
ಬೆಂಗಳೂರು (ಸೆ.26): ಗೃಹಜ್ಯೋತಿ ಫಲಾನುಭವಿಗಳ ಸಂಖ್ಯೆ ಕಡಿತಕ್ಕೆ ಕಾಂಗ್ರೆಸ್ ಸರ್ಕಾರದ ಷಡ್ಯಂತ್ರ ನಡೆಸಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆಪಾದಿಸಿದ್ದಾರೆ. ಲಕ್ಷಾಂತರ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡುವ ಮೂಲಕ ಬಡವರ ಅನ್ನಭಾಗ್ಯಕ್ಕೆ ಕತ್ತರಿ ಹಾಕುತ್ತಿರುವ ಕಾಂಗ್ರೆಸ್ ಸರ್ಕಾರ ಈಗ 30 ದಿನಗಳ ಬದಲಾಗಿ 40 ದಿನಗಳಿಗೆ ವಿದ್ಯುತ್ ಮೀಟರ್ ರೀಡಿಂಗ್ ತೆಗೆದುಕೊಳ್ಳುವ ಮೂಲಕ ಫಲಾನುಭವಿಗಳ ವಿದ್ಯುತ್ ಬಳಕೆಯ ಸರಾಸರಿ ಮಿತಿ ಏರಿಸಿ, ಗೃಹಜ್ಯೋತಿ ಯೋಜನೆಯಿಂದ ಅನರ್ಹಗೊಳಿಸುವ ಹುನ್ನಾರ ಮಾಡುತ್ತಿದೆ ಎಂದು ಹೇಳಿದ್ದಾರೆ. ಕಾಕಾ ಪಾಟೀಲನಿಗೂ ಫ್ರೀ, ಮಹಾದೇವಪ್ಪನಿಗೂ ಫ್ರೀ ಎಂದು ಬೊಗಳೆ ಬಿಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಒಂದೊಂದೇ ಗ್ಯಾರಂಟಿ ಯೋಜನೆಯನ್ನು ಹಿಂಬಾಗಿಲ ಮೂಲಕ ಬಂದ್ ಮಾಡಲು ಹೊರಟಿದೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಜನರ ಮೇಲೆ ಗಬ್ಬರ್‌ಸಿಂಗ್ ಟ್ಯಾಕ್ಸ್ ವಿಧಿಸಿದೆ. 25 ವಸ್ತುಗಳ ಮೇಲೆ ತೆರಿಗೆ ಏರಿಕೆ ಮಾಡಿದರೂ ಯಾವುದಕ್ಕೂ ನಿಖರ ಕಾರಣ ಕೊಡಲಿಲ್ಲ. ಸರ್ಕಾರ ದಿವಾಳಿಯಾಗಿರುವುದಕ್ಕೆ ಇದೇ ಸಾಕ್ಷಿ ಎಂದು ಟೀಕಿಸಿದರು. ಎನ್‌ಡಿಎ ಸರ್ಕಾರ ಜನಸ್ನೇಹಿ ಸರ್ಕಾರ. ಜನರ ಮೇಲೆ ವಿಧಿಸಿದ್ದ ಜಿಎಸ್‌ಟಿಯನ್ನು ಇಳಿಸಿದೆ. ಇದರಿಂದ ಬಹುತೇಕ ದಿನಬಳಕೆ ವಸ್ತುಗಳ ಬೆಲೆ ಕಡಿಮೆಯಾಗಿದೆ. ಬಡವರು, ಮಧ್ಯಮ ವರ್ಗದವರು ಈಗ ನಿರಾಳರಾಗಿದ್ದಾರೆ. ಜಿಎಸ್‌ಟಿ ಭಾರ ಕಡಿಮೆ ಮಾಡಿರುವ ಎನ್‌ಡಿಎ ಸರ್ಕಾರ ನುಡಿದಂತೆ ನಡೆದಿದೆ ಎಂದು ವಿವರಿಸಿದರು.
ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಶೇ.15 ರಿಂದ ಶೇ.5ಕ್ಕೆ ಮತ್ತೆ ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿಯನ್ನು ಶೇ.12ರಿಂದ ಶೇ.೫ಕಕೆ ಇಳಿಸಿದೆ. ಇದು ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರ ನೀಡಿರುವ ಕೊಡುಗೆಯಾಗಿದೆ. ಇದನ್ನು ಸಹಿಸದ ಕಾಂಗ್ರೆಸ್ ಸರ್ಕಾರ ಮೊಸರಲ್ಲಿ ಕಲ್ಲು ಹುಡುಕುತ್ತಿದೆ. ತೆರಿಗೆ ಇಳಿಸಿದ್ದನ್ನು ಸ್ವಾಗತಿಸಬೇಕಾದ ಸರ್ಕಾರ ತೆರಿಗೆಯನ್ನು ಕಡಿತಗೊಳಿಸಿದ್ದೇಕೆ ಎಂದು ಪ್ರಶ್ನಿಸುತ್ತಿದೆ. ಆ ಮೂಲಕ ಜಿಎಸ್‌ಟಿ ಇಳಿಸಿದ್ದನ್ನು ಪ್ರಶ್ನಿಸಿದ ದೇಶದ ಯಾರಾದರೂ ಮುಖ್ಯಮಂತ್ರಿ ಇದ್ದರೆ ಅದು ಕರ್ನಾಟಕದ ಸಿದ್ದರಾಮಯ್ಯ ಎಂದು ವ್ಯಂಗ್ಯವಾಡಿದರು. ತೆರಿಗೆ ಕಡಿಮೆ ಮಾಡಿದ್ದನ್ನು ಪ್ರಶ್ನಿಸಿರುವ ಸಿಎಂ ಸಿದ್ದರಾಮಯ್ಯಗೆ ನಾಚಿಕೆಯಾಗಬೇಕು.
ನಾವು ಕಾಂಗ್ರೆಸ್ ಸರ್ಕಾರದಂತೆ ಜನರ ಮೇಲೆ ಗಬ್ಬರ್‌ಸಿಂಗ್ ಟ್ಯಾಕ್ಸ್ ಹೇರಿಲ್ಲ. ಗ್ಯಾರಂಟಿ ಯೋಜನೆಗಳನ್ನೂ ಸರಿಯಾಗಿ ಜಾರಿಗೊಳಿಸದೆ ಅವುಗಳ ಹೆಸರಿನಲ್ಲಿ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿದೆ. ಇದೊಂದು ಪಾಪರ್ ಸರ್ಕಾರ. ಮದ್ಯ, ವಿದ್ಯುತ್, ಹಾಲು, ನೋಂದಣಿ ಶುಲ್ಕ, ಬಸ್ ಟಿಕೆಟ್ ಹೀಗೆ ಸಿಕ್ಕದ್ದನ್ನೆಲ್ಲಾ ಏರಿಕೆ ಮಾಡಿ ಜನರ ಮೇಲೆ ತೆರಿಗೆ ಹೊರೆ ಹಾಕಿತು. ಇದರ ಪರಿಣಾಮ ಜನರು ಮೈಕ್ರೋ ಫೈನಾನ್ಸ್‌ಗಳ ಸಾಲದ ಸುಳಿಗೆ ಸಿಲುಕುವಂತಯಿತು ಎಂದು ದೂಷಿಸಿದರು. ಎನ್‌ಡಿಎ ಸರ್ಕಾರ ಜಿಎಸ್‌ಟಿ ಇಳಿಸುವ ಸಮಯದಲ್ಲೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಹಾಗೂ ದೇಶದ ಆರ್ಥಿಕತೆಗೆ ಧಕ್ಕೆಯಾಗದ ರೀತಿಯಲ್ಲಿ ಸುದೀರ್ಘ ಸಮಾಲೋಚನೆ ನಡೆಸಿ ತೆರಿಗೆ ಮಿತಿಯನ್ನು ಕಡಿಮೆ ಮಾಡಿದೆ. ದೇಶದ ಜನರಿಗೆ ದಸರಾ ಕೊಡುಗೆ ನೀಡಿರುವುದಾಗಿ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.