
ಎಸ್.ಗಿರೀಶ್‌ಬಾಬು
ಬೆಂಗಳೂರು(ಮಾ.30): ಬಿಜೆಪಿಗೆ ಹೋಲಿಸಿದರೆ ಮಸುಕು ಎನ್ನಲಾಗುತ್ತಿದ್ದ ಕಾಂಗ್ರೆಸ್ಸಿನ ಮಾಧ್ಯಮ ತಂತ್ರಗಾರಿಕೆ, ಅದರಲ್ಲೂ ವಿಶೇಷವಾಗಿ ಸೋಷಿಯಲ್ ಮೀಡಿಯಾ ತಂತ್ರಗಾರಿಕೆ ಕಳೆದ ಒಂದು ವರ್ಷದಲ್ಲಿ ಆಮೂಲಾಗ್ರವಾಗಿ ಬದಲಾಗಿ ಬಿಜೆಪಿಗೆ ಸಮರ್ಥ ಟಕ್ಕರ್ ನೀಡುತ್ತಿದೆ. ಪೇಸಿಎಂ, 40 ಪರ್ಸೆಂಟ್‌ನಂತಹ ತಂತ್ರಗಾರಿಕೆ ಮೂಲಕ ಸರ್ಕಾರವನ್ನು ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಸಿದರೆ, ಬಿಟ್ ಕಾಯಿನ್, ಪಿಎಸ್‌ಐ, ಗಂಗಾ ಕಲ್ಯಾಣ, ಕಾಕಂಬಿಯಂತಹ ಹಗರಣಗಳನ್ನು ಬಿಚ್ಚಿಡುವ ಮೂಲಕ ಬಲ ತಂದುಕೊಟ್ಟಿದೆ.
ಕಾಂಗ್ರೆಸ್ ಮಾಧ್ಯಮ ಘಟಕ ಇವತ್ತು ಆಕ್ರಮಣಕಾರಿ ಎನಿಸಿಕೊಳ್ಳುತ್ತಿದ್ದರೆ ಅದಕ್ಕೆ ಕಾರಣ ಪ್ರಿಯಾಂಕ ಖರ್ಗೆ. ಕೆಪಿಸಿಸಿ ಮಾಧ್ಯಮ ಘಟಕದ ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಳಿಸಿರುವ ಪ್ರಿಯಾಂಕ ಖರ್ಗೆ ಪಕ್ಷದ ಪ್ರಚಾರ ತಂತ್ರಗಾರಿಕೆಗೆ ಅಕ್ರಮಣಕಾರಿ ಅಪ್ರೋಚ್ ನೀಡಿದವರು. ಅಷ್ಟೇ ಅಲ್ಲ, ಮುಂಚೂಣಿಯಲ್ಲಿ ನಿಂತು ಬಿಜೆಪಿ ಸರ್ಕಾರದ ಹಗರಣ ಬಯಲಿಗೆಳೆದವರು. ತನ್ಮೂಲಕ ತಮ್ಮ ತಂದೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೆರಳಿನ ಹೊರತಾಗಿಯೂ ನಾಡಿನ ಹೊಸ ಪೀಳಿಗೆಯ ಫೈರ್‌ಬ್ರಾಂಡ್ ರಾಜಕಾರಣಿ ಎಂಬ ವರ್ಚಸ್ಸು ಬೆಳೆಸಿಕೊಂಡಿದ್ದಾರೆ. ವಿಧಾನಸಭಾ ಚುನಾವಣೆ ಸಮೀಪಿಸಿರುವ ಈ ಹಂತದಲ್ಲಿ ‘ಕನ್ನಡಪ್ರಭ’ದೊಂದಿಗೆ ಮುಖಾಮುಖಿಯಾಗಿರುವ ಪ್ರಿಯಾಂಕ ಖರ್ಗೆ, ಕಾಂಗ್ರೆಸ್ ಪ್ರಚಾರ ತಂತ್ರದ ಹಿಂದಿನ ಮರ್ಮ, ಒಳ ಮೀಸಲಾತಿ ಹಿಂದಿನ ಒಳ ರಾಜಕೀಯ, ಪಕ್ಷದೊಳಗಿನ ದಲಿತ ಮುಖ್ಯಮಂತ್ರಿ ಕೂಗು ಹಾಗೂ ಚುನಾವಣೆಯಲ್ಲಿ ಸೀನಿಯರ್ ಖರ್ಗೆ ಅವರ ಪ್ರಭಾವದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ನ್ಯೂಸ್ ಅವರ್ ಸ್ಪೆಶಲ್‌ನಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ.... ಏನಂದ್ರು ಎಂ.ಬಿ ಪಾಟೀಲ್?
ಮಲ್ಲಿಕಾರ್ಜುನ ಖರ್ಗೆ ನಾಡಿನ ಉನ್ನತ ನಾಯಕರು. ಈಗ ಎಐಸಿಸಿ ಅಧ್ಯಕ್ಷರು. ಚುನಾವಣೆಯ ಮೇಲೆ ಅವರ ಪ್ರಭಾವ ಇರುತ್ತಾ?
ಖಂಡಿತವಾಗಿಯೂ ಇರುತ್ತೆ. ಮಲ್ಲಿಕಾರ್ಜುನ ಖರ್ಗೆ ಪಕ್ಷದಲ್ಲಿ ಅತ್ಯಂತ ಹಿರಿಯರು. ನಾಡಿನ ಮೂಲೆ ಮೂಲೆಯಲ್ಲೂ ಅವರಿಗೆ ಜನರು ಗೊತ್ತಿದ್ದಾರೆ. ಸುದೀರ್ಘ ರಾಜಕಾರಣದಲ್ಲಿ ಅವರಿಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ. ಈ ಬಗ್ಗೆ ಸಾಮಾನ್ಯ ಕಾರ್ಯಕರ್ತರಿಗೆ ಹೆಮ್ಮೆಯಿದೆ. ಹೀಗಾಗಿ ಅವರ ಪ್ರಭಾವ ಚುನಾವಣೆ ಮೇಲೆ ಸಹಜವಾಗಿ ಇರುತ್ತದೆ. ಅಲ್ಲದೆ, ಪಕ್ಷದಲ್ಲಿ ಹಿರಿಯರಾದ ಕಾರಣ ಅವರು ಸಲಹೆ ನೀಡಿದರೆ ಎಲ್ಲರೂ ಕೇಳುತ್ತಾರೆ. ತಪ್ಪು ಮಾಡಿದರೆ, ಕಿವಿ ಹಿಂಡುವ ಹಿರಿತನ ಅವರಿಗೆ ಇದೆ. ಹೀಗಾಗಿಯೇ ಚುನಾವಣೆಯನ್ನು ಒಗ್ಗಟಾಗಿ ಎದುರಿಸಬೇಕು. ನನ್ನ ಮರ್ಯಾದೆ ಉಳಿಸಬೇಕು ಎಂದು ಅವರು ರಾಜ್ಯ ನಾಯಕರಿಗೆ ಸೂಚನೆ ಕೊಟ್ಟರು. ಅದನ್ನು ಎಲ್ಲರೂ ಪಾಲಿಸುತ್ತಿದ್ದಾರಲ್ಲ.
ದಲಿತ ಮುಖ್ಯಮಂತ್ರಿ ಆಗ್ರಹ ಆಗಾಗ ಕೇಳಿ ಬರುತ್ತಲೇ ಇರುತ್ತಲ್ಲ?
ದಲಿತ ಮುಖ್ಯಮಂತ್ರಿ ಆಗಬೇಕೋ ಅಥವಾ ಇನ್ಯಾರು ಮುಖ್ಯಮಂತ್ರಿ ಆಗಬೇಕೋ ಎಂಬುದು ಈಗ ಮುಖ್ಯವಲ್ಲ. ಮಲ್ಲಿಕಾರ್ಜುನ ಖರ್ಗೆ ಹಲವು ಬಾರಿ ಇದನ್ನು ಸ್ಪಷ್ಟವಾಗಿ ಹೇಳಿದ್ದಾರೆ. ಈ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 150 ಸೀಟುಗಳು ಬೇಕು. ಅದು ಮುಖ್ಯ ಗುರಿ. ಅದು ಬಂದ ಮೇಲೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ. ಗುರಿ ಮುಟ್ಟಿದ ನಂತರ ಯಾರು ಸರ್ಕಾರ ನಡೆಸಬೇಕು ಎನ್ನುವುದನ್ನು ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಖರ್ಗೆ ಅವರು ನಿರ್ಧರಿಸುತ್ತಾರೆ.
ರಾಜ್ಯದ ಮೊದಲ ದಲಿತ ಮುಖ್ಯಮಂತ್ರಿ ಖರ್ಗೆ ಅವರೇ ಆಗಬೇಕು ಎಂಬ ಕನಸು ನಾಡಿನ ದಲಿತ ಸಮುದಾಯದಲ್ಲಿ ಇತ್ತು. ಅದು ನನಸಾಗುತ್ತಾ?
ಖರ್ಗೆ ಸಾಹೇಬರು ಈಗ ಇರುವ ಸ್ಥಾನದಲ್ಲಿ ಅವರ ಮುಂದೆ ದೊಡ್ಡ ಜವಾಬ್ದಾರಿ ಇದೆ. ಅದು ಈ ದೇಶವನ್ನು ಉಳಿಸುವ, ಸಂವಿಧಾನವನ್ನು ರಕ್ಷಿಸುವ ಜವಾಬ್ದಾರಿ. ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ ರೀತಿಯನ್ನು ನೋಡಿದರೆ ದೇಶದಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ ಎಂದು ಹೇಳಲು ಸಾಧ್ಯವೇ? ಈಗ ಮುಖ್ಯವಾಗಿರುವುದು ದೇಶವನ್ನು ಉಳಿಸುವುದು. ಈ ಚುನಾವಣೆಯಲ್ಲಿ ಪ್ರಜಾಪ್ರಭುತ್ವದ ವಿರುದ್ಧ ಇರುವವರ ವಿರುದ್ಧ ಕಾಂಗ್ರೆಸ್ ಸೆಣಸುತ್ತಿದೆ. ಹೀಗಾಗಿ, ಕರ್ನಾಟಕ ಉಳಿದರೆ, ಮುಂದೆ ದೇಶ ಉಳಿಯುತ್ತದೆ. ಹೀಗಾಗಿ, ದಲಿತ ಮುಖ್ಯಮಂತ್ರಿ, ಹಿಂದುಳಿದ ಮುಖ್ಯಮಂತ್ರಿ, ಮುಂದುವರೆದ ಸಮಾಜದ ಮುಖ್ಯಮಂತ್ರಿ ಎಂಬ ವಿಚಾರಗಳೆಲ್ಲ ಈಗ ಅಪ್ರಸ್ತುತ.
ಅಪ್ರಸ್ತುತ ಹೇಗೆ? ಖರ್ಗೆ ಎಐಸಿಸಿ ಅಧ್ಯಕ್ಷರಾದ ನಂತರ ದಲಿತ ಸಂಘಟನೆಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿವೆಯಲ್ಲ?
ದಲಿತ ಸಂಘಟನೆಗಳು ಅಥವಾ ಪಕ್ಷವನ್ನು ಸೇರುತ್ತಿರುವ ಪ್ರಮುಖ ಸಂಘಟನೆಗಳು ಹಾಗೂ ನಾಯಕರ ಗುರಿ ದೇಶವನ್ನು ಹಾಗೂ ಸಂವಿಧಾನವನ್ನು ಉಳಿಸಬೇಕು ಎಂಬುದಾಗಿದೆ. ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಸಂವಿಧಾನದ ಫ್ರೇಮ್ ವರ್ಕ್ ಬದಲಾಗಬೇಕು ಎನ್ನುತ್ತಾರಲ್ಲ ಅದರ ಅರ್ಥ ಏನು? ದಲಿತ ಸಂಘಟನೆಗಳ ಮಾತು ಬಿಡಿ, ಬಿಜೆಪಿಯ ದಲಿತ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರೇ ನಾನು ದಲಿತ ಅಂತ ನನ್ನನ್ನು ತುಳಿಯುತ್ತಿದ್ದಾರೆ ಎಂದರಲ್ಲ, ಇದೆಲ್ಲ ಏನು ಹೇಳುತ್ತದೆ. ಇದನ್ನು ಸಮುದಾಯ, ಸಂಘಟನೆಗಳು ನೋಡಿವೆ. ವೈಯಕ್ತಿಕ ಆಸೆ, ಲಾಭಗಳಿಗಿಂತ ಸಂವಿಧಾನ ಉಳಿದರೆ ಸ್ವಾಭಿಮಾನದ ಬದುಕು ಇರುತ್ತೆ, ಸಮಾನತೆ ಉಳಿಯುತ್ತೆ ಎಂದು ಪಕ್ಷ ಸೇರುತ್ತಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ನಿಮ್ಮ ತಂದೆ ಖರ್ಗೆ ಅವರನ್ನು ಟಾರ್ಗೆಟ್ ಮಾಡಲಾಯಿತು. ಈಗ ಆ ಸರದಿ ನಿಮ್ಮದು ಅಂತಾರಲ್ಲ?
ಚುನಾವಣೆಯಲ್ಲಿ ಗೆಲ್ಲುವ ಏಕೈಕ ಉದ್ದೇಶವಿಟ್ಟುಕೊಂಡು ರಾಜಕಾರಣಿಯಾದವರು ನಾವಲ್ಲ. ಚುನಾವಣೆಗಳು ಬರುತ್ತವೆ, ಹೋಗುತ್ತವೆ. ನಿಜ, ಬಿಜೆಪಿಯವರು ಏನೇ ಮಾಡಿದರೂ, ಅದನ್ನು ನೋಡಿಕೊಂಡು ನಾವು ಸುಮ್ಮನಿದ್ದರೆ ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲುತ್ತೇವೆ. ಆದರೆ, ಇಂತಹ ಹೊಂದಾಣಿಕೆ ರಾಜಕಾರಣವನ್ನು ಮಲ್ಲಿಕಾರ್ಜುನ ಖರ್ಗೆಯವರು ಯಾವತ್ತೂ ಮಾಡಿಲ್ಲ. ನಾನೂ ಮಾಡುವುದಿಲ್ಲ. ನಮ್ಮಲ್ಲಿ ಬುದ್ಧನ ತತ್ವ, ನಾರಾಯಣಗುರು ಅವರ ಸಿದ್ಧಾಂತ ಹೇಗೆ ಅಂತರ್ಗತವಾಗಿದೆಯೋ ಅದೇ ರೀತಿ ಅಂಬೇಡ್ಕರ್ ಅವರ ಹೋರಾಟದ ರಕ್ತ ನಮ್ಮಲ್ಲಿ ಹರಿಯುತ್ತಿದೆ. ನಾನು ಚಿತ್ತಾಪುರದ ಜನರಿಗೆ ಸೇವೆ ಸಲ್ಲಿಸಿದ್ದೇನೆ. ಆ ಜನರು ತಲೆ ತಗ್ಗಿಸುವಂತಹ ಒಂದೂ ಕೆಲಸವನ್ನು ಮಾಡಿಲ್ಲ. ನನ್ನ ಪ್ರಾಮಾಣಿಕತೆ ಹಾಗೂ ಕೆಲಸದ ಬಗೆಗಿನ ಶ್ರದ್ಧೆಯನ್ನು ನನ್ನ ಜನ ನೋಡಿದ್ದಾರೆ. ಹೀಗಾಗಿ ಅವರು ನನ್ನ ಕೈ ಹಿಡಿಯುತ್ತಾರೆ ಎಂಬ ನಂಬಿಕೆಯಿದೆ.
ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಸರ್ಕಾರ ಪರಿಶಿಷ್ಟರಿಗೆ ಒಳ ಮೀಸಲಾತಿ ಜಾರಿ ತೀರ್ಮಾನ ಕೈಗೊಂಡಿದೆ. ನಿಮ್ಮ ಅಭಿಪ್ರಾಯ?
ಮೀಸಲಾತಿ ನೆಪದಲ್ಲಿ ಎಲ್ಲರ ಮೂಗಿನ ಮೇಲೂ ತುಪ್ಪ ಸವರುವ ಕೆಲಸವನ್ನು ಮಾಡಿದ್ದಾರೆ ಬಿಜೆಪಿಯವರು. ಚುನಾವಣೆ ನೀತಿ ಸಂಹಿತೆ ಜಾರಿಗೆ ಬರುವ ಈ ಹಂತದಲ್ಲಿ ಜನರೊಂದಿಗೆ ಚರ್ಚಿಸದೆ, ಸಮರ್ಪಕ ಅಧ್ಯಯನ ನಡೆಸದೆ, ವೈಜ್ಞಾನಿಕವಾಗಿ ಮೀಸಲಾತಿ ಕಲ್ಪಿಸುವ ಪ್ರಯತ್ನವನ್ನೂ ಮಾಡಿಲ್ಲ. ಕೆಲವರು ಎ.ಸಿ. ರೂಮಿನಲ್ಲಿ ಕುಳಿತು ಒಳ ಮೀಸಲಾತಿ ಜಾರಿಗೊಳಿಸುತ್ತಿದ್ದೇವೆ ಎಂದಿದ್ದಾರೆ. ಅಷ್ಟೆಅಲ್ಲ, ಮುಸ್ಲಿಮರಿಗೆ ಇದ್ದ ಮೀಸಲನ್ನು ತೆಗೆದು ಒಕ್ಕಲಿಗರಿಗೆ, ಲಿಂಗಾಯತರಿಗೆ ಹಂಚುವ ತೀರ್ಮಾನ ಪ್ರಕಟಿಸಿದ್ದಾರೆ. ಆದರೆ, ಇದ್ಯಾವುದೂ ಜಾರಿಯಾಗುವಂತಹದ್ದಲ್ಲ. ಏಕೆಂದರೆ, ಇದನ್ನು ಪ್ರಶ್ನಿಸಿ ಯಾರು ನ್ಯಾಯಾಲಯಕ್ಕೂ ಹೋದರೂ ತಕ್ಷಣ ಮೀಸಲು ವಿಚಾರ ಬಿದ್ದು ಹೋಗುತ್ತದೆ. ಆಗ, ನಾವು ಒಳ ಮೀಸಲು ನೀಡಲು ಯತ್ನಿಸಿದೆವು, ನ್ಯಾಯಾಲಯ ಬಿಡಲಿಲ್ಲ ಎಂದು ಜನತೆಗೆ ದಾರಿತಪ್ಪಿಸಲು ಈ ಕುತಂತ್ರ ಹೂಡಿದೆ.
ಕಾಂಗ್ರೆಸ್ ಬಂದರೆ ಏನು ಮಾಡುವಿರಿ?
ಸರ್ಕಾರವೆಂದರೆ ಏನು? ಜನರೊಂದಿಗೆ ಸಂವಾದ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿ, ಸಂಗ್ರಹವಾದ ಅಭಿಪ್ರಾಯ ಆಧರಿಸಿ ವೈಜ್ಞಾನಿಕ ಅಧ್ಯಯನ ನಡೆಸಿ ವಾಸ್ತವವನ್ನು ಅರಿಯುವ ಮತ್ತು ಈ ನಿಜ ಸ್ಥಿತಿಯನ್ನು ಜನರಿಗೆ ಮನದಟ್ಟು ಮಾಡಿಕೊಟ್ಟು ನಿಮಗೆ ಯಾವ ಕಾರಣಕ್ಕೆ ಯಾವ ಸೌಲಭ್ಯವನ್ನು ಕೊಡಲಾಗುತ್ತಿದೆ ಎಂಬುದನ್ನು ತಿಳಿಸುವ ಅಥವಾ ಒಂದು ವೇಳೆ ಸೌಲಭ್ಯ ನೀಡಲಾಗದಿದ್ದರೆ ಅದನ್ನು ಜನರಿಗೆ ಮನದಟ್ಟು ಮಾಡಿಕೊಡುವ ವ್ಯವಸ್ಥೆಯಲ್ಲವೇ? ಇದನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಖಂಡಿತವಾಗಿಯೂ ಮಾಡುತ್ತದೆ. ಬಿಜೆಪಿ ಸರ್ಕಾರ ಅದನ್ನು ಮಾಡಿಯೇ ಇಲ್ಲ. ಸದಾಶಿವ ವರದಿಯಲ್ಲಿ ಏನಿದೆ ಎಂಬ ಬಗ್ಗೆ ಚರ್ಚೆಗೆ ಅವಕಾಶ ನೀಡಲಿಲ್ಲ. ಎ.ಸಿ. ರೂಮಿನಲ್ಲಿ ಕುಳಿತು ಚುನಾವಣೆ ಬಂದಾಗ ತರಾತುರಿ ನಿರ್ಧಾರ ಪ್ರಕಟಿಸಿ ಎಲ್ಲವನ್ನು ಗೋಜಲು ಮಾಡಿಟ್ಟಿದೆ.
ಸಿದ್ದರಾಮಯ್ಯ, ಡಿಕೆಶಿ, ಸುರ್ಜೇವಾಲ ನಂತರ ಬಿಜೆಪಿ ಸರ್ಕಾರದ ಅತ್ಯುಗ್ರ ಟೀಕಾಕಾರ ಪ್ರಿಯಾಂಕ ಖರ್ಗೆ. ಉಳಿದ ನಾಯಕರೇಕೆ ಮೌನ?
ಆ ರೀತಿ ಏನಿಲ್ಲ. ಕಾಂಗ್ರೆಸ್ ಪ್ರತಿಯೊಂದನ್ನೂ ಯೋಜಿತ ರೀತಿಯಲ್ಲಿ ಮಾಡುತ್ತಿದೆ. ಯಾವ ವಿಚಾರಕ್ಕೆ ಯಾರು ಮಾತನಾಡಬೇಕು ಎಂಬುದನ್ನು ಯೋಜಿಸಲಾಗುತ್ತಿದೆ. ಚಿಲುಮೆ ವಿಚಾರ ಬಂದಾಗ ಕೆಪಿಸಿಸಿ ಅಧ್ಯಕ್ಷರು ಮಾತನಾಡಿದರು. ಅನಂತರ ರಿಜ್ವಾನ್ ಅರ್ಷದ್ ಈ ವಿಚಾರ ಮುಂದುವರೆಸಿದರು. ಬಿಬಿಎಂಪಿ ವಿಚಾರಗಳು ಬಂದಾಗ ರಾಮಲಿಂಗಾರೆಡ್ಡಿ ಅವರು ಮಾತನಾಡಿದರು. ಇತ್ತೀಚಿನ ಒಳ ಮೀಸಲಾತಿ, ಬಂಜಾರ ವಿಚಾರ ಬಂದಾಗ ಪ್ರಕಾಶ್ ರಾಥೋಡ್ ಮಾತನಾಡಿದ್ದಾರೆ. ಹೀಗೆ ಯಾವ ವಿಷಯ ಬರುತ್ತದೆಯೋ ಅದಕ್ಕೆ ತಕ್ಕ ವಿಷಯ ತಜ್ಞರಂತೆ ನಮ್ಮ ನಾಯಕರು ಮಾತನಾಡುತ್ತಿದ್ದಾರೆ. ಎಲ್ಲರೂ ಎಲ್ಲ ವಿಷಯಕ್ಕೂ ಮಾತನಾಡುವ ಅಗತ್ಯವಿಲ್ಲವಲ್ಲ.
ನೀವು ಮುಂಚೂಣಿಯಲ್ಲಿ ನಿಂತು ಪಿಎಸ್‌ಐ, ಬಿಟ್ ಕಾಯಿನ್ ಹಗರಣಗಳ ಹೋರಾಟ ಆರಂಭಿಸಿದಿರಿ. ಯಾಕೋ ತಾರ್ಕಿಕ ಅಂತ್ಯ ಮುಟ್ಟಲಿಲ್ಲ?
ಈ ಮಾತನ್ನು ನಾನು ಒಪ್ಪುವುದಿಲ್ಲ. ಪಿಎಸ್‌ಐ ಹಗರಣವನ್ನು ನಾವು ಪ್ರಸ್ತಾಪ ಮಾಡಿ ಹೋರಾಟ ಮಾಡಿದ್ದರಿಂದಲೇ ಎಫ್‌ಐಆರ್ ಆಯ್ತು. ಗಂಗಾ ಕಲ್ಯಾಣ ಪ್ರಸ್ತಾಪಿಸಿದ್ದಾಗ ಅಂತಹದ್ದೇನು ನಡೆದೇ ಇಲ್ಲ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಈಗ ಆ ಹಗರಣದ ಬಗ್ಗ ಸಿಐಡಿ ತನಿಖೆ ನಡೆದಿದೆಯಲ್ಲವೇ? ಈ ಹಗರಣಗಳ ಬಗ್ಗೆ ವಿಶೇಷವಾಗಿ ಪಿಎಸ್‌ಐ ಹಗರಣ ಪ್ರಸ್ತಾಪ ಮಾಡಿದಾಗ ನನ್ನನ್ನು ಬೆದರಿಸುವ ಪ್ರಯತ್ನ ನಡೆದಿತ್ತು. ಈ ವಿಚಾರದಲ್ಲಿ ನಿಮ್ಮ ಹೆಸರು ಬರುತ್ತೆ ಎಂದು ಕೆಲವರು ಹೇಳಿದರು. ನಾನು ಬಂದರೆ ಬರಲಿ, ಯಾರೇ ತಪ್ಪು ಮಾಡಿದ್ದರೂ ಶಿಕ್ಷಯಾಗಲಿ ಎಂದು ಆರೋಪ ಮುಂದುವರೆಸಿದೆ. ಅದರ ತನಿಖೆ ನಡೆದು ಐಪಿಎಸ್ ಅಧಿಕಾರಿ ಬಂಧನವಾಯಿತ್ತಲ್ಲವೇ? ಹೀಗಿರುವಾಗ ತಾರ್ಕಿಕ ಅಂತ್ಯ ಮುಟ್ಟಿಲ್ಲ ಎಂದು ಹೇಗೆ ಹೇಳುವಿರಿ?
ಕೆಲ ಅಧಿಕಾರಿಗಳ ಬಂಧನವಾಗಿದೆ. ವಿಚಾರಣೆ ನಡೆದಿದೆ ಎಂದ ಮಾತ್ರಕ್ಕೆ ತಾರ್ಕಿಕ ಅಂತ್ಯವೇ?
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಈ ಎಲ್ಲ ಹಗರಣಗಳಲ್ಲಿ ಯಾರಾರಯರು ಯಾವ ಯಾವ ಹಂತದಲ್ಲೂ ಭಾಗಿಯಾಗಿದ್ದರೂ ತನಿಖೆ ನಡೆಸಿ ಶಿಕ್ಷೆಯಾಗುವಂತೆ ಮಾಡುತ್ತೇವೆ. ತಾರ್ಕಿಕ ಅಂತ್ಯ ಮುಟ್ಟಿಸುತ್ತೇವೆ.
ಕೆಪಿಸಿಸಿ ಮಾಧ್ಯಮ ಘಟಕದ ಮುಖ್ಯಸ್ಥರಾಗಿ ಒಂದು ವರ್ಷ ಆಗಿದೆ. ಹೇಗಿತ್ತು ಅನುಭವ?
ನೋಡಿ, ಸ್ವಭಾವದಿಂದ ನಾನು ಮಾಧ್ಯಮ ಸ್ನೇಹಿಯಲ್ಲ. ನನಗೂ ಮೊದಲು ಈ ಸ್ಥಾನದಲ್ಲಿದ್ದವರು ಮಾಧ್ಯಮ ಲೋಕ, ಸಾಹಿತ್ಯ ಲೋಕದ ಜತೆ ಉತ್ತಮ ಸಂಬಂಧ ಹೊಂದಿದ್ದರು. ನಡೆ, ನುಡಿ ಭಾಷೆ ಎಲ್ಲವೂ ಬೇರೆ ರೀತಿಯಿತ್ತು. ಆದರೆ, ನನ್ನದು ಆ ರೀತಿಯಿಲ್ಲ. ಬೈ ಡಿಫಾಲ್ಟ್ ಕ್ಯಾಮೆರಾ ಮುಂದೆ ಬರುವ ವ್ಯಕ್ತಿತ್ವ ನನ್ನದಲ್ಲ. ನನ್ನ ಪದ ಬಳಕೆ, ಭಾಷೆ ಅಷ್ಟುಸ್ಪಷ್ಟವಾಗಿಲ್ಲ. ಆದರೆ ಬಿಜೆಪಿಯವರು ಆಡುತ್ತಿರುವ ಆಟಗಳನ್ನು ಎದುರಿಸಲು ಪ್ರಿಯಾಂಕನೇ ಸೂಕ್ತ ಎಂದು ಕೆಪಿಸಿಸಿ ಅಧ್ಯಕ್ಷರು ಹಾಗೂ ಹಿರಿಯರು ಭಾವಿಸಿ ನನಗೆ ಈ ಸ್ಥಾನ ನೀಡಿದರು.
ಕಾರ್ಯಕರ್ತರೇ ನಿಜವಾದ ರಾಜಾಹುಲಿ, ಮರಿಹುಲಿಗಳು: ಡಾ.ಅರುಣ್ ಸೋಮಣ್ಣ
ಮೈಲ್ಡ್ ಆಗಿದ್ದ ಕಾಂಗ್ರೆಸ್ ಮಿಡಿಯಾ ಸೆಲ್ ಇದೀಗ ಭಾರಿ ಅಗ್ರೆಸಿವ್ ಆಗಿದೆ. ಹೇಗೆ ಆಯಿತು ಈ ಬದಲಾವಣೆ?
ನಾವು ಕಂಟೆಂಟ್ ಮೇಲೆ ಹೆಚ್ಚು ಕೆಲಸ ಮಾಡುತ್ತೇವೆ. ದಾಖಲೆ ಹಾಗೂ ದತ್ತಾಂಶ ಆಧಾರದ ಮೇಲೆ ಮಾತನಾಡುತ್ತೇವೆ. ಅಷ್ಟೇ ಅಲ್ಲ ಯಾವುದೇ ವಿಚಾರವಾಗಿದ್ದರೂ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ವಿಷಯವನ್ನು ಬಿಡಿಸಿಡುತ್ತೇವೆ. ಉದಾಹರಣೆಗೆ ಬಿಟ್ ಕಾಯಿನ್‌ನಂತಹ ತೀರಾ ಟೆಕ್ನಿಕಲ್ ವಿಚಾರವನ್ನು ಸರಳವಾಗಿ ಜನರ ಮುಂದೆ ಇಟ್ಟೆವು. ಇದರಿಂದ ಜನರಿಗೆ ಈ ಹಗರಣ ಅರ್ಥ ಆಯ್ತು. ಆದರೆ, ಬಿಜೆಪಿಯವರು ಭಾವನಾತ್ಮಕತೆ ವಿಚಾರ ಆಯ್ದುಕೊಂಡು ಕಟ್ಟುಕಥೆ ಹೇಳುತ್ತಾರೆ. ಅವರ ನೆರೇಟಿವ್‌ನಲ್ಲೂ ದ್ವಂದ್ವ ಇರುತ್ತದೆ. ಉರಿಗೌಡ- ನಂಜೇಗೌಡ ವಿಚಾರವನ್ನೇ ನೋಡಿ. ಅದು ಸತ್ಯವಾಗಿದ್ದರೆ ಇತಿಹಾಸದಲ್ಲಿ ಅದು ಎಲ್ಲಿ ದಾಖಲಾಗಿದೆ, ದಾಖಲೆ ನೀಡಿ ಎಂದು ಕೇಳಿದರೆ ಅವರ ಬಳಿ ಅದಿಲ್ಲ. ಅಲ್ಲದೆ, ಮುದ್ರಣ, ಎಲೆಕ್ಟ್ರಾನಿಕ್ ಹಾಗೂ ಸೋಷಿಯಲ್ ಮೀಡಿಯಾ ಈ ಮೂರರಲ್ಲೂ ನಮ್ಮ ನೆರೇಟಿವ್ ಒಂದೇ ಇರುತ್ತದೆ. ಹಠಾತ್ ಯಾವುದೇ ವಿಚಾರ ಮುಂಚೂಣಿಗೆ ಬಂದರೂ ಅದರ ಬಗ್ಗೆ ಏನು ಮಾಡಬೇಕು ಎಂದು ಸುದೀರ್ಘ ಚಿಂತನೆ ನಡೆಸಿ ಪಕ್ಷದ ಎಲ್ಲ ನಾಯಕರು ಒಂದೇ ರೀತಿಯ ಅಭಿಪ್ರಾಯ ಮುಂದಿಡುತ್ತೇವೆ.
ಪೇಸಿಎಂ, 40 ಪರ್ಸೆಂಟ್, ಕಿವಿ ಮೇಲೆ ಹೂವು... ಇವೆಲ್ಲ ಪ್ರಚಾರ ತಂತ್ರಗಳು ಹುಟ್ಟಿದ್ದು ಹೇಗೆ?
ನಾವು ಜನರ ನಿಜ ಪರಿಸ್ಥಿತಿ ಅವರ ನಿಜ ಭಾವನೆಗಳಿಗೆ ಕಿವಿ ಕೊಡುತ್ತೇವೆ. ಇದಕ್ಕಾಗಿ ಸದಾ ನಮ್ಮ ಕಣ್ಣು ಹಾಗೂ ಮನಸ್ಸು ತೆರೆದಿಟ್ಟುಕೊಂಡಿದ್ದೇವೆ. ಎಲ್ಲದಕ್ಕೂ ಈ ಸರ್ಕಾರದಲ್ಲಿ ಪರ್ಸೆಂಟೇಜ್ ಕೊಡಬೇಕು ಎಂಬ ಜನರ ಭಾವನೆ ಮೂಡಿದಾಗ 40 ಪರ್ಸೆಂಟ್, ಪೇಸಿಎಂ ಹುಟ್ಟಿತ್ತು. ಕೊನೆಯ ಬಜೆಟ್‌ನಿಂದ ಏನೂ ಆಗಲ್ಲ ಕಿವಿ ಮೇಲೆ ಹೂವು ಇಡ್ತಾರೆ ಅಂತ ಜನ ಮಾತಾಡಿದ್ದು ಕೇಳಿ ಕಿವಿ ಮೇಲೆ ಹೂವಿನ ಕ್ಯಾಂಪೇನ್ ಮಾಡಿದೆವು. ನಮ್ಮ ಗ್ಯಾರಂಟಿ ಕಾರ್ಯಕ್ರಮಗಳು ಕೂಡ ಜನರಿಂದಲೇ ಬಂದವು. ಪ್ರಜಾಧ್ವನಿ ಯಾತ್ರೆ ವೇಳೆ ಮಹಿಳೆಯರು ಮನೆ ನಡೆಸಲು ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಾಗ ಗೃಹಲಕ್ಷ್ಮೇ ಹುಟ್ಟಿತು. ಈ ಸರ್ಕಾರ 11 ಬಾರಿ ವಿದ್ಯುತ್ ದರ ಹೆಚ್ಚಳ ಮಾಡಿದ್ದರಿಂದ ಜನ ನೊಂದಿದ್ದು ಗೊತ್ತಾಗಿದ್ದರಿಂದ ಉಚಿತ ವಿದ್ಯುತ್ ಯೋಜನೆ ಹುಟ್ಟಿತು. ಯುವಕರು ಕೆಲಸ ಸಿಗುತ್ತಿಲ್ಲ ಎಂಬ ಬವಣೆ ತೋಡಿಕೊಂಡಾಗ ಉದ್ಯೋಗ ನೀಡುವ ಖಾತರಿ ಹಾಗೂ 3000 ಸಾವಿರ ರು. ನೀಡುವ ಯೋಜನೆ ಹುಟ್ಟಿಕೊಂಡಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.