ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಕೆರೆಗಳು ತುಂಬಿ ಕೋಡಿ ಬಿದ್ದು ಗಂಗಮ್ಮನ ಪೂಜೆ ಮಾಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆರೆ ತುಂಬುತ್ತಾ? ಸಿದ್ದರಾಮಯ್ಯ ಅವಧಿಯಲ್ಲಿ ಕೆರೆಗಳು ತುಂಬಿದ್ದವಾ?: ಸಿ.ಟಿ. ರವಿ
ಬೆಂಗಳೂರು(ಸೆ.11): ಅರ್ಕಾವತಿ ಹಗರಣದ ರೀಡೂ ಪಿತಾಮಹ ಯಾರು? ಸೋಲಾರ್ ಹಗರಣದ ಖದೀಮ ಯಾರು ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ದೊಡ್ಡಬಳ್ಳಾಪುರದ ಹೊರವಲಯದಲ್ಲಿ ಶನಿವಾರ ನಡೆದ ‘ಜನಸ್ಪಂದನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಖಳನಾಯಕರು ಹೀರೋಗಳ ರೀತಿ ಪೋಸು ನೀಡುತ್ತಿದ್ದಾರೆ. ಅರ್ಕಾವತಿ ಹಗರಣದ ರೀಡೂ ಪಿತಾಮಹ ಯಾರು? ಸಿದ್ದರಾಮಯ್ಯ ಉತ್ತರಿಸುತ್ತಾರಾ? ರೈತರ ಹೆಸರಿನಲ್ಲಿ ನಡೆಸಿದ ಸೋಲಾರ್ ಹಗರಣದ ಖದೀಮ ಯಾರು ಎಂದು ರಾಜ್ಯದ ಜನತೆಗೆ ಹೇಳಬೇಕಾ? ಕೆಂಪಣ್ಣ ಆಯೋಗದ ವರದಿ ಬಹಿರಂಗವಾದರೆ ಕಳ್ಳ, ಮಳ್ಳ, ಸುಳ್ಳರ ನಾಟಕ ಗೊತ್ತಾಗಲಿದೆ ಎಂದರು.
ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲಾ ಕೆರೆಗಳು ತುಂಬಿ ಕೋಡಿ ಬಿದ್ದು ಗಂಗಮ್ಮನ ಪೂಜೆ ಮಾಡುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆರೆ ತುಂಬುತ್ತಾ? ಸಿದ್ದರಾಮಯ್ಯ ಅವಧಿಯಲ್ಲಿ ಕೆರೆಗಳು ತುಂಬಿದ್ದವಾ? ಬಿಜೆಪಿ ಕಾಲ್ಗುಣ ಒಳ್ಳೇದೋ, ಕಾಂಗ್ರೆಸ್ ಕಾಲ್ಗುಣ ಒಳ್ಳೇದೋ ನೋಡಿ ಯೋಚಿಸಿ. ಕೆಲವರು ಕಾಲಿಟ್ಟರೆ ಮಟಾಶ್ ಲೆಗ್ ಎನ್ನಲಾಗುತ್ತದೆ. ಅಂಥವರ ಬಗ್ಗೆ ಹುಷಾರಾಗಿರಿ ಎಂದು ಮಾರ್ಮಿಕವಾಗಿ ಹೇಳಿದರು.
undefined
ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಜನೋತ್ಸವ ಆಚರಿಸುವ ನೈತಿಕತೆ ಇಲ್ಲ: ಸಿದ್ದು
ಈ ಭಾಗದಲ್ಲಿ ಡಾ.ಕೆ.ಸುಧಾಕರ್ ಹಾಗೂ ರಾಜೇಶ್ ಇಬ್ಬರೇ ಬಿಜೆಪಿಯಿಂದ ಗೆದ್ದಿರೋದು. ಮುಂದಿನ ಚುನಾವಣೆಯಲ್ಲಿ ಈ ಭಾಗದಿಂದ 10ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿಕೊಡಬೇಕು. ಇಂದಿನ ಸಮಾವೇಶಕ್ಕೆ ಭಾರೀ ಸಂಖ್ಯೆಯಲ್ಲಿ ಜನರು ಬಂದಿದ್ದಾರೆ. ಮುಖ್ಯಮಂತ್ರಿ ಕುರ್ಚಿಗೆ ಕರ್ಚೀಫ್ ಹಾಕಿರುವವರು ಈಗಲೇ ವಾಪಸ್ ತೆಗೆದುಕೊಳ್ಳಬೇಕು. ಏಕೆಂದರೆ, ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ರೈತರ, ನೇಕಾರರ, ಮಹಿಳೆಯರ ಹಿತಕಾಯಲು ಬದ್ಧವಾಗಿದೆ. ಈ ಸಮಾವೇಶದ ಯಶಸ್ಸಿಗೆ ಸಚಿವರಾದ ಡಾ.ಕೆ.ಸುಧಾಕರ್, ಎಂಟಿಬಿ ನಾಗರಾಜ್, ಮುನಿರತ್ನ ಕಾರಣಕರ್ತರು. ತೊಡೆ ತಟ್ಟುವವರಿಗೆ ಈ ಸಮಾವೇಶದ ಮೂಲಕ ಉತ್ತರ ಕೊಟ್ಟಿದ್ದೀರಿ. ನಾವು ದುರ್ಬಲರಲ್ಲ ಅಂತ ತೋರಿಸಿದ್ದೀರಿ ಎಂದು ಮೆಚ್ಚುಗೆ ಸೂಚಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ. ಜಿಎಸ್‌ಟಿ ಮೂಲಕ ಒಂದು ದೇಶ ಒಂದು ತೆರಿಗೆ ಜಾರಿಗೆ ತಂದರು. ಎಲ್ಲ ಭಾಷೆಗಳು ಭಾರತದ ಆತ್ಮ ಎಂದು ಹೇಳಿದರು. ಕೊರೋನಾ ಸಂದರ್ಭದಲ್ಲಿ 138 ಕೋಟಿ ಜನರಿಗೆ ಉಚಿತ ಲಸಿಕೆ ನೀಡಿದರು. ತುಕಡೆ ಗ್ಯಾಂಗ್‌ಗೆ ಆಶ್ರಯ ನೀಡುವ ಕಾಂಗ್ರೆಸ್ ಇದೀಗ ಭಾರತ್ ಜೋಡೋ ನಾಟಕ ಮಾಡುತ್ತಿದೆ. ನಮ್ಮ ಸರ್ಕಾರ ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿದೆ. ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದಕರಿಗೆ ಬಿರಿಯಾನಿ ನೀಡಲಾಗುತ್ತಿತ್ತು. ಈಗ ಬಾಲ ಬಿಚ್ಚೋರಿಗೆ ಬುಲ್ಡೋಜರ್ ಟ್ರೀಟ್‌ಮೆಂಟ್ ನೀಡಬೇಕಾಗುತ್ತದೆ ಎಂದು ಹೇಳಿದರು.