'ಫಾರ್ಮ್‌ 7 ದೂರಿನ ಪ್ರತಿ ಕೈ ಸೇರಿದ್ದೇಗೆ? ಗೌಪ್ಯತೆ ಕಾಪಾಡೋದು ಆಯೋಗದ ಕೆಲಸ, ಸಿಟಿ ರವಿ ಸ್ಫೋಟಕ ಹೇಳಿಕೆ

Kannadaprabha News   | Kannada Prabha
Published : Oct 07, 2026, 06:23 AM IST
CT Ravi on dk shivakumar

ಸಾರಾಂಶ

ಫಾರ್ಮ್ 7ರ ಅಡಿ ನೀಡಲಾದ ದೂರಿನ ಗೌಪ್ಯತೆ ಕಾಪಾಡುವಲ್ಲಿ ಚುನಾವಣಾ ಆಯೋಗ ವಿಫಲವಾಗಿದೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಆರೋಪಿಸಿದ್ದಾರೆ. ಮತದಾರರ ಪಟ್ಟಿಯಿಂದ ಹೆಸರು ತೆಗೆಯುವ ಬಗ್ಗೆ ಸುಳ್ಳು ಆರೋಪ ಮಾಡಿರುವ ಮುಖ್ಯಮಂತ್ರಿಗಳು ಸಾರ್ವಜನಿಕ ಕ್ಷಮೆ ಯಾಚಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬೆಂಗಳೂರು (ಅ.7): ‘ನಾವು ಅನುಮಾನದ ಆಧಾರದ ಮೇಲೆ ಫಾರ್ಮ್ 7 ಅನ್ನು ಕೊಟ್ಟಿದ್ದೇವೆ. ದೂರುದಾರನ ಗೌಪ್ಯತೆ ಕಾಪಾಡುವುದು ಎಆರ್‌ಒ(ಅಸಿಸ್ಟೆಂಟ್‌ ರಿಟರ್ನಿಂಗ್‌ ಆಫೀಸರ್‌) ಕರ್ತವ್ಯ. ನಾವು ಕೊಟ್ಟ ದೂರಿನ ಪ್ರತಿಗಳು ಕಾಂಗ್ರೆಸ್ ಕೈಗೆ ಹೇಗೆ ಹೋಯಿತು’ ಎಂದು ಬಿಜೆಪಿ ನಾಯಕ, ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ(CT Ravi) ಹರಿಹಾಯ್ದಿದ್ದಾರೆ.

ಮಂಗಳವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಫಾರ್ಮ್ 7ರ ಅಡಿ ದೂರು ಕೊಟ್ಟವರ ಗೌಪ್ಯತೆ ಕಾಪಾಡುವುದು ಚುನಾವಣೆ ಆಯೋಗದ ಕರ್ತವ್ಯ. ಯಾರು ದೂರು ಕೊಟ್ಟರು ಎಂಬುದನ್ನು ಬಯಲು ಮಾಡಿದವರ ವಿರುದ್ಧವೂ ಕ್ರಮವಾಗಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕ ಕ್ಷಮೆ ಕೋರಲಿ:

ಒಂದು ಸಮುದಾಯದ 60 ರಿಂದ 70 ಲಕ್ಷ ಮತಗಳನ್ನು ಗುರಿ ಮಾಡಿ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲು ಹೊರಟಿದ್ದಾರೆ ಎಂದು ನಮ್ಮ ವಿರುದ್ಧ ಆರೋಪ ಮಾಡಿರುವ ಸಾಂವಿಧಾನಿಕ ಹುದ್ದೆಯಲ್ಲಿರುವ ರಾಜ್ಯದ ಮುಖ್ಯಮಂತ್ರಿಗಳ ಮೇಲೆ ಮೊಕದ್ದಮೆ ದಾಖಲಿಸಬೇಕು. ಸಾಬೀತುಮಾಡದಿದ್ದರೆ ಅವರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಇವಿಎಂ ವಿಷಯದಲ್ಲಿ ಕಪೋಲಕಲ್ಪಿತ ಆರೋಪ ಮಾಡಿ ಸಾಬೀತು ಮಾಡಿದವರ ವಿರುದ್ಧ ಚುನಾವಣಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಬೇಕು. ಇವಿಎಂ ಹ್ಯಾಕ್ ಆಗಿದ್ದಿದ್ದರೆ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುತ್ತಿರಲಿಲ್ಲ. ಅವರ ಪಕ್ಷ ಬಹುಮತ ಪಡೆಯುತ್ತಿರಲಿಲ್ಲ. ಆದರೆ ಪ್ರಧಾನಿ, ಕೇಂದ್ರ ಗೃಹ ಸಚಿವರ ಮೇಲೆ ಮುಖ್ಯಮಂತ್ರಿಗಳು ಆರೋಪಿಸಿದ್ದಾರೆ. ಅವರದೇ ಸರ್ಕಾರದ ಅಧಿಕಾರಿಗಳು ಆಯೋಗದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.

ಸಾಮೂಹಿಕ ಮ್ಯಾಪಿಂಗ್‌ ಬಗ್ಗೆ ಮಾತನಾಡಿಲ್ಲ:

ಎಸ್‍ಐಆರ್‌ನಲ್ಲಿ ಕಾಂಗ್ರೆಸ್ ಸಾಮೂಹಿಕ ಮ್ಯಾಪಿಂಗ್ ಮಾಡಿಸಿದೆ. ಆ ಮೂಲಕ ತಮಗೆ ಬೇಕಾದ ಮತದಾರರನ್ನು ಮತಪಟ್ಟಿಯಲ್ಲಿ ಸೇರಿಸುವ ಷಡ್ಯಂತ್ರ ಮಾಡಿದೆ. ನಾವೀಗ ದೂರು ನೀಡಿದ್ದರಿಂದ ಕಾಂಗ್ರೆಸ್ ಮಾಡಿದ ಸಂಚು ಬಯಲಾಗಿದೆ. ಈ ಭಯದಿಂದಲೇ ನಮ್ಮ ಮೇಲೆ ದೂರು ದಾಖಲಿಸುತ್ತಿದ್ದಾರೆ ಎಂದು ರವಿ ಆರೋಪಿಸಿದರು.

ಚುನಾವಣಾ ಆಯೋಗ ಎಲ್ಲಾ ದೂರುಗಳನ್ನು ಪರಿಶೀಲನೆ ಮಾಡಬೇಕು. ಅಕ್ರಮ ಮತದಾರರ ಹೆಸರನ್ನು ತೆಗೆದುಹಾಕಲಿ. ಹಾಗೂ ಅಕ್ರಮ ಮಾಡಿದವರ ವಿರುದ್ಧ ಕ್ರಮವಾಗಲಿ. ದೂರು ಸಲ್ಲಿಸಿದ್ದೇ ತಪ್ಪಾದರೆ ಮುಂದೆ ನ್ಯಾಯಸಮ್ಮತವಾಗಿ ಆಕ್ಷೇಪಣೆ ಸಲ್ಲಿಸಲೂ ಯಾರೂ ಬರುವುದಿಲ್ಲ. ಹಾಗಿದ್ದರೆ ಆಕ್ಷೇಪಣೆ ಸಲ್ಲಿಸಲು ಅವಕಾಶವೇ ನೀಡಬಾರದಿತ್ತು. ಆಕ್ಷೇಪಣೆಯ ಸತ್ಯಾಸತ್ಯತೆ ಪರಿಶೀಲಿಸುವ ಹೊಣೆಗಾರಿಕೆ ಚುನಾವಣಾ ಆಯೋಗದ ಮೇಲಿದೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೇಂದ್ರದ ವಿರುದ್ಧ ಒಟ್ಟಿಗೇ ದಂಗೆ ಏಳಲು ರಾಹುಲ್​ ಗಾಂಧಿ 'ಸತ್ಯಾಗ್ರಹ' ಅಸ್ತ್ರ: ಏನಿದು ಯೋಜನೆ? ನಾಯಕ ಹೇಳಿದ್ದೇನು
ದೇವೇಗೌಡರು ಸಿಎಂ ಆಗಿದ್ದಾಗಲೇ ನೈಸ್‌ ಸಮಸ್ಯೆ ಬಗೆಹರಿಸಬಹುದಿತ್ತಲ್ಲ: ಸಚಿವ ಶಿವಲಿಂಗೇಗೌಡ