
ಬಾಗಲಕೋಟೆ/ಬೆಂಗಳೂರು (ನ.11): ಶಿರಾ, ಆರ್.ಆರ್.ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಗೆದ್ದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನ ಕೊಟ್ಟತೀರ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ನಾವೂ ಈ ಎರಡೂ ಕ್ಷೇತ್ರಗಳ ಸೋಲನ್ನು ವಿನೀತರಾಗಿ ಒಪ್ಪಿಕೊಂಡಿದ್ದೇವೆ. ಆದರೆ, ಈ ಸೋಲಿನ ಹೊಣೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೊರುವ ಅಗತ್ಯ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಬಾದಾಮಿಯಲ್ಲಿ ಸುದ್ದಿಗಾರರ ಜತೆಗೆ ಹಾಗೂ ಟ್ವಿಟರ್‌ನಲ್ಲಿ ಟ್ವೀಟ್ ಮೂಲಕ ಉಪ ಚುನಾವಣೆ ಫಲಿತಾಂಶದ ವಿಚಾರವನ್ನು ಪ್ರಸ್ತಾಪಿಸಿರುವ ಅವರು, ಆರ್.ಆರ್.ನಗರ ಮತ್ತು ಶಿರಾ ಕ್ಷೇತ್ರದ ಸೋಲನ್ನು ನಾವು ವಿನೀತರಾಗಿ ಒಪ್ಪಿಕೊಂಡಿದ್ದೇವೆ. ಆದರೆ ಇದು ಪ್ರಜಾಪ್ರಭುತ್ವದ ಸೋಲು. ಅಕ್ರಮ ಗಳಿಕೆಯ ಹಣ, ಆಡಳಿತ ಯಂತ್ರದ ದುರುಪಯೋಗಕ್ಕೆ ಸಿಕ್ಕಿರುವ ಗೆಲುವು ಎಂದು ಆರೋಪಿಸಿದರು.
ಉಪಕದನ ಸೋಲಿನ ಹಿಂದೆ ಕೈ ನಾಯಕರದ್ದೇ ಪ್ಲಾನ್ ಇದೆಯಾ..? ...
ಡಿಕೆಶಿ ಯಾಕೆ ಹೊಣೆ ಹೊರಬೇಕು?: ಇದೇ ವೇಳೆ, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಡೆದ ಈ ಮೊದಲ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆ. ಹೀಗಾಗಿ ಡಿ.ಕೆ.ಶಿವಕುಮಾರ್ ಅವರು ಸೋಲಿನ ಹೊಣೆಯನ್ನು ಹೊರಬೇಕೆಂಬ ವಾದವನ್ನು ಸಿದ್ದರಾಮಯ್ಯ ತಳ್ಳಿಹಾಕಿದ್ದಾರೆ. ಸೋಲಿನ ಹೊಣೆಯನ್ನು ಅವರು ಯಾಕೆ ಹೊರಬೇಕು? ಯಾರೇ ಅಧ್ಯಕ್ಷರಾದರೂ ಅಷ್ಟೇ. ಇದು ಉಪಚುನಾವಣೆಯೇ ಹೊರತು ಸಾರ್ವತ್ರಿಕ ಚುನಾವಣೆ ಅಲ್ಲ. ಹಾಗಾಗಿ ಅವರು ಸೋಲಿನ ಹೊಣೆ ಹೊರಬೇಕಿಲ್ಲ. ಸಾರ್ವತ್ರಿಕ ಚುನಾವಣೆ 2023ಕ್ಕೆ ಬರಲಿದೆ. ಆಗ ನಾವೇ ಅಧಿಕಾರಕ್ಕೆ ಬರುತ್ತೇವೆ. ಅಧ್ಯಕ್ಷರಾದ ತಕ್ಷಣ ಚುನಾವಣೆ ಸೋಲಿನ ಹೊಣೆ ಹೊರಬೇಕಾ? ಎಂದು ಕಿಡಿಕಾರಿದರು.
ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಅಧಿಕಾರರೂಢ ಪಕ್ಷದ ಅಭ್ಯರ್ಥಿಗಳೇ ಗೆಲ್ಲುತ್ತಾರೆ. ಆಡಳಿತ ಪಕ್ಷದ ಶಾಸಕರಿದ್ದರೆ ಕ್ಷೇತ್ರಕ್ಕೆ ಅನುಕೂಲವಾಗುತ್ತದೆ ಎಂಬ ಅಭಿಪ್ರಾಯ ಜನರಲ್ಲಿರುತ್ತದೆ. ಪಕ್ಷದ ಕಾರ್ಯಕರ್ತರು ಈ ಸೋಲಿಂದ ಕಂಗೆಡಬೇಕಾಗಿಲ್ಲ. ಇದರಿಂದ ಯಾವ ಪಕ್ಷವೂ ಬಲಶಾಲಿಯಾಗುವುದಿಲ್ಲ, ಯಾವ ಪಕ್ಷವೂ ಬಲಹೀನವೂ ಆಗುವುದಿಲ್ಲ. ಇದು ಸಮಗ್ರ ರಾಜ್ಯದ ಜನಾಭಿಪ್ರಾಯ ಅಲ್ಲ, 2 ಸ್ಥಾನಗಳಿಗೆ ನಡೆದ ಚುನಾವಣೆ ಮಾತ್ರ ಎಂದರು.
ಆಯ್ಕೆಯಲ್ಲಿ ವಿಳಂಬವೂ ಕಾರಣ: ನಾನು ಮುಖ್ಯಮಂತ್ರಿಯಾಗಿದ್ದಾಗ ಜನರಿಗೆ ಒಳ್ಳೆಯದಾಗಲಿ, ನಮ್ಮ ಶಾಸಕನೂ ರಾಜಕೀಯವಾಗಿ ಜನಪ್ರಿಯನಾಗಲಿ ಎಂದು ಆರ್.ಆರ್.ನಗರಕ್ಕೆ ಸುಮಾರು 2000 ಕೋಟಿ ಕಾಮಗಾರಿ ಮಂಜೂರು ಮಾಡಿದ್ದೆ. ಅದರ ಫಲ ನಮ್ಮ ಪಕ್ಷಕ್ಕೆ ಸಿಗಲಿಲ್ಲ, ಅವರಿಗೆ ಸಿಕ್ಕಿದೆ. ಮುನಿರತ್ನ ಪಕ್ಷಾಂತರ ಮಾಡಿದ ದಿನದಿಂದ ಚುನಾವಣಾ ತಯಾರಿ ಆರಂಭಿಸಿದ್ದರು. ನಾವು ನಮ್ಮ ಅಭ್ಯರ್ಥಿ ಆಯ್ಕೆಯನ್ನು ಸ್ವಲ್ಪ ತಡವಾಗಿ ಮಾಡಿದೆವು, ಇದರಿಂದಾಗಿ ಪ್ರಚಾರ ವಿಳಂಬವಾಗಿ ಪ್ರಾರಂಭಿಸಬೇಕಾಯಿತು. ಸೋಲಿಗೆ ಇದೂ ಒಂದು ಕಾರಣ ಇರಬಹುದು. ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಹೀನಾಯವಾಗಿ ಸೋತಿರುವುದರಿಂದ ಆ ಪಕ್ಷದ ಮತಗಳು ಬಿಜೆಪಿ ಬುಟ್ಟಿಗೆ ಬಿದ್ದು ಅವರ ಗೆಲುವಿಗೆ ನೆರವಾಯಿತು. ಮುಖ್ಯವಾಗಿ ಶಿರಾದಲ್ಲಿ ಜೆಡಿಎಸ್ ತನ್ನ ಮತಗಳನ್ನಾದರೂ ಉಳಿಸಿಕೊಂಡಿದ್ದರೆ ಬಿಜೆಪಿ ಇಷ್ಟುಸುಲಭದಲ್ಲಿ ಗೆಲ್ಲುತ್ತಿರಲಿಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.