ಬಿಜೆಪಿಯವರು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಕರೆದುಕೊಂಡು ಮಜಾ ಮಾಡಿರಲಿಲ್ಲವೆ? ಅವರು ರಾಜಕಾರಣ ಮಾಡಲಿ. ನೀವೇನು ಬೆದರಿಕೆ ಹಾಕುತ್ತೀರೋ ಅದನ್ನೇ ಬೇರೆಯವರು ಹಾಕಲಿಲ್ಲವೆ? ನೀವು ಮೈತ್ರಿ ಸರ್ಕಾರ ಬೀಳಿಸಿ ಅಧಿಕಾರದಿಂದ ತೆಗೆಯಲಿಲ್ಲವೆ?’ ಎಂದು ಖಾರವಾಗಿ ಪ್ರಶ್ನಿಸಿದ ಡಿ.ಕೆ.ಶಿವಕುಮಾರ್
ಬೆಂಗಳೂರು(ಆ.21): ಕೋಳಿ ಕೇಳಿ ಮಸಾಲೆ ಅರೆಯುತ್ತಾರಾ? ನಾವು ಯಾವ ಕೋಳಿಯನ್ನೂ ಕೇಳುವುದಿಲ್ಲ. ಬಿಜೆಪಿಯವರು ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಕರೆದೊಯ್ದು ಮೈತ್ರಿ ಸರ್ಕಾರ ಬೀಳಿಸಲಿಲ್ಲವೆ? ಅವರು ಆಪರೇಷನ್ ಮಾಡಿದಾಗ ಏನಾಗಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅನೇಕರು ನನ್ನನ್ನು ಭೇಟಿ ಮಾಡುತ್ತಿರುತ್ತಾರೆ. ಯಾರು ಯಾವ ಕಾರಣಕ್ಕೆ ಭೇಟಿ ಆಗುತ್ತಿದ್ದಾರೆ ಎಂದು ಹೇಳಲು ಸಾಧ್ಯವಾ? ಅವರವರ ಬದುಕು, ಅವರವರ ಭವಿಷ್ಯ ಅವರೇ ನೋಡಿಕೊಳ್ಳುತ್ತಾರೆ. ಸಿ.ಟಿ. ರವಿ ಅವರು ನಮಗೆ ಬೆದರಿಕೆ ಹಾಕುತ್ತಿದ್ದಾರೆ. ಕೈ ಕತ್ತರಿಸಲು ನಮಗೂ ಗೊತ್ತಿದೆ ಎಂದಿದ್ದಾರೆ. ಅವರು ಆಪರೇಶನ್ ಮಾಡಿದಾಗ ಏನಾಗಿತ್ತು? ಎಂದು ಪ್ರಶ್ನಿಸಿದರು. ಬಿಜೆಪಿಯವರು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಕರೆದುಕೊಂಡು ಮಜಾ ಮಾಡಿರಲಿಲ್ಲವೆ? ಅವರು ರಾಜಕಾರಣ ಮಾಡಲಿ. ನೀವೇನು ಬೆದರಿಕೆ ಹಾಕುತ್ತೀರೋ ಅದನ್ನೇ ಬೇರೆಯವರು ಹಾಕಲಿಲ್ಲವೆ? ನೀವು ಮೈತ್ರಿ ಸರ್ಕಾರ ಬೀಳಿಸಿ ಅಧಿಕಾರದಿಂದ ತೆಗೆಯಲಿಲ್ಲವೆ?’ ಎಂದು ಖಾರವಾಗಿ ಪ್ರಶ್ನಿಸಿದರು.
ಇನ್ನೂ ಮೂರೇ ತಿಂಗಳು ಮುಂದಾನಾಗುತ್ತೆ ಕಾದು ನೋಡಿ: ಸಿ.ಟಿ.ರವಿ ಸ್ಫೋಟಕ ಹೇಳಿಕೆ
ನಮಗಿರುವ ಸಂಖ್ಯಾಬಲಕ್ಕೆ ಯಾರ ಅಗತ್ಯವೂ ಇಲ್ಲ. ನಾವು ಯಾರನ್ನೂ ಕರೆಯುತ್ತಲೂ ಇಲ್ಲ. ನಮಗೆ ಯಾವ ಭೀತಿಯ ಯೋಚನೆಯೂ ಇಲ್ಲ. ಇಡೀ ದೇಶ, ರಾಜ್ಯದ ಉದ್ದಗಲದಲ್ಲಿ ಪಕ್ಷ ಉಳಿಸಲು ಜನ ತೀರ್ಮಾನಿಸಿದ್ದಾರೆ. ಹೀಗಾಗಿ ಪಕ್ಷಕ್ಕೆ ಬರುವ ಜನರನ್ನು ಬೇಡ ಎನ್ನಲು ಸಾಧ್ಯವೇ? ತಡೆಯಲು ಸಾಧ್ಯವಾಗುತ್ತದೆಯೇ ಅಥವಾ ಯಾವುದೇ ಕೋಳಿ ಕೇಳಿ ಮಸಾಲೆ ಅರೆಯಬೇಕೆ? ನಾವು ಯಾವ ಕೋಳಿಯನ್ನೂ ಕೇಳಲ್ಲ ಎಂದು ಹರಿಹಾಯ್ದರು.
‘ಎರಡು ವರ್ಷಗಳ ನಂತರ ಮಂತ್ರಿ ಮಂಡಲ ಬದಲಾವಣೆ’ ಬಗ್ಗೆ ಮುನಿಯಪ್ಪ ಅವರ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ‘ಪಕ್ಷ ಏನು ಹೇಳುತ್ತದೆ ಅದಕ್ಕೆ ಎಲ್ಲರೂ ಬದ್ಧರಾಗಬೇಕು. ಈ ವಿಚಾರ ಪಕ್ಷಕ್ಕೆ ಸಂಬಂಧಿಸಿದ್ದು, ಯಾರೂ ಬಹಿರಂಗ ಚರ್ಚೆ ಮಾಡಬಾರದು. ಮುಂದಿನ ವಾರ ರಾಷ್ಟ್ರೀಯ ನಾಯಕರು ಬರುತ್ತಾರೆ. ಆಗ ಎಲ್ಲವೂ ಚರ್ಚೆಗೆ ಬರಲಿದೆ’ ಎಂದು ತಿಳಿಸಿದರು.