ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ನಿಶ್ಚಿತ: ಸಲೀಂ ಅಹ್ಮದ್‌

By Kannadaprabha News  |  First Published Oct 6, 2021, 1:07 PM IST

*  ಹಾನಗಲ್ಲ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಒಟ್ಟಾಗಿ ಕೆಲಸ
*  ಜೆಡಿಎಸ್‌ನಿಂದ ಅವಕಾಶವಾದಿ ರಾಜಕಾರಣ
*  ಚಕ್ರವ್ಯೂಹದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರುವ ಸಿಎಂ ಬೊಮ್ಮಾಯಿ


ಹಾವೇರಿ(ಅ.06):  ಬಿಜೆಪಿ(BJP) ಸರ್ಕಾರಗಳ ಜನವಿರೋಧಿ ನೀತಿಯಿಂದ ಜನರು ಭ್ರಮನಿರಸನಗೊಂಡಿದ್ದು, ಹಾನಗಲ್ಲ(Hanagal) ಹಾಗೂ ಸಿಂದಗಿ(Sindagi) ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲವು ನಿಶ್ಚಿತ. ಹಾನಗಲ್ಲ ಕ್ಷೇತ್ರದಲ್ಲಿ ಯಾರಿಗೇ ಟಿಕೆಟ್‌ ನೀಡಿದರೂ ಒಗ್ಗಟ್ಟಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌(Saleem Ahmed) ಹೇಳಿದ್ದಾರೆ. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹಾನಗಲ್ಲ ಕ್ಷೇತ್ರಕ್ಕೆ ಬುಧವಾರ ಬೆಳಗ್ಗೆಯೊಳಗಾಗಿ ಅಭ್ಯರ್ಥಿ ಹೆಸರು ಘೋಷಣೆಯಾಗುವ ನಿರೀಕ್ಷೆಯಿದೆ. ಈಗಾಗಲೇ ಆಕಾಂಕ್ಷಿಗಳೊಂದಿಗೆ ಸಭೆ ನಡೆಸಲಾಗಿದ್ದು, ಯಾರಿಗೇ ಟಿಕೆಟ್‌ ನೀಡಿದರೂ ಒಟ್ಟಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಆಕಾಂಕ್ಷಿಗಳು ಹೇಳಿದ್ದಾರೆ. ಅ. 7ರಂದು ಪಕ್ಷದ ಅಭ್ಯರ್ಥಿ ನಾಮಪತ್ರ ಸಲ್ಲಿಸಲಿದ್ದು, ರಾಜ್ಯ ಉಸ್ತುವಾರಿ ರಣದೀಪ ಸರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಕೇಂದ್ರ ಸಚಿವ ಕೆ.ಎಚ್‌. ಮುನಿಯಪ್ಪ, ಮಾಜಿ ಸಚಿವರಾದ ಎಚ್‌.ಕೆ. ಪಾಟೀಲ, ಆರ್‌.ವಿ. ದೇಶಪಾಂಡೆ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಅಂದು ಸಂಜೆ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಎಲ್ಲ ಮುಖಂಡರು ಉಸ್ತುವಾರಿಗಳ ಸಭೆ ನಡೆಸಲಿದ್ದಾರೆ ಎಂದು ತಿಳಿಸಿದರು.

Latest Videos

undefined

ಕೇಂದ್ರ ಹಾಗೂ ರಾಜ್ಯ ಬಿಜೆಪಿ(BJP)ಸರ್ಕಾರಗಳ ಜನವಿರೋಧಿ ನೀತಿಯಿಂದ ಜನ ರೋಸಿ ಹೋಗಿದ್ದಾರೆ. ಕೊರೋನಾ(Coronavirus0ನಿರ್ವಹಣೆಯಲ್ಲಿ ಸರ್ಕಾರಗಳು ವಿಫಲವಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರು 7 ವರ್ಷಗಳಿಂದಲೂ ಸುಳ್ಳು ಆಶ್ವಾಸನೆ ನೀಡುತ್ತಲೇ ಜನರಿಗೆ ಮೋಸ ಮಾಡುತ್ತ ಬಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ವರ್ಗ ತೋರಿಸುತ್ತೇವೆ ಎಂದವರು ನರಕ ದರ್ಶನ ಮಾಡಿಸಿದ್ದಾರೆ. ರಾಜ್ಯದಲ್ಲೂ ಕುರ್ಚಿಗಾಗಿ ಕಚ್ಚಾಟ ನಡೆಸುತ್ತಲೇ ಅಭಿವೃದ್ಧಿ ಕಡೆಗಣಿಸಿದ್ದಾರೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಿದ್ದ ಅನುದಾನವೂ ಬರುತ್ತಿಲ್ಲ. ಆದ್ದರಿಂದ ಉಪಚುನಾವಣೆಯಲ್ಲಿ ಕಾಂಗ್ರೆಸ್‌(Congress) ಬೆಂಬಲಿಸಲು ಜನತೆ ನಿರ್ಧರಿಸಿದ್ದಾರೆ ಎಂದು ಅವರು ಹೇಳಿದರು.

ಸಿಂದಗಿ, ಹಾನಗಲ್‌ 'ಕೈ' ಅಭ್ಯರ್ಥಿ ಘೋಷಣೆ: ಪ್ಲಸ್, ಮೈನಸ್ ಲೆಕ್ಕಾಚಾರ ಹೀಗಿದೆ

ಬಿಜೆಪಿಗೆ ಯಾವ ಕಾರಣಕ್ಕಾಗಿ ಮತ ನೀಡಬೇಕು ಎಂದು ಜನತೆ ಪ್ರಶ್ನಿಸುತ್ತಿದ್ದಾರೆ. ಪೆಟ್ರೋಲ್‌, ಅಡುಗೆ ಅನಿಲ, ದಿನಬಳಕೆ ವಸ್ತುಗಳ ಬೆಲೆಯೇರಿಕೆ ಮಾಡಿದ್ದಕ್ಕೆ ಮತ ನೀಡಬೇಕೇ ಎಂದು ಪ್ರಶ್ನಿಸಿದ ಅವರು, ಜನಾಶೀರ್ವಾದ ಯಾತ್ರೆಯನ್ನು ಬಿಜೆಪಿಯವರು ಯಾವ ಪುರುಷಾರ್ಥಕ್ಕೆ ಮಾಡಿದ್ದಾರೋ ಗೊತ್ತಿಲ್ಲ. ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರೈತರನ್ನು ಕೊಲೆ ಮಾಡಿದ ಬಿಜೆಪಿಗೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಹಿರಿಯರನ್ನು ಕಡೆಗಣಿಸಿ ಕಸದ ಬುಟ್ಟಿಗೆ ಹಾಕುವ ಬಿಜೆಪಿ ಸಂಸ್ಕೃತಿ ಬಗ್ಗೆ ಜನ ಎಚ್ಚೆತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಯಾವ ಕಾರಣಕ್ಕಾಗಿ ಸಿಎಂ ಕುರ್ಚಿಯಿಂದ ಕೆಳಗಿಳಿಸಿದರು ಎಂಬುದನ್ನು ರಾಜ್ಯದ ಜನತೆಗೆ ತಿಳಿಸಬೇಕು ಎಂದು ಅವರು ಆಗ್ರಹಿಸಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಚಕ್ರವ್ಯೂಹದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ದವಳಗಿರಿ, ಕೇಶವ ಕೃಪಾ ಮತ್ತು ಹೈಕಮಾಂಡ್‌ ಮಧ್ಯೆ ಸಿಲುಕಿ ಆಡಳಿತ ನಡೆಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಅವರಿದ್ದಾರೆ. ರಾಜ್ಯದಲ್ಲಿ ನಿರ್ಜೀವ ಸರ್ಕಾರ ಇನ್ನು ಹೆಚ್ಚು ದಿನ ಅಧಿಕಾರದಲ್ಲಿ ಇರುವುದಿಲ್ಲ ಎಂದು ಅವರು ಟೀಕಿಸಿದರು.

ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ, ಮಾಜಿ ಸಚಿವರಾದ ಬಸವರಾಜ ಶಿವಣ್ಣನವರ, ರುದ್ರಪ್ಪ ಲಮಾಣಿ, ಜಿಲ್ಲಾಧ್ಯಕ್ಷ ಎಂ.ಎಂ. ಹಿರೇಮಠ, ಪ್ರಮುಖರಾದ ಡಿ.ಆರ್‌. ಪಾಟೀಲ, ಸೋಮಣ್ಣ ಬೇವಿನಮರದ, ಶ್ರೀನಿವಾಸ ಮಾನೆ, ಡಿ. ಬಸವರಾಜ, ಕೊಟ್ರೇಶಪ್ಪ ಬಸೇಗಣ್ಣಿ, ಎಸ್‌ಎಫ್‌ಎನ್‌ ಗಾಜಿಗೌಡ್ರ, ಪ್ರಕಾಶಗೌಡ ಪಾಟೀಲ ಇತರರು ಇದ್ದರು.

ಜೆಡಿಎಸ್‌ ಅವಕಾಶವಾದಿ...

ಜೆಡಿಎಸ್‌(JDS) ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ಬಿಜೆಪಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್‌ ಹೊರಟಿದೆ. ಜಾತ್ಯತೀತ ಎಂದು ಹೇಳಿಕೊಂಡು ಈ ರೀತಿ ಮಾಡುತ್ತಿರುವ ಜೆಡಿಎಸ್‌ ಬಗ್ಗೆ ಜನರಿಗೆ ಗೊತ್ತಾಗಿದೆ. ಹಾನಗಲ್ಲ ಕ್ಷೇತ್ರದಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಕೋಮುವಾದಿ ಪಕ್ಷಕ್ಕೆ ಅನುಕೂಲ ಮಾಡಿಕೊಡದೇ ಅಭ್ಯರ್ಥಿ ಬದಲಿಸುವಂತೆ ದೇವೇಗೌಡರಲ್ಲಿ ಕೇಳಿಕೊಂಡಿದ್ದೇನೆ. ಆದರೆ, ಅಲ್ಪಸಂಖ್ಯಾತರು ಯಾವತ್ತೂ ಕಾಂಗ್ರೆಸ್‌ ಪರವಾಗಿದ್ದಾರೆ ಎಂದು ಸಲೀಂ ಅಹ್ಮದ್‌ ವಿಶ್ವಾಸ ವ್ಯಕ್ತಪಡಿಸಿದರು.

ಇಂದು ಕಾಂಗ್ರೆಸ್‌ ಪ್ರತಿಭಟನೆ

ಉತ್ತರ ಪ್ರದೇಶದಲ್ಲಿ ರೈತರನ್ನು ಹತ್ಯೆ ಮಾಡಿರುವುದನ್ನು ಖಂಡಿಸಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಸಂತ್ರಸ್ತ ಕುಟುಂಬ ಭೇಟಿಗೆ ಅವಕಾಶ ನೀಡದ್ದನ್ನು ಖಂಡಿಸಿ ಸೆ. 6ರಂದು ಜಿಲ್ಲಾ ಕಾಂಗ್ರೆಸ್‌ನಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
 

click me!