
ಬೆಂಗಳೂರು(ನ.01): ನಗರದ ರಸ್ತೆ ಗುಂಡಿ ಮುಚ್ಚುವಂತೆ ಹೈಕೋರ್ಟ್ ಪದೇ ಪದೇ ಛೀಮಾರಿ ಹಾಕಿದರೂ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ. ಬೆಂಗಳೂರು ಉಸ್ತುವಾರಿಗೆ ಕಿತ್ತಾಡುವ ಸಚಿವರು ರಸ್ತೆ ಗುಂಡಿ ಮುಚ್ಚಲು ಏಕೆ ಹೋರಾಟ ನಡೆಸುತ್ತಿಲ್ಲ ಎಂದು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ರಸ್ತೆ ಗುಂಡಿ ವಿಚಾರದಲ್ಲಿ ಹೈಕೋರ್ಟ್ ಮೇಲಿಂದ ಮೇಲೆ ಛೀಮಾರಿ ಹಾಕುತ್ತಿದೆ. ಆದರೂ ಸರ್ಕಾರ ಇದುವರೆಗೂ ಒಬ್ಬೇ ಒಬ್ಬ ಅಧಿಕಾರಿಯನ್ನೂ ರಸ್ತೆ ಗುಂಡಿಗೆ ಹೊಣೆ ಮಾಡಿ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿಗಳೇ, ಅಧಿಕಾರಿಗಳು ನಿಮ್ಮ ಮಾತು ಕೇಳುವುದಿಲ್ಲವೇ ಅಥವಾ ನಿಮ್ಮ ಅಂಕೆಯಲ್ಲಿಲ್ಲವೇ. ರಸ್ತೆ ಗುಂಡಿಗಳಿಗೆ ಹೊಣೆ ಯಾರು, ಸಾವುಗಳಿಗೆ ಕಾರಣ ಯಾರು ಎಂದು ಕಾಂಗ್ರೆಸ್ ಪ್ರಶ್ನಿಸಿದೆ.
ಬೆಂಗ್ಳೂರಲ್ಲಿವೆ 25,000ಕ್ಕೂ ಅಧಿಕ ರಸ್ತೆ ಗುಂಡಿಗಳು..!
ಬೆಂಗಳೂರು ಉಸ್ತುವಾರಿಗಾಗಿ ಕಿತ್ತಾಡುವ ಸಚಿವರು ರಸ್ತೆಗುಂಡಿ ಮುಚ್ಚುವ ವಿಚಾರದಲ್ಲಿ ಅದೇ ಹೋರಾಟ ಏಕೆ ಮಾಡುತ್ತಿಲ್ಲ. ಅಚ್ಛೆ ದಿನಗಳ ಭಾಷಣ ಮಾಡುವ ನಿಮಗೆ ಕನಿಷ್ಠ ರಸ್ತೆ ಗುಂಡಿಗಳನ್ನು ಮುಚ್ಚಲು ಸಹ ದಮ್ಮು, ತಾಕತ್ತು ಇಲ್ಲವಾಗಿದೆಯೇ. ಪ್ರತಿದಿನವೂ ಸಿನಿಮಾ ಶೈಲಿಯಲ್ಲಿ ದಮ್ಮು, ತಾಕತ್ತಿನ ಡೈಲಾಗ್ ಪ್ರಾಕ್ಟೀಸ್ ಮಾಡುತ್ತಿದ್ದೀರಾ. ಸಿನಿಮಾ ಗುಂಗು ಬಿಟ್ಟು ವಾಸ್ತವ ಜಗತ್ತಿನಲ್ಲಿ ಕಣ್ಣು ಬಿಟ್ಟು ನೋಡಿ, ರಸ್ತೆ ಗುಂಡಿಗಳು, ನಿಮ್ಮ ವೈಫಲ್ಯಗಳು ಕಾಣುತ್ತವೆ ಎಂದು ಕಾಂಗ್ರೆಸ್ ಟೀಕಿಸಿದೆ.
ಒಂದು ದೇಶ-ಒಂದು ಕಮಿಷನ್
ಗುಜರಾತ್‌ನ ಮೋರ್ಬಿ ತೂಗು ಸೇತುವೆ ಕುಸಿತದಲ್ಲಿ 100ಕ್ಕೂ ಅಧಿಕ ಮಂದಿ ಮೃತಪಟ್ಟಿರುವುದು ದೇಶದ ಅತಿ ದೊಡ್ಡ ದುರಂತಗಳಲ್ಲೊಂದು. ದುರಂತಗಳನ್ನು ಚುನಾವಣೆಗೆ ಬಳಸುವ ಪ್ರಧಾನಿ ನರೇಂದ್ರ ಮೋದಿ ಅವರು ಈ ದುರಂತಕ್ಕೆ ಮೌನೇಂದ್ರ ಮೋದಿಯಾಗಿದ್ದಾರೆ. ತೂಗುಸೇತುವೆಯನ್ನು ಫಿಟ್ನೆಸ್ ಪ್ರಮಾಣ ಪತ್ರವಿಲ್ಲದೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತ ಮಾಡಲಾಗಿತ್ತು. ಅನುಭವವಿಲ್ಲದ ಗಡಿಯಾರ ತಯಾರಿಕಾ ಕಂಪನಿಗೆ ದುರಸ್ತಿ ಕೆಲಸ ವಹಿಸಲಾಗಿತ್ತು. ಗುಜರಾತಿನಲ್ಲೂ ಶೇ.40 ಪರ್ಸೆಂಟ್ ಕಮಿಷನ್ ಸರ್ಕಾರ ಸ್ಥಾಪಿಸಿದ್ದೀರಾ? ಇದು ಒಂದು ದೇಶ ಒಂದು ಕಮೀಷನ್ ಮಾದರಿಯೇ ಎಂದು ರಾಜ್ಯ ಬಿಜೆಪಿಯನ್ನು ಕಾಂಗ್ರೆಸ್ ತರಾಟೆ ತೆಗೆದುಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.