ಜಿಲ್ಲೆಯಿಂದ ಗೆದ್ದು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಸಾಕ್ಷಿ ಗುಡ್ಡೆ ತೋರಿಸಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಚನ್ನಪಟ್ಟಣ/ರಾಮನಗರ (ಅ.25): ಚನ್ನಪಟ್ಟಣಕ್ಕೆ ಹೊಸರೂಪ ನೀಡಲು ನಾವು ಬದ್ಧವಾಗಿದ್ದೇವೆ. ಈ ಜಿಲ್ಲೆಯಿಂದ ಗೆದ್ದು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿರುವ ಸಾಕ್ಷಿ ಗುಡ್ಡೆ ತೋರಿಸಲಿ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು. ಚನ್ನಪಟ್ಟಣ ಟೌನ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ಬೃಹತ್ ಮೆರವಣಿಗೆಯಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಡಿ.ಕೆ.ಶಿವಕುಮಾರ್, ಎರಡು ಬಾರಿ ಮುಖ್ಯಮಂತ್ರಿ ಆಗಿದ್ದಾಗ ಕುಮಾರಸ್ವಾಮಿ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಕೊಡುಗೆ ಏನು ಎನ್ನುವ ಪಟ್ಟಿಯನ್ನು ಬಿಡುಗಡೆ ಮಾಡಲಿ. ಕ್ಷೇತ್ರದ ಅಭಿವೃದ್ಧಿಗೆ ಅವರ ಸಾಕ್ಷಿ ಗುಡ್ಡೆಯನ್ನು ಜನರ ಮುಂದಿಡಲಿ ಎಂದರು.
ಚನ್ನಪಟ್ಟಣಕ್ಕೆ 500 ಕೋಟಿ ಅನುದಾನ: ಈ ಜಿಲ್ಲೆ - ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನಾವು ಸಂಕಲ್ಪ ಮಾಡಿದ್ದೇವೆ. ಆ ಗುರಿಯನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಚನ್ನಪಟ್ಟಣಕ್ಕೂ ಹೊಸರೂಪ ನೀಡಲು ಬದ್ಧವಾಗಿದ್ದು, ಈಗಾಗಲೇ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಸುಮಾರು 500 ಕೋಟಿ ಅನುದಾನ ನೀಡಲಾಗಿದೆ ಎಂದು ಹೇಳಿದರು. ಚನ್ನಪಟ್ಟಣದ ಋಣ ತೀರಿಸಬೇಕು. ಈ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಜೊತೆ ಕೈ ಜೋಡಿಸಿ, ಜನಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಯಾವುದೇ ಷರತ್ತುಗಳನ್ನು ಹಾಕದೆ ಯೋಗೇಶ್ವರ್ ಶುಭ ಘಳಿಗೆಯಲ್ಲಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಇವರ ಕೈ ಬಲಪಡಿಸುವುದರ ಮೂಲಕ ದೇಶಕ್ಕೆ ಬಲವಾದ ಸಂದೇಶ ನೀಡಬೇಕು. ಅತಿ ಹೆಚ್ಚು ಮತಗಳ ಅಂತರದಿಂದ ಇವರನ್ನು ಗೆಲ್ಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.
ನಮ್ಮನ್ನು ನಂಬಿ ಬಂದವರನ್ನು ಕೈ ಬಿಡಲ್ಲ: ಡಿ.ಕೆ.ಶಿವಕುಮಾರ್ ಹಾಗೂ ಸುರೇಶ್ ಅವರನ್ನು ನಂಬಿ ಬಿಜೆಪಿ ಮತ್ತು ದಳದಿಂದ ಅನೇಕ ಕಾರ್ಯಕರ್ತರು ಬಂದಿದ್ದಾರೆ. ನಾವಿಬ್ಬರು ಜಿಲ್ಲೆಯಲ್ಲಿಯೇ ಇರುತ್ತೇವೆ. ಕಷ್ಟ ಕಾಲದಲ್ಲಿ ನಮ್ಮೊಂದಿಗೆ ಯಾರೆಲ್ಲ ನಿಂತಿದ್ದಿರೊ ಅವರೆಲ್ಲರನ್ನು ಜೊತೆಯಲ್ಲಿ ಕರೆದೊಯ್ಯುವ ಕೆಲಸ ಮಾಡುತ್ತೇವೆ. ನೀವು ನಮ್ಮ ಕೈ ಬಲಪಡಿಸಿದ್ದೀರಿ, ಯಾವುದೇ ಕಾರಣಕ್ಕೂ ನಿಮ್ಮ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ನಡು ನೀರಿನಲ್ಲಿ ಕೈ ಬಿಡುವ ಪ್ರಶ್ನೆಯೇ ಇಲ್ಲ. ಭವಿಷ್ಯದಲ್ಲಿಯೂ ನಿಮ್ಮ ಜೊತೆ ನಾವಿರುತ್ತೇವೆ. ಯೋಗೇಶ್ವರ್ ಅವರ ಜೊತೆಯೂ ಇರುತ್ತೇವೆ ಎಂದು ಭರವಸೆ ನೀಡಿದರು.
ಕಾವೇರಿ ನ್ಯಾಯ ಸಮ್ಮತ ತೀರ್ಪಿಗಾಗಿ ನೂತನ ಕಾನೂನು ಹೋರಾಟ ಸಮಿತಿ ಅಸ್ಥಿತ್ವಕ್ಕೆ!
ಮುಂದಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ನಾವು ನೋಡಬೇಕಿದೆ. ಈಗ ನಾವೆಲ್ಲರು ಕಾರ್ಯಕರ್ತರು. ನಿನ್ನೆಯಿಂದ ಹೊಸ ಹುರುಪು, ಶಕ್ತಿ ಬಂದಿದೆ. ಚುನಾವಣೆ ಗೆಲ್ಲುವುದೊಂದೇ ನಮ್ಮ ಗುರಿ. ಲೋಕಸಭಾ ಚುನಾವಣೆಯಲ್ಲಿ ಡಿ.ಕೆ.ಸುರೇಶ್ ಅವರಿಗೆ ಚನ್ನಪಟ್ಟಣದ ಜನತೆ 80 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ್ದರು. ಆದರೆ ಉಳಿದ ಕ್ಷೇತ್ರಗಳಲ್ಲಿ ಕಡಿಮೆ ಮತಗಳು ಬಂದ ಕಾರಣಕ್ಕೆ ಗೆಲುವು ಸಾಧ್ಯವಾಗಲಿಲ್ಲ. ಈ ಉಪಚುನಾವಣೆಯಲ್ಲಿ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿ ಯೋಗೇಶ್ವರ್ ಅವರನ್ನು ಅಧಿಕ ಮತಗಳಿಂದ ಗೆಲ್ಲಿಸಬೇಕು ಎಂದು ಡಿ.ಕೆ.ಶಿವಕುಮಾರ್ ಮನವಿ ಮಾಡಿದರು.