
-ಬೆಂಗಳೂರು (ಆ.21): ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ ಹಗರಣ(Valmiki corporation scam)ದ ಕಿಂಗ್‌ಪಿನ್ ನೆಕ್ಕುಂಟಿ ನಾಗರಾಜ್(Nekkunte Nagaraj) ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್(DK Shivakumar) ಅವರು ಉಪಮುಖ್ಯಮಂತ್ರಿಯಾಗಿದ್ದ ವೇಳೆ ಜತೆಗಿದ್ದ ಫೋಟೋಗಳನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ನಾಯಕ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ(CT Ravi) ಮತ್ತಿತರರು ನೆಕ್ಕುಂಟಿ ನಾಗರಾಜ್ ಅವರು ಡಿ.ಕೆ.ಶಿವಕುಮಾರ್, ನೂತನ ಸಚಿವ ಬಿ.ನಾಗೇಂದ್ರ(B Nagendra) ಅವರ ಜತೆಗಿರುವ ಫೋಟೋಗಳನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ರವಿ, ಇಡೀ ಹಗರಣದಲ್ಲಿ ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ ಕಿಂಗ್‌ಪಿನ್ ಆಗಿದ್ದಾನೆ. ಈ ನೆಕ್ಕುಂಟಿ ನಾಗರಾಜ್ ಜೊತೆ ಆಗಿನ ಉಪಮುಖ್ಯಮಂತ್ರಿ ಹಾಗೂ ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಫೋಟೋಗಳಿವೆ. ಈ ಫೋಟೋಗಳು ನೆಕ್ಕುಂಟಿ ಮತ್ತು ಕಾಂಗ್ರೆಸ್ ಮುಖಂಡರಿಗೂ ಇರುವ ಗಹನವಾದ ಸಂಬಂಧ ಸೂಚಿಸುತ್ತಿದೆ ಎಂದು ಆರೋಪಿಸಿದರು.
ವಾಲ್ಮೀಕಿ ನಿಗಮ ಹಗರಣದ ಹಣ ಲ್ಯಾಂಬೋರ್ಗಿನಿ ಕಾರ್ ಶೋರೂಂಗಳಿಗೆ, ಬಾರ್‌ಗಳಿಗೆ, ಚಿನ್ನ ಬೆಳ್ಳಿ ಅಂಗಡಿಗೆ ಹೋಗಿದೆ. ಭ್ರಷ್ಟಾಚಾರ ಸಹಿಸಲ್ಲ ಅಂತ ಹೇಳುವ ಮುಖ್ಯಮಂತ್ರಿಗಳು ಬಹುಕೋಟಿ ಲೂಟಿ ಮಾಡಿದವರನ್ನು ಮಂತ್ರಿ ಮಾಡಿರುವುದು ಭೂತದ ಬಾಯಲ್ಲಿ ಭಗವದ್ಗೀತೆ ಎಂಬಂತೆ ಆಗಿದೆ ಎಂದು ಲೇವಡಿ ಮಾಡಿದರು.
ಬಳ್ಳಾರಿ ಗಣಿ ಹಗರಣದಲ್ಲೂ ನಾಗೇಂದ್ರ ಒಬ್ಬ ಆಪಾದಿತ. ಇದು ಪರಿಶಿಷ್ಟ ಪಂಗಡ ಸಮುದಾಯದ ಹಣ. ಇನ್ನೊಬ್ಬರನ್ನು ಯಾರನ್ನಾದರೂ ಸಚಿವರನ್ನಾಗಿ ಮಾಡಿ. ಭ್ರಷ್ಟಾಚಾರಿಯನ್ನು ಸಚಿವರನ್ನಾಗಿ ಮಾಡಿದ್ದಕ್ಕೆ ನಮ್ಮ ಆಕ್ಷೇಪ. ಒಬ್ಬ ಅಮಾಯಕ, ಪ್ರಾಮಾಣಿಕ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇವರನ್ನು ಸಚಿವರನ್ನಾಗಿ ಮಾಡುವ ಮೂಲಕ ಪ್ರಾಮಾಣಿಕರಿಗೆ ನೀವೇನು ಸಂದೇಶ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿದರು.
ನಕಲಿ ಖಾತೆಗಳಿಗೆ ಹಣ ಹೇಗೆ ವರ್ಗಾವಣೆ ಮಾಡಬೇಕು ಎಂಬುದರಲ್ಲಿ ತಜ್ಞರಾಗಿರುವ ನಾಗೇಂದ್ರ ಅವರಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಂಕಿ-ಅಂಶಗಳ ಖಾತೆ ನೀಡುವ ಬದಲು ಹಣಕಾಸು ಖಾತೆ ನೀಡಬೇಕು ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.