
ಬಳ್ಳಾರಿ (ಜ.3): ಬಳ್ಳಾರಿಯಲ್ಲಿ ನಡೆದ ಬ್ಯಾನರ್ ವಿವಾದ ಹಾಗೂ ನಂತರದ ಹಿಂಸಾಚಾರದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಜಿಲ್ಲೆಯ ಪ್ರಮುಖ ನಾಯಕರು ಮತ್ತು ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ. ಜಿಲ್ಲೆಯಲ್ಲಿ ಶಾಂತಿ ಸ್ಥಾಪನೆ ಹಾಗೂ ಘಟನೆಯ ನೈಜ ವರದಿ ಪಡೆಯಲು ಸಿಎಂ ಮುಂದಾಗಿದ್ದಾರೆ.
ಬಳ್ಳಾರಿ ನಗರ ಶಾಸಕ ಭರತ್ ರೆಡ್ಡಿ ಅವರು ಇಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರೊಂದಿಗೆ ತೋರಣಗಲ್‌ನ ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಬಳ್ಳಾರಿಯಲ್ಲಿ ನಡೆದ ಘರ್ಷಣೆ ಹಾಗೂ ಆ ಬಳಿಕ ಉಂಟಾದ ರಾಜಕೀಯ ಬೆಳವಣಿಗೆಗಳ ಬಗ್ಗೆ ಶಾಸಕರು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು. ಈ ಭೇಟಿಯ ಸಮಯದಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಮುಖ್ಯಮಂತ್ರಿಗಳು ಕೇವಲ ರಾಜಕೀಯ ನಾಯಕರಲ್ಲದೆ, ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಂದಲೂ ಘಟನೆಯ ವರದಿಯನ್ನು ಪಡೆದರು. ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಹಿತೇಂದ್ರ, ಬಳ್ಳಾರಿ ವಲಯದ ಐಜಿ ವರ್ತಿಕಾ ಕಟಿಯಾರ್ ಹಾಗೂ ದಾವಣಗೆರೆ ವಲಯದ ಐಜಿ ರವಿಕಾಂತೇಗೌಡ ಅವರು ಸಿಎಂಗೆ ಘಟನೆಯ ಹಂತ ಹಂತದ ಬೆಳವಣಿಗೆಗಳನ್ನು ವಿವರಿಸಿದರು. ಗುಂಡಿನ ದಾಳಿ, ಎಸ್ಪಿಯವರ ಅಮಾನತು ಹಾಗೂ ಸದ್ಯದ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದರು.
ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸಾಥ್
ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್ ಅವರು ಶಾಸಕ ಭರತ್ ರೆಡ್ಡಿ ಅವರ ಜೊತೆಗೂಡಿ ಮುಖ್ಯಮಂತ್ರಿಗಳ ಬಳಿ ಬಳ್ಳಾರಿಯ ಸ್ಥಿತಿಗತಿಗಳ ಬಗ್ಗೆ ಮಾತನಾಡಿದರು. ಘಟನೆಯ ನಂತರ ವಿರೋಧ ಪಕ್ಷಗಳು ಮಾಡುತ್ತಿರುವ ಆರೋಪಗಳು ಹಾಗೂ ಪ್ರಕರಣದ ತನಿಖೆ ನಡೆಯುತ್ತಿರುವ ದಾರಿಯ ಬಗ್ಗೆ ಮುಖ್ಯಮಂತ್ರಿಗಳಿಗೆ ಸಚಿವರು ಮತ್ತು ಶಾಸಕರು ಮಾಹಿತಿ ನೀಡಿದರು. ತನಿಖೆ ಪಾರದರ್ಶಕವಾಗಿ ನಡೆಯುವಂತೆ ಮುಖ್ಯಮಂತ್ರಿಗಳು ಈ ವೇಳೆ ಸೂಚಿಸಿದರು ಎನ್ನಲಾಗಿದೆ.
ಏನಿದು ಘಟನೆ?
ಬಳ್ಳಾರಿಯಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣದ ವೇಳೆ ಬ್ಯಾನರ್ ಕಟ್ಟುವ ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಭಾರಿ ಗಲಾಟೆ ನಡೆದಿತ್ತು. ಈ ಘರ್ಷಣೆಯು ಹಿಂಸಾಚಾರಕ್ಕೆ ತಿರುಗಿದಾಗ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು. ಈ ಗದ್ದಲದ ನಡುವೆ ಶಾಸಕ ಜನಾರ್ದನ ರೆಡ್ಡಿ ಅವರ ಮನೆ ಬಳಿ ಗುಂಡಿನ ಸದ್ದು ಕೇಳಿಬಂತು ಈ ಘಟನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತರಾಗಿದ್ದಾರೆ. ಈ ವೈಫಲ್ಯದ ಹಿನ್ನೆಲೆಯಲ್ಲಿ ಎಸ್ಪಿಯವರನ್ನು ಅಮಾನತು ಮಾಡಲಾಗಿತ್ತು, ಇದು ನಂತರ ಎಸ್ಪಿಯವರ ಆತ್ಮ೧ಹತ್ಯೆ ಯತ್ನದಂತಹ ಆಘಾತಕಾರಿ ಬೆಳವಣಿಗೆಗಳಿಗೆ ನಾಂದಿ ಹಾಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.