
ಬೆಂಗಳೂರು (ಆ.08): ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಹೇಳಿತ್ತು. ಇದೀಗ ಮಾಡಲ್ಲ ಎನ್ನುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಕುಮಾರಕೃಪ ಅತಿಥಿಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರೋಕ್ಷವಾಗಿ ಕೇಂದ್ರ ಸರ್ಕಾರವು ತನ್ನ ಭರವಸೆ ಬಗ್ಗೆ ಯೂಟರ್ನ್ ಹೊಡೆದಿರುವುದಾಗಿ ಹೇಳಿದರು.
ಅಲ್ಲದೆ ಇಲಾಖೆ ಆರ್ಥಿಕ ಸ್ಥಿತಿ ಬಗ್ಗೆ ಅಸಹಾಯಕತೆ ವ್ಯಕ್ತಪಡಿಸಿದ ಅವರು, ನಮ್ಮ ಇಲಾಖೆಯಲ್ಲಿ 1.25 ಲಕ್ಷ ಕೋಟಿ ರು.ಗಳಷ್ಟುಕೆಲಸಗಳು ಮಂಜೂರಾಗಿವೆ. ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಎಲ್ಲರೂ ಮಾಡಿದ್ದಾರೆ. ಪ್ರಸ್ತುತ ಈ ಯೋಜನೆಗಳಡಿ 25 ಸಾವಿರ ಕೋಟಿ ರು. ಬಿಲ್‌ಗಳು ಪಾವತಿಗೆ ಬಾಕಿ ಇವೆ. ಆದರೆ ನಮ್ಮ ಇಲಾಖೆ ಬಳಿ 600 ಕೋಟಿ ರು. ಮಾತ್ರ ಇದೆ. ಈ ಬಗ್ಗೆ ಬೆಳಗ್ಗೆಯಷ್ಟೇ ಸಭೆ ನಡೆಸಿದ್ದೇನೆ ಎಂದು ಹೇಳಿದರು.
ಮೋದಿ ಬಂದ ಮೇಲೆ ರೈಲ್ವೆ ಇಲಾಖೆ ಚಿತ್ರಣ ಬದಲು: ಪ್ರಲ್ಹಾದ್ ಜೋಶಿ
5 ಸಾವಿರ ಕೋಟಿ ನೀಡಿಲ್ಲ: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದಿದ್ದರು. ಯೋಜನೆಗೆ ಐದು ಸಾವಿರ ಕೋಟಿ ರು. ಕೊಡುತ್ತೇವೆ ಎಂದಿದ್ದರು. ಯಾವುದನ್ನೂ ಕೊಟ್ಟಿಲ್ಲ. ಇರುವ ಹಣವನ್ನು ನಾನು ಯಾರಿಗೆ ಕೊಡಲಿ. ಪಾಪ ಗುತ್ತಿಗೆದಾರರ ಸಮಸ್ಯೆ ಅರ್ಥವಾಗುತ್ತದೆ. ನಮ್ಮ ಸ್ಥಿತಿಯೂ ತಿಳಿಯಬೇಕಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಏನಿದು ರಾಷ್ಟ್ರೀಯ ಯೋಜನೆ?: ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಜ್ಯದ ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸಿ ಕೇಂದ್ರದಿಂದ ಅನುದಾನ ನೀಡಲು ಕೇಂದ್ರ ಸರ್ಕಾರ ಒಪ್ಪಿದೆ ಎಂದು ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ 2022ರಲ್ಲಿ ಹೇಳಿದ್ದರು. ಇದರ ಬೆನ್ನಲ್ಲೇ ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗ 2023ರ ಫೆ.1 ರಂದು ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಯೋಜನೆಗೆ 5,300 ಕೋಟಿ ರು. ಅನುದಾನ ಘೋಷಿಸಿದ್ದರು.
ಗೃಹಜ್ಯೋತಿಯಿಂದ ಗ್ರಾಹಕರ ಆರ್ಥಿಕ ಹೊರೆ ತಪ್ಪಿದೆ: ಸಚಿವ ಡಿ.ಸುಧಾಕರ್
ಇದಕ್ಕೂ ಮೊದಲು 2021ರ ಸೆಪ್ಟೆಂಬರ್‌ನಲ್ಲಿ ಅಂದಿನ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು 21,450 ಕೋಟಿ ರು. ಅಂದಾಜು ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳುತ್ತಿದ್ದು, 16 ಸಾವಿರ ಕೋಟಿ ರು. ಕೇಂದ್ರ ಸರ್ಕಾರ ನೀಡಲಿದೆ ಎಂದಿದ್ದರು. ಇದೀಗ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸಲ್ಲ ಹಾಗೂ 5 ಸಾವಿರ ಕೋಟಿ ರು. ನೀಡಲ್ಲ ಎಂದಿರುವುದಾಗಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆ ಹೊಸ ವಿವಾದ ಸೃಷ್ಟಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.