ಕಾಂಗ್ರೆಸ್‌ನಲ್ಲಿ ಟಿಕೆಟ್ ವಿಚಾರದ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿದ್ದು, ಜಯಚಂದ್ರಗೆ ಟಿಕೆಟ್ ನೀಡಲು ಹಿರಿಯ ಮುಖಂಡರು ನಿರಾಕರಿಸಿದ್ದರು ಎನ್ನಲಾಗುತ್ತಿದೆ.
ಬೆಂಗಳೂರು (ಅ.09): ಶಿರಾ ಕ್ಷೇತ್ರಕ್ಕೆ ಟಿ.ಬಿ. ಜಯಚಂದ್ರ ಅವರಿಗೆ ಟಿಕೆಟ್ ನೀಡುವುದು ಬೇಡ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಹೇಳಿರಲಿಲ್ಲ. ಹೊಸ ಅಭ್ಯರ್ಥಿ ಯಾರೂ ಇಲ್ಲವೇ ಎಂದು ಕೇಳಿದ್ದರು. ಟಿ.ಬಿ. ಜಯಚಂದ್ರ ಅವರ ಬಗ್ಗೆ ತಿಳಿಸಿದ ಬಳಿಕ ಹೈಕಮಾಂಡ್‌ನವರೇ ಟಿಕೆಟ್ ಅಂತಿಮಗೊಳಿಸಿದ್ದಾರೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಶಿರಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ ಯಾರೂ ಇಲ್ಲವೇ ಎಂದು ಸುರ್ಜೆವಾಲಾ ಕೇಳಿದ್ದರು. ಆದರೆ, ಟಿ.ಬಿ. ಜಯಚಂದ್ರ ಅವರು ಪಕ್ಷದ ಹಿರಿಯ ನಾಯಕರು. 1978ರಲ್ಲೇ ಶಾಸಕರಾಗಿದ್ದವರು. ಜೊತೆಗೆ ರಾಜೇಶ್‌ಗೌಡ ನಾಮ್‌ಕೆವಾಸ್ತೆ ನಮ್ಮ ಪಕ್ಷದಲ್ಲಿದ್ದವರು ಎಂದು ಹೇಳಿದ್ದೆವು’ ಎಂದರು.
ಸಿದ್ದರಾಮಯ್ಯನವರ ಮೊರೆ ಹೋದ ಆರ್.ಆರ್. ನಗರ ಬೈ ಎಲೆಕ್ಷನ್ ಅಭ್ಯರ್ಥಿ..! ..
‘ಈ ಹಿಂದೆ ರಾಜೇಶ್‌ಗೌಡ ನನ್ನ ಬಳಿ ಬಂದು ಟಿಕೆಟ್ ಕೇಳಿದ್ದರು. ಟಿ.ಬಿ. ಜಯಚಂದ್ರ ಇರುವ ಹಿನ್ನೆಲೆಯಲ್ಲಿ ನಿಮಗೆ ಟಿಕೆಟ್ ಕೊಡಲು ಸಾಧ್ಯವಿಲ್ಲ ಎಂದು ರಾಜೇಶ್ ಗೌಡ ಅವರಿಗೆ ಹೇಳಿದ್ದೆವು. ರಾಜೇಶ್‌ಗೌಡ ನಮ್ಮ ಪಕ್ಷದಲ್ಲಿ ನಾಮಕಾವಾಸ್ತೆ ಇದ್ದು ಜೆಡಿಎಸ್, ಬಿಜೆಪಿ ಪಕ್ಷದಲ್ಲೂ ಟಿಕೆಟ್ ಕೇಳಿದ್ದರು. ಈ ಎಲ್ಲ ವಿಚಾರವನ್ನು ಸುರ್ಜೆವಾಲಾ ಅವರಿಗೆ ತಿಳಿಸಿದ ಮೇಲೆ ಟಿ.ಬಿ. ಜಯಚಂದ್ರ ಅವರಿಗೆ ಟಿಕೆಟ್ ಅಂತಿಮ ಮಾಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.
ತುಮಕೂರು ಕಾಂಗ್ರೆಸ್‌ನಲ್ಲಿ ಗೊಂದಲಗಳಿಲ್ಲ
‘ಇನ್ನು ಶಿರಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕರೆಲ್ಲರೂ ಒಟ್ಟಾಗಿ ಹೋರಾಟ ಮಾಡುತ್ತಿದ್ದಾರೆ. ಅಲ್ಲಿನ ಮನಸ್ತಾಪಗಳು ಎಲ್ಲವೂ ಸರಿ ಹೋಗಿವೆ. ಡಾ.ಜಿ. ಪರಮೇಶ್ವರ್, ಕೆ.ಎನ್. ರಾಜಣ್ಣ ಸೇರಿ ಎಲ್ಲರೂ ಟಿ.ಬಿ. ಜಯಚಂದ್ರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿಯನ್ನು ಸೋಲಿಸುವುದೇ ಗುರಿಯಾಗಿಸಿ ಹೋರಾಡುತ್ತಿದ್ದಾರೆ’ ಎಂದು ಸ್ಪಷ್ಟಪಡಿಸಿದರು.