ಕಾಂಗ್ರೆಸ್‌ ಗ್ಯಾರಂಟಿಗೆ ಬಿಜೆಪಿ ಹೆದರಿ ಗ್ಯಾಸ್‌ ಬೆಲೆ ಇಳಿಕೆ: ಡಿ.ಕೆ.ಶಿವಕುಮಾರ್‌

By Kannadaprabha NewsFirst Published Aug 31, 2023, 1:40 AM IST
Highlights

ಕಾಂಗ್ರೆಸ್‌ ಗ್ಯಾರಂಟಿಗಳ ಒತ್ತಡಕ್ಕೆ ಮಣಿದು ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ಯಾಸ್‌ ಸಿಲಿಂಡರ್‌ ಬೆಲೆ ಇಳಿಕೆ ಮಾಡಿದ್ದಾರೆ. ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ದಿವಾಳಿಯಾಗಲಿದ್ದೇವೆ ಎಂದು ಛೇಡಿಸಿದ್ದ ಬಿಜೆಪಿಯವರೇ ಮಧ್ಯಪ್ರದೇಶದಲ್ಲಿ ತಿಂಗಳಿಗೆ 1,500 ರು. ಸಹಾಯಧನ ಶುರು ಮಾಡಿದ್ದಾರೆ. 

ಬೆಂಗಳೂರು (ಆ.31): ‘ಕಾಂಗ್ರೆಸ್‌ ಗ್ಯಾರಂಟಿಗಳ ಒತ್ತಡಕ್ಕೆ ಮಣಿದು ಪ್ರಧಾನಮಂತ್ರಿ ನರೇಂದ್ರ ಮೋದಿ ಗ್ಯಾಸ್‌ ಸಿಲಿಂಡರ್‌ ಬೆಲೆ ಇಳಿಕೆ ಮಾಡಿದ್ದಾರೆ. ನಮ್ಮ ರಾಜ್ಯ ಸರ್ಕಾರದ ಗ್ಯಾರಂಟಿಗಳಿಂದ ದಿವಾಳಿಯಾಗಲಿದ್ದೇವೆ ಎಂದು ಛೇಡಿಸಿದ್ದ ಬಿಜೆಪಿಯವರೇ ಮಧ್ಯಪ್ರದೇಶದಲ್ಲಿ ತಿಂಗಳಿಗೆ 1,500 ರು. ಸಹಾಯಧನ ಶುರು ಮಾಡಿದ್ದಾರೆ. ಸಿಲಿಂಡರ್‌ ಬೆಲೆ 200 ಇಳಿಕೆ ಮಾಡಿದ್ದಾರೆ. ಹೀಗಾಗಿ ಬಿಜೆಪಿಯು ಕರ್ನಾಟಕ ಮಾದರಿಯಿಂದ ಹೆದರಿಕೊಂಡು ನಮ್ಮನ್ನು ಅನುಸರಿಸುತ್ತಿರುವುದು ಸತ್ಯ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮಲ್ಲಿನ ಗ್ಯಾರಂಟಿ ಯೋಜನೆಗಳನ್ನು ದೇಶಾದ್ಯಂತ ಮಹಿಳೆಯರು ನೋಡುತ್ತಿದ್ದಾರೆ. ಕರ್ನಾಟಕದಲ್ಲಿ ನೀಡುತ್ತಿರುವ ಕಾರ್ಯಕ್ರಮಗಳು ನಿಮಗೆ ಯಾಕೆ ಕೊಡಲಾಗುತ್ತಿಲ್ಲ ಎಂದು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಜನರು ಬೈಯುತ್ತಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಬಿಜೆಪಿಯವರು ಕರ್ನಾಟಕ ಮಾದರಿ ಹಿಂದೆ ಬಿದ್ದಿದ್ದಾರೆ ಎಂದು ಟೀಕಿಸಿದರು. ನಾವು ಗ್ಯಾಸ್‌ ಸಿಲಿಂಡರ್‌ ಬೆಲೆ ಏರಿಕೆಗೆ ಪರಿಹಾರ ಎಂದು 500 ರು. ಸೇರಿಸಿ ‘ಗೃಹಲಕ್ಷ್ಮೇ’ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2 ಸಾವಿರ ರು. ನೀಡುತ್ತಿದ್ದೇವೆ. 

Latest Videos

ಸತತ 2 ಬಾರಿ ಶಾಸಕರನ್ನಾಗಿ ಆಯ್ಕೆ ಮಾಡಿದಲ್ಲಿ ಸಕಲ ಸೌಲಭ್ಯ ಕಲ್ಪಿಸುವೆ: ಪ್ರದೀಪ್‌ ಈಶ್ವರ್‌

ನಮ್ಮ ಒತ್ತಡಕ್ಕೆ ಮಣಿದು ಪ್ರಧಾನಿ ಮೋದಿಯವರು ಗ್ಯಾಸ್‌ ಸಿಲಿಂಡರ್‌ ಬೆಲೆ 200 ರು. ಕಡಿಮೆ ಮಾಡಿದ್ದಾರೆ. ಈ ದೇಶದ ಜನರಿಗೆ ಹಣ ಕೊಡಲು ನಮ್ಮದೇನು ತಕರಾರಿಲ್ಲ. ಆದರೆ ಕರ್ನಾಟಕ ಮಾದರಿಯಿಂದ ಹೆದರಿಕೊಂಡಿದ್ದಾರೆ ಎಂಬುದು ಸತ್ಯ ಎಂದು ಹೇಳಿದರು. ಶಕ್ತಿ, ಗೃಹಜ್ಯೋತಿ, ಅನ್ನ ಭಾಗ್ಯ ಎಲ್ಲಾ ಗ್ಯಾರಂಟಿಗಳು ಯಶಸ್ವಿಯಾಗಿವೆ. ಇದರಿಂದ ಇಡೀ ದೇಶದ ಹೆಣ್ಣು ಮಕ್ಕಳು ಕರ್ನಾಟಕ ಮಾದರಿಗೆ ಮನಸೋತಿದ್ದಾರೆ ಎಂದರು. ನಾವು 100 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಕಾಂಗ್ರೆಸ್‌ ಪಕ್ಷ ಇದನ್ನು ಹಬ್ಬದ ರೀತಿಯಲ್ಲಿ ಸಂಭ್ರಮಿಸುತ್ತಿದೆ, ಜನರೂ ಸಂಭ್ರಮಿಸುತ್ತಿದ್ದಾರೆ. 

ನಾವು 1.30 ಕೋಟಿ ಫಲಾನುಭವಿಗಳನ್ನು ಗೃಹಲಕ್ಷ್ಮೇ ಮೂಲಕ ತಲುಪುವ ಬಗ್ಗೆ ಅಂದಾಜಿಸಿದ್ದೆವು. ತಾಂತ್ರಿಕ ಕಾರಣಗಳಿಂದ ಅನೇಕ ಮಹಿಳೆಯರಿಗೆ ತಲುಪಿಲ್ಲ. ಮುಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ತಲುಪಿಸುವ ಗ್ಯಾರಂಟಿಯನ್ನು ನಾನು ನೀಡುತ್ತೇನೆ ಎಂದು ಭರವಸೆ ನೀಡಿದರು. ಕೇವಲ 100 ದಿನಗಳಲ್ಲಿ 4 ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಸಿದ್ದರಾಮಯ್ಯ ಅವರು ಮೊದಲನೇ ಸಚಿವಸಂಪುಟ ಸಭೆಯಲ್ಲಿ ಗ್ಯಾರಂಟಿ ಯೋಜನೆ ಜಾರಿಗೆ ತಾತ್ವಿಕ ಒಪ್ಪಿಗೆ ನೀಡಿದರು. ಬಿಜೆಪಿ ಆಡಳಿತ ಇರುವ ಯಾವ ರಾಜ್ಯಗಳಲ್ಲೂ ಮಾಡದ ಕೆಲಸ ನಾವು ಮಾಡಿದ್ದೇವೆ. ಬಿಜೆಪಿಯವರ ಪ್ರಣಾಳಿಕೆ ತೆಗೆದು ನೋಡಲಿ, ಅವರದ್ದು ಕೇವಲ ಭರವಸೆ ನಮ್ಮದು ಗ್ಯಾರಂಟಿ ಎಂದು ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಧುನಿಕ ಚಾರ್ವಾಕನಿದ್ದಂತೆ: ಸಿ.ಟಿ.ರವಿ

ಬಿಜೆಪಿ ಕರ್ಮಕಾಂಡ ಬಿಚ್ಚುವ ಕಾಲ ಹತ್ತಿರ: ಬಿಜೆಪಿಯವರು ಕಾಂಗ್ರೆಸ್‌ ಸರ್ಕಾರದ ವಿರುದ್ಧ ಚಾಜ್‌ರ್‍ಶೀಚ್‌ ಬಿಡುಗಡೆ ಮಾಡಿರುವ ಬಗ್ಗೆ ಕೇಳಿದಾಗ, ಅದರಲ್ಲಿ ಇರುವುದನ್ನು ಒಂದೇ ಒಂದು ಸಾಬೀತು ಮಾಡಲಿ. ಅವರ ಕರ್ಮಕಾಂಡಗಳನ್ನು ಬಿಚ್ಚುವ ಕಾಲ ಹತ್ತಿರದಲ್ಲಿದೆ. ಚಾರ್ಜಶೀಟ್‌ ಎಂದರೆ ಏನು? ಅವರಿಗೆ ತಮ್ಮ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯವಿಲ್ಲ. ಅವರು ನಮ್ಮ ಬಗ್ಗೆ ಮಾತನಾಡುತ್ತಾರಾ? ಎಂದು ಪ್ರಶ್ನಿಸಿದರು. ಡಿ.ಕೆ.ಶಿವಕುಮಾರ್‌ 10 - 15 ಪರ್ಸೆಂಟ್‌ ಕಮಿಷನ್‌ ಕೇಳಿದರು ಎಂದು ಗುತ್ತಿಗೆದಾರರಿಗೆ ಹೆದರಿಸಿ ಅವರ ಬಾಯಲ್ಲಿ ರಾಜ್ಯಪಾಲರ ಬಳಿ ಸುಳ್ಳು ಹೇಳಿಸಿದರು. ಆನಂತರ ಅದೇ ಗುತ್ತಿಗೆದಾರರು ಪೊಲೀಸರ ಬಳಿ, ರಾಜ್ಯಪಾಲರ ಬಳಿ ನಾವು ಆರೋಪ ಮಾಡಿಲ್ಲ ಎಂದು ಸತ್ಯ ಹೇಳಿದರು ಎಂದರು.

click me!