ವಿಪಕ್ಷ ನಾಯಕನಿಗಾಗಿ ಕಾಂಗ್ರೆಸ್ಸಿನಲ್ಲಿ ತಲಾಶ್‌..!

By Kannadaprabha News  |  First Published May 31, 2022, 4:28 AM IST

*  ವಿಪಕ್ಷ ನಾಯಕ ಸ್ಥಾನಕ್ಕೆ ಪೈಪೋಟಿ, ಆಯ್ಕೆಯಾಗಿ ಸಭೆ ನಡೆಸಲು ಮುಂದಾದ ಪಕ್ಷ
*  ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕ ಪಟ್ಟ ಅಷ್ಟು ಸಣ್ಣ ಜವಾಬ್ದಾರಿ ಅಲ್ಲ
*  82 ಸದಸ್ಯ ಬಲದ ಪಾಲಿಕೆಯಲ್ಲಿ 39 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ


ಶಿವಾನಂದ ಗೊಂಬಿ

ಹುಬ್ಬಳ್ಳಿ(ಮೇ.31):  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮೇಯರ್‌- ಉಪಮೇಯರ್‌ ಚುನಾವಣೆ ಮುಗಿದು ನಿರೀಕ್ಷೆಯಂತೆ ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ವಿರೋಧ ಪಕ್ಷದ ನಾಯಕನ ಪಟ್ಟಕ್ಕಾಗಿ ತೀವ್ರ ಪೈಪೋಟಿ ಶುರುವಾಗಿದೆ. ಆದರೆ ಆಯ್ಕೆಯಾದ ಬಹುತೇಕರಲ್ಲಿ ಹೊಸಬರೇ ಇರುವುದರಿಂದ ಯಾರಿಗೆ ವಿಪಕ್ಷ ನಾಯಕನ ಪಟ್ಟಕಟ್ಟಬೇಕು ಎಂಬ ತಲೆ ನೋವು ಕಾಂಗ್ರೆಸ್ಸಿಗರನ್ನು ಕಾಡುತ್ತಿದೆ.

Tap to resize

Latest Videos

82 ಸದಸ್ಯ ಬಲದ ಪಾಲಿಕೆಯಲ್ಲಿ 39 ಸ್ಥಾನಗಳನ್ನು ಗೆದ್ದು ಬಿಜೆಪಿ ಆಡಳಿತ ಪಕ್ಷವಾಗಿದೆ.  33 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್‌ ವಿರೋಧ ಪಕ್ಷದ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಪ್ರತಿಪಕ್ಷದ ನಾಯಕನಾಗಲು ಕೆಲವು ಕಾಂಗ್ರೆಸ್‌ ಸದಸ್ಯರು ಶಾಸಕ ಪ್ರಸಾದ ಅಬ್ಬಯ್ಯ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ಮನೆಗಳಿಗೆ ಎಡತಾಕುತ್ತಿದ್ದಾರೆ. ಕೆಲವರಂತೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಅವರಿಂದ ಶಿಫಾರಸು ಮಾಡಿಸುತ್ತಿದ್ದಾರೆ.

ಯಾರಾರ‍ಯರಿದ್ದಾರೆ?:

ಸುವರ್ಣ ಕಲ್ಲಗುಂಟ್ಲಾ, ರಾಜಾರಾವ್‌ ಮನ್ನಿಕುಂಟ್ಲಾ ಇವರಿಬ್ಬರೇ ಹಳಬರು. ಉಳಿದಂತೆ ಎಲ್ಲರೂ ಹೊಸಬರು. ಆರೀಫ್‌ ಭದ್ರಾಪುರ, ಇಮ್ರಾನ್‌ ಎಲಿಗಾರ, ಶಾಸಕ ಅಬ್ಬಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ನಿರಂಜನಯ್ಯ ಹಿರೇಮಠ ಪೈಪೋಟಿ ನಡೆಸುತ್ತಿದ್ದಾರೆ. ಶಾಸಕ ಅಬ್ಬಯ್ಯಗೂ ಇದು ಚುನಾವಣೆ ವರ್ಷ. ತಮ್ಮ ಆಪ್ತರನ್ನೇ ನಾಯಕರನ್ನಾಗಿ ಮಾಡಿದರೆ ಮುಂದೆ ಚುನಾವಣೆಯಲ್ಲಿ ನೆರವಾಗಬಹುದು ಎಂಬ ಆಲೋಚನೆ ಇದ್ದಂತಿದೆ. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Karnataka Politics: 'ಹೊರಟ್ಟಿ ಬಿಜೆಪಿಗೆ, ಹೊಂದಾಣಿಕೆ ರಾಜಕಾರಣದ ಅಂತ್ಯ'

ಪಾಲಿಕೆಯಲ್ಲಿ ವಿರೋಧ ಪಕ್ಷದ ನಾಯಕ ಪಟ್ಟ ಅಷ್ಟು ಸಣ್ಣ ಜವಾಬ್ದಾರಿ ಅಲ್ಲ. ವಿಪಕ್ಷದ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಪಕ್ಷದ ತಪ್ಪುಗಳನ್ನು ಎತ್ತಿ ತೋರಿಸುವ, ಆಗಾಗ ಕಿವಿ ಹಿಂಡುವ ಕೆಲಸ ಮಾಡುವಂತಹ ನಾಯಕರಾಗಬೇಕು. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷವನ್ನು ಬಾಯಲ್ಲೇ ಕಟ್ಟಿಹಾಕುವ ಚಾಣಾಕ್ಷತನ ಇರಬೇಕು.

ಇಂಥವರು ವಿರೋಧ ಪಕ್ಷದಲ್ಲಿ ಯಾರಿದ್ದಾರೆ ಎಂಬ ತಲಾಷ್‌ ಮಾಡುವ ಕೆಲಸ ಇದೀಗ ಮಹಾನಗರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಲ್ತಾಫ್‌ ಹಳ್ಳೂರ ಹೆಗಲಿಗೆ ಬಿದ್ದಿದೆ. ಈ ಸಂಬಂಧ ಪಕ್ಷದ ವರಿಷ್ಠರು ಕೂಡ ಅವರ ಬೆಂಬಲಿಗರು, ಇವರ ಬೆಂಬಲಿಗರು ಅಂತ ಎಣಿಸದೇ ಪಾಲಿಕೆಯಲ್ಲಿ ಬಿಜೆಪಿಯನ್ನು ಸಮರ್ಥವಾಗಿ ಎದುರಿಸುವಂತಹ ನಾಯಕನನ್ನು ಹುಡುಕಿ ವಿಪಕ್ಷ ನಾಯಕನ ಪಟ್ಟಕಟ್ಟಿಎಂದು ಸೂಚನೆ ನೀಡಿದೆಯಂತೆ.

ಇನ್ನೆರಡು ದಿನಗಳಲ್ಲಿ ಕಾಂಗ್ರೆಸ್‌ ಸಭೆ ಎಲ್ಲರ ಅಭಿಪ್ರಾಯ ಪಡೆದು ಪಕ್ಷದಲ್ಲಿನ ಅನುಭವ, ಹಿರಿತನ, ಸಂಘಟನೆಯಲ್ಲಿ ಚತುರತೆ ನೋಡಿಕೊಂಡು ವಿಪಕ್ಷ ನಾಯಕನ ಪಟ್ಟಕಟ್ಟುವ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ವಿರೋಧ ಪಕ್ಷದ ನಾಯಕನ ಪಟ್ಟದ ಆಕಾಂಕ್ಷಿಗಳ ಸಂಖ್ಯೆ ಜಾಸ್ತಿಯಿದೆ. ಪಾಲಿಕೆಯ ಕಾನೂನಿನ ಬಗ್ಗೆ ತಿಳಿವಳಿಕೆ, ಹೋರಾಟದ ಮನೋಭಾವ ಇರುವ ಸದಸ್ಯನನ್ನು ಹುಡುಕಿ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಇನ್ನೆರಡು ದಿನಗಳಲ್ಲಿ ಮುಖಂಡರ, ಪಾಲಿಕೆ ಸದಸ್ಯರ ಸಭೆ ನಡೆಸಲಾಗುವುದು ಅಂತ ಮಹಾನಗರ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ ತಿಳಿಸಿದ್ದಾರೆ.  
 

click me!