ಕಾಂಗ್ರೆಸ್‌ ಗೆಲ್ಲಲು ಬಿಡಲ್ಲ, ಮೋದಿ ಪ್ರಧಾನಿಯಾಗಿರುವವರೆಗೆ ರಾಜ್ಯದಲ್ಲಿ 'ಕೈ'ಗಿಲ್ಲ ಅಧಿಕಾರ: ಬಿಎಸ್‌ವೈ

By Kannadaprabha NewsFirst Published Sep 11, 2022, 3:00 AM IST
Highlights

ಕಾಂಗ್ರೆಸ್‌ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ ಅವರ ಮನೆತನದಿಂದ ಮೂವರು ಪ್ರಧಾನಿಯಾದರೂ ಬಡತನ ನಿವಾರಣೆಯಾಗಿಲ್ಲ: ಬಿಎಸ್‌ವೈ

ಬೆಂಗಳೂರು(ಸೆ.11):  ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲಾಗುವುದು. ಮೋದಿ ಪ್ರಧಾನಿಯಾಗಿರುವವರೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಗೆಲ್ಲುವುದಿಲ್ಲ ಎಂದು ಬಿಜೆಪಿ ಸಂಸದೀಯ ಮಂಡಳಿ ಸದಸ್ಯರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ಶನಿವಾರ ದೊಡ್ಡಬಳ್ಳಾಪುರದಲ್ಲಿ ನಡೆದ ಜನಸ್ಪಂದನ ಸಮಾವೇಶದಲ್ಲಿ ಮಾತನಾಡಿದ ಅವರು, ನಮಗೆ ಶಕ್ತಿ ಇಲ್ಲದ ಕಡೆಯೇ ಇಂತಹ ಜನಬೆಂಬಲ ಸಿಕ್ಕಿದೆ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಅವರ ಪರಿಶ್ರಮದಿಂದ ಈ ಭಾಗದಲ್ಲಿ ಹೆಚ್ಚು ಶಾಸಕರು ಗೆಲ್ಲಲಿದ್ದಾರೆ. ಸುಧಾಕರ್‌ ಜತೆಗೆ ಇತರೆ ನಾಯಕರು ಕೈ ಜೋಡಿಸಿದ್ದಾರೆ. ಅವರ ಪರಿಶ್ರಮದಿಂದ ಪಕ್ಷ ಸಂಘಟನೆ ಸರಿಯಾದ ದಿಕ್ಕಿನಲ್ಲಿ ಸಾಗಿದೆ. ನಮ್ಮ ಬಲ ಏನು, ಶಕ್ತಿ ಏನು ಎಂಬುದನ್ನು ಮತ್ತಷ್ಟುಸಮಾವೇಶದ ಮೂಲಕ ತೋರಿಸಲಿದ್ದೇವೆ ಎಂದು ತಿಳಿಸಿದರು.

ಭ್ರಷ್ಟ ಬಿಜೆಪಿ ಸರ್ಕಾ​ರಕ್ಕೆ ಜನೋತ್ಸವ ಆಚರಿಸುವ ನೈತಿಕತೆ ಇಲ್ಲ: ಸಿದ್ದು

ನೇಕಾರರು ಮತ್ತು ರೈತರು ನಮ್ಮ ಪಕ್ಷಕ್ಕೆ ಎರಡು ಕಣ್ಣುಗಳಿದ್ದಂತೆ. ನಾನು ಅಧಿಕಾರದಲ್ಲಿದ್ದ ವೇಳೆ ನೇಕಾರ ಮತ್ತು ರೈತರ ಸಾಲ ಮನ್ನಾ ಮಾಡಿದ್ದೇನೆ. ನನ್ನ ಜೀವನದ ಸಾಕಷ್ಟುಸಮಯ ರೈತರಿಗಾಗಿ ಮೀಸಲಿಟ್ಟಿದ್ದೆ. ನಾನು ರೈತರಿಗೆ ಕೊಟ್ಟಷ್ಟುಯೋಜನೆ ಬೇರೆ ಯಾವ ರಾಜ್ಯದಲ್ಲಿಯೂ ನೀಡಿಲ್ಲ. ರಾಜ್ಯದಲ್ಲಿ ಬಿಜೆಪಿ ಗರಿಷ್ಠ ಸಲವತ್ತುಗಳನ್ನು ಜನರಿಗೆ ನೀಡಿದೆ. ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಕೇಂದ್ರ ಸರ್ಕಾರ ಆರು ಸಾವಿರ ರು. ಮತ್ತು ರಾಜ್ಯ ಸರ್ಕಾರ ನಾಲ್ಕು ಸಾವಿರ ರು. ಸೇರಿ ಒಟ್ಟು ಹತ್ತು ಸಾವಿರ ರು.ಗಳನ್ನು ರೈತರಿಗೆ ನೀಡುತ್ತಿದ್ದೇವೆ ಎಂದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಮಳೆಯಿಂದ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಬೋಟ್‌ನಲ್ಲಿ ಓಡಾಡುವ ಸ್ಥಿತಿ ಬಂತು ಎಂದಿದ್ದಾರೆ. ಬೋಟ್‌ನಲ್ಲಿ ಓಡಾಡುವ ಸ್ಥಿತಿ ಎಂದರೆ ಯಾವ ಪರಿ ಮಳೆ ಬಂತು ಎಂಬುದು ಗೊತ್ತಿಲ್ಲವೇ? ಕಾಂಗ್ರೆಸ್‌ ರಾಷ್ಟ್ರೀಯ ಮುಖಂಡ ರಾಹುಲ್‌ ಗಾಂಧಿ ಅವರ ಮನೆತನದಿಂದ ಮೂವರು ಪ್ರಧಾನಿಯಾದರೂ ಬಡತನ ನಿವಾರಣೆಯಾಗಿಲ್ಲ. ಆದರೆ, ನರೇಂದ್ರ ಮೋದಿ ಅವರು ಬಂದ ಬಳಿಕ ರೈತರು, ಜನರು ನೆಮ್ಮದಿಯಾಗಿ ಬದುಕುವಂತೆ ಮಾಡಿದ್ದೇವೆ. ಕಾಂಗ್ರೆಸ್ಸಿಗರ ಆರೋಪಗಳಿಗೆ ಅಧಿವೇಶನದಲ್ಲಿ ಉತ್ತರ ಕೊಡುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಹಣ, ಹೆಂಡ, ತೋಳ್ಬಲ, ಅಧಿಕಾರ ಬಲದಿಂದ ಜಾತಿಯ ವಿಷಬೀಜ ಬಿತ್ತಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ ಎನ್ನುವುದು ಸಾಬೀತಾಗಿದೆ. ಸ್ವಾಭಿಮಾನದಿಂದ ಬಾಳಿ ಬದುಕುವ ವ್ಯವಸ್ಥೆಯನ್ನು ನರೇಂದ್ರ ಮೋದಿ ಮಾಡಿದ್ದಾರೆ. ಮೋದಿ ಪ್ರಧಾನಿಯಾಗಿರುವವರೆಗೆ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲ್ಲ ಎಂದರು.
 

click me!