ಬಿಜೆಪಿ ಜೊತೆಗೆ ಸೀಟಿಗೆ ಕಿತ್ತಾಡಿಕೊಂಡು ಕೇವಲ ಮೂರು ಸೀಟುಗಳನ್ನು ಪಡೆದುಕೊಂಡರು. ತಮ್ಮ ಅಳಿಯನನ್ನು ಆ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಈಗ ತಮ್ಮ ಕುಟುಂಬದವರ ಗೆಲುವಿಗಾಗಿ ಕಣ್ಣೀರು ಹಾಕುತ್ತಿದ್ದು, ಆ ಕಣ್ಣೀರು ರಾಮನಗರದ ಕೊಚ್ಚೆಯಲ್ಲಿ ಸೇರಿಕೊಂಡಿದೆ ಎಂದ ಡಿಸಿಎಂ ಡಿ.ಕೆ.ಶಿವಕುಮಾರ್
ರಾಮನಗರ(ಏ.24): ಮಾಜಿ ಪ್ರಧಾನಿ ದೇವೇಗೌಡರು ಮೂರು ಸ್ಥಾನಗಳಿಗಾಗಿ ತಮ್ಮ ಹೆಸರು ಮತ್ತು ಪಕ್ಷವನ್ನು ಬಿಜೆಪಿಗೆ ಅಡ್ಡವಿಟ್ಟರು. ಈಗ ಮಗ, ಅಳಿಯ, ಮೊಮ್ಮಗನನ್ನು ಗೆಲ್ಲಿಸಬೇಕೆಂದು ನಾಟಕವಾಡುತ್ತಾ, ಕಣ್ಣೀರು ಹಾಕುತ್ತಿದ್ದಾರೆ. ಜೆಡಿಎಸ್ ಸ್ಪರ್ಧೆ ಮಾಡಿರುವ ಮೂರು ಕ್ಷೇತ್ರಗಳು ಹಾಗೂ ಅವರ ಅಳಿಯ ಬಿಜೆಪಿಯಿಂದ ಸ್ಪರ್ಧೆ ಮಾಡಿರುವ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸುತ್ತಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ನಗರದ ಕೆಂಗಲ್ ಹನುಮಂತಯ್ಯ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಬಿಜೆಪಿ ಜೊತೆಗೆ ಸೀಟಿಗೆ ಕಿತ್ತಾಡಿಕೊಂಡು ಕೇವಲ ಮೂರು ಸೀಟುಗಳನ್ನು ಪಡೆದುಕೊಂಡರು. ತಮ್ಮ ಅಳಿಯನನ್ನು ಆ ಪಕ್ಷದಿಂದ ಕಣಕ್ಕಿಳಿಸಿದ್ದಾರೆ. ಈಗ ತಮ್ಮ ಕುಟುಂಬದವರ ಗೆಲುವಿಗಾಗಿ ಕಣ್ಣೀರು ಹಾಕುತ್ತಿದ್ದು, ಆ ಕಣ್ಣೀರು ರಾಮನಗರದ ಕೊಚ್ಚೆಯಲ್ಲಿ ಸೇರಿಕೊಂಡಿದೆ ಎಂದರು.
ಜೆಡಿಎಸ್‌ಗೆ ಭವಿಷ್ಯ ಇಲ್ಲ ಎಂಬುದನ್ನು ಇಲ್ಲಿನ ಶಾಸಕರೇ ತೋರಿಸಿದ್ದಾರೆ: ಡಿ.ಕೆ.ಶಿವಕುಮಾರ್
ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ನಡೆಸಿದಾಗ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೂ ಆಹ್ವಾನ ನೀಡಿದ್ದೇವು, ಅವರು ಬರಲಿಲ್ಲ. ದೇವೇಗೌಡರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಾಗಲೇ ಪ್ರಧಾನಿ ಮೋದಿಯವರಿಗೆ ನೀರಾವರಿ ಯೋಜನೆಗೆ ಅನುಕೂಲ ಮಾಡಿಕೊಡಬೇಕೆಂದು ಹೇಳಿ ಸಹಿ ಹಾಕುವಂತೆ ಕೇಳಬಹುದಿತ್ತಲ್ಲ. ಏಕೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಆ ಕುಮಾರಸ್ವಾಮಿಗೆ ಮೈತುಂಬ ದ್ವೇಷ ತುಂಬಿದೆ. ತಾವು ಸೋಲುವ ಸಮಯ ಬಂದಾಗ ಪತ್ನಿಯನ್ನು ನಿಲ್ಲಿಸಿದ್ದರು. ಈಗ ಭಾವನನ್ನು ನಿಲ್ಲಿಸಿದ್ದಾರೆ. ನನಗೆ ವಿಷ ಇಟ್ಟರೆಂದು ಹೇಳುತ್ತಾರೆ. ನಾನು ಯಾವ ರೀತಿ ವಿಷ ಇಟ್ಟೆ ಎಂದು ಹೇಳಲಿ. ನಾನಲ್ಲ ಕುಮಾರಸ್ವಾಮಿಯೇ ದಳ ಮುಗಿಸಿಬಿಟ್ಟ, ಇನ್ನು ದಳ ಮುಗಿದು ಹೋಯಿತು ಎಂದು ಹೇಳಿದರು.
ಕುಟುಂಬ ರಾಜಕಾರಣ ಬಿಟ್ಟು ಅಭಿವೃದ್ಧಿಗೆ ಮತನೀಡಿ:
ಮಾಜಿ ಪ್ರಧಾನಿ ದೇವೇಗೌಡರ ಮಗ ಮಂಡ್ಯದಿಂದ, ಮೊಮ್ಮಗ ಹಾಸನದಿಂದ, ಅಳಿಯ ಬೆಂಗಳೂರು ಗ್ರಾಮಾಂತರದಿಂದ ಸ್ಪರ್ಧಿಸಿದ್ದಾರೆ. ಕ್ಷೇತ್ರದ ಮತದಾರರು ಇವರ ಮಾತುಗಳಿಗೆ ಮೋಸಹೋಗಬೇಡಿ. ಕುಟುಂಬ ರಾಜಕಾರಣ ಮಾಡುವವರನ್ನು ಬಿಟ್ಟು, ಅಭಿವೃದ್ಧಿ ಮಾಡುವ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದರು.