ನಾಳೆ ಕಾಂಗ್ರೆಸ್‌ ‘ವೋಟ್‌ ಅಧಿಕಾರ್‌ ರ್‍ಯಾಲಿ’

Kannadaprabha News   | Kannada Prabha
Published : Aug 07, 2025, 06:13 AM IST
Rahul gandhi slams trump

ಸಾರಾಂಶ

ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ನಡೆಸಲಿರುವ ಪ್ರತಿಭಟನೆ ಆಂದೋಲನದ ರೀತಿ ನಡೆಯಬೇಕು ಎಂಬ ಉದ್ದೇಶದೊಂದಿಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಿಂದಲೂ ಕನಿಷ್ಠ 50 ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸೂಚನೆ ನೀಡಲಾಗಿದೆ.

ಬೆಂಗಳೂರು : ಮತಗಳ್ಳತನ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಶುಕ್ರವಾರ ಬೆಂಗಳೂರಿನಲ್ಲಿ ನಡೆಸಲಿರುವ ಪ್ರತಿಭಟನೆ ಆಂದೋಲನದ ರೀತಿ ನಡೆಯಬೇಕು ಎಂಬ ಉದ್ದೇಶದೊಂದಿಗೆ ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಿಂದಲೂ ಕನಿಷ್ಠ 50 ಮಂದಿ ಸಮಾವೇಶದಲ್ಲಿ ಪಾಲ್ಗೊಳ್ಳುವಂತೆ ಮಾಡಲು ಸೂಚನೆ ನೀಡಲಾಗಿದೆ.

ಈ ಪ್ರತಿಭಟನಾ ಸಮಾವೇಶಕ್ಕೆ ‘ವೋಟ್‌ ಅಧಿಕಾರ್‌ ರ್‍ಯಾಲಿ’ ಎಂದು ಹೆಸರಿಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆಯ ಪೂರ್ವಭಾವಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಮತಗಳ್ಳತನ ವಿರುದ್ಧ ನಡೆಸಲಾಗುತ್ತಿರುವ ಪ್ರತಿಭಟನೆಯ ರೂಪುರೇಷೆ ಕುರಿತು ಚರ್ಚಿಸಲಾಗಿದ್ದು, ನ್ಯಾಯಾಲಯದ ಹಿಂದಿನ ಆದೇಶಗಳ ಪಾಲನೆ ಮೂಲಕ ಪ್ರತಿಭಟನಾ ಸಮಾವೇಶ ಆಯೋಜಿಸಲು ನಿರ್ಧರಿಸಲಾಯಿತು. ಪ್ರತಿಭಟನಾ ಸಮಾವೇಶದಲ್ಲಿ ಪ್ರತಿ ಕ್ಷೇತ್ರದಿಂದ ಕನಿಷ್ಠ 50 ಮಂದಿ ಕರೆತರಬೇಕು. ಎಲ್ಲಾ ಶಾಸಕರು, ವಿಧಾನಸಭೆ-ಲೋಕಸಭೆ ಪರಾಜಿತ ಅಭ್ಯರ್ಥಿಗಳು, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರು, ಪ್ರಮುಖ ನಾಯಕರು ಕಡ್ಡಾಯವಾಗಿ ಹಾಜರಿರಬೇಕು. ಜತೆಗೆ ಈ ಪ್ರತಿಭಟನೆ ದೇಶದ ಗಮನ ಸೆಳೆದಿದ್ದು, ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಅಕ್ರಮದ ವಿರುದ್ಧ ಆಂದೋಲನ ರೀತಿ ನಡೆಸಬೇಕು ಎಂದು ನಿರ್ಧರಿಸಲಾಯಿತು.

ಪ್ರತಿಭಟನಾ ಸಮಾವೇಶದಲ್ಲಿ ರಾಹುಲ್‌ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿ ಹಿರಿಯ ನಾಯಕರು ಪಾಲ್ಗೊಳ್ಳಲಿದ್ದಾರೆ. ಸಮಾವೇಶ ವೇಳೆ ರಾಹುಲ್‌ ಗಾಂಧಿ ಅವರು ಪವರ್‌ ಪಾಯಿಂಟ್‌ ಪ್ರಸೆಂಟೇಷನ್‌ (ಪಿಪಿಟಿ) ಮೂಲಕ ಚುನಾವಾಣಾ ಆಯೋಗದ ಅಕ್ರಮದ ಕುರಿತು ಮಾಹಿತಿ ನೀಡಲಿದ್ದಾರೆ. ಪ್ರಮುಖವಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮಹದೇವಪುರ, ಗಾಂಧಿನಗರ, ರಾಜಾಜಿನಗರ ವಿಧಾನಸಭಾ ಕ್ಷೇತ್ರಗಳಲ್ಲಾಗಿರುವ ಅಕ್ರಮಗಳ ಬಗ್ಗೆ ವಿವರಿಸುವ ಸಾಧ್ಯತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಪ್ರತಿಭಟನಾ ಸ್ಥಳ ಪರಿಶೀಲಿಸಿದ ಡಿಕೆಶಿ

ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ವಿರುದ್ಧ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯಲಿರುವ ಪ್ರತಿಭಟನಾ ಸಮಾವೇಶ ಆಯೋಜನಾ ಸ್ಥಳವನ್ನು ಬುಧವಾರ ಡಿ.ಕೆ.ಶಿವಕುಮಾರ್‌, ರಣದೀಪ್‌ ಸಿಂಗ್‌ ಸುರ್ಜೇವಾಲಾ ಸೇರಿ ಮತ್ತಿತರ ನಾಯಕರು ಪರಿಶೀಲಿಸಿದರು. ಈ ವೇಳೆ ಪ್ರತಿಭಟನಾ ಸಮಾವೇಶಕ್ಕೆ ಜನರ ಪ್ರವೇಶ, ನಿರ್ಗಮನ, ಆಸನಗಳ ವ್ಯವಸ್ಥೆ, ವಾಹನ ನಿಲುಗಡೆಗೆ ಸಂಬಂಧಿಸಿದ ಸಿದ್ಧತೆಗಳನ್ನು ಪರಿಶೀಲಿಸಲಾಯಿತು.

ಸಭೆಯಲ್ಲಿ ಮಾತನಾಡಿದ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ರಾಹುಲ್‌ ಗಾಂಧಿ ಅವರ ನೇತೃತ್ವದ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಪ್ರತಿಭಟನೆಯಲ್ಲಿ ವಿವರಿಸಲಾಗುವ ವಿಷಯಗಳು ಜನರಿಗೆ ಮುಟ್ಟುವಂತೆ ಮಾಡಬೇಕು. ಇದರ ಮೂಲಕ ಚುನಾವಣಾ ಆಯೋಗ ಮತ್ತು ಕೇಂದ್ರ ಸರ್ಕಾರದ ಅಕ್ರಮದ ವಿರುದ್ಧ ಜನಾಂದೋಲನಕ್ಕೆ ನಾಂದಿ ಹಾಡಬೇಕಿದೆ. ಚುನಾವಣಾ ಆಯೋಗವು ಎಲೆಕ್ಷನ್‌ ಕ್ಯಾಪ್ಟನ್‌ ಆಫ್‌ ಇಂಡಿಯಾ ರೀತಿ ಕೆಲಸ ಮಾಡುತ್ತಿದೆ. ಅದರ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯನ್ನು ಸಂಘಟಿತವಾಗಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ಸ್ವಾತಂತ್ರ್ಯ ಉದ್ಯಾನದಂತಹ ಐತಿಹಾಸಿಕ ಜಾಗದಲ್ಲಿ ರಾಹುಲ್‌ ಗಾಂಧಿ ನೇತೃತ್ವದಲ್ಲಿ ವೋಟ್‌ ಅಧಿಕಾರ ರ್‍ಯಾಲಿ ಮಾಡಲಾಗುತ್ತಿದೆ. ನ್ಯಾಯಾಲಯದ ಆದೇಶದಂತೆ ಪ್ರತಿಭಟನೆ ನಡೆಸಲಾಗುವುದು. ರಾಜ್ಯದೆಲ್ಲೆಡೆಯಿಂದ ಸಾವಿರಾರು ಜನರನ್ನು ಕರೆದುಕೊಂಡು ಬನ್ನಿ ಎಂದು ಹೇಳಿಲ್ಲ. ಆದರೆ, ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಠ 50 ಮಂದಿ ನಾಯಕರು ಬರಬೇಕು ಎಂದು ಸೂಚಿಸಿದ್ದೇವೆ ಎಂದರು.

ಈ ಹಿಂದೆ ಇಂಡಿಯಾ ಮೈತ್ರಿ ಕೂಟ ರಚನೆಯೂ ಬೆಂಗಳೂರಿನಲ್ಲಿಯೇ ನಡೆದಿತ್ತು. ಇದೀಗ ಬೆಂಗಳೂರಿನಿಂದ ದೇಶಕ್ಕೆ ಮತ್ತೊಂದು ಮಹತ್ವದ ಸಂದೇಶ ನೀಡಲಾಗುತ್ತಿದೆ. ರಾಹುಲ್‌ ಗಾಂಧಿ ಅವರು ಮತಗಳ್ಳತನ ಕುರಿತು ಯಾವೆಲ್ಲ ದಾಖಲೆ ಬಿಡುಗಡೆ ಮಾಡುತ್ತಾರೆ ಎಂಬುದು ಶುಕ್ರವಾರ ತಿಳಿಯಲಿದೆ. ಅಲ್ಲದೆ, ಪ್ರತಿಭಟನೆ ಯಶಸ್ವಿಯಾಗುವಂತೆ ಮಾಡಲು ಗುರುವಾರ ಶಾಸಕರು ಸೇರಿ ಇನ್ನಿತರ ನಾಯಕರೊಂದಿಗೆ ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲಾ, ಸಚಿವರಾದ ಎಚ್‌.ಕೆ.ಪಾಟೀಲ್‌, ಕೆ.ಜೆ. ಜಾರ್ಜ್‌, ಕೆ.ಎಚ್‌. ಮುನಿಯಪ್ಪ, ರಾಮಲಿಂಗಾರೆಡ್ಡಿ, ಕೃಷ್ಣ ಬೈರೇಗೌಡ, ಡಾ.ಶ್ರರಣಪ್ರಕಾಶ್‌ ಪಾಟೀಲ್‌, ಎನ್‌.ಎಸ್‌. ಬೋಸರಾಜ್‌, ಬೈರತಿ ಸುರೇಶ್‌, ವಿಧಾನಪರಿಷತ್‌ ಮುಖ್ಯ ಸಚೇತಕ ಸಲೀಂ ಅಹಮದ್‌, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ ಸೊರಕೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್‌ ಇತರರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು