ನಿರಂತರ ಎರಡು ವರ್ಷಗಳಿಂದ ತಾಲೂಕಿನ ಜಿ,ಜಿ. ಕೊಪ್ಪಲು ಗ್ರಾಮದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸ್ಥಳಕ್ಕೆ ಬುಧವಾರ ಮಾಜಿ ಸಚಿವ, ಶಾಸಕ ಎಚ್.ಡಿ ರೇವಣ್ಣ ಭೇಟಿ ನೀಡಿ ಎತ್ತಿನಹೊಳೆ ಕಾಮಗಾರಿ ಯೋಜನೆಯ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಡನೆ ಚರ್ಚೆ ನಡೆಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆಲೂರು (ಸೆ.14): ನಿರಂತರ ಎರಡು ವರ್ಷಗಳಿಂದ ತಾಲೂಕಿನ ಜಿ,ಜಿ. ಕೊಪ್ಪಲು ಗ್ರಾಮದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಸ್ಥಳಕ್ಕೆ ಬುಧವಾರ ಮಾಜಿ ಸಚಿವ, ಶಾಸಕ ಎಚ್.ಡಿ.ರೇವಣ್ಣ ಭೇಟಿ ನೀಡಿ ಎತ್ತಿನಹೊಳೆ ಕಾಮಗಾರಿ ಯೋಜನೆಯ ಸ್ಥಳ ಪರಿಶೀಲನೆ ಮಾಡಿ ಅಧಿಕಾರಿಗಳು ಹಾಗೂ ಗ್ರಾಮಸ್ಥರೊಡನೆ ಚರ್ಚೆ ನಡೆಸಿ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ನಂತರ ಮಾಧ್ಯಮದವರೊಂದಿಗೆ ಮಾತನಾಡಿ, ಜಿ,ಜಿ ಕೊಪ್ಪಲು, ಅಜ್ಜೇನಹಳ್ಳಿ, ಬೀರಕನಹಳ್ಳಿ, ಬೆಳ್ಳಾವರ, ಸಮುದ್ರವಳ್ಳಿ, ಕಲ್ಲು ಕೆರೆ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಬಯಲುಸೀಮೆಗೆ ನೀರು ಹರಿಸುವ ಎತ್ತಿನಹೊಳೆ ನಾಲೆಗಳು ಹಾದು ಹೋಗಿದ್ದು ಬೇರೆ ಜಿಲ್ಲೆಗಳಿಗೆ ನೀರು ಒದಗಿಸುವ ಸಲುವಾಗಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ.
ಆದರೆ ಇಲ್ಲಿರುವ ರೈತರಿಗೆ ಅನ್ಯಾಯವಾಗುತ್ತಿರುವುದು ಮಾತ್ರ ಅಧಿಕಾರಿಗಳಿಗೆ, ಸರ್ಕಾರದ ಕಣ್ಣಿಗೆ ಕಾಣಿಸುತ್ತಿಲ್ಲ. ಈ ಕಾಮಗಾರಿ ಕೆಲಸದಿಂದ ಇಲ್ಲಿರುವ ಸ್ಥಳೀಯ ರೈತರಿಗೆ ಅಪಾರ ಸಂಕಷ್ಟ ಮತ್ತು ನಷ್ಟ ಉಂಟಾಗಿದೆ ಕಾರಣ ಚಾನಲ್ ನಿರ್ಮಿಸಲು ಭೂಮಿಯನ್ನು 120-150 ಅಡಿ ಆಳ ಗುಂಡಿ ತೆಗೆದು ಚಾನಲ್‌ಗೆ ಅಡ್ಡವಾಗಿ ಬಂದಿರುವ ಬಂಡೆಗಳನ್ನು ಸ್ಫೋಟಿಸಲು ಸಿಡಿಮದ್ದು ಸಿಡಿಸುತ್ತಿರುವುದರಿಂದ ಅಕ್ಕಪಕ್ಕದ ಗ್ರಾಮಗಳ ಜನ ವಸತಿ ಪ್ರದೇಶದ ಮನೆಗಳ ಗೋಡೆಗಳು ಬಿರುಕು ಬಿಟ್ಟಿದ್ದು ಯಾವುದೇ ಸಮಯದಲ್ಲಿ ಬೀಳುವ ಆತಂಕದಲ್ಲಿ ಜನ ಜೀವ ಬಿಗಿ ಹಿಡಿದು ಬದುಕುತ್ತಿದ್ದಾರೆ.
ದೇವೇಗೌಡರು ಜಾತಿ ಕಡೆ ವಾಲಲ್ಲ ಎಂದುಕೊಂಡಿದ್ದೆ: ಶಾಸಕ ಶಿವಲಿಂಗೇಗೌಡ ಬೇಸರ
ಜೊತೆಗೆ ಈ ವರ್ಷ ಮಳೆ ಇಲ್ಲದೆ ಬರಗಾಲದ ಛಾಯೆ ಸೃಷ್ಟಿಯಾಗಿದ್ದು ರೈತರಿಗೆ ತುಂಬಾ ತೊಂದರೆ ಆಗಿದೆ. ಎತ್ತಿನಹೊಳೆಯ ಆಳವಾದ ಚಾನಲ್ ನಿರ್ಮಾಣದಿಂದ ರೈತರ ಜಮೀನಿನಲ್ಲಿದ್ದ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಮಟ್ಟ ಕುಸಿದು ನೀರು ಇಲ್ಲದಂತಾಗಿದ್ದು ಬೋರ್‌ವೆಲ್‌ಗಳಲ್ಲಿ ನೀರು ಇಲ್ಲದೆ ರೈತರು ಕಣ್ಣು ಬಾಯಿ ಬಿಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮೊದಲು ಪರಿಹಾರ ನೀಡಿ: ತಕ್ಷಣವೇ ಈ ಗ್ರಾಮಗಳ ಜನಗಳ ನೆರವಿಗೆ ಸರ್ಕಾರ ಮತ್ತು ಜಿಲ್ಲಾಡಳಿತ ಮುಂದಾಗಿ ಕಲ್ಲು ಬಂಡೆಗಳ ಸ್ಫೋಟದಿಂದ ಹಾನಿಯಾಗಿರುವ ಮನೆಯ ಮಾಲೀಕರಿಗೆ ಹಾಗೂ ಮುಂದಿನ ದಿನಗಳಲ್ಲಿ ಸ್ಫೋಟದಿಂದ ಹಾನಿಯಾಗುವ ಸುಮಾರು 120 ಮನೆಗಳಿಗೆ ಮೊದಲು ಪರಿಹಾರವನ್ನು ನೀಡಿ ಕಾಮಗಾರಿಯನ್ನು ಮುಂದುವರಿಸಬೇಕು. ಗುತ್ತಿಗೆದಾರರು ಮತ್ತು ಇಲಾಖೆ ಅಧಿಕಾರಿಗಳು ರೈತರ ಮೇಲೆ ದೌರ್ಜನ್ಯ ಮಾಡಿ ಹೆದರಿಸಿ, ಬೆದರಿಸಿ ಪೊಲೀಸ್ ಭದ್ರತೆಯಲ್ಲಿ ಕಾಮಗಾರಿ ನೆಡಸಲು ಮುಂದಾದರೆ ನಾನೇ ಮತ್ತೆ ಸ್ಥಳಕ್ಕೆ ಬಂದು ರೈತರೊಂದಿಗೆ ಬಂದು ಪ್ರತಿಭಟನೆ ಮಾಡುತ್ತೇನೆ. ನಮ್ಮನ್ನ ಜೈಲಿಗೆ ಹಾಕಿದರು ಪರವಾಗಿಲ್ಲ ನಮಗೆ ರೈತರ ಹಿತ ಮುಖ್ಯ ಎಂದರು.
ಉಗ್ರ ಹೋರಾಟ ಮಾಡುತ್ತೇವೆ: ಇನ್ನೂ 50ರಿಂದ 100 ಅಡಿ ಅಂತರದಲ್ಲಿ ಸುಮಾರು 40ಕ್ಕೂ ಹೆಚ್ಚು ಮನೆಗಳಿದ್ದು ಸಿಡಿಮದ್ದು ಸ್ಫೋಟಕ್ಕೆ ಮನೆಗಳಿಗೂ ಹಾನಿಯಾಗಿದ್ದು ಜನರು ಸಂಕಷ್ಟಕ್ಕೀಡಾಗಿದ್ದಾರೆ. ಇದರ ಬಗ್ಗೆ ನಾನು ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಅಧಿಕಾರಿಗಳು ಹಾಗೂ ಇಲ್ಲಿಯ ಜನರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸುತ್ತೇನೆ ಹಾಗೂ ರಾತ್ರೋರಾತ್ರಿ ಕೆಲಸ ಮಾಡಿ ಜನರಿಗೆ ಇಲ್ಲಸಲ್ಲದ ಆಶ್ವಾಸನೆ ನೀಡಿ ರೈತರಿಗೆ ಕಣ್ಣು ಒರೆಸುವ ಕೆಲಸ ಮಾಡಬಾರದು.
ಸಭಾಧ್ಯಕ್ಷನಾಗಿ ಸ್ಥಾನದ ಘನತೆ ಉಳಿಸುವ ಕೆಲಸ ಮಾಡುವೇ: ಯು.ಟಿ.ಖಾದರ್
ಅಂಥದೇನಾದರೂ ನನ್ನ ಗಮನಕ್ಕೆ ಬಂದರೆ ನಮ್ಮ ಎಲ್ಲಾ ಸುತ್ತಮುತ್ತಲಿನ ಹಳ್ಳಿಯ ಜನರು ಹಾಗೂ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಸೇರಿ ಅಹೋರಾತ್ರಿ ಉಗ್ರ ಹೋರಾಟ ಮಾಡುತ್ತೇವೆ. ಗ್ರಾಮಸ್ಥರು ಯಾರೂ ಭಯಪಡಬೇಡಿ. ನಿಮ್ಮೊಂದಿಗೆ ನಾವಿದ್ದೇವೆ ಹಾಗೂ ಈ ವಿಷಯದ ಬಗ್ಗೆ ಸರ್ಕಾರ ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮದ ಬಗ್ಗೆ ತೀರ್ಮಾನಿಸುತ್ತೇವೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್.ಕೆ ಕುಮಾರಸ್ವಾಮಿ, ಜೆಡಿಎಸ್ ತಾಲೂಕು ಅಧ್ಯಕ್ಷ ಕೆ, ಎಸ್ ಮಂಜೇಗೌಡ, ಹಾಸನ ಹಾಲು ಒಕ್ಕೂಟದ ನಿರ್ದೇಶಕ ಪಿ.ಎಲ್ ನಿಂಗರಾಜು, ನಟರಾಜು ನಾಕಲಗೂಡು, ದೊರೆಸ್ವಾಮಿ, ಸುರೇಶ್, ಮೂರ್ತಿ, ಯೋಗೇಶ್, ಗೌಡೇಗೌಡ, ಪುಟ್ಟಸ್ವಾಮಿನಾಯ್ಕ ಹಾಗೂ ಗ್ರಾಮಸ್ಥರಿದ್ದರು.