ನನ್ನನ್ನು ಸೋಲಿಸಲು ಕುತಂತ್ರ ನಡೆಸಿದ್ರು ಡಿಕೆಶಿ, ಎಚ್ಡಿಕೆ| ಮೈತ್ರಿ ಸರ್ಕಾರದ ಪತನ ಬಳಿಕ ದೂರ| ನಾನು ಗೆದಿದ್ದರೆ ಮಂತ್ರಿ, ಉಪಮುಖ್ಯಮಂತ್ರಿಯಾಗಬಹುದಿತ್ತೇನೋ?| ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜೆಡಿಎಸ್‌ಗೆ ಯಾವುದೇ ಸ್ಪಷ್ಟ ನಿಲುವು ಹೊಂದಿರದ ಪಕ್ಷ: ಯೋಗೇಶ್ವರ್|
ಚನ್ನಪಟ್ಟಣ(ಡಿ.11): ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕುತಂತ್ರ ನಡೆಸಿ ಸೋಲಿಸಿದರು. ಇವರ ಕುತಂತ್ರಕ್ಕೆ ತಕ್ಕ ಪಾಠ ಕಲಿಸಬೇಕೆಂದು ಎಂದು ಮೈತ್ರಿ ಸರ್ಕಾರ ಕೆಡವಲು ಕೈಜೋಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಪಟ್ಟಣದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ನಾನು ಕೈಗೊಂಡಿದ್ದ ನೀರಾವರಿ ಯೋಜನೆಗಳಿಂದಾಗಿ ಜನ ನನ್ನನ್ನು ಬೆಂಬಲಿಸುತ್ತಾರೆ ಎಂದು ನಂಬಿದ್ದೆ. ಆದರೆ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ಕುತಂತ್ರ ಮಾಡಿ ನನ್ನನ್ನು ಸೋಲಿಸಿದರು ಎಂದರು.
ಯೋಗೇಶ್ವರ್ ವಿಚಾರವಾಗಿ ಯಾರೂ ಮಾತಾಡಬೇಡಿ : ಅಲ್ಲಿಂದ ಬಂತು ವಾರ್ನಿಂಗ್
ಸಮ್ಮಿಶ್ರ ಸರ್ಕಾರ ಪತನದ ಬಳಿಕ ಜೋಡೆತ್ತುಗಳು ದೂರವಾಗಿವೆ. ಕುಮಾರಸ್ವಾಮಿ ನಾನು ಜೆಡಿಎಸ್ ಶಾಸಕರನ್ನು ಕರೆದೊಯ್ಯುವ ಭಯ ಆವರಿಸಿದೆ. ಅದಕ್ಕಾಗಿ ಸಾಮಾನ್ಯ ಕಾರ್ಯಕರ್ತನಂತೆ ಫೈಲ್ ಎತ್ತಿಕೊಂಡು ಮುಖ್ಯಮಂತ್ರಿ ಕಚೇರಿಗೆ ಓಡಾಡುತ್ತಿದ್ದಾರೆ ಎಂದು ಯೋಗೇಶ್ವರ್ ಲೇವಡಿ ಮಾಡಿದರು.
ಬಿಜೆಪಿ ಹೈಕಮಾಂಡ್ ಬಗ್ಗೆ ನನ್ನ ಬಗ್ಗೆ ನಂಬಿಕೆ ಇದೆ. ನಾನು ಗೆದಿದ್ದರೆ ಮಂತ್ರಿ, ಉಪಮುಖ್ಯಮಂತ್ರಿಯಾಗಬಹುದಿತ್ತೇನೋ?. ಆದರೂ ಈಗ ಪಕ್ಷ ನನ್ನನ್ನು ವಿಧಾನ ಪರಿಷತ್ ಸದಸ್ಯನನ್ನಾಗಿ ಮಾಡಿದೆ. ಮುಂದೆ ಮಂತ್ರಿಮಾಡುವ ವಿಶ್ವಾಸ ಇದೆ. ನನಗೆ ಹೆಚ್ಚಿನ ಜವಾಬ್ದಾರಿ ನೀಡಲಿದ್ದು, ಹಳೇ ಮೈಸೂರು ಭಾಗದಲ್ಲಿ ಪಕ್ಷ ಬಲಪಡಿಸುವ ಕೆಲಸ ಮಾಡಲಿದ್ದೇನೆ ಎಂದರು ಯೋಗೇಶ್ವರ್. ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಜೆಡಿಎಸ್‌ಗೆ ಯಾವುದೇ ಸ್ಪಷ್ಟ ನಿಲುವು ಹೊಂದಿರದ ಪಕ್ಷ ಎಂದು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟ ಯೋಗೇಶ್ವರ್, ರಾಜ್ಯದಲ್ಲಿ ಬಿಜೆಪಿ ಬಲಿಷ್ಟವಾಗಿದೆ ಎಂದು ಹೇಳಿದರು.