಾ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಸದಸ್ಯರು ಎಂ.ಸತೀಶ್‌ ಕುಮಾರ್‌, ಸದಸ್ಯರಾದ ನಂದಕುಮಾರ್‌, ಮಾಜಿ ಸದಸ್ಯರಾದ ತರಕಾರಿ ಮುನಿರಾಜು, ಮುನಿಚಿನ್ನಪ್ಪ, ಸಂಪತ್‌ ಕುಮಾರ್‌, ವೀರಣ್ಣ ಮುಖಂಡರಾದ ಮಹೇಶ್‌, ಪಿ.ಸಂಪತ್‌, ಬೇಕರಿ ಆನಂದಪ್ಪ, ಎಸ್‌.ಸಂಜಯ್‌, ಹನುಮಂತಪ್ಪ, ನವೀನ್‌, ಸೈಫುಲ್ಲಾ, ಮುನಿಕೃಷ್ಣಪ್ಪ, ಅಣ್ಣಮ್ಮ ಸುರೇಶ್‌, ಹರೀಶ್‌, ಜಬಿವುಲ್ಲಾ ಮುಂತಾದವರು ಹಾಜರಿದ್ದರು.

click me!