ಧ್ರುವನಾರಾಯಣ ಅಗಲಿಕೆಗೆ ಸದನದಲ್ಲಿ ಡಿ.ಕೆ.ಶಿವಕುಮಾರ್‌ ಕಣ್ಣೀರು

Published : Jul 04, 2023, 04:45 AM IST
ಧ್ರುವನಾರಾಯಣ ಅಗಲಿಕೆಗೆ ಸದನದಲ್ಲಿ ಡಿ.ಕೆ.ಶಿವಕುಮಾರ್‌ ಕಣ್ಣೀರು

ಸಾರಾಂಶ

ಉಪ ಮುಖ್ಯಮಂತ್ರಿ ಆಗಿದ್ದರೂ ಈಗಲೂ ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯುತ್ತಿದ್ದೇನೆ. ನನ್ನ ನಂತರ ಅಧ್ಯಕ್ಷ ಸ್ಥಾನದಲ್ಲಿ ಧ್ರುವ ನಾರಾಯಣ ಅವರನ್ನು ಕೂರಿಸಬೇಕು ಎಂಬ ನಿರ್ಧಾರ ಮಾಡಿದ್ದೆ.

ವಿಧಾನಸಭೆ (ಜು.04): ‘ಉಪ ಮುಖ್ಯಮಂತ್ರಿ ಆಗಿದ್ದರೂ ಈಗಲೂ ಕೆಪಿಸಿಸಿ ಅಧ್ಯಕ್ಷನಾಗಿ ಮುಂದುವರೆಯುತ್ತಿದ್ದೇನೆ. ನನ್ನ ನಂತರ ಅಧ್ಯಕ್ಷ ಸ್ಥಾನದಲ್ಲಿ ಧ್ರುವ ನಾರಾಯಣ ಅವರನ್ನು ಕೂರಿಸಬೇಕು ಎಂಬ ನಿರ್ಧಾರ ಮಾಡಿದ್ದೆ. ಅವರು ಬದುಕಿದ್ದರೆ ಈ ಸರ್ಕಾರದಲ್ಲಿ ಸಚಿವ ಸಂಪುಟ ಸದಸ್ಯರಾಗುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ದಿವಂಗತ ಧ್ರುವನಾರಾಯಣ ಅವರನ್ನು ನೆನೆದು ಡಿ.ಕೆ. ಶಿವಕುಮಾರ್‌ ಅವರು ಕಣ್ಣೀರಾದರು. ಅಧಿವೇಶನದಲ್ಲಿ ಗಣ್ಯರಿಗೆ ಸಂತಾಪ ಸೂಚಿಸುವ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ಮಾಜಿ ಸಂಸದ ಧ್ರುವನಾರಾಯಣ ಅವರ ಜತೆಗಿನ ಒಡನಾಟ ಹಾಗೂ ಅವರ ಕೆಲಸದ ವೈಖರಿಯನ್ನು ನೆನೆದು ಗದ್ಗದಿತರಾಗಿ ಕಣ್ಣೀರಾಕಿದರು. 

ನನ್ನ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡಿದ ಈಶ್ವರ್‌ ಖಂಡ್ರೆ, ಸತೀಶ್‌ ಜಾರಕಿಹೊಳಿ, ರಾಮಲಿಂಗಾರೆಡ್ಡಿ ಅವರೆಲ್ಲರೂ ಸಚಿವ ಸಂಪುಟ ಸದಸ್ಯರಾಗಿ ಇದೇ ಸಾಲಿನಲ್ಲಿ ಕೂತಿದ್ದಾರೆ. ಧ್ರುವನಾರಾಯಣ ಬದುಕಿದ್ದರೆ ಖಂಡಿತ ಈ ಸದನದ ಸದಸ್ಯರಾಗಿ ಸಚಿವ ಸ್ಥಾನದಲ್ಲಿ ಕೂರುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿರಲಿಲ್ಲ ಎಂದರು. ಸಹೋದರನಂತಿದ್ದ ಅವರ ಅಗಲಿಕೆ ನನ್ನ ಮನಸ್ಸಿಗೆ ಬಹಳ ನೋವು ತಂದಿದೆ. ನನಗೆ ರಾಜಕಾರಣದಲ್ಲಿ ಡಿ.ಕೆ.ಸುರೇಶ್‌ನಂತೆ, ಧ್ರುವನಾರಾಯಣ ಸಹ ಸಹೋದರನಂತಿದ್ದ. ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ಉಡುಪಿ ಜಿಲ್ಲೆಗಳ ಉಸ್ತುವಾರಿ ವಹಿಸಿದ್ದೆ. 

ಅತೀ ಹೆಚ್ಚು ಅಶಿಸ್ತು ಇರೋ ಪಕ್ಷ ಬಿಜೆಪಿ: ಸಿಎಂ ಸಿದ್ದರಾಮಯ್ಯ

ಅವರ ಕಾರ್ಯದ ಫಲವಾಗಿ ಈ ಭಾಗದ ಶೇ.75 ರಷ್ಟು ಸದಸ್ಯರು ಈ ಸದನಕ್ಕೆ ಆಯ್ಕೆಯಾಗಿ ಬಂದಿದ್ದಾರೆ. ಚಾಮರಾಜನಗರದಲ್ಲಿ ಆಕ್ಸಿಜನ್‌ ದುರಂತದಲ್ಲಿ 36 ಜನ ಮೃತರಾದಾಗ ಆಗಿನ ಆರೋಗ್ಯ ಮಂತ್ರಿಗಳು ಕೇವಲ 3 ಮಂದಿ ಮಾತ್ರ ಸತ್ತಿದ್ದಾರೆ ಎಂದು ಹೇಳಿದ್ದರು. ಆದರೆ ಧ್ರುವನಾರಾಯಣ ಅವರು ನನ್ನನ್ನು ಹಾಗೂ ಸಿದ್ದರಾಮಯ್ಯ ಅವರನ್ನು ಕರೆದುಕೊಂಡು ಹೋಗಿ ಪರಿಶೀಲಿಸುವಂತೆ ಮಾಡಿದಾಗ 36 ಮಂದಿ ಸಾವನ್ನಪ್ಪಿರುವುದು ಬಯಲಾಯಿತು. ಅವರು ರಾಜಕೀಯ ಕ್ಷೇತ್ರದ ಧ್ರುವತಾರೆ ಎಂದು ಹೊಗಳಿದರು.

ಬರಿದಾಗುತ್ತಿದೆ ಕೆಆರ್‌ಎಸ್‌ ಜಲಾಶಯ: ಕುಡಿಯುವ ನೀರಿಗೂ ಸಮಸ್ಯೆಯಾಗುವ ಸಂಕಷ್ಟ ಪರಿಸ್ಥಿತಿ

ಗೆದ್ದು ಶಾಸಕರಾಗಬೇಕಿತ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಧ್ರುವನಾರಾಯಣ ನನ್ನ ಜಿಲ್ಲೆಯವರು. ಎರಡು ಬಾರಿ ಶಾಸಕರಾಗಿ, ಎರಡು ಬಾರಿ ಸಂಸದರಾಗಿ ಕೆಲಸ ಮಾಡಿದವರು. ಉತ್ತಮ ಶಾಸಕ ಎಂದು ಕ್ಷೇತ್ರದ ಜನತೆಯಿಂದ ಕರೆಸಿಕೊಂಡ ಅತ್ಯಂತ ಕ್ರಿಯಾಶೀಲ ವ್ಯಕ್ತಿ. ಈಗ ಬದುಕಿದ್ದರೆ ನಂಜನಗೂಡು ಕ್ಷೇತ್ರದಿಂದ ಗೆದ್ದು ಶಾಸಕರಾಗಬೇಕಾಗಿತ್ತು. ಅವರ ಮಗ ದರ್ಶನ್‌ ಬಹಳ ದೊಡ್ಡ ಅಂತದಲ್ಲಿ ಗೆದ್ದಿದ್ದಾರೆ. ಇದು ಕಾಂಗ್ರೆಸ್‌ ಪಕ್ಷ ಹಾಗೂ ರಾಜ್ಯ ರಾಜಕಾರಣಕ್ಕೆ ಬಹಳ ದೊಡ್ಡ ನಷ್ಟ. ಈ ನಷ್ಟಭರಿಸುವ ಶಕ್ತಿ ಎಲ್ಲರಿಗೂ ಆ ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇಂದ್ರ ಯೋಜನೆಗಳ ಅನುಷ್ಠಾನಕ್ಕೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ: ಸಂಸದ ಯದುವೀರ್
ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸುವುದು ಕಾಂಗ್ರೆಸ್‌ನವರಿಗೆ ಇಷ್ಟವಿಲ್ಲ: ಎಚ್.ಡಿ.ಕುಮಾರಸ್ವಾಮಿ