ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಕ್ಕ ಬಳಿಕ ಸಿ.ಟಿ. ರವಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದು ಪಕ್ಕಾ ಆಗಿದೆ. ಈ ಬಗ್ಗೆ ಸ್ವತಃ ಬಿಜೆಪಿ ಅಧ್ಯಕ್ಷರು ಹೇಳಿದ್ದಾರೆ.
ತುಮಕೂರು, (ಅ.02) : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ಸಿಕ್ಕ ಬಳಿಕ ಸಿ.ಟಿ. ರವಿ ಅವರು ರಾಜೀನಾಮೆ ನೀಡುತ್ತಾರೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ.
ತುಮಕೂರಿನಲ್ಲಿ ಇಂದು (ಶುಕ್ರವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮಲ್ಲಿ ಒಬ್ಬರಿಗೆ ಒಂದೇ ಹುದ್ದೆ ಎನ್ನುವಂತ ನಿಯಮವಿದೆ. ಈ ಬಗ್ಗೆ ಸಚಿವ ಸಿಟಿ ರವಿಯವರಿಗೂ ಗಮನವಿದೆ. ಹೀಗಾಗಿ ಅವರೇ ಸ್ವಯಂ ಪ್ರೇರಿತರಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಮತ್ತೆ ಶುರುವಾಯ್ತು ಸಂಪುಟ ಸರ್ಕಸ್: ಸಿ.ಟಿ.ರವಿ ಫಸ್ಟ್ ವಿಕೆಟ್...?
ಈಗಾಗಲೇ ಸಚಿವ ಸಿಟಿ ರವಿಯವರು ರಾಜೀನಾಮೆಗೆ ಸಿದ್ಧರಿರುವುದಾಗಿ ಹೇಳಿದ್ದಾರೆ. ಸಿಟಿ ರವಿ ಅವರಿಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಿದ ನಂತರ, ಅವರೇ ಹೇಳಿದಂತೆ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಲಿದ್ದಾರೆ ಎಂದರು.
ಇನ್ನು ನಮ್ಮಲ್ಲಿ ಒಬ್ಬರಿಗೆ ಒಂದು ಸ್ಥಾನ ಎಂಬ ಅಲಿಖಿತ ನಿಯಮವಿದೆ. ಇದೇ ರೀತಿ 75 ವರ್ಷ ದಾಟಿದವರು ಅಧಿಕಾರ, ರಾಜಕೀಯದಿಂದ ನಿವೃತ್ತಿ ಹೊಂದಬೇಕೆಂಬ ನಿಯಮವೂ ಇದೆ. ಆದರೆ ಕೆಲವೊಮ್ಮೆ ವರಿಷ್ಠರೇ ಅಲಿಖಿತ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ ಎಂದು ಪರೋಕ್ಷವಾಗಿ ಸಿಎಂ ಬಿಎಸ್ ಯಡಿಯೂರಪ್ಪಗೆ ಟಾಂಗ್ ಕೊಟ್ಟರು.