ಪರಿಷತ್‌ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ ಅಲ್ಪಸಂಖ್ಯಾತರಿಗೆ?

By Kannadaprabha NewsFirst Published Nov 18, 2021, 12:29 PM IST
Highlights

*   ಕಾಂಗ್ರೆಸ್‌ನಲ್ಲಿ ಅಲ್ಪಸಂಖ್ಯಾತರಿಗೆ ಟಿಕೆಟ್‌ ಬಹುತೇಕ ಖಚಿತ
*   ಸಲೀಂ ಅಹ್ಮದ, ಹಿಂಡಸಗೇರಿ, ಸನದಿ ಮೂವರಲ್ಲಿ ಒಬ್ಬರಿಗೆ ಟಿಕೆಟ್‌ ಪಕ್ಕಾ
*   ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ವ್ಯಾಪ್ತಿಯ ಕ್ಷೇತ್ರ 
 

ಶಿವಾನಂದ ಗೊಂಬಿ

ಹುಬ್ಬಳ್ಳಿ(ನ.18):  ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ(Vidhan Parishat) ನಡೆಯಲಿರುವ ಚುನಾವಣೆಗೆ ರಾಜಕೀಯ(Politics) ಚಟುವಟಿಕೆಗಳು ಬಿರುಸುಗೊಂಡಿವೆ. ಕಾಂಗ್ರೆಸ್‌ನಲ್ಲಿ(Congress) ಟಿಕೆಟ್‌ಗಾಗಿ ಭಾರಿ ಲಾಬಿ ನಡೆಯುತ್ತಿದೆ. ಈ ಸಲ ಅಲ್ಪಸಂಖ್ಯಾತರಿಗೆ(Minorities) ಟಿಕೆಟ್‌ ಬಹುತೇಕ ಖಚಿತ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಧಾರವಾಡ, ಹಾವೇರಿ, ಗದಗ ಜಿಲ್ಲೆಗಳ ವ್ಯಾಪ್ತಿಯ ಕ್ಷೇತ್ರವಿದು. ಮೂರು ಜಿಲ್ಲೆಗಳ 17 ವಿಧಾನಸಭಾ ಕ್ಷೇತ್ರಗಳು ಇದರ ವ್ಯಾಪ್ತಿಯಲ್ಲಿ ಬರುತ್ತವೆ. ದ್ವಿಸದಸ್ಯ ಸ್ಥಾನಕ್ಕಾಗಿ ನಡೆಯುವ ಚುನಾವಣೆಯಾದರೂ ಈವರೆಗೂ ಬಿಜೆಪಿ(BJP) ಹಾಗೂ ಕಾಂಗ್ರೆಸ್‌ ತಲಾ ಒಬ್ಬರೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದವು. ಈ ಸಲವೂ ಬಹುತೇಕ ಅದೇ ಮಾದರಿಯನ್ನೇ ಪಕ್ಷಗಳು ಅನುಸರಿಸಲಿವೆ. ಶ್ರೀನಿವಾಸ ಮಾನೆ(Shrinivas Mane) ಹಾಗೂ ಪ್ರದೀಪ ಶೆಟ್ಟರ್‌(Pradeep Shettar) ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಇದೀಗ ಮಾನೆ ವಿಧಾನಸಭೆಗೆ ಆಯ್ಕೆಯಾಗಿದ್ದರಿಂದ ಕಾಂಗ್ರೆಸ್‌ನಲ್ಲಿ ಟಿಕೆಟ್‌ಗಾಗಿ ಭಾರಿ ಪೈಪೋಟಿ ನಡೆದಿದೆ.

Vidhan Parishat Election| ಸತೀಶ್‌ V/S ರಮೇಶ್‌ ಜಾರಕಿಹೊಳಿ ಯುದ್ಧ ಶುರು..!

ಅಲ್ಪಸಂಖ್ಯಾತರಿಗೆ ಖಚಿತ:

ಮೂರು ಜಿಲ್ಲೆಗಳ 17 ವಿಧಾನಸಭಾ ಕ್ಷೇತ್ರಗಳಲ್ಲಿ ಒಬ್ಬರೇ ಒಬ್ಬರು ಮುಸ್ಲಿಂ(Muslim) ಅಭ್ಯರ್ಥಿಗಳಿಲ್ಲ. ಈ 17 ಕ್ಷೇತ್ರಗಳ ಪೈಕಿ ಶಿಗ್ಗಾಂವಿ- ಸವಣೂರು ಹಾಗೂ ಧಾರವಾಡ ಪಶ್ಚಿಮ ಕ್ಷೇತ್ರಗಳಲ್ಲಿ 2018ರ ಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳನ್ನು ಕಾಂಗ್ರೆಸ್‌ ಕಣಕ್ಕಿಳಿಸಿತ್ತು. ಆದರೆ ಎರಡೂ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳು ಸೋಲನ್ನುಭವಿಸಿದ್ದಾರೆ. ಶಿಗ್ಗಾಂವಿ- ಸವಣೂರಲ್ಲಂತೂ ಮೂರು ಬಾರಿ ಅಜ್ಜಂಪೀರ ಖಾದ್ರಿ ಸೋತಿರುವುದುಂಟು. ಇನ್ನೂ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ 2009 ಹಾಗೂ 2014ರಲ್ಲಿ ಸಲೀಂ ಅಹ್ಮದ ಅವರನ್ನು ಪಕ್ಷ ಕಣಕ್ಕಿಳಿಸಿತ್ತು. ಅವರೂ ಸೋಲುಂಡರು. ಹೀಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಹಾವೇರಿ(Haveri) ಬದಲು ಧಾರವಾಡಕ್ಕೆ(Dharwad) ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಲು ಯೋಚಿಸಿದ್ದುಂಟು. ಬಳಿಕ ಎರಡೂ ಕಡೆ ಲಿಂಗಾಯತ(Lingayat) ಅಭ್ಯರ್ಥಿಗಳನ್ನೇ ಕಾಂಗ್ರೆಸ್‌ ಕಣಕ್ಕಿಳಿಸಿತು. ಆಗಲೂ ಕಾಂಗ್ರೆಸ್‌ ಸೋಲುಂಡಿತು. ಒಂದು ಕಡೆಯಾದರೂ ನಮ್ಮ ಸಮುದಾಯಕ್ಕೆ ಟಿಕೆಟ್‌ ನೀಡಬೇಕಿತ್ತು ಎಂಬ ಬೇಡಿಕೆ ಮುಸ್ಲಿಂ ಸಮುದಾಯದ್ದಾಗಿತ್ತು. ಪಕ್ಷದಲ್ಲಿ ಯಾವುದೇ ಸ್ಥಾನಮಾನಗಳಿಲ್ಲ ಎಂಬ ಅಸಮಾಧಾನ ಆ ಸಮುದಾಯದಲ್ಲಿ ಬೇರೂರಿದೆ. ಇದೀಗ ಸ್ಥಳೀಯ ಸಂಸ್ಥೆಯಿಂದ ನಡೆಯುವ ಈ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ ನೀಡಿದರೆ ಒಬ್ಬರ ಪ್ರತಿನಿಧಿತ್ವ ಸಿಕ್ಕಂತಾಗುತ್ತದೆ. ಜತೆಗೆ 3 ಜಿಲ್ಲೆಗಳ ಅಲ್ಪಸಂಖ್ಯಾತರನ್ನು ಸಮಾಧಾನ ಪಡಿಸಿದಂತಾಗುತ್ತದೆ. 2023ರಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಈ ಅಸಮಾಧಾನ ಅಷ್ಟೊಂದು ಕಂಡು ಬರಲಿಕ್ಕಿಲ್ಲ ಎಂಬ ಲೆಕ್ಕಾಚಾರ ಕಾಂಗ್ರೆಸ್‌ನದ್ದು. ಈ ಹಿನ್ನೆಲೆಯಲ್ಲಿ ಪರಿಷತ್‌ ಚುನಾವಣೆಯಲ್ಲಿ ಈ ಸಲ ಮುಸ್ಲಿಂ ಸಮುದಾಯಕ್ಕೆ ಟಿಕೆಟ್‌ ಘೋಷಣೆಯಾಗುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

Karnataka Politics; ಸಿದ್ದು ಮಾತನಾಡಬೇಕಿದ್ದರೆ ಡಿಕೆ ಡಿಕೆ ಘೋಷಣೆ ಕೂಗಿಸಿದ್ದು ಯಾರು?

ಯಾರ‍್ಯಾರು ರೇಸ್‌ನಲ್ಲಿ:

ಕೆಪಿಸಿಸಿ(KPCC) ಕಾರ್ಯಾಧ್ಯಕ್ಷ ಸಲೀಂ ಅಹ್ಮದ(Saleem Ahmed), ಮಾಜಿ ಸಚಿವ ಎ.ಎಂ. ಹಿಂಡಸಗೇರಿ ಹಾಗೂ ಕಾರ್ಯದರ್ಶಿ ಶಾಕೀರ ಸನದಿ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಅದರಲ್ಲಿ ಸಲೀಂ ಅಹ್ಮದ ಹೆಸರು ಮುಂಚೂಣಿಯಲ್ಲಿದೆ. ಇವರು 2 ಬಾರಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಹಾವೇರಿ ಜಿಲ್ಲೆಯನ್ನು ತಮ್ಮ ಕಾರ್ಯಕ್ಷೇತ್ರ ಮಾಡಿಕೊಂಡಿದ್ದಾರೆ. ಜತೆಗೆ ಇದೀಗ ಕೆಪಿಸಿಸಿ ಕಾರ್ಯಾಧ್ಯಕ್ಷ. ಇವರಿಗೆ ಕೊಟ್ಟರೆ ಹೆಚ್ಚು ಅನುಕೂಲವಾಗುತ್ತದೆ ಎಂಬ ಮಾತು ಕೇಳಿ ಬರುತ್ತಿದೆ. ಇನ್ನು ಮಾಜಿ ಸಚಿವ ಎ.ಎಂ.ಹಿಂಡಸಗೇರಿ ಈ ಹಿಂದೆ ಇದೇ ಕ್ಷೇತ್ರದಿಂದ ಆರಿಸಿ ಬಂದವರು. ಇವರಿಗೆ ಕೊಟ್ಟರೆ ಉತ್ತಮ ಎಂದು ಕೆಲವರು ಹೇಳುತ್ತಾರೆ. ಧಾರವಾಡ ಲೋಕಸಭಾ ಟಿಕೆಟ್‌ ವಂಚಿತ ಶಾಕೀರ ಸನದಿ ಯುವಕರಾಗಿದ್ದಾರೆ. ಅವರಿಗೆ ನೀಡಿ ಎಂಬ ಬೇಡಿಕೆಯನ್ನೂ ಕೆಲವರು ಇಟ್ಟಿರುವುದುಂಟು.

ಇವರೊಂದಿಗೆ ಪಶ್ಚಿಮ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡಿರುವ ಇಸ್ಮಾಯಿಲ್‌ ತಮಟಗಾರಗೆ ನೀಡಿ ಎಂದು ಮಾಜಿ ಸಚಿವ ಜಮೀರ ಅಹ್ಮದ್‌ ಪ್ರಯತ್ನಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಆದರೆ ಇವರಿಗೆ ಮತ್ತೆ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡಬಹುದು. ಇವರಿಗೆ ಬೇಡ ಎಂಬ ಮಾತು ಪಕ್ಷದಲ್ಲಿ ಕೇಳಿ ಬರುತ್ತಿದೆ.
 

click me!