ಔಟ್ ಆಫ್‌ ದಿ ವೇ ಯಾರೂ ಹೋಗಬೇಡಿ: ಅಧಿಕಾರಿಗಳಿಗೆ ಡಿಕೆಶಿ ಖಡಕ್‌ ವಾರ್ನಿಂಗ್‌!

By Kannadaprabha News  |  First Published Jul 23, 2023, 1:38 PM IST

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ಕೇಂದ್ರ ಸ್ಥಾನಗಳಲ್ಲಿ ಕಡ್ಡಾಯವಾಗಿ ವಾಸ್ತವ್ಯ ಹೂಡಬೇಕು ಎಂದು ಉಪ ಮುಖ್ಯ​ಮಂತ್ರಿ ಡಿ.ಕೆ.ಶಿವಕುಮಾರ್‌ ಸೋಮ​ವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು. 


ರಾಮನಗರ (ಜು.23): ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ಕೇಂದ್ರ ಸ್ಥಾನಗಳಲ್ಲಿ ಕಡ್ಡಾಯವಾಗಿ ವಾಸ್ತವ್ಯ ಹೂಡಬೇಕು ಎಂದು ಉಪ ಮುಖ್ಯ​ಮಂತ್ರಿ ಡಿ.ಕೆ.ಶಿವಕುಮಾರ್‌ ಸೋಮ​ವಾರ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ ಅಧ್ಯ​ಕ್ಷ​ತೆ​ಯಲ್ಲಿ ನಡೆದ ತ್ರೈಮಾಸಿಕ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿ.ಕೆ.​ಶಿ​ವ​ಕು​ಮಾರ್‌ ಎಷ್ಟುಮಂದಿ ಕೇಂದ್ರ ಸ್ಥಾನ​ದಲ್ಲಿ ಮನೆ ಮಾಡಿ​ದ್ದೀರಿ ಕೈ ಎತ್ತಿ ಎಂದಾಗ ಬೆರ​ಳ​ಣಿಕೆಯಷ್ಟು ಮಂದಿ ಮಾತ್ರ ಕೈ ಎತ್ತಿ​ದರು.

ನಿಮಗೆ ಒಂದು ತಿಂಗಳು ಕಾಲಾ​ವ​ಕಾಶ ಕೊಡು​ತ್ತೇನೆ. ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡಬೇಕು. ಕೇಂದ್ರ ಸ್ಥಾನ ಬಿಟ್ಟು ಹೋದರೆ ನಮಗೆ ಮಾಹಿತಿ ಕೊಡಬೇಕು ಎಂದು ಜಿಲ್ಲಾ​ಧಿ​ಕಾ​ರಿ​ಗ​ಳಿಗೆ ಸೂಚಿ​ಸಿ​ದರು. ಸರ್ಕಾರಿ ಕಚೇರಿಗಳಲ್ಲಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿಲ್ಲ. ಜನಸಾಮಾನ್ಯರ ಕೆಲಸ ಕಾರ್ಯಗಳು ಮಂದಗತಿಯಲ್ಲಿ ನಡೆಯುತ್ತಿವೆ. ಅಧಿಕಾರಿಗಳನ್ನು ಭೇಟಿ ಮಾಡಲು ಜನರು ಕಚೇರಿಗಳಿಗೆ ಅಲೆದಾಡುವ ಸನ್ನಿವೇಶ ಸೃಷ್ಟಿಯಾಗಿರುವ ಕುರಿತು ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಆದ್ದ​ರಿಂದ ಗ್ರಾಪಂನಿಂದ ಹಿಡಿದು ಜಿಲ್ಲಾ ಮಟ್ಟದ ಅಧಿ​ಕಾ​ರಿ​ಗ​ಳ​ವ​ರೆಗೆ ಎಲ್ಲರು ಕಡ್ಡಾಯವಾಗಿ ಕೇಂದ್ರ ಸ್ಥಾನಗಳಲ್ಲಿಯೇ ವಾಸ್ತವ್ಯ ಹೂಡಬೇಕು. 

Tap to resize

Latest Videos

ಜನ​ಸ್ನೇಹಿ ಆಡ​ಳಿತ ನೀಡಿ, ಇಲ್ಲ ನಿಮ್ಮ ದಾರಿ ನೋಡಿ​ಕೊಳ್ಳಿ: ಸಂಸದ ಡಿ.ಕೆ.​ಸು​ರೇಶ್‌

ಬಾಡಿಗೆ ಮನೆ ಮಾಡುತ್ತೀರೊ ಇಲ್ಲ ಬೇರೇನು ಮಾಡುತ್ತೀರೊ ನನಗೆ ಗೊತ್ತಿಲ್ಲ. ಕೇಂದ್ರ ಸ್ಥಾನದಲ್ಲಿ ಇಲ್ಲದೆ ಹೋದರೆ ಅಮಾನತು ಪಡಿಸುವುದಾಗಿ ಪರೋ​ಕ್ಷ​ವಾಗಿ ಎಚ್ಚರಿಕೆ ನೀಡಿದರು. ಸರ್ಕಾರಿ ಇಲಾಖೆ ಯಾವ ಅಧಿಕಾರಿ, ಎಲ್ಲಿ ಸಿಗುತ್ತಾರೆ, ಅವರ ಮನೆ ವಿಳಾಸ, ಮೊಬೈಲ್‌ ನಂಬರ್‌ ಗಳನ್ನು ಪ್ರತಿ ಸರ್ಕಾರಿ ಕಚೇ​ರಿ​ಗ​ಳ ನಾಮಫಲಕಗಳಲ್ಲಿ ಕಡ್ಡಾಯವಾಗಿ ಅಳವಡಿಸಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ಇಂತಹ ಮಾಹಿತಿಯನ್ನು ಒಳಗೊಂಡ ಪುಟ್ಟಕೈಪಿಡಿಯೊಂದನ್ನು ಮುದ್ರಿಸಿ ಹೊರತರಬೇಕು. ಸರ್ಕಾರಿ ಅಧಿ​ಕಾ​ರಿ​ಗ​ಳನ್ನು ಒಳ​ಗೊಂಡು ಗ್ರೂಪ್‌ ಒಂದನ್ನು ಕ್ರಿಯೇಟ್‌ ಮಾಡು​ವಂತೆ ವಾರ್ತಾ ಇಲಾಖೆ ಅಧಿ​ಕಾ​ರಿ​ಗ​ಳಿಗೆ ಸಲಹೆ ನೀಡಿದರು.

ಸರ್ಕಾರಿ ಕಚೇ​ರಿ​ಗ​ಳಲ್ಲಿ ಬಯೋ​ಮೆ​ಟ್ರಿಕ್‌ ಹಾಜ​ರಾತಿ ಕಡ್ಡಾಯ ಮಾಡ​ಬೇಕು. ಬೇಕಾ​ದರೆ ನಾನೇ ಬಯೋ​ಮೆ​ಟ್ರಿಕ್‌ ಮಿಷಿನ್‌ ಕೊಡಿ​ಸು​ತ್ತೇನೆ. ನೀವು ಯಾರಿಗೂ ಲಂಚ ಕೊಡಬೇಡಿ. ನೀವು ಲಂಚ ತೆಗೆ​ದು​ಕೊ​ಳ್ಳ​ಬೇಡಿ. ನಾನು ಯಾರನ್ನು ವರ್ಗಾವಣೆ ಮಾಡಿಸುವು​ದಿಲ್ಲ. ನಿಮ್ಮ ಬಳಿ ಯಾವ ರೀತಿ ಕೆಲಸ ಮಾಡಿಸಬೇಕು ಎಂದು ಗೊತ್ತಿದೆ. ಔಟ್ ಆಫ್‌ ದಿ ವೇ ಯಾರೂ ಹೋಗಬೇಡಿ ಎಂದು ಶಿವ​ಕು​ಮಾರ್‌ ತಾಕೀತು ಮಾಡಿ​ದ​ರು.

ನಮ್ಮನ್ನು ಜನ ಆಯ್ಕೆ ಮಾಡಿದ್ದಾರೆ. ಜನರ ಸೇವೆ ಮಾಡಲು ಅವಕಾಶ ಕೊಟ್ಟಿದ್ದಾರೆ. ಸರ್ಕಾರದ ಸೇವೆ ಮಾಡಲು ನೀವಿದ್ದೀರಿ. ರಾಜಕಾರಣಿಗಳು ಅಧಿಕಾರಿಗಳ ಬಳಿ ಜನ ಬರೋದು ಸಮಸ್ಯೆ ಬಗೆಹರಿಯದೆ ಇದ್ದಾಗ. ಆ ಸಮಸ್ಯೆ ಬಗೆಹರಿಸಬೇಕಾದ್ದು ನಮ್ಮ ಕರ್ತವ್ಯ. ಕಾನೂನು ಚೌಕಟ್ಟಿನೊಳಗೆ ಪರಿಹರಿಸುವಂತೆ ತಿಳಿ​ಸಿ​ದ​ ಅವರು, ನಮ್ಮ ಸರ್ಕಾರವನ್ನು ಜನತೆ ಸುಮ್ಮನೆ ಆಯ್ಕೆ ಮಾಡಿಲ್ಲ. ಉತ್ತಮ ಆಡಳಿತ ಕೊಡ್ತೀವಿ ಅಂತ ಆಯ್ಕೆ ಮಾಡಿದ್ದಾರೆ. ಬಿಜೆಪಿ ಆಡಳಿತ ವೈಖರಿಯನ್ನು ನೋಡಿದ್ದಾರೆ. ಅದು ಜನರಿಗೆ ಹತ್ತಿರವಾಗುವ ಆಡಳಿತವಲ್ಲ, ಕರೆಪ್ಷನ್‌ ಕ್ಯಾಪಿಟಲ್‌ ಎಂಬ ಕಾರಣಕ್ಕೆ ಬಿಜೆಪಿ ಬದಲಾಯಿಸಿ ನಮ್ಮನ್ನು ಅಧಿಕಾರದಲ್ಲಿ ಕೂರಿಸಿದ್ದಾರೆ. ಇದನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಅಧಿ​ಕಾ​ರಿ​ಗಳು ಕೆಲಸ ಮಾಡ​ಬೇಕು ಎಂದು ಸೂಚನೆ ನೀಡಿ​ದ​ರು.

ಸರ್ಕಾರಿ ಕಚೇ​ರಿ​ಗ​ಳಲ್ಲಿ ಯಾರಾ​ದರು ಲಂಚ ಕೇಳಿ​ದರೆ ಯಾರನ್ನು ಸಂಪ​ರ್ಕಿ​ಸ​ಬೇಕು ಎಂಬು​ದರ ಮಾಹಿತಿ ನೀಡುವ ಬೋರ್ಡ್‌ ಹಾಕಿಸಬೇ​ಕು. ಕೆಲವರು ಆರ್‌ಟಿಇ ಕಾರ್ಯಕರ್ತರ ಹೆಸರಲ್ಲಿ ವಂಚಕರು ಸೇರಿದ್ದಾರೆ. ಅವರಿಗೆ ಹೆದರುವ ಅವಶ್ಯಕತೆ ಇಲ್ಲ. ಜಿಲ್ಲೆಯಲ್ಲಿ ಯಾವುದೇ ಅಕ್ರಮ ಕ್ಲಬ್‌ಗಳು ಇರಬಾರದು. ಗಾಂಜಾ, ರೇವಾ ಪಾರ್ಟಿ ಯಾವುದಕ್ಕೂ ಅವಕಾಶ ನೀಡ​ದಂತೆ ಕಾನೂನು ಸುವ್ಯವಸ್ಥೆ ಕಾಪಾ​ಡುವ ನಿಟ್ಟಿ​ನಲ್ಲಿ ಪೊಲೀಸರು ಗಮನಹರಿಸಬೇಕು ಎಂದು ಶಿವ​ಕು​ಮಾರ್‌ ಹೇಳಿ​ದ​ರು.

ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗದ ಬಿಜೆಪಿ: ಸಚಿವ ಖಂಡ್ರೆ ವ್ಯಂಗ್ಯ

ಬೆಂಗಳೂರಿಂದ ತ್ಯಾಜ್ಯ ತಂದು ರಸ್ತೆಗಳ ಪಕ್ಕ ಸುರಿಯುತ್ತಿದ್ದಾರೆ. ಇದಕ್ಕೆ ಕಡಿ​ವಾಣ ಹಾಕಲು ಗಡಿ ಪ್ರವೇಶ ದ್ವಾರ​ದಲ್ಲಿ ಸಿಸಿ ಕ್ಯಾಮರಾ ಅಳ​ವ​ಡಿಸಿ ಬೇಕಾಬಿಟ್ಟಿತ್ಯಾಜ್ಯ ನಿರ್ವಹಣೆಗೆ ಕಡಿವಾಣ ಹಾಕಬೇ​ಕು. ಮುಖ್ಯವಾಗಿ ಬೆಂಗಳೂರಿನಿಂದ ಪ್ರವೆಶ ಪಡೆಯುವ ರಾಮನಗರ, ಕನಕಪುರ, ಮಾಗಡಿ ರಸ್ತೆಗಳಿಗೆ ಕ್ಯಾಮರಾ ಹಾಕಿ​ದಲ್ಲಿ ಹೊರ​ಗಿ​ನ ಕಸ ವಿಲೇ​ವಾರಿ ತಡೆ​ಗ​ಟ್ಟು​ವು​ದರ ಜೊತೆಗೆ ಅಪರಾಧ ಚಟುವಟಿಕೆ ತಡೆಗೂ ಸಹಕಾರಿಯಾಗುತ್ತದೆ ಎಂದು ​ತಿ​ಳಿ​ಸಿ​ದ​ರು. ಭೆಯಲ್ಲಿ ಜಿಲ್ಲಾ ಉಸ್ತು​ವಾರಿ ಸಚಿವ ರಾಮ​ಲಿಂಗಾ​ರೆಡ್ಡಿ, ಸಂಸದ ಡಿ.ಕೆ.ಸುರೇಶ್‌, ಶಾಸಕರಾದ ಇಕ್ಬಾಲ್‌ ಹುಸೇನ್‌, ಬಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರವಿ, ಅ.ದೇವೇಗೌಡ, ಜಿಲ್ಲಾಧಿಕಾರಿ ಅವಿನಾಶ್‌, ಜಿಪಂ ಸಿಇಒ ದಿಗ್ವಿಜಯ… ಬೋಡ್ಕೆ, ಜಿಲ್ಲಾ ಎಸ್ಪಿ ಕಾರ್ತಿಕ್‌ ರೆಡ್ಡಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

click me!