ಮಾಂಸ ಉತ್ಪಾದನಾ ಒಕ್ಕೂಟವಾಗಿ ಕುರಿ ನಿಗಮ ಪರಿವರ್ತನೆ: ಸಿಎಂ ಬೊಮ್ಮಾಯಿ

By Govindaraj SFirst Published Aug 15, 2022, 4:30 AM IST
Highlights

ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವನ್ನು ಮಾಂಸ ಉತ್ಪಾದನಾ ಒಕ್ಕೂಟವಾಗಿ ಪರಿವರ್ತಿಸಲು ಅಪೆಕ್ಸ್‌ ಸಂಸ್ಥೆ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಬೆಂಗಳೂರು (ಆ.15): ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮವನ್ನು ಮಾಂಸ ಉತ್ಪಾದನಾ ಒಕ್ಕೂಟವಾಗಿ ಪರಿವರ್ತಿಸಲು ಅಪೆಕ್ಸ್‌ ಸಂಸ್ಥೆ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಭಾನುವಾರ ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮನ್ನು ಭೇಟಿ ಮಾಡಿದ ಕುರುಬ ಸಮುದಾಯದ ಮುಖಂಡರನ್ನು ಉದ್ದೇಶಿಸಿ ಮಾತನಾಡಿದರು.

ಕುರಿಗಾಹಿಗಳ ಒಕ್ಕೂಟ ಮತ್ತು ನಿಗಮವು ಸಮನ್ವಯದೊಂದಿಗೆ ಮುನ್ನಡೆಯಬೇಕು. ಹೊಸದಾಗಿ ರಚಿಸುವ ಅಪೆಕ್ಸ್‌ ಸಂಸ್ಥೆಯು ನಿಗಮದವರನ್ನೂ ಒಳಗೊಂಡಿರಲಿದೆ. ಈ ಸಂಬಂಧ ಈಗಾಗಲೇ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಾಗಿದ್ದು, ಶೇ.25 ರಷ್ಟುಸಹಾಯಧನ ಹಾಗೂ ಶೇ.50 ರಷ್ಟುಸಾಲ ನೀಡಲು ಉದ್ದೇಶಿಸಲಾಗಿದೆ. ಕೇಂದ್ರ ಸರ್ಕಾರದಿಂದ ಸಾಲ ಪಡೆಯಲೂ ಸಾಧ್ಯವಾಗುತ್ತದೆ. ಇದಕ್ಕಾಗಿ ಸಹಕಾರಿ ಅಪೆಕ್ಸ್‌ ಬ್ಯಾಂಕ್‌ನೊಂದಿಗೆ ಪ್ರತ್ಯೇಕ ಸಭೆ ನಡೆಸುವುದಾಗಿ ತಿಳಿಸಿದರು.

ಸಿಎಂ ಬೊಮ್ಮಾಯಿ ಬದಲಾವಣೆ ಇಲ್ಲ: ಅರುಣ್‌ ಸಿಂಗ್‌ ಸ್ಪಷ್ಟೋಕ್ತಿ

20 ಕುರಿ, 1 ಮೇಕೆ ನೀಡಿಕೆ: ಸುಮಾರು 20 ಸಾವಿರ ಸಂಘಗಳಿಗೆ 1.25 ಲಕ್ಷ ರು. ಸಹಾಯಧನದ ಜೊತೆಗೆ 20 ಕುರಿ, 1 ಮೇಕೆ ನೀಡಲಾಗುವುದು. ಇದು ಯಶಸ್ವಿಯಾದರೆ, ಒಟ್ಟಾರೆ ಕುರಿ ಸಾಕಾಣಿಕೆ ಒಂದು ವರ್ಷದಲ್ಲಿ ಹೆಚ್ಚಳವಾಗಿ ಕುರಿ ಮಾಂಸ ಉತ್ಪಾದನೆ ಹೆಚ್ಚಾಗಲಿದೆ. ಅರ್ಜಿ ಸಲ್ಲಿಸದೆ ಫಲಾನುಭವಿಗಳನ್ನು ಪ್ರಾಮಾಣಿಕವಾಗಿ ಆಯ್ಕೆ ಮಾಡಬೇಕು. ನವೆಂಬರ್‌ನೊಳಗೆ ಆಯ್ಕೆ ಪೂರ್ಣಗೊಳಿಸಿದರೆ ಚೆಕ್‌ ನೀಡಬಹುದು ಎಂದು ಸ್ಪಷ್ಟಪಡಿಸಿದರು.

ಕೆಎಂಎಫ್‌ ಮಾದರಿಯಲ್ಲಿ ಕಾರ್ಯ: ಕುರಿ ಮಾಂಸ ಮಾರಾಟಕ್ಕೆ ಕೆಎಂಎಫ್‌ ಮಾದರಿ ಅನುಸರಿಸುವುದು ಸೇರಿದಂತೆ ಕುರಿಗಾಹಿಗಳಿಗಾಗಿ 350 ಕೋಟಿ ರು. ವೆಚ್ಚದಲ್ಲಿ ಯೋಜನೆಯೊಂದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರೂಪಿಸಿದ್ದಾರೆ. ಶೀಘ್ರದಲ್ಲೇ ಈ ಕುರಿತು ಆದೇಶವೂ ಹೊರಬೀಳಲಿದೆ ಎಂದು ಸಭೆಯಲ್ಲಿದ್ದ ಮಾಜಿ ಸಚಿವ ಎಚ್‌.ವಿಶ್ವನಾಥ್‌ ತಿಳಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜು, ಎಚ್‌.ಎಂ.ರೇವಣ್ಣ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಪ್ರಣಾಳಿಕೆಯಂತೆ ಎಸಿಬಿ ರದ್ದು: ಭಷ್ಟಾಚಾರ ನಿಗ್ರಹ ದಳ (ಎಸಿಬಿ) ರದ್ದುಪಡಿಸುವ ವಿಚಾರದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ಸಚಿವ ಸಂಪುಟದಲ್ಲಿ ಅನೌಪಚಾರಿಕವಾಗಿ ಚರ್ಚಿಸಿದ್ದು, ಬಿಜೆಪಿ ಪ್ರಣಾಳಿಕೆಯಲ್ಲಿ ಕೊಟ್ಟಿರುವ ಭರವಸೆಗೆ ಬದ್ಧವಾಗಿ ತೀರ್ಮಾನ ಕೈಗೊಳ್ಳಲಾಗುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಸಂಪುಟ ಸಭೆಯ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಂಸದೀಯ ವ್ಯವಹಾರಗಳ ಇಲಾಖೆಯ ರಾಜಭಾಷಾ ಆಯೋಗ ಮತ್ತು ಭಾಷಾಂತರ ನಿರ್ದೇಶನಾಲಯದಿಂದ ಹೊರತಂದಿರುವ ಭಾರತ ದಂಡ ಸಂಹಿತೆ, ದಂಡ ಪ್ರಕ್ರಿಯಾ ಸಂಹಿತೆಯ ದ್ವಿಭಾಷಾ ಕನ್ನಡ ಆವೃತ್ತಿ ಪುಸ್ತಕಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. 

52 ವರ್ಷ ಆರೆಸ್ಸೆಸ್‌ ರಾಷ್ಟ್ರಧ್ವಜ ಹಾರಿಸದಿರಲು ಏನು ಕಾರಣ?: ಸಿದ್ದರಾಮಯ್ಯ

ಎಸಿಬಿ ರದ್ದು ಮಾಡುವ ವಿಚಾರದಲ್ಲಿ ಹೈಕೋರ್ಟ್‌ ನೀಡಿರುವ ತೀರ್ಪಿನ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಅನೌಪಚಾರಿಕವಾಗಿ ಚರ್ಚಿಸಲಾಗಿದೆ. ಎಸಿಬಿ ರದ್ದು ಮಾಡುವ ಬಗ್ಗೆ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಆದರೆ, ಈ ವಿಚಾರ ನ್ಯಾಯಾಲಯದಲ್ಲಿ ಇದ್ದಿದ್ದರಿಂದ ಇಷ್ಟುದಿನ ಯಾವುದೇ ತೀರ್ಮಾನ ಕೈಗೊಂಡಿರಲಿಲ್ಲ. ಈಗ ಹೈಕೋರ್ಟ್‌ ತೀರ್ಪು ಬಂದಿದೆ. ಎಸಿಬಿಯನ್ನು ರದ್ದುಪಡಿಸುವಂತೆ ನ್ಯಾಯಾಲಯವೇ ಹೇಳಿದೆ.

click me!