ಚುನಾವಣೆಗೆ ಸಜ್ಜಾಗಿದ್ದ ರಾಜ್ಯಕ್ಕೆ ಚುನಾವಣಾ ಆಯೋಗ ಹೊಸ ಆದೇಶ ಒಂದನ್ನು ಹೊರಡಿಸಿದೆ. ಏನದು ಆದೇಶ..?
ಬೆಂಗಳೂರು (ಅ.09): ಕೋವಿಡ್-19 ಹಿನ್ನೆಲೆಯಲ್ಲಿ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳ ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು ಕಡಿತಗೊಳಿಸಿದ್ದು, 40ರ ಬದಲು 30 ಮಂದಿಯನ್ನು ಬಳಸಿಕೊಳ್ಳಬೇಕು ಎಂದು ಚುನಾವಣಾ ಆಯೋಗವು ಆದೇಶಿಸಿದೆ.
ಮಾನ್ಯತೆ ಪಡೆದ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ಪಕ್ಷಗಳಿಗೆ 40 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶ ಇತ್ತು. ಕೋವಿಡ್ ಹಿನ್ನೆಲೆಯಲ್ಲಿ ಈ ಸಂಖ್ಯೆಯನ್ನು ಬದಲಾವಣೆ ಮಾಡಿ 30 ಸ್ಟಾರ್ ಪ್ರಚಾರಕರನ್ನು ಬಳಸಿಕೊಳ್ಳಲು ಅವಕಾಶ ನೀಡಲಾಗಿದೆ. ಅದೇ ರೀತಿ ನೋಂದಾಯಿತ ರಾಜಕೀಯ ಪಕ್ಷಗಳಿಗೆ ನೀಡಲಾಗಿದ್ದ 20 ಸ್ಟಾರ್ ಪ್ರಚಾರಕರ ಸಂಖ್ಯೆಯನ್ನು 15ಕ್ಕೆ ಇಳಿಕೆ ಮಾಡಲಾಗಿದೆ.
ಜಯಚಂದ್ರಗೆ ಟಿಕೆಟ್ ನೀಡಲು ನಿರಾಕರಿಸಿತ್ತಾ ಕಾಂಗ್ರೆಸ್..? .
ರಾಜ್ಯದಲ್ಲಿ ಪ್ರಸ್ತುತ ಘೋಷಣೆಯಾಗಿರುವ ವಿಧಾನಸಭಾ ಉಪಚುನಾವಣೆಗಳಿಗೆ ಈ ಪರಿಷ್ಕೃತ ಆದೇಶ ಅನ್ವಯವಾಗಲಿದೆ. ರಾಜಕೀಯ ಪಕ್ಷಗಳು ಸ್ಟಾರ್ ಪ್ರಚಾರಕರ ಸಭೆಗಳ ಬಗ್ಗೆ ಮುಖ್ಯ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆಯಲು ಚುನಾವಣೆಯ ಅಧಿಸೂಚನೆಯ ದಿನಾಂಕದಿಂದ ಒಂದು ವಾರದ ಗಡುವನ್ನು 10 ದಿನಗಳಿಗೆ ವಿಸ್ತರಿಸಲಾಗಿದೆ. ಸ್ಟಾರ್ ಪ್ರಚಾರಕರ ಸಭೆಗಳಿಗೆ ಕನಿಷ್ಠ 48 ಗಂಟೆಗಳ ಮುಂಚೆ ಅನುಮತಿಗಾಗಿ ರಾಜಕೀಯ ಪಕ್ಷಗಳು ಅರ್ಜಿ ಸಲ್ಲಿಸಬೇಕು ಎಂದು ಆಯೋಗವು ತಿಳಿಸಿದೆ.