ಕೇಂದ್ರ ಸರ್ಕಾರ ವಿರುದ್ಧ ಗಾಂಧಿ ಮಾರ್ಗದ ಕಾಂಗ್ರೆಸ್‌ ‘ನವ ಸತ್ಯಾಗ್ರಹ’ ಜನಾಂದೋಲನ

By Kannadaprabha News  |  First Published Dec 27, 2024, 6:06 AM IST

ಮಹಾತ್ಮ ಗಾಂಧಿ ಅವರ ಮಾರ್ಗದಲ್ಲಿ 'ನವ ಸತ್ಯಾಗ್ರಹ' ಹೆಸರಿನಲ್ಲಿ ಜನಾಂದೋಲನವನ್ನು ಮುಂದಿನ ಒಂದು ವರ್ಷ ದೇಶಾದ್ಯಂತ ನಡೆಸಲು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿದೆ. 


ಬೆಳಗಾವಿ (ಡಿ.27): ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವ ವಿರೋಧಿ ನೀತಿ, ಸಂವಿಧಾನ ವಿರೋಧಿ ನಿಲುವು, ಭ್ರಷ್ಟಾಚಾರ ಹಾಗೂ ಸರ್ಕಾರಿ ಯಂತ್ರಗಳ ದುರುಪಯೋಗದ ವಿರುದ್ಧ ಮಹಾತ್ಮ ಗಾಂಧಿ ಅವರ ಮಾರ್ಗದಲ್ಲಿ 'ನವ ಸತ್ಯಾಗ್ರಹ' ಹೆಸರಿನಲ್ಲಿ ಜನಾಂದೋಲನವನ್ನು ಮುಂದಿನ ಒಂದು ವರ್ಷ ದೇಶಾದ್ಯಂತ ನಡೆಸಲು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ನಿರ್ಣಯ ಕೈಗೊಂಡಿದೆ. ಜತೆಗೆ, ಕಾಂಗ್ರೆಸ್ ಪಕ್ಷವನ್ನು ಎಲ್ಲಾ ಹಂತಗಳಲ್ಲಿ ಮತ್ತಷ್ಟು ಬಲಿಷ್ಠಗೊಳಿಸಲು, ಪ್ರಭಾವಶಾಲಿಗೊಳಿಸಲು ಪಕ್ಷವನ್ನು ಪುನರ್ ರಚನೆ ಮಾಡುವ ನಿರ್ಣಯವನ್ನು ಕೈಗೊಳ್ಳಲಾಗಿದೆ.

1914ರ ಡಿಸೆಂಬರ್ ತಿಂಗಳಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನಕ್ಕೆ ಮಹಾತ್ಮ ಗಾಂಧಿ ಅವರು ಅಧ್ಯಕ್ಷರಾಗಿ ಶತಮಾನ ಪೂರೈಸಿದ ಐತಿಹಾಸಿಕ ಸಂದರ್ಭದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಬೆಳಗಾವಿಯ ವೀರಸೌಧದಲ್ಲಿ ನಡೆದ ನವ ಸತ್ಯಾಗ್ರಹ ಬೈಠಕ್‌ನಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಪರಿಕಲ್ಪನೆಯಲ್ಲಿ ಡಿ.27ರಿಂದಲೇ ಜನಾಂದೋಲನವನ್ನು ಬೆಳಗಾವಿಯಿಂದ ಆರಂಭಿಸಲಾಗುತ್ತದೆ. 

Tap to resize

Latest Videos

undefined

ಕಾಂಗ್ರೆಸ್‌ ಗಾಂಧಿಗಿರಿಗೆ 100: ಇಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ

ಈ ಮೂಲಕ ಸಂವಿಧಾನದ ಮೇಲಿನ ದಾಳಿ, ಅಪಮಾನ, ಚುನಾವಣಾ ಆಯೋಗದ ದುರ್ಬಳಕೆ, ಇವಿಎಂ ತಿರುಚುವುದು, ಬೆಲೆ ಏರಿಕೆ, ಭ್ರಷ್ಟಾಚಾರ, ಅದಾನಿ, ಅಂಬಾನಿಗಳ ಪರವಾಗಿ ಕೇಂದ್ರ ಸರ್ಕಾರದ ನೀತಿಗಳು, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಲಾಯಿತು. ನವ ಸತ್ಯಾಗ್ರಹ ಹೆಸರಿನಲ್ಲಿ ರಾಷ್ಟ್ರಮಟ್ಟದಿಂದ ಹಿಡಿದು ಹಳ್ಳಿವರೆಗೆ ನಡೆಯುವ ಈ ಜನಾಂದೋಲನದಲ್ಲಿ ಪಕ್ಷದ ಎಲ್ಲಾ ಹಂತದ ನಾಯಕರು ಭಾಗವಹಿಸುತ್ತಾರೆ. ಸಾರ್ವಜನಿಕ ಸಭೆಗಳು, ವಿಚಾರ ಸಂಕಿರಣಗಳು, ರ್‍ಯಾಲಿಗಳು, ವಿಚಾರ ಸಂಕಿರಣಗಳನ್ನು ಆಯೋಜಿಲಾಗುತ್ತದೆ. ಕೇಂದ್ರದ ಜನ ವಿರೋಧಿ ನಿಲುವುಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ಕೇಂದ್ರ ಸರ್ಕಾರವನ್ನು ಪ್ರಶ್ನೆ ಮಾಡಲು ತೀರ್ಮಾನಿಸಲಾಯಿತು.

ಗೃಹ ಸಚಿವ ಅಮಿತ್ ಶಾ ರಿಂದ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್‌ರಿಗೆ ಅಪಮಾನ ಆಗಿರುವ ಕಾರಣ ಅವರು ದೇಶದ ಜನತೆಯಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ನ್ಯಾಯಾಂಗ, ಚುನಾವಣಾ ಆಯೋಗ ಮತ್ತು ಮಾಧ್ಯಮಗಳನ್ನು ಒತ್ತಡದ ಮೂಲಕ ರಾಜಕೀಯಗೊಳಿಸಿರುವುದನ್ನು ತಡೆಯಬೇಕು. ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುವ ಒಂದು ರಾಷ್ಟ್ರ ಒಂದು ಚುನಾವಣೆಯದಿಂದ ಆಗುವ ಅಪಾಯಗಳ ಕುರಿತು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ತಿದ್ದುಪಡಿ ಹಿಂಪಡೆಯಲು ಆಗ್ರಹ: ಮತದಾರರಿಗೆ ಮತದಾನದ ಮಾಹಿತಿ ಒದಗಿಸುವುದನ್ನು ತಪ್ಪಿಸಲು ಇತ್ತೀಚೆಗೆ ಚುನಾವಣೆ ನಿಯಮಗಳ ತಿದ್ದುಪಡಿ ಮಾಡಿರುವುದನ್ನು ಹಿಂಪಡೆಯಬೇಕು. ಈ ತಿದ್ದುಪಡಿ ನಿರ್ಭೀತ ಮತ್ತು ನಿಷ್ಪಕ್ಷಪಾತ, ಪಾರದರ್ಶಕ ಚುನಾವಣೆಗೆ ಧಕ್ಕೆ ಉಂಟು ಮಾಡುತ್ತದೆ. ಮಣಿಪುರ ಹಿಂಸಾಚಾರ, ಅಲ್ಪಸಂಖ್ಯಾತರ ಮೇಲಿನ ನಿರಂತರ ದಾಳಿಗಳು, ದ್ವೇಷ ಭಾವನೆ ಬಿತ್ತುವುದು, ಪ್ರತಿಭಟನಾನಿರತರ ಮೇಲೆ ಬಿಜೆಪಿ ಸರ್ಕಾರಗಳಿಂದ ದಾಳಿಗಳನ್ನು ತಪ್ಪಿಸಲು ಪ್ರಯತ್ನ ನಡೆಸಬೇಕು. ಎಸ್ಸಿ, ಎಸ್ಟಿ ಮತ್ತು ಹಿಂದುಳಿದ ವರ್ಗಗಳಿಗೆ ಶೇ.50 ರಷ್ಟು ಮೀಸಲಾತಿ ಮಿತಿ ತೆರವುಗೊಳಿಸಿ, ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಿಂದುಳಿದಿರುವಿಕೆ ಆಧಾರದ ಮೇಲೆ ಮೀಸಲಾತಿ ನಿರ್ಧಾರ ಆಗಬೇಕು ಎಂದು ಕೇಂದ್ರ ಸರ್ಕಾರದ ಮೇಲೆ ಜನಾಂದೋಲನದಲ್ಲಿ ಒತ್ತಡ ಹೇರಲು ನಿರ್ಧರಿಸಲಾಯಿತು. 

ಜಿಎಸ್‌ಟಿ ತೆರಿಗೆ ಭಯೋತ್ಪಾದನೆಯಿಂದ ಉದ್ಯಮಗಳು, ಕೈಗಾರಿಕೆಗಳು, ವಾಣಿಜ್ಯ ಸಂಸ್ಥೆಗಳು ನೆಲಕಚ್ಚುತ್ತಿವೆ. ಜನರಿಗೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಅದಾನಿ, ಅಂಬಾನಿ ಅವರಂಥ ಉದ್ಯಮಿಗಳ ಪರವಾದ ನೀತಿಗಳಿಂದಾಗಿ ಅವರು ಶ್ರೀಮಂತರಾಗುತ್ತಿದ್ದಾರೆ. ಬಡವರು ಮತ್ತಷ್ಟು ಬಡವರಾಗುತ್ತಿದ್ದಾರೆ. ಜನರ ಆದಾಯ ಹೆಚ್ಚಳವಾಗದೆ ಆರ್ಥಿಕ ಅಸಮಾನತೆ ಹೆಚ್ಚುತ್ತಿದೆ. ಇದನ್ನು ತಡೆದು ಆರ್ಥಿಕತೆ ಸುಧಾರಣೆಗೆ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು. ಕೇಂದ್ರ ಸರ್ಕಾರದ ಕೆಟ್ಟ ವಿದೇಶಾಂಗ ನೀತಿಯಿಂದಾಗಿ ಭಾರತದ ನೆಲ ಚೀನಾ ದೇಶ ವಶಪಡಿಸಿಕೊಳ್ಳುತ್ತಿದೆ. ಈ ವಿಚಾರದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲು ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಸತ್ತಿನಲ್ಲಿ ಚರ್ಚೆ ಮಾಡಬೇಕು. ಬಾಂಗ್ಲಾದೇಶದಲ್ಲಿ ಜನರ ರಕ್ಷಣೆಗಾಗಿ ಅಲ್ಲಿನ ಸರ್ಕಾರವನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಸಭೆಯಲ್ಲಿ ನಿರ್ಣಯಿಸಲಾಗಿತು.

ಕೇವಲ ಕಾಂಗ್ರೆಸ್‌ ಅಲ್ಲ, ಎಲ್ಲರ ಕಾರ್ಯಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್

ಪಕ್ಷ ಸಂಘಟನೆ: ಭಾರತ ಜೋಡೋ ಯಾತ್ರೆ ಮತ್ತು ಭಾರತ ಜೋಡೋ ನ್ಯಾಯ ಯಾತ್ರೆಗಳು ಇಡೀ ದೇಶದಲ್ಲಿ ಯುವ ಸಮುದಾಯ ಮತ್ತು ಜನರ ಗಮನ ಸೆಳೆದಿವೆ. ಸಂಘಟನೆ ಮತ್ತು ಹೋರಾಟಕ್ಕೆ ಹುಮ್ಮಸ್ಸು ನೀಡಿ ಯಶಸ್ವಿಯಾಗಿರುವ ಈ ಎರಡು ಆಂದೋಲನಗಳನ್ನು ಮಾದರಿಯಾಗಿ ತೆಗೆದುಕೊಂಡು ಪಕ್ಷವನ್ನು ಮತ್ತಷ್ಟು ಬಲಪಡಿಸಲು ಪುನರ್‌ ರಚನೆ ಮಾಡವುದು ಮತ್ತು ‘ಸಂಘಟನೆ ಸೃಜನೆ’ ಕಾರ್ಯಕ್ರಮದ ಮೂಲಕ ಪಕ್ಷ ಸಂಘಟನೆ ಮಾಡಲು ಕಾರ್ಯಕಾರಿ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಬೈಠಕ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಉಪಸ್ಥಿತರಿದ್ದರು.

click me!