ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನರಳಾಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು.
ಹುಕ್ಕೇರಿ (ಅ.19): ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ನರಳಾಡುತ್ತಿವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೇವಡಿ ಮಾಡಿದರು. ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸೋಲಿನ ಹತಾಶೆಯಿಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಮೈ-ಕೈ ಪರಚಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಕಾಂಗ್ರೆಸ್ ಎಲ್ಲ ವರ್ಗದ ಜನರಿಗೆ ನ್ಯಾಯ-ರಕ್ಷಣೆ ಒದಗಿಸಿದೆ. ಐತಿಹಾಸಿಕ ತೀರ್ಮಾನ ಕೈಗೊಂಡು ಜನರ ಬದುಕಿನಲ್ಲಿ ಬದಲಾವಣೆ ತಂದಿದೆ.
ಜನಸಂಖ್ಯೆಗೆ ಅನುಗುಣವಾಗಿ ಅನುದಾನ ನೀಡಿದೆ. ಮಹತ್ವಾಕಾಂಕ್ಷಿ ಗೃಹಲಕ್ಷ್ಮೀ, ಗೃಹಜ್ಯೋತಿ, ಮಹಿಳೆಯರ ಉಚಿತ ಬಸ್ ಪ್ರಯಾಣ, ಹೆಚ್ಚುವರಿ ಅನ್ನಭಾಗ್ಯ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ. ಕಾರ್ಯಕರ್ತರ ಹೋರಾಟ ವ್ಯರ್ಥವಾಗದಂತೆ ನೋಡಿಕೊಳ್ಳಲಾಗುವುದು ಎಂದರು. ನಿಮ್ಮ ಆಶೀರ್ವಾದದಿಂದ 136 ಸೀಟುಗಳನ್ನು ಗೆದ್ದು ಸೇವೆ ಮಾಡುತ್ತಿದ್ದೇವೆ. ನಾನು ನಿಮ್ಮಿಂದ ಸನ್ಮಾನ ಮಾಡಿಸಿಕೊಳ್ಳಲು ಇಲ್ಲಿಗೆ ಬಂದಿಲ್ಲ. ನೀವೆಲ್ಲಾ ಹೋರಾಟ ಮಾಡಿ ಕಾಂಗ್ರೆಸ್ ಸರ್ಕಾರವನ್ನು ತಂದಿದ್ದೀರಿ ಎಂದು ಹೇಳಿದರು.
ನನ್ನ ಬಗ್ಗೆ ತೀರ್ಪು ನೀಡಲು ಕಟೀಲ್, ಎಚ್‌ಡಿಕೆ ನ್ಯಾಯಾಧೀಶರೆ?: ಡಿಕೆಶಿ
ಸಮಾವೇಶದಲ್ಲಿ ಕಾಣದ ಜಾರಕಿಹೊಳಿ ಬೆಂಬಲಿಗರು: ಉಪಮುಖ್ಯಮಂತ್ರಿ ಹುದ್ದೆಗೆ ಏರಿದ ಬಳಿಕ ಇದೇ ಮೊಟ್ಟ ಮೊದಲ ಬಾರಿಗೆ ಬುಧವಾರ ಹುಕ್ಕೇರಿಗೆ ಆಗಮಿಸಿದ ಡಿ.ಕೆ.ಶಿವಕುಮಾರ, ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಗಡಿಬಿಡಿ ಮಾಡಿದರು. ಇದರಿಂದ ಕಾರ್ಯಕರ್ತರ ಮನೋಸ್ಥೈರ್ಯ ತುಂಬಲು ವೇದಿಕೆಯಾಗಬೇಕಿದ್ದ ಸಮಾವೇಶ ನೀರಸ ಎನಿಸಿತು. ಜಿಲ್ಲಾ ಉಸ್ತುವಾರಿ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಜಿಲ್ಲೆಯ ಶಾಸಕರು, ವಿಧಾನ ಪರಿಷತ್ ಸದಸ್ಯರು, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರು ಸೇರಿದಂತೆ ಬಹುತೇಕ ನಾಯಕರ ಗೈರು ಹಾಜರಿ ಡಿಸಿಎಂ ಡಿಕೆಶಿ ಗಡಿಬಿಡಿಗೆ ಕಾರಣ ಎಂಬ ಮಾತುಗಳು ಕೇಳಿ ಬಂದಿವೆ.
ಮಧ್ಯಾಹ್ನ 3.30 ಬದಲಾಗಿ ಸಂಜೆ 5.10 ಗಂಟೆಗೆ ಸಮಾವೇಶಕ್ಕೆ ಡಿಸಿಎಂ ಆಗಮಿಸಿದರು. ಕೇವಲ ಒಂದು ಗಂಟೆ ಅವಧಿಯೊಳಗೆ ಸಮಾವೇಶ ಮುಕ್ತಾಯವಾಯಿತು. ಜಾರಕಿಹೊಳಿ ಪ್ರತಿನಿಧಿಸುವ ತಾಲೂಕಿನ ಯಮಕನಮರಡಿ ಕ್ಷೇತ್ರದ ಮುಂಚೂಣಿ ನಾಯಕರು, ಕಾರ್ಯಕರ್ತರು ಸಭೆಯಿಂದ ಅಂತರ ಕಾಯ್ದುಕೊಂಡರು.
ಡಿಕೆಶಿ ಸ್ವಾಗತಕ್ಕೆ ಲಕ್ಷ್ಮೀ, ಸತೀಶ ಗೈರು: ಜಿಲ್ಲೆಯಲ್ಲಿ ಬುಧವಾರ ಪ್ರವಾಸ ಕೈಗೊಂಡಿರುವ ಉಪಮುಖ್ಯಮಂತ್ರಿ , ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಸ್ವಾಗತಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳಕರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಗೈರಾಗಿರುವುದು ಕಂಡುಬಂತು. ಈ ಮೂಲಕ ಕಾಂಗ್ರೆಸ್‌ನಲ್ಲಿ ವೈಮನಸ್ಸು ಇರುವುದು ಸಾಬೀತಾಗಿದೆ. ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಡಿ.ಕೆ.ಶಿವಕುಮಾರ ಅವರನ್ನು ಪಕ್ಷದ ಕಾರ್ಯಕರ್ತರೇ ಹಾರ ಮತ್ತು ಗಾಂಧಿ ಟೋಪಿ ತೊಡಿಸಿ ಸ್ವಾಗತಿಸಿದರು.
ಹುಚ್ಚುನಾಯಿಗೆ ಕಲ್ಲು ಹೊಡೆದು ಸಾಯಿಸಿದಂತೆ ಕಾಂಗ್ರೆಸ್ ಸರ್ಕಾರ ಓಡಿಸಲಿದ್ದಾರೆ ಜನ: ಕಾರಜೋಳ
ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರನ್ನು ಹೊರತುಪಡಿಸಿದರೇ ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಗೈರಾದರು. ಡಿಕೆಶಿ ವಿರುದ್ಧ ಮುನಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿಮಾನ ನಿಲ್ದಾಣದಲ್ಲಿ ಕಾಣಿಸಲೇ ಇಲ್ಲ. ಇಬ್ಬರು ಸಚಿವರು ಸೇರಿದಂತೆ ಜಿಲ್ಲೆಯ 11 ಶಾಸಕರು ಗೈರಾದರು. ಜಲಸಂಪನ್ಮೂಲ ಇಲಾಖೆ ಕಚೇರಿಯಲ್ಲಿ ಕರೆದ ಅಧಿಕಾರಿಗಳ ಸಭೆಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಅವರನ್ನು ಹೊರತುಪಡಿಸಿದರೆ ಜಿಲ್ಲೆಯ ಶಾಸಕರು ಗೈರಾಗಿರುವುದು ಕಂಡುಬಂತು.