
ಬೆಂಗಳೂರು (ಅ.31): ‘ರಾಜ್ಯದ ಜನ ಚುನಾವಣೆಯಲ್ಲಿ ಏನು ತೀರ್ಪು ನೀಡಬೇಕೋ ನೀಡಿದ್ದಾರೆ. ನಮಗೆ ಮಾಡಲು ಅನೇಕ ಕೆಲಸಗಳಿವೆ. ಆ ಕೆಲಸ ಮಾಡುತ್ತಿದ್ದೇವೆ. ಅನಗತ್ಯ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ತನ್ಮೂಲಕ ‘ಆಪರೇಷನ್ ಕಮಲ ಯತ್ನ ಎಂಬುದು ಡಿ.ಕೆ. ಶಿವಕುಮಾರ್ ಕೃಪಾ ಪೋಷಿತ ನಾಟಕ ಮಂಡಳಿ ಸೃಷ್ಟಿ’ ಎಂಬ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸುವುದಿಲ್ಲ ಎಂದು ತಿಳಿಸಿದರು. ಕುಮಾರಕೃಪ ಅತಿಥಿಗೃಹದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಆಪರೇಷನ್ ಬಗ್ಗೆ ಎಲ್ಲ ಮಾಹಿತಿಯೂ ಗೊತ್ತಿದೆ. ಯಾರು, ಯಾರನ್ನ ಯಾವಾಗ ಭೇಟಿಯಾಗಿದ್ದರು. ಯಾವ ಆಮಿಷ ಒಡ್ಡಿದ್ದರು ಎಲ್ಲವೂ ಗೊತ್ತಿದೆ. ಆದರೆ ಅವರ ಯಾವುದೇ ಪ್ರಯತ್ನ ಫಲ ನೀಡಲ್ಲ’ ಎಂದು ಹೇಳಿದರು.
ಸರ್ಕಾರ ಬೀಳಿಸಲು ಬಿಜೆಪಿ ದೊಡ್ಡವರ ಷಡ್ಯಂತ್ರ: ‘ನಮ್ಮ ಸರ್ಕಾರ ಬೀಳಿಸಲು ಬಿಜೆಪಿ ಷಡ್ಯಂತ್ರ ರೂಪಿಸುತ್ತಿದ್ದು, ಈ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಇದರ ಹಿಂದೆ ದೊಡ್ಡ, ದೊಡ್ಡ ನಾಯಕರು ಕೂಡ ಇದ್ದಾರೆ. ಆದರೆ ಈ ಪ್ರಯತ್ನದಿಂದ ಏನೂ ಆಗುವುದಿಲ್ಲ, ಅವರ ಷಡ್ಯಂತ್ರ ಫಲಿಸಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಸದಾಶಿವನಗರ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಡ್ಯದ ಶಾಸಕ ರವಿ ಗಣಿಗ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು. ಬಿಜೆಪಿಯವರು ಆಮಿಷ ಒಡ್ಡಿರುವ ಬಗ್ಗೆ ರವಿ ಗಣಿಗ ಸೇರಿದಂತೆ ಹಲವರು ಮಾಹಿತಿ ನೀಡಿದ್ದಾರೆ. ಹೀಗಾಗಿ ಈ ಷಡ್ಯಂತ್ರದ ಬಗ್ಗೆ ನಮಗೆ ಗೊತ್ತಿದೆ. ಇದರ ಹಿಂದೆ ದೊಡ್ಡ, ದೊಡ್ಡ ನಾಯಕರು ಇದ್ದಾರೆ. ಆದರೆ, ಇದರಿಂದ ಏನೂ ಆಗುವುದಿಲ್ಲ. ಅವರ ಷಡ್ಯಂತ್ರ ಸಫಲವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಲೋಕಸಭೆ ಚುನಾವಣೆ ಸತ್ಯ-ಸುಳ್ಳಿನ ನಡುವಿನ ಹೋರಾಟ: ಸಚಿವ ಎಚ್.ಕೆ.ಪಾಟೀಲ್
ಬಿಜೆಪಿಯಿಂದ ಸರ್ಕಾರ ಅಸ್ಥಿರ ಯತ್ನ: ಆಪರೇಶನ್ ಕಮಲಕ್ಕೆ ಬಿಜೆಪಿಯವರು ಯತ್ನಿಸುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾಂಗ್ರೆಸ್ ಶಾಸಕ ರವಿ ಗಣಿಗ ಹೇಳಿಕೆ ನೀಡಿದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ‘ಬಿಜೆಪಿಯವರು ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆಂಬ ಮಾಹಿತಿ ಇದೆ’ ಎಂದಿದ್ದಾರೆ. ಉಡುಪಿಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬಿಜೆಪಿಯವರು ಕಾಂಗ್ರೆಸ್ ಶಾಸಕರಿಗೆ 50 ಕೋಟಿ ರು. ಆಮಿಷ ಒಡ್ಡಿರುವ ಬಗ್ಗೆ ಕಾಂಗ್ರೆಸ್ ಶಾಸಕರ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಆರೋಪ ಮಾಡಿದವರನ್ನೇ ಕೇಳಬೇಕು. ಆದರೆ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಪ್ರಯತ್ನ ನಡೆಸುತ್ತಿರುವ ಮಾಹಿತಿ ಇದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.