ಕೊರೋನಾ ಗೆದ್ದ ಕರ್ನಾಟಕದ ಹಿರಿಯ ಕಾಂಗ್ರೆಸ್ ನಾಯಕ ಆಸ್ಪತ್ರೆಯಿಂದ ಡಿಸ್ಚಾರ್ಜ್

By Suvarna NewsFirst Published Jul 20, 2020, 6:21 PM IST
Highlights

ಇತ್ತೀಚೆಗೆ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಹಿರಿಯ ಕಾಂಗ್ರೆಸ್‌ ಮುಖಂಡ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮಂಗಳೂರು, (ಜುಲೈ.20): ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ  ಜನಾರ್ದನ ಪೂಜಾರಿ ಅವರು ಕೊರೋನಾದಿಂದ ಗುಣಮುಖರಾಗಿ ಇಂದು (ಸೋಮವಾರ) ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾಗ್ತಿದ್ದಂತೆ ಜನಾರ್ದನ ಪೂಜಾರಿ ಅವರು ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕೊರೋನಾ ಪಾಸಿಟಿವ್ ಹಿನ್ನಲೆಯಲ್ಲಿ ನಾನು ಹಾಗೂ ನನ್ನ ಕುಟುಂಬದ ಮೂವರು ನಗರದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದೆವು. ದೈವ-ದೇವರ ಅನುಗ್ರಹ, ನಿಮ್ಮೆಲ್ಲರ ಹಾರೈಕೆಯಿಂದ ನಾವೆಲ್ಲರೂ ಗುಣಮುಖವಾಗಿದ್ದು, ಇಂದು (ಸೋಮವಾರ) ಆಸ್ಪತ್ರೆಯಿಂದ ಬಿಡುಗಡೆಯಾಗಿರುತ್ತೇವೆ. ನಮ್ಮ ಕ್ಷೇಮಕ್ಕಾಗಿ ಪ್ರಾರ್ಥಿಸಿದ ಎಲ್ಲ ಬಂಧುಗಳಿಗೆ, ಹಿತೈಷಿಗಳಿಗೆ ಹಾಗೂ ನಮಗೆ ಉತ್ತಮ ಚಿಕಿತ್ಸೆ ನೀಡಿದ ವೈದ್ಯರ ತಂಡಕ್ಕೆ, ಸಂಸ್ಥೆಗೆ ಧನ್ಯವಾದಗಳು ಹಾಗೂ ನಿಮ್ಮ ಹಾರೈಕೆ ಸದಾ ಹೀಗೆ ಇರಲಿ ಎಂದಿದ್ದಾರೆ.

ಮಾಜಿ ಕೇಂದ್ರ ಸಚಿವರಿಗೂ ತಗುಲಿದ ಕೊರೋನಾ: ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

 ಜುಲೈ 4ರಂದು ಜನಾರ್ದನ ಪೂಜಾರಿ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಜನಾರ್ದನ ಪೂಜಾರಿಯವರ ಮನೆ ಕೆಲಸದ ಮಹಿಳೆಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಪೂಜಾರಿಯವರು ಸೇರಿದಂತೆ ಮನೆಯವರನ್ನು ತಪಾಸಣೆ ನಡೆಸಲಾಗಿತ್ತು. ಈ ವೇಳೆ ಅವರ ಮನೆಯ ನಾಲ್ಕು ಮಂದಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಎಲ್ಲರೂ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಸದ್ಯ ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಪೂಜಾರಿಯವರು ನೇರವಾಗಿ ತನ್ನ ಬಂಟ್ವಾಳದ ಮನೆಗೆ ವಾಪಸ್ಸಾಗಿದ್ದಾರೆ.

 ಜನಾರ್ದನ ಪೂಜಾರಿ ಶೀಘ್ರ ಗುಣಮುಖರಾಗುವಂತೆ ಅವರ ಅಭಿಮಾನಿಗಳು ಕುದ್ರೋಳಿ ಶ್ರೀ ಗೋಕರ್ಣನಾಥನಿಗೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಿದ್ದರು. 

click me!