
ಬೆಂಗಳೂರು(ಡಿ.24): ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹಿರಿಯ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿ, ಹಾಲಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಸಂಘಟನೆ, ವಿವಿಧ ಕಾರ್ಯಕ್ರಮಗಳ ಆಯೋಜನೆಗಳ ಜತೆಗೆ ಚುನಾವಣೆಯನ್ನೂ ಎದುರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ದೊಡ್ಡದಿದೆ. ಶಿವಕುಮಾರ್ ಕೂಡ ಈಗಾಗಲೇ ತಾವು ಎರಡು ಜವಾಬ್ದಾರಿ ಹೊಂದಿರುವುದರಿಂದ ಹೊಸ ಅಧ್ಯಕ್ಷರ ನೇಮಕವಾಗಬೇಕೆಂದು ಹೇಳಿದ್ದಾರೆ ಎಂದರು. ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವಂತೆ ತಾವೇನೂ ಕೇಳುವುದಿಲ್ಲ. ಈ ಬಗ್ಗೆ ಹೈಕಮಾಂಡ್ ಕೇಳಿದರೆ ಅಭಿಪ್ರಾಯ ಹೇಳುತ್ತೇನೆ. ಬಹಿರಂಗವಾಗಿ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕಾಂಗ್ರೆಸ್‌ಗೆ ಪೂರ್ಣ ಪ್ರಮಾಣದ ರಾಜ್ಯಾಧ್ಯಕ್ಷರು ಬೇಕೇಬೇಕು: ಸಚಿವ ಸತೀಶ್ ಜಾರಕಿಹೊಳಿ
ಸಂಪುಟ ಪುನಾರಚನೆ ಸಿಎಂಗೆ ಬಿಟ್ಟಿದ್ದು:
ಸಚಿವ ಸಂಪುಟ ಪುನರಾಚನೆ, ಖಾತೆಗಳ ಬದಲಾವಣೆ ನಿರ್ಧಾರಗಳು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‌ಗೆ ಬಿಟ್ಟಿದ್ದು, ಈ ಬಗ್ಗೆ ನಾನು ಏನೂ ಹೇಳಲು ಆಗಲ್ಲ. ಬೃಹತ್ ನೀರಾವರಿ ಖಾತೆಯನ್ನು ಉತ್ತರ ಕರ್ನಾಟಕ ದವರಿಗೆ ನೀಡಬೇಕು ಎಂದು ಕೆಲವರು ಕೇಳಿರಬಹುದು. ಆ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕೆಲಸ ಬಹಳ ಇದೆ, ಹಾಗಾಗಿ ಕೇಳಿರಬಹುದು, ಅದರಲ್ಲಿ ತಪ್ಪಿಲ್ಲ. ಈ ಹಿಂದೆ ಬಸವರಾಜ ಬೊಮ್ಮಾಯಿ, ಎಚ್.ಕೆ. ಪಾಟೀಲ್ ನಂತರ ನಾನು ಬೃಹತ್ ನೀರಾವರಿ ಖಾತೆ ಹೊಂದಿದ್ದೆ. ಆದರೆ ಯಾವ ಸಚಿವರಿಗೆ ಯಾವ ಖಾತೆ ಕೊಡಬೇಕು, ಯಾರನ್ನು ಬದಲಾವಣೆ ಮಾಡಬೇಕು ಎಂಬುದು ಅಂತಿಮವಾಗಿ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಷಯ. ಯಾರೇ ಆಗಲಿ ತಮಗೆ ಸಿಕ್ಕ ಖಾತೆಯನ್ನು ಉತ್ತಮವಾಗಿ ಮಾಡಬೇಕು ಅಷ್ಟೇ ಎಂದು ಎಂ.ಬಿ.ಪಾಟೀಲ್ ಹೇಳಿದರು.
ನನಗೂ ಮುಖ್ಯಮಂತ್ರಿ, ಕೆಪಿಸಿಸಿ ರಾಜ್ಯಾಧ್ಯಕ್ಷನಾಗುವ ಆಸೆ ಇದೆ: ಸಚಿವ ಸತೀಶ್ ಜಾರಕಿಹೊಳಿ
ಹಾವೇರಿ(ಶಿಗ್ಗಾಂವಿ): ನನಗೂ ಮುಖ್ಯಮಂತ್ರಿ, ಕೆಪಿಸಿಸಿ ರಾಜ್ಯಾಧ್ಯಕ್ಷ ಆಗಬೇಕೆಂಬ ಆಸೆ ಇದೆ. ಎಲ್ಲರಿಗೂ ಆಸೆ ಸಹಜ, ರಾಜ್ಯಾಧ್ಯಕ್ಷರ ಬದಲಾವಣೆ, ಮುಖ್ಯಮಂತ್ರಿಗಳ ಬದಲಾವಣೆ ಎಲ್ಲವನ್ನೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದರು.
ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳಿಲ್ಲ, 2028ಕ್ಕೆ ಸಿಎಂ ಹುದ್ದೆ ಆಕಾಂಕ್ಷಿ ಅಂದಿದ್ದೇನಷ್ಟೆ: ಜಾರಕಿಹೊಳಿ
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಸ್ಥಾನ ನಾನು ಕೇಳಿಯೂ ಇಲ್ಲ, ಅಧ್ಯಕ್ಷ ಸ್ಥಾನದ ಬಗ್ಗೆ ನನಗೆ ಏನೂ ಹೇಳಿಲ್ಲ. ಈ ವಿಚಾರದಲ್ಲಿ ಯಾವ ಒತ್ತಡವೂ ನನಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿರುವ ಹಿರಿಯ ಸಚಿವ ಸತೀಶ್ ಜಾರಕಿಹೊಳಿ, 2028ಕ್ಕೆ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂದಷ್ಟೇ ಹೇಳಿದ್ದೇನೆ, ನಾನೇ ಮುಖ್ಯಮಂತ್ರಿಯಾಗುವುದಾಗಿ ಹೇಳಿಲ್ಲ ಎಂದು ಹೇಳಿದ್ದರು.
ಮಾಧ್ಯಮಗಳ ಮುಂದೆ ಮಾತನಾಡಿದಂತೆ ರಾಜಕೀಯ ನಡೆಯುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಡಿ.4 ರಂದು ಸುದ್ದಿಗಾರರ ಜೊತೆ ಮಾತನಾಡಿ, ಮುಖ್ಯಮಂತ್ರಿ ಸ್ಥಾನ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೀಡಿರುವ ಹೇಳಿಕೆ ಬಗ್ಗೆ ನನಗೆ ಮಾಹಿತಿ ಇಲ್ಲ. ಹೈಕಮಾಂಡ್ ಜೊತೆಗಿನ ಒಪ್ಪಂದದ ಬಗ್ಗೆ ಆರು ತಿಂಗಳ ಮೊದಲೇ ಹೇಳಿದ್ದೆ. ಒಪ್ಪಂದ ದೆಹಲಿಯಲ್ಲೇ ಆಗಿರಬಹುದು. ಅದರ ಬಗ್ಗೆ ನನಗೆ ಗೊತ್ತಿಲ್ಲ. ಅದು ಹೈಕಮಾಂಡ್ ಮಟ್ಟದಲ್ಲಿ ನಡೆದಿರಬಹುದು. ಅವರಿಗಷ್ಟೇ ಗೊತ್ತು, ನಮಗೆ ಗೊತ್ತಿಲ್ಲ ಎಂದಿದ್ದರು.
ಮಾಜಿ ಸಂಸದ ಡಿ.ಕೆ. ಸುರೇಶ್ ಅವರು ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೇಳಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿ ಎಂದು ಪಕ್ಷದ ಅಧ್ಯಕ್ಷರ ಬಾಯಲ್ಲಿ ಬಾರದ ಬಗ್ಗೆ ನೀವು ಅವರನ್ನೇ (ಡಿ. ಕೆ.ಶಿವಕುಮಾರ್) ಕೇಳಿ ಎಂದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.